ಬೆಂಗಳೂರು: ವಿಕಸಿತ ಭಾರತದ ಸಾಕಾರಕ್ಕಾಗಿ ಮುನ್ನೋಟದ ಬಜೆಟ್ ಇದಾಗಿದೆ. ಒಟ್ಟಾರೆ 50 ಲಕ್ಷ ಕೋಟಿ ಗಾತ್ರದ ಬಜೆಟ್ ಇದಾಗಿದ್ದು, ಭಾರತದಲ್ಲಿ ಇದೇ ಮೊದಲ ಬಾರಿಗೆ ಒಟ್ಟು ಬಜೆಟ್ ಗಾತ್ರದಲ್ಲಿ ಶೇ 20ರಷ್ಟು ಮೊತ್ತವನ್ನು ಬಂಡವಾಳ ವೆಚ್ಚಕ್ಕಾಗಿ ತೆಗೆದಿರಿಸಲಾಗಿದೆ. 11 ಲಕ್ಷ ಕೋಟಿ ವರೆಗಿನ ಮೊತ್ತವನ್ನು ಅಭಿವೃದ್ಧಿಯ ಮೂಲ ಸೌಕರ್ಯಗಳ ನಿರ್ಮಾಣಕ್ಕಾಗಿ ವಿನಿಯೋಗಿಸಲಾಗುತ್ತಿದೆ. ಭಾರತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಪಿ. ರಾಜೀವ್ ಹೇಳಿದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಇಂದು ಮಂಡಿಸಿದ ಕೇಂದ್ರ ಬಜೆಟ್ 2025 ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತ ಅವರು ಮಾತನಾಡಿದರು.
ಸಾಮಾಜಿಕವಾಗಿ ತುಳಿತಕ್ಕೆ ಒಳಗಾಗಿರುವ ವರ್ಗಗಳಿಗೆ ಹೆಚ್ಚಿನ ಬಲ ತುಂಬಲು ಎಸ್ಸಿ/ ಎಸ್ಟಿ ಮಹಿಳಾ ಉದ್ಯಮಿಗಳಿಗೆ ಮೊದಲ ಸಲ 2 ಕೋಟಿ ವರೆಗಿನ ಸಾಲ ಪಡೆಯಲು ಅವಕಾಶ ಒದಗಿಸಲಾಗಿದೆ. ಎಂಎಸ್ಎಂಇಗಳಿಗೆ ಹೆಚ್ಚಿನ ನೆರವು ನೀಡಲು ಉದ್ದೇಶಿಸಲಾಗಿದೆ. ಜೀವರಕ್ಷಕ ಔಷಧಿಗಳನ್ನು ಆಮದು ಮಾಡಲು ಆಮದು ಸುಂಕದಿಂದ ರಿಯಾಯತಿ ನೀಡಲಾಗಿದೆ. ಒಟ್ಟಾರೆ ಈ ಬಜೆಟ್ನಲ್ಲಿ ಮಧ್ಯಮ ವರ್ಗದವರಿಗೆ ಹೊರೆ ಆಗದಿರುವಂತೆ ನೋಡಿಕೊಂಡಿದ್ದು, ಬಡವರನ್ನು ಮತ್ತಷ್ಟು ಆರ್ಥಿಕ ಸಬಲರನ್ನಾಗಿಸುವ ನಿಟ್ಟಿನಲ್ಲಿ, ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
2047ಕ್ಕೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಮಾಡಲು ಪೂರಕವಾದ ಬಜೆಟ್ ಇದಾಗಿದೆ. ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತವನ್ನು ಬೆಳೆಸುವ ಆಶಯವನ್ನು ಪ್ರಧಾನ ಮಂತ್ರಿಗಳು ಎರಡು ವರ್ಷಗಳ ಹಿಂದೆಯೇ ವ್ಯಕ್ತಪಡಿಸಿದ್ದರು. ಅದನ್ನು ಪೂರೈಸುವ ನಿಟ್ಟಿನಲ್ಲಿ ಪೂರಕವಾದ ಭರವಸೆಯ ಬಜೆಟ್ ಇದಾಗಿದೆ. ಇದಕ್ಕಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ರಾಜೀವ್ ತಿಳಿಸಿದರು.
ಬಜೆಟ್ ಗಾತ್ರ, ಬಂಡವಾಳ ವೆಚ್ಚ, ಆದ್ಯತಾ ವಲಯಗಳನ್ನು ಗಮನಿಸಿ ಬಜೆಟ್ ಅನ್ನು ವಿಶ್ಲೇಷಿಸಬೇಕಾಗಿದೆ. ಇದೇ ಮೊದಲ ಬಾರಿಗೆ ಬಂಡವಾಳ ವೆಚ್ಚದ ಹೂಡಿಕೆಗಾಗಿ 20 ಶೇ ಹಣವನ್ನು ಮೀಸರಿಸಲಾಗಿದೆ. ಇದರಿಂದ ಮೂಲಸೌಕರ್ಯಗಳ ವೃದ್ಧಿ, ಉದ್ಯೋಗಾವಕಾಶಗಳ ಹೆಚ್ಚಳ ಆಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂದಾಯ ಕೊರತೆ ಬಜೆಟ್ ಮಂಡಿಸಿದ್ದರು. ಈ ಬಾರಿಯಾದರೂ ಕಂದಾಯ ಹೆಚ್ಚುವರಿ ಬಜೆಟ್ ಅನ್ನು ಮಂಡಿಸಬೇಕು ಎಂದು ನಾವು ಆಗ್ರಹಿಸುತ್ತೇವೆ. ಕೇಂದ್ರದ ಬಜೆಟ್ನಲ್ಲಿ ಎಲ್ಲವನ್ನೂ ರಾಜ್ಯ ಸರಕಾರಕ್ಕೆ ಕೊಟ್ಟರೆ ಮಾತ್ರ ಬಜೆಟ್ ಒಳ್ಳೆಯದು ಎಂದು ಇವರು ಹೇಳುತ್ತಾರೆ ಅಷ್ಟೆ. ಆದರೆ ಹಾಗೆ ಮಾಡಲು ಸಾಧ್ಯವಿಲ್ಲ. ಕೇಂದ್ರದ ಯೋಜನೆಗಳಿಗೆ ಸಹಕಾರ ನೀಡಲು ಸಾಧ್ಯವಾಗುವಂತಹ ಬಜೆಟ್ ಅನ್ನು ನೀವು ರೂಪಿಸಿ ಎಂದು ಅವರು ಆಗ್ರಹಿಸಿದರು.
ಗಡಿಯನ್ನು ರಕ್ಷಣೆ ಮಾಡಲು, ಆಂತರಿಕ ಭದ್ರತೆ ಹೆಚ್ಚಿಸಲು ಬಜೆಟ್ನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮೊಸರಲ್ಲಿ ಕಲ್ಲು ಹುಡುಕುವವರಿಗೆ ಏನೂ ಹೇಳಲಾಗದು. ಸಚಿವರಾದ ಎಚ್.ಕೆ ಪಾಟೀಲ್, ಕೃಷ್ಣ ಬೈರೇಗೌಡ ಅವರಿಗೆ ವಿನಂತಿ ಮಾಡುತ್ತೇನೆ- 20-21 ಲಕ್ಷ ಕೋಟಿ ಕ್ಯಾಪಿಟಲ್ ಇನ್ವೆಸ್ಟ್ಮೆಂಟ್ ಗೆ ಅವಕಾಶ ಕೊಟ್ಟಿದ್ದಾರೆ. ಕರ್ನಾಟಕ ಸರಕಾರ ತನ್ನ ಪಾಲಿನ ಭಾಗವಾಗಿ ಕನಿಷ್ಠ 3 ಲಕ್ಷ ಕೋಟಿ ರೂ ಹೊಂದಿಸಿಕೊಳ್ಳಲಿ. ಕರ್ನಾಟಕದಲ್ಲಿ ನಿಮಗೆ ರೆವಿನ್ಯೂ ಸರ್ಪ್ಲಸ್ ಬಜೆಟ್ ಮಂಡಿಸಲು ಧೈರ್ಯ ಇದೆಯಾ? ಶೇ 20ರಷ್ಟು ಕ್ಯಾಪಿಟಲ್ ಇನ್ವೆಸ್ಟ್ಮೆಂಟ್ಗೆ ಹಣ ಒದಗಿಸಲು ನಿಮ್ಮಿಂದ ಸಾಧ್ಯವಾ? ಎಂದು ರಾಜೀವ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದರು.
ಕರ್ನಾಟಕದಲ್ಲಿ ಇವರು ಕನಿಷ್ಠ 40 ಸಾವಿರ ಕೋಟಿ ಕಂದಾಯ ಕೊರತೆಯ ಬಜೆಟ್ ಮಂಡಿಸುತ್ತಾರೆ. ಇನ್ನು ಬಂಡವಾಳ ವೆಚ್ಚಕ್ಕೆ ಆದ್ಯತೆ ಕೊಡುವ ಮಾತು ಎಲ್ಲಿದೆ? ಇಂತಹ ದುಸ್ಥಿತಿಗೆ ಕರ್ನಾಟಕವನ್ನು ಇಳಿಸಿರುವ ಕಾಂಗ್ರೆಸ್ ನಾಯಕರು ಕೇಂದ್ರದ ಬಜೆಟ್ ಬಗ್ಗೆ ನಕಾರಾತ್ಮಕ ಮಾತುಗಳನ್ನಾಡುತ್ತಾರೆ ಎಂದು ಟೀಕಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.