ಶಿವಮೊಗ್ಗ: ಮುಡಾ ವಿಚಾರದಲ್ಲಿ ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ಲೋಕಾಯುಕ್ತದವರು ಕ್ಲೀನ್ ಚಿಟ್ ಕೊಟ್ಟಿರುವ ಸಾಧ್ಯತೆ ಇದೆ. ಕ್ಲೀನ್ ಚಿಟ್ ಕೊಟ್ಟಿದ್ದರೆ, ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ವರದಿಯಾದಂತೆ ಲೋಕಾಯುಕ್ತ ತನಿಖಾ ಸಂಸ್ಥೆಯು ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳಿಗೆ ಕ್ಲೀನ್ ಚಿಟ್ ಕೊಟ್ಟಿದ್ದೇ ಆದರೆ, ಲೋಕಾಯುಕ್ತ ತನಿಖೆ ಸರಿಯಾಗಿ ಆಗುತ್ತಿಲ್ಲ; ಸಿಎಂ ಒತ್ತಡಕ್ಕೆ ಮಣಿದಿದ್ದಾರೆ ಎಂದು ಬಿಜೆಪಿ ಹಲವು ದಿನಗಳಿಂದ ವ್ಯಕ್ತಪಡಿಸಿದ ಅನುಮಾನಗಳು ಸತ್ಯವಾದಂತೆ ಎಂದು ವಿಶ್ಲೇಷಿಸಿದರು.
ಮೊನ್ನೆ ಜಾರಿ ನಿರ್ದೇಶನಾಲಯವು (ಇ.ಡಿ.) ಪ್ರೆಸ್ ನೋಟನ್ನೂ ಬಿಡುಗಡೆ ಮಾಡಿದೆ. ಮುಡಾದಲ್ಲಿ ಎಷ್ಟು ಕೋಟಿ ಹಗರಣ ನಡೆದಿದೆ ಎಂಬುದನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮತ್ತೊಂದು ಕಡೆ ರಾಜ್ಯ ಹೈಕೋರ್ಟ್ ಕೂಡ ಮೈಸೂರಿನ ಮುಡಾ ಹಗರಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಇದರ ನಡುವೆ ಮುಖ್ಯಮಂತ್ರಿಗಳೂ ಸೇರಿ ರಾಜ್ಯ ಸರಕಾರವು ಮಾನ್ಯ ರಾಜ್ಯಪಾಲರನ್ನು ಅವಹೇಳನಕಾರಿಯಾಗಿ ನಿಂದಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಹೈಕೋರ್ಟ್ ತೀರ್ಪು ಬರುವ ಸಂದರ್ಭದಲ್ಲೇ ಲೋಕಾಯುಕ್ತ ವರದಿ ನೀಡಿದ್ದು ಸತ್ಯವಾದರೆ, ಇದು ಖಂಡಿತ ಸರಿಯಲ್ಲ. ಇದಕ್ಕೆ ಯಾವುದೇ ರೀತಿಯ ಪಾವಿತ್ರ್ಯತೆ ಇರುವುದಿಲ್ಲ ಎಂದು ತಿಳಿಸಿದರು. ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ಕ್ಲೀನ್ ಚಿಟ್ ಕೊಡಲಾಗಿದೆ ಎಂಬುದು ನಮ್ಮೆಲ್ಲರ ಸ್ಪಷ್ಟ ಅಭಿಪ್ರಾಯ ಎಂದು ನುಡಿದರು.
ಪ್ರಶ್ನೆಗೆ ಉತ್ತರಿಸಿದ ಅವರು, ಇ.ಡಿ. ಆಧಾರರಹಿತವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಲು ಸಾಧ್ಯವಿಲ್ಲ; ಮುಡಾ ಹಗರಣ ಆಗಿದೆ ಎಂದಿದ್ದರೆ ಅದಕ್ಕೆ ಆಧಾರಗಳಿರುತ್ತವೆ. ಇ.ಡಿ. ವರದಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಆತುರಾತುರವಾಗಿ ಕ್ಲೀನ್ ಚಿಟ್ ಪಡೆಯುವ ಕೆಲಸ ಮಾಡಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.
ರಾಜ್ಯಾಧ್ಯಕ್ಷರ ವಿಚಾರಕ್ಕೆ ಬಂದರೆ, ಯಾರೋ ಒಂದಾರು ಜನ ಪ್ರಮುಖರು ನನ್ನ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ. ರಾಜ್ಯದ ಉಸ್ತುವಾರಿಗಳೂ ಆದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್, ಸಹ ಉಸ್ತುವಾರಿ ಸುಧಾಕರ ರೆಡ್ಡಿ, ಪೊನ್ನು ರಾಧಾಕೃಷ್ಣ ಅವರು ಮೊನ್ನೆ ಸಭೆಯಲ್ಲಿದ್ದರು. 55- 60 ಜನ ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು ಇದ್ದ ಸಭೆ ಅದಾಗಿತ್ತು. ಶೇ 80- 90 ಜನರು ರಾಜ್ಯದ ಅಧ್ಯಕ್ಷರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ; ವಿಜಯೇಂದ್ರರನ್ನು ಮುಂದುವರೆಸಬೇಕೆಂದು ಅಭಿಪ್ರಾಯ ನೀಡಿದ್ದಾಗಿ ಪತ್ರಿಕೆಗಳಲ್ಲೂ ಬಂದಿದೆ; ಮಾಧ್ಯಮಗಳಲ್ಲೂ ಬಂದಿದೆ ಎಂದು ಗಮನ ಸೆಳೆದರು.
ಕಾರ್ಯಕರ್ತರು ನನ್ನ ಕೆಲಸದ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೆಲವರು ಅಸಮಾಧಾನ ವ್ಯಕ್ತಪಡಿಸುವುದು ಸಹಜ. ಅವರ ಅಸಮಾಧಾನ ಇರುವುದು ಅಧ್ಯಕ್ಷಗಿರಿ ಬಗ್ಗೆ ಅಲ್ಲ. ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ; ಜಿಲ್ಲಾಧ್ಯಕ್ಷರ ಚುನಾವಣೆಗಳು ಈಗಾಗಲೇ ನಡೆಯುತ್ತಿವೆ. ರಾಜ್ಯದ ಅಧ್ಯಕ್ಷರ ಹುದ್ದೆಗೂ ಚುನಾವಣೆ ನಡೆಯಲಿದೆ; ಎಲ್ಲದಕ್ಕೂ ಮುಂದಿನ ದಿನಗಳಲ್ಲಿ ಸಮರ್ಪಕ ಉತ್ತರ ಲಭಿಸುತ್ತದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಸ್ಥಳೀಯ ಚುನಾವಣೆಗಳು ಬರುವ ಮುಂಚಿತವಾಗಿ ಪಕ್ಷದ ವರಿಷ್ಠರು ಪಕ್ಷದೊಳಗಿನ ಬೆಳವಣಿಗೆಗಳ ಕುರಿತು ಗಮನಿಸಬೇಕೆಂಬ ಅಪೇಕ್ಷೆ ನನ್ನದು ಮತ್ತು ಕಾರ್ಯಕರ್ತರದು. ಬಿಜೆಪಿಯೊಳಗಿನ ಬೆಳವಣಿಗೆಗಳು ನನಗೂ, ಕಾರ್ಯಕರ್ತರಿಗೂ ಸಂತೋಷ ತಂದಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು. ಮಾಜಿ ಮುಖ್ಯಮಂತ್ರಿಗಳು, ಹೋರಾಟಗಾರ ಯಡಿಯೂರಪ್ಪನವರ ಬಗ್ಗೆ ಕೆಲವು ಮುಖಂಡರು ಅಪಮಾನ ಮಾಡುವ ರೀತಿಯಲ್ಲಿ ಒಂದು ವರ್ಷದಿಂದ ಹೇಳಿಕೆ ಕೊಡುತ್ತಿದ್ದಾರೆ. ಕಾರ್ಯಕರ್ತರು ಇದರಿಂದ ನೊಂದಿದ್ದಾರೆ ಎಂದು ತಿಳಿಸಿದರು. ಎಲ್ಲ ವಿಷಯಗಳನ್ನು ಸರಿಪಡಿಸುವ ಬಗ್ಗೆ ರಾಷ್ಟ್ರೀಯ ನಾಯಕರ ಗಮನಕ್ಕೆ ತರುವುದಾಗಿ ಹೇಳಿದರು.
ಶ್ರೀರಾಮುಲು ಅವರ ವಿಚಾರದಲ್ಲಿ ಮೊನ್ನೆ ಕೋರ್ ಕಮಿಟಿಯಲ್ಲಿ ಏನು ಚರ್ಚೆ ಆಗಿದೆಯೋ ಅದರ ಕುರಿತ ಶ್ರೀರಾಮುಲು ಅವರ ಮಾತುಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಶ್ರೀರಾಮುಲು ಅವರು ಹಿರಿಯರಿದ್ದು ಅವರ ಬಗ್ಗೆ ಗೌರವವಿದೆ. ಒಳಗಡೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅವರ ಉಪಸ್ಥಿತಿಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಬೇಕೆಂಬ ಚರ್ಚೆ ನಡೆದಿದೆ. ಬಿಜೆಪಿಯನ್ನು ಬಹುಮತದಿಂದ ಅಧಿಕಾರಕ್ಕೆ ತರಬೇಕೆಂಬ ದೃಷ್ಟಿಯಿಂದ ಕೆಲವೊಂದು ಚರ್ಚೆಗಳು ನಡೆದಿವೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಅದನ್ನು ನಾವು ಬಹಿರಂಗವಾಗಿ ಮಾತನಾಡುವುದಿಲ್ಲ. ಶ್ರೀರಾಮುಲು ಅವರು ಕೂಡ ಅಪಾರ್ಥಕ್ಕೆ ಅವಕಾಶ ಮಾಡಿಕೊಡಬಾರದು; ನಾವೆಲ್ಲರೂ ಒಟ್ಟಾಗಿ ಹೋಗೋಣ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.