ಬೆಂಗಳೂರು: ರಾಜ್ಯಕ್ಕೆ ಒಂದೇ ಕಾನೂನು ಇರಬೇಕು. ಗಣೇಶೋತ್ಸವವನ್ನು ವಿಜೃಂಭಣೆಯಿಂದ ಹಿಂದೂಗಳು ಕೊಂಡಾಡುವಂತೆ ಆಚರಿಸಲು ಸರಕಾರ ಅವಕಾಶ ಮಾಡಿಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೇರೆ ಬೇರೆಯವರಿಗೆ ಬೇರೆ ಬೇರೆ ರೀತಿ ಮಣೆ ಹಾಕುವುದು, ಹಿಂದೂಗಳನ್ನು ದಮನಿಸುವ ನೀತಿಯನ್ನು ಮಾಡಿದ್ದೇ ಆದರೆ, ಇದರ ಪ್ರತಿಫಲವನ್ನು ನೀವೇ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಎಲ್ಲ ಕಡೆ ಹಿಂದೂಗಳು ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲು ಅನುವು ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದರು.
ಗಣಪತಿ ಹಬ್ಬವನ್ನು ಬಹುಕಾಲದಿಂದ, ತಲೆತಲಾಂತರದಿಂದ ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಗುಲ್ಬರ್ಗದಲ್ಲಿ ರಿಪಬ್ಲಿಕ್ ಆಫ್ ಗುಲ್ಬರ್ಗ ಎಂದು ಕರೆಯುತ್ತಾರೆ. ರಾಜ್ಯದ ಕಾನೂನು, ದೇಶದ ಕಾನೂನು ಅಲ್ಲಿ ನಡೆಯುವುದಿಲ್ಲ. ರಾಜ್ಯಕ್ಕೆ ಒಂದೇ ಕಾನೂನು, ನೀತಿ ಇರಬೇಕು ಎಂದು ಶಾಸಕರು ಪ್ರಸ್ತಾಪಿಸಿದ್ದರು. ಗುಲ್ಬರ್ಗದಲ್ಲಿ ಸದ್ದೇ ಮಾಡದೇ ಗಣಪತಿ ಉತ್ಸವ ಮಾಡಬೇಕೇ? ಕಾಂಗ್ರೆಸ್ಸಿನವರಿಗೆ ಮಾತ್ರ ಮೌನ ಗಣಪತಿ ಬೇಕು ಎಂದು ಟೀಕಿಸಿದರು.
ಬೇರೆಯವರಿಗೆ ಮಣೆ ಹಾಕಿ ಎತ್ತಿ ಕಟ್ಟಬೇಕು; ನೀವು ಓಲೈಕೆ ಮಾಡಬೇಕು. ಹಿಂದೂಗಳನ್ನು ತುಳಿಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ದಕ್ಷಣ ಕನ್ನಡದಲ್ಲೂ ಡಿಜೆ ಹಾಕಬಾರದು ಎಂದು ನಿಷೇಧಿಸಿದ್ದಾರೆ ಎಂದು ಆಕ್ಷೇಪಿಸಿದರು.
ದಕ್ಷಿಣ ಕನ್ನಡದಲ್ಲಿ 1300 ಸೌಂಡ್ ಸಿಸ್ಟಮ್ ನಡೆಸುವವರಿದ್ದಾರೆ. 6 ಸಾವಿರ ಜನ ಕೆಲಸ ಮಾಡುತ್ತಾರೆ. ಆದರೆ, ಪೊಲೀಸರು ಅವರನ್ನು ಕರೆದು ತಾಕೀತು ಮಾಡುವುದು, 8 ಗಂಟೆಗೇ ಮೈಕ್ ಸೆಟ್ ಕಿತ್ತೊಯ್ಯುವ ಕೆಲಸ, ಕೇಸ್ ಹಾಕಿ ಬಂಧಿಸುವ, ಜೈಲಿಗೆ ಕಳಿಸುವ ಕೆಲಸ ಮಾಡುತ್ತಾರೆ ಎಂದು ಟೀಕಿಸಿದರು. ಇದರಿಂದ ಅವರ ಕುಟುಂಬಗಳು ಬೀದಿಪಾಲಾಗುತ್ತವೆ. ಜೊತೆಗೆ ಇದು ಕಾನೂನು ಮೀರಿದ ಕ್ರಮ ಎಂದು ದೂರಿದರು.
ಗಣೇಶೋತ್ಸವಕ್ಕೆ ತೊಂದರೆ ಕೊಡಬಾರದು ಎಂದು ಸದನದಲ್ಲಿ ಸದಸ್ಯರು ತಿಳಿಸಿದರೆ ಸದನವನ್ನೇ ಮುಂದೂಡಿದ್ದಾರೆ. ಇದು ಪಲಾಯನವಾದಿ ಸರಕಾರ. ಒಳ ಮೀಸಲಾತಿಯ ತೊಂದರೆ, ದ್ವಂದ್ವ, ಯಾರಿಗೆ ಅನ್ಯಾಯ ಆಗಿದೆ? ಅಲೆಮಾರಿ ಸಮುದಾಯ ಅಹೋರಾತ್ರಿ ಧರಣಿ ಮಾಡುತ್ತಿದೆ. ನಾಗಮೋಹನದಾಸ್ ಸಮಿತಿ, ಸದಾಶಿವ ಆಯೋಗ, ಮಾಧುಸ್ವಾಮಿ ವರದಿ ಅನುಸರಿಸಿಲ್ಲ; ಸುಪ್ರೀಂ ಕೋರ್ಟಿನ ಪ್ರಸ್ತಾಪವೂ ಇಲ್ಲ ಎಂದು ಟೀಕಿಸಿದರು. ಇವರು 3 ಗುಂಪು ಮಾಡಿ ಅಲೆಮಾರಿಗಳನ್ನು ಬೀದಿಗೆ ಬಿಟ್ಟಿದ್ದಾರೆ ಎಂದು ದೂರಿದರು. ಇಂಥ ಯಾವುದನ್ನೂ ಚರ್ಚಿಸಲು ಈ ಸರಕಾರ ಸಿದ್ಧವಿಲ್ಲ; ಮುಖ್ಯಮಂತ್ರಿಗಳು ಕೂಡ ಪಲಾಯನವಾದ ಮಾಡುತ್ತಾರೆ ಎಂದರು.
ಪ್ರಶ್ನಿಸಿದರೆ, ನಮ್ಮನ್ನು ತೇಜೋವಧೆ ಮಾಡುತ್ತಾರೆ. ನಮ್ಮನ್ನು ಟೀಕಿಸುತ್ತಾರೆಯೇ ಹೊರತು ಉತ್ತರ ಕೊಡುವಲ್ಲಿ ಮುಖ್ಯಮಂತ್ರಿಗಳು ಅಸಮರ್ಥರಾಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇಡೀ ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ. ಅತ್ಯಾಚಾರಗಳು ನಡೆಯುತ್ತಿವೆ. ಕೊಲೆಗಳೂ ಆಗುತ್ತಿವೆ. ಇವರು ಉತ್ತರ ಕೊಡದೇ ಮಸೂದೆಗಳನ್ನು ಅಂಗೀಕರಿಸಿ, ತೆರಿಗೆ ಹಾಕುವುದು, ಸೆಸ್ ವಿಧಿಸುವುದರಲ್ಲಿ ನಿರತರಾಗಿದ್ದಾರೆ. ಇಷ್ಟು ಮಾಡಿದರೂ ಅಲ್ಲಿ ಹಣವಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ, ಶ್ರೀಮತಿ ಭಾರತಿ ಶೆಟ್ಟಿ, ನವೀನ್ ಕೆ.ಎಸ್, ಡಿ.ಎಸ್ ಅರುಣ್, ಪ್ರದೀಪ್ ಶೆಟ್ಟರ್, ಕೇಶವ ಪ್ರಸಾದ್ ಎಸ್, ಕಿಶೋರ್ ಕುಮಾರ್ ಪುತ್ತೂರು ಅವರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.