ಬೆಂಗಳೂರು: ಬಾಬಾಸಾಹೇಬ್ ಡಾ.ಅಂಬೇಡ್ಕರ್ ಮತ್ತು ದೇಶದ ಸಂವಿಧಾನವನ್ನು ವಿರೋಧಿಸುವುದು ಕಾಂಗ್ರೆಸ್ಸಿನ ಡಿ.ಎನ್.ಎ ಎಂದು ಮಾಜಿ ಸಚಿವ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಟೀಕಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಕಾಂಗ್ರೆಸ್ಸಿನ ಡಿ.ಎನ್.ಎಯು ಸಂವಿಧಾನ ವಿರೋಧಿ ಮಾನಸಿಕತೆ ಹೊಂದಿದೆ. 370ನೇ ವಿಧಿಯನ್ನು ಡಾ. ಅಂಬೇಡ್ಕರರು ವಿರೋಧಿಸಿದ್ದರು. ನೆಹರೂ ಇದೇ ವಿಧಿಯನ್ನು ಜಾರಿಗೊಳಿಸಿದರು. ಸಂವಿಧಾನದಲ್ಲಿ ಡಾ. ಅಂಬೇಡ್ಕರರು ಸೇರಿಸಿದ್ದ ಸಮಾನ ನಾಗರಿಕ ಸಂಹಿತೆಯನ್ನು ಇವತ್ತಿನವರೆಗೂ ಅವರು ಅದನ್ನು ಅನುಷ್ಠಾನಕ್ಕೆ ತಂದಿಲ್ಲ; ಬಿಜೆಪಿ ಅದನ್ನು ಅನುಷ್ಠಾನಕ್ಕೆ ತರುವುದಾಗಿ ಮುಂದಾದರೆ ವಿರೋಧಿಸುತ್ತಾರೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ಸಿನ ಡಿಎನ್ಎ ಮುಂದುವರೆದ ಭಾಗವಾಗಿ ಡಿ.ಕೆ.ಶಿವಕುಮಾರರು ಟಿ.ವಿ. ಸಂದರ್ಶನದಲ್ಲಿ ಸಂವಿಧಾನ ಬದಲಿಸುವ ಮಾತನಾಡಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ಸನ್ನು ಕಿತ್ತೊಗೆದು ನಾವು ಸಂವಿಧಾನ ಉಳಿಸಿಕೊಳ್ಳುತ್ತೇವೆ ಎಂದು ಅವರು ಸವಾಲು ಹಾಕಿದರು. ಮತೀಯ ಆಧಾರಿತ ಶೇ 4 ಮೀಸಲಾತಿಯೇ ಸಂವಿಧಾನಕ್ಕೆ ವಿರುದ್ಧವಾದುದು. ಆ ನಿಲುವನ್ನು ಯಾವಾಗ ಇವರ ಸಚಿವಸಂಪುಟ ಅನುಮೋದಿಸಿತೋ, ಕಾಂಗ್ರೆಸ್ಸಿಗೆ ಬಹುಮತ ಇದೆ ಎಂದು ಯಾವಾಗ ಅದನ್ನು ಬೆಂಬಲಿಸಿದರೋ ಆಗಲೇ ಇವರ ನಿಲುವೇನೆಂದು ಗೊತ್ತಾಗಿದೆ. ಸಂವಿಧಾನವನ್ನು ಬದಲಿಸಿ ಆದರೂ ಮತೀಯ ಆಧಾರಿತ ಮೀಸಲಾತಿ ಕೊಡುವುದೇ ಇವರ ನಿಲುವೆಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದರು. ಆಗ ಶಾಬಾನೋ ಪ್ರಕರಣ ಆಗಿತ್ತು. ಶಾಬಾನೋ ಅವರಿಗೆ ಜೀವನಾಂಶ ಕೊಡಲು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿತ್ತು. ಅದರ ವಿರುದ್ಧ ಸಂವಿಧಾನಕ್ಕೆ ತಿದ್ದುಪಡಿ ತಂದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ವರ್ತಿಸಿದ್ದು ಕಾಂಗ್ರೆಸ್ ಪಕ್ಷ ಎಂದು ವಿವರಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಒಂದು ಭಾಷಣದಲ್ಲಿ ಈ ದೇಶದ ಸಂಪತ್ತನ್ನು ಬಡವರಿಗೆ ಹಂಚುತ್ತೇನೆ ಎನ್ನಲಿಲ್ಲ; ಬದಲಾಗಿ ಈ ದೇಶದ ಸಂಪತ್ತನ್ನು ಮುಸಲ್ಮಾನÀರಿಗೆ ಹಂಚುತ್ತೇನೆ ಎಂದರು. ಈಗ ಮತಾಧಾರಿತ ಮೀಸಲಾತಿಯನ್ನು ಸಂವಿಧಾನ ಒಪ್ಪಿಲ್ಲ ಎಂದು ಗೊತ್ತಿದ್ದು ಕೂಡ ಸಂವಿಧಾನದ ಬಗ್ಗೆ ಬಹಳ ಜ್ಞಾನ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತಬ್ಯಾಂಕ್ ರಾಜಕಾರಣಕ್ಕೆ ಸಂವಿಧಾನದ ವಿರುದ್ಧವಾದ ಮತೀಯ ಆಧಾರಿತ ಮೀಸಲಾತಿ ತಂದಿದ್ದಾರೆ ಎಂದು ಸಿ.ಟಿ.ರವಿ ಅವರು ಟೀಕಿಸಿದರು. ಮತಬ್ಯಾಂಕ್ ರಾಜಕಾರಣಕ್ಕೆ ಅವರು ಏನು ಮಾಡಲೂ ಹೇಸುವವರಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್ ಅವರು ಹೇಳಿದ್ದನ್ನು ಬೇರೆ ಪಕ್ಷದವರು ಹೇಳಿದ್ದರೆ ಇಷ್ಟೊತ್ತಿಗೆ ಆಕಾಶ ಭೂಮಿ ಒಂದು ಮಾಡುತ್ತಿದ್ದರು. ಒಂದು ವೇಳೆ ನ್ಯಾಯಾಲಯ ವಿರುದ್ಧವಾಗಿ ತೀರ್ಪು ಕೊಟ್ಟರೆ ನಾವು ಸಂವಿಧಾನ ಬದಲಾಯಿಸುತ್ತೇವೆ ಎಂಬ ಮಾತನ್ನು ಉಪ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದು ಈ ಘಳಿಗೆಗೂ ಯೂಟ್ಯೂಬಿನಲ್ಲಿ ಲಭ್ಯವಿದೆ. ಸತ್ಯ ಏನು? ಸುಳ್ಳೇನು ಎಂಬುದನ್ನು ತಿಳಿಯಲು ಅಂಗೈ ಹುಣ್ಣಿಗೆ ಕನ್ನಡಿ ಹೇಗೆ ಬೇಕಿಲ್ಲವೋ ಅವರೇ ಕೊಟ್ಟ ಹೇಳಿಕೆಯನ್ನು ಡಿ.ಕೆ.ಶಿವಕುಮಾರ್ ಅವರು ಕೇಳಲಿ ಎಂದು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.
ಶಿವಕುಮಾರ್ ಅವರು ಡಿಎಂಕೆ ಜೊತೆಗಿನ ತಮ್ಮ ಸ್ನೇಹವನ್ನು ಬಳಸಿಕೊಂಡು ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡನ್ನು ಒಪ್ಪಿಸಬೇಕಿತ್ತು ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಹನಿಟ್ರ್ಯಾಪ್ ವಿಷಯದಲ್ಲಿ ವಿಧಾನಸಭೆಯಲ್ಲಿ ಹಿರಿಯ ಸಚಿವ ರಾಜಣ್ಣ ಅವರು ನೀಡಿದ ಹೇಳಿಕೆ ಆಧರಿಸಿ ಸರಕಾರ ತನಿಖೆಗೆ ಆದೇಶ ನೀಡಬೇಕಿತ್ತು. ವಿಧಾನಪರಿಷತ್ತಿನಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಉನ್ನತ ಮಟ್ಟದ ತನಿಖೆಯ ಮಾತನಾಡಿದ್ದಾರೆ. ಇದಕ್ಕಿಂತ ಇನ್ನೇನು ಬೇಕು? ಮತ್ತೆ ದೂರು ಕೊಡುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.