ಬೈಂದೂರು: ಇಂದು ನಡೆದ ಬೈಂದೂರು ಬಗರ್ ಹುಕುಂ ಅಕ್ರಮ ಸಕ್ರಮ ಸಭೆಯು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರು ರಾಜ ಶೆಟ್ಟಿ ಗಂಟಿ ಹೊಳೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಯಲ್ಲಿ ಅಕ್ರಮ ಸಕ್ರಮ ಕ್ಕೆ ಸಂಬಂಧಿಸಿದಂತೆ ಹಳ್ಳಿ ಹೊಳೆ ಗ್ರಾಮದ 06 ಕಡತ, ಜಡ್ಕಲ್ ಗ್ರಾಮದ 06 ಕಡತ, ಮುದೂರು ಗ್ರಾಮದ 05 ಕಡತ ಹಾಗೂ ನಾಡ ಗ್ರಾಮದ 01 ಕಡತ ಸೇರಿ ಒಟ್ಟು 18 ಕಡತಗಳನ್ನು ಸಮಿತಿ ಸಭೆಯ ಮುಂದಿಟ್ಟು ಎಲ್ಲಾ ಕಡತಗಳನ್ನು ಮಂಜೂರಾತಿ ನೀಡಿ ಮುಂದಿನ ಹಂತದ ಕ್ರಮಕ್ಕೆ ಕಳುಹಿಸಲಾಯಿತು. ಪ್ರತಿಯೊಬ್ಬ ಸಾಗುವಳಿ ದಾರರ ಅಹವಾಲುಗಳನ್ನು ಕೇಳಿ ಅಕ್ರಮ ಸಕ್ರಮದ ಉದ್ದೇಶದ ಮನವರಿಕೆ ಮಾಡಲಾಯಿತು.
ಶಾಸಕರಾದ ಗುರುರಾಜ ಶೆಟ್ಟಿ ಗಂಟಿ ಹೊಳೆಯವರು ಮಾತನಾಡಿ, ಕಳೆದ ಹಲವು ವರ್ಷಗಳಿಂದ ಕೃಷಿ ಮಾಡಿ ಕೊಂಡು ಬಂದವರಿಗೆ ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆ ಕಳೆದ 7 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ಪ್ರಸ್ತುತ ಮೊದಲ ಹಂತದಲ್ಲಿ ಅರ್ಹರನ್ನು ಗುರುತಿಸಿ ಹಕ್ಕು ಪತ್ರ ಮಂಜೂರಾತಿಗೆ ಕ್ರಮವಹಿಸಲಾಗುತ್ತದೆ. ಅದರಂತೆ ಇಂದಿನ ಸಭೆಯಲ್ಲಿ ಬೈಂದೂರಿನ 04 ಗ್ರಾಮಗಳ ಅರ್ಹ 18 ಸಾಗುವಳಿದಾರರಿಗೆ ಸಾಗುವಳಿ ಚೀಟಿ ಮಂಜೂರು ಮಾಡಲಾಗಿದೆ. ಉಳಿದಂತೆ ಅತೀ ಶೀಘ್ರದಲ್ಲಿ ಪ್ರತಿ ವಾರ ಬಗರ್ ಹುಕುಂ ಸಮಿತಿ ಸಭೆಗಳನ್ನು ನಡೆಸಿ ಎಲ್ಲಾ ಸಾಗುವಳಿದಾರರಿಗೆ ಭೂಮಿ ಹಕ್ಕು ಪತ್ರ ನೀಡಲಾಗುವುದು ಎಂದರು.ಉಳಿದಂತೆ ಈ ಹಿಂದೆ ನೀಡಿದ ಹಲವು ಸಾಗುವಳಿ ಚೀಟಿಗೆ ಸಂಬಂಧಿಸಿದಂತೆ ತಿದ್ದುಪಡಿಯ ಅರ್ಜಿಗಳು ಸಾಕಷ್ಟು ಇರುವುದರಿಂದ ಅದನ್ನೂ ಕೂಡ ಸಮಿತಿಯ ಮುಂದಿಟ್ಟು ಸರಿ ಪಡಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.
04 ಕೊರಗ ಕುಟುಂಬ ಗಳಿಗೆ ಸಾಗುವಳಿ ಚೀಟಿ : ಸಮಾಜದ ಅತ್ಯಂತ ನಿರ್ಲಕ್ಷ ಸಮುದಾಯವಾದ 04 ಕೊರಗ ಕುಟುಂಬಗಳಿಗೆ ಪ್ರಥಮತವಾಗಿ ಸಾಗುವಳಿ ಚೀಟಿ ಮಂಜೂರು ಮಾಡಿರುವುದು ವಿಶೇಷವಾಗಿತ್ತು. ಮುದೂರು ಹಾಗೂ ಹಳ್ಳಿಹೊಳೆ ಗ್ರಾಮಗಳ 04 ಕುಟುಂಬವು ಹಲವು ವರ್ಷಗಳಿಂದ ಸರಕಾರಿ ಜಮೀನಿನಲ್ಲಿ ಸಾಗುವಳಿ ಮಾಡಿ ಕೊಂಡು ಬಂದಿದ್ದು, ಕೊರಗ ಕುಟುಂಬಗಳ ಹಲವು ವರ್ಷಗಳ ಭೂಮಿ ಹಕ್ಕಿನ ಕಾಯುವಿಕೆಗೆ ಇಂದು ಮುಕ್ತಿ ಸಿಕ್ಕಂತಾಗಿದೆ. ಈ ಒಂದು ವಿಶೇಷ ಅವಕಾಶಕ್ಕಾಗಿ ಸಹಕರಿಸಿದ ಬಗರ್ ಹುಕುಂ ಸಮಿತಿ ಸದಸ್ಯರು ಹಾಗೂ ತಾಲೂಕು ಆಡಳಿತಕ್ಕೆ ಬೈಂದೂರು ಶಾಸಕರು ಇದೇ ಸಂದರ್ಭದಲ್ಲಿ ಧನ್ಯವಾದ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬೈಂದೂರು ಬಗರ್ ಹುಕುಂ ಸಮಿತಿ ಸದಸ್ಯರಾದ ಶ್ರೀ ಪ್ರದೀಪ್ ಶೆಟ್ಟಿ, ಶ್ರೀ ಅನಂತ ಮೋವಾಡಿ, ಸಮಿತಿ ಕಾರ್ಯದರ್ಶಿ ಹಾಗೂ ತಾಲೂಕು ತಹಸೀಲ್ದಾರ್ ಶ್ರೀ ಭೀಮ್ ಸೇನ್ ಕುಲಕರ್ಣಿ, ಉಪ ತಹಸೀಲ್ದಾರರಾದ ಶ್ರೀ ಮತಿ ಲತಾ , ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.