ಬೆಂಗಳೂರು: ಕಳೆದ 2 ವರ್ಷಗಳಲ್ಲಿ ಬೆಂಗಳೂರಿನ ಅಭಿವೃದ್ಧಿ ದೊಡ್ಡ ಸೊನ್ನೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಟೀಕಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇವತ್ತು ಬೆಂಗಳೂರಿಗೆ ಸಂಬಂಧಿಸಿ ಬಿಜೆಪಿಯ ಪ್ರಮುಖರ ಸಭೆ ಕರೆದಿದ್ದೆವು. ರಸ್ತೆಗಳಲ್ಲಿ ಬಿದ್ದ ಗುಂಡಿಗಳೂ ಸೊನ್ನೆಯೇ. ಐಟಿ ದಿಗ್ಗಜ ಮೋಹನ್ದಾಸ್ ಪೈ ಅವರೂ ಕೂಡ ಕಾಮೆಂಟ್ ಮಾಡಿದ್ದಾರೆ. ರಸ್ತೆಯಲ್ಲಿ ಬಿದ್ದು ಆಸ್ಪತೆಗೆ ಹೋಗುವ ಜನಸಾಮಾನ್ಯರ ಸಂಖ್ಯೆಯೂ ಜಾಸ್ತಿ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಿಟಿ ಮಾರ್ಕೆಟ್ನಿಂದ ಆರಂಭಿಸಿ ಎಲ್ಲ ಮಾರ್ಕೆಟ್ಗಳಲ್ಲೂ ಕಸದ ರಾಶಿ ಗೋಪುರದ ರೀತಿ ಬಿದ್ದಿದೆ. ಈ ಸರಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಬೆಂಗಳೂರಿಗರಿಗೆ ದೊಡ್ಡ ಕನಸನ್ನು ಕೊಟ್ಟಿತ್ತು. ಬೆಂಗಳೂರನ್ನು ಹಿಮಾಲಯ ಪರ್ವತದ ಶಿಖರದ ರೀತಿಯಲ್ಲಿ ನಾವು ಬ್ರ್ಯಾಂಡ್ ಬೆಂಗಳೂರು ಮಾಡಿ, ಇಡೀ ಪ್ರಪಂಚಕ್ಕೆ ಬೆಂಗಳೂರನ್ನು ತೋರಿಸುವುದಾಗಿ ಹೇಳಿದ್ದರು. ಈಗ ಅದೇ ವ್ಯಕ್ತಿ, ಅದೇ ಮಂತ್ರಿ, ಅದೇ ಉಸ್ತುವಾರಿ ಸಚಿವರು, ಆ ಭಗವಂತ ಬಂದರೂ ಈ ಬೆಂಗಳೂರನ್ನು ಉದ್ಧಾರ ಮಾಡಲು ಅಸಾಧ್ಯ ಎಂದಿರುವುದಾಗಿ ಟೀಕಿಸಿದರು.
ನಾವು ಗ್ರೇಟರ್ ಬೆಂಗಳೂರು ಮಾಡುತ್ತೇವೆ; ಬೆಂಗಳೂರನ್ನು ಆರೇಳು ಭಾಗಗಳಾಗಿ ವಿಂಗಡಿಸುತ್ತೇವೆ. ಇನ್ನಷ್ಟು ಪ್ರದೇಶಗಳನ್ನು ಬೆಂಗಳೂರಿನ ಒಳಗಡೆ ಸೇರಿಸುವುದಾಗಿ ಹೇಳಿಕೆ ಕೊಡುತ್ತಿದ್ದಾರೆ. ಇರುವ ಬೆಂಗಳೂರನ್ನೇ ನಿಮಗೆ ಉದ್ಧಾರ ಮಾಡಲು ಆಗುತ್ತಿಲ್ಲ ಎಂದು ಟೀಕಿಸಿದರು.
ಬೆಂಗಳೂರನ್ನು ವಿಭಜಿಸಿದರೆ ಅದು ಕೆಂಪೇಗೌಡರಿಗೆ ಅವಮಾನ ಮಾಡಿದಂತೆ ಎಂದು ತಿಳಿಸಿದರು. ಕೆಂಪೇಗೌಡರ ವಿಶ್ವಾಸ ಇರುವ ಶೇ 90ರಷ್ಟು ಜನರು ಬೆಂಗಳೂರಿನಲ್ಲಿ ಇದ್ದಾರೆ. ಅವರಿಗೆಲ್ಲ ಘಾಸಿ ಮಾಡುತ್ತಿದ್ದೀರಿ ಎಂದು ಎಚ್ಚರಿಸಿದರು. ಕೆಂಪೇಗೌಡರು ಕಟ್ಟಿದ ಬೆಂಗಳೂರು ಒಟ್ಟಾಗಿ ಇರಬೇಕು. ಅದು ಎಲ್ಲರ ಅಭಿಲಾಷೆ ಎಂದು ವಿಶ್ಲೇಷಿಸಿದರು. ಅದಕ್ಕೇ ಕೊಡಲಿ ಪೆಟ್ಟು ಕೊಡುವ ಕೆಲಸ ಮಾಡುತ್ತಿದ್ದೀರಿ ಎಂದು ಆಕ್ಷೇಪಿಸಿದರು.
ನೀವು 198 ವಾರ್ಡಿಗೇ ಬೇಗ ಚುನಾವಣೆ ನಡೆಸಿದರೆ ಸಾಕು. ಅಭಿವೃದ್ಧಿ ಕಾಮಗಾರಿಗಳು ನೆಲಕಚ್ಚಿವೆ. ರಸ್ತೆಗಳು ಹಾಳಾಗಿವೆ. ನೀವು 150 ಅಡಿ ಕೆಳಗೆ ಟನೆಲ್ ರೋಡ್ ಮಾಡಲು ಹೊರಟಿದ್ದೀರಿ ಎಂದು ವ್ಯಂಗ್ಯವಾಡಿದರು. ರಸ್ತೆ ಮೇಲ್ಭಾಗದಲ್ಲೇ ಟನೆಲ್ಗಳಿವೆ. ನೀವು 150 ಅಡಿ ಕೆಳಗೆ ಟನೆಲ್ ಮಾಡಲು ಹೋಗುತ್ತೀರಲ್ಲವೇ ಎಂದು ಕೇಳಿದರು.
ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯಿಂದ ಜನರು ರೊಚ್ಚಿಗೆದ್ದಿದ್ದಾರೆ. ಬೆಂಗಳೂರಿನ ಗತಿ ದೇವರೇ ಗತಿ ಎಂಬಂತಾಗಿದೆ. ಬೆಂಗಳೂರಿನ ಅಭಿವೃದ್ಧಿ, ಕಸದ ಸಮಸ್ಯೆ ನಿವಾರಣೆ ಕುರಿತ ಕನಸುಗಳಿಗೆ ಎಳ್ಳುನೀರು ಬಿಡಲು ಸಿದ್ದರಾಮಯ್ಯನವರ ಸರಕಾರ ನೇರ ಕಾರಣ ಎಂದು ಆರೋಪಿಸಿದರು.
ಬೆಂಗಳೂರು ಬಗ್ಗೆ ಆಸಕ್ತಿ ಇಲ್ಲದವರು ಇಲ್ಲಿನ ಉಸ್ತುವಾರಿ ಸಚಿವರಾಗುತ್ತಾರೆ. ಕಾಂಗ್ರೆಸ್ ಸರಕಾರದಲ್ಲಿ ಬೆಂಗಳೂರು ಒಂದು ರೀತಿ ಅನಾಥ ಆಗಿದೆ. ಇದರ ವಿರುದ್ಧ ಚುನಾವಣೆ ಬೇಗ ನಡೆಸಿ; ಅಭಿವೃದ್ಧಿ ಆಗಲಿ, ಸ್ಥಳೀಯ ಸಂಸ್ಥೆಗೆ ಆದ್ಯತೆ ಕೊಡಿ ಎಂಬ ತೀರ್ಮಾನವನ್ನು ನಾವು ಮಾಡಿದ್ದೇವೆ ಎಂದು ಆರ್.ಅಶೋಕ್ ಅವರು ವಿವರಿಸಿದರು.
ಕೋರ್ಟಿನಲ್ಲಿ ವಾದ ಮಾಡಲು 15 ಜನರ ತಂಡ ರಚಿಸಿದ್ದೇವೆ. ಚುನಾವಣೆ ಬೇಗ ನಡೆದು ಬೆಂಗಳೂರಿನ ಅಭಿವೃದ್ಧಿ ಆಗಬೇಕೆಂಬುದೇ ನಮ್ಮ ಆಶಯ ಎಂದು ತಿಳಿಸಿದರು.
ಬೆಂಗಳೂರಿನ ಕಾನೂನು -ಸುವ್ಯವಸ್ಥೆ ಮಾಫಿಯ ಕೈಗೆ ಹೊರಟುಹೋಗಿದೆ ಎಂದು ಆಕ್ಷೇಪಿಸಿದರು. ಡಾನ್ಗಳ ಕೈಗೆ ಹೊರಟುಹೋಗಿದೆ ಎಂದು ದೂರಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.