ಬೆಂಗಳೂರು: ಇಡೀ ದೇಶದಲ್ಲಿ ಯಾವುದೇ ರಾಜಕೀಯ ಪಕ್ಷದವರ ಬಳಿ ಹೋಗಿ ಅಟಲ್ಜೀ ಅವರ ಹೆಸರು ಹೇಳಿದರೆ ಅಲ್ಲಿ ಒಂದು ಮುಗುಳ್ನಗು ಬರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ವಿಶ್ಲೇಷಿಸಿದರು.
ನಾಡಪ್ರಭು ಕೆಂಪೇಗೌಡ ಜನಪರ ವೇದಿಕೆಯು ನಗರದಲ್ಲಿ ಇಂದು ಏರ್ಪಡಿಸಿದ್ದ ಭಾರತರತ್ನ, ಅಜಾತಶತ್ರು ದೇಶಕಂಡ ದಕ್ಷ ಆಡಳಿತಗಾರ ಮಾಜಿ ಪ್ರಧಾನಮಂತ್ರಿಗಳಾದ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸುಶಾಸನ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾವು ಮಾತನಾಡುತ್ತಲೇ ಇರಬೇಕೆಂಬ ಜಾಯಮಾನದ ವ್ಯಕ್ತಿಗಳ ಮಧ್ಯದಲ್ಲಿ ಎರಡು ವಾಕ್ಯಗಳ ನಡುವೆ ನಿಲುಗಡೆಯೇ (ಗ್ಯಾಪ್) ಅಟಲ್ಜೀ ಅವರ ಮಾತಿನಿಂದ ಶಕ್ತಿಯುತವಾಗಿ ಇರುತ್ತಿತ್ತು ಎಂದು ನುಡಿದರು.
ಅಟಲ್ಜೀ ಅವರ ಮಾತಿಗಿಂತ ಅವರ ಮೌನಕ್ಕೆ ಹೆಚ್ಚಿನ ತಾಕತ್ತು ಇತ್ತು ಎಂದ ಅವರು, ಆ ಮೌನ ಅನೇಕ ಹಳಬರಲ್ಲಿ ಜನಜನಿತ ವಿಚಾರ ಎಂದರು. ಅಟಲ್ಜೀ ಕವಿ ಹೃದಯ ಹೊಂದಿದ್ದರು. ಅದು ಅವರಿಗೆ ಅನೇಕ ಲಾಭಗಳನ್ನೂ ನೀಡಿತ್ತು ಎಂದು ತಿಳಿಸಿದರು.
ಅಟಲ್ಜೀ ಅವರು ಅವರ ಕುಟುಂಬದ ಮೊದಲ ರಾಜಕಾರಣಿ. ಅವರು ವಿವಾಹವಾಗದ ಕಾರಣ ಅವರ ಕುಟುಂಬದಲ್ಲಿ ಬೇರೆ ರಾಜಕಾರಣಿಗಳು ಇರಲಿಲ್ಲ ಎಂದು ತಿಳಿಸಿದರು. ಅವರು ಆರಂಭಿಕ ದಿನಗಳಲ್ಲಿ ಅನೇಕ ಪತ್ರಿಕೆಗಳಿಗೆ ಸಂಪಾದಕರಾಗಿದ್ದರು. ಅಧಿಕಾರ ಹಿಡಿಯಬೇಕೆಂದು ಅವರು ರಾಜಕೀಯ ಕ್ಷೇತ್ರಕ್ಕೆ ಬಂದವರಲ್ಲ; ಯಾರೋ ಕರೆದರೆಂದು ಅವರು ಬಂದಿದ್ದರು ಎಂದು ಹೇಳಿದರು.
ಮೋದಿಜೀ ಅವರು ಅಧಿಕಾರಕ್ಕೆ ಬಂದಾಗ ಅತ್ಯಂತ ಕೆಟ್ಟ ರೀತಿಯಲ್ಲಿ ಆಧಾರ್ ಕಾರ್ಡ್ ನಡೆಯುತ್ತಿತ್ತು. ಮೋದಿಯವರು ಅದನ್ನು ಸುಧಾರಿಸಿ ಮುಂದುವರೆಸಿದರು. ನಂದನ್ ನಿಲೇಕಣಿ ಅವರನ್ನೂ ಬದಲಿಸಲಿಲ್ಲ ಎಂದು ವಿವರಿಸಿದರು. ಆದರೆ, ಇವತ್ತು ನಮಗೆ ಅನೇಕ ಕಡೆ ಭಂಡಗೆಟ್ಟ ಸರಕಾರಗಳು ಸಿಗುತ್ತವೆ ಎಂದು ಟೀಕಿಸಿದರು. ಇವತ್ತು ಭಾಗ್ಯಲಕ್ಷ್ಮಿ ಪಾಲಿಸಿ ಸಂಬಂಧ ಕ್ಯಾಶ್ ಸಿಗುತ್ತಿಲ್ಲ ಎಂದು ಆಕ್ಷೇಪಿಸಿದರು. ಭಾಗ್ಯಲಕ್ಷ್ಮಿ ಯೋಜನೆ ಜಾರಿಗೊಳಿಸಿ ಬಡ ಹೆಣ್ಮಕ್ಕಳಿಗೆ ಆಧಾರವಾಗಿ ನಿಂತವರು ಯಡಿಯೂರಪ್ಪ ಅವರು ಎಂದು ಮೆಚ್ಚುಗೆ ಸೂಚಿಸಿದರು.
ಬಜೆಟ್ನಲ್ಲಿ ಕೃಷಿ ಬಜೆಟ್, ಹಸಿರು ಬಜೆಟ್ ಜಾರಿಗೊಳಿಸಿ ಯಡಿಯೂರಪ್ಪ ಅವರು ರಾಜ್ಯದ ಅಭಿವೃದ್ಧಿಗೆ ಅನೇಕ ತಿರುವುಗಳನ್ನು ನೀಡಿದ್ದಾರೆ ಎಂದರು. ಯಡಿಯೂರಪ್ಪ ಅವರಂಥವರು ಬರುವವರೆಗೆ ಅಧಿಕಾರ ಎಂದರೆ ಅಭಿವೃದ್ಧಿ ಎಂಬುದನ್ನೇ ಮರೆತವರು ಆಳ್ವಿಕೆ ಮಾಡಿದ್ದರು ಎಂದು ಆಕ್ಷೇಪಿಸಿದರು.
ಶ್ಯಾಮಪ್ರಸಾದ ಮುಖರ್ಜಿ ಅವರ ಬಂಗಾಲಿ ಹಿಂದಿ ಹಲವೆಡೆ ಅರ್ಥವಾಗುತ್ತಿರಲಿಲ್ಲ. ಆಗ ಜೊತೆ ಶಾಶ್ವತವಾಗಿ ಓಡಾಡಲು ಹುಡುಕಾಟ ನಡೆದಿದ್ದ ಸಂದರ್ಭದಲ್ಲಿ ದೀನದಯಾಳ್ ಉಪಾಧ್ಯಾಯರಿಗೆ ಸಿಕ್ಕಿದ ಅಪರೂಪದ ಮಾಣಿಕ್ಯ ಅಟಲ್ಜೀ ಎಂದು ತಿಳಿಸಿದರು. ಅವರ ಭಾಷಣ ವಿವೇಕದಿಂದ ಕೂಡಿತ್ತಲ್ಲದೆ, ಅತ್ಯಂತ ಪ್ರಖರವೂ ಆಗಿತ್ತು ಎಂದರು. ಇವರು ಪ್ರಧಾನಿ ಆಗುವ ವ್ಯಕ್ತಿ ಎಂದು ಸ್ವತಃ ನೆಹರೂ ಅವರು ಅಟಲ್ಜೀ ಅವರನ್ನು ರಷ್ಯಾದ ರಾಷ್ಟ್ರಾಧ್ಯಕ್ಷರಿಗೆ ಪರಿಚಯಿಸಿದ್ದನ್ನೂ ನೆನಪಿಸಿಕೊಂಡರು.
ಇವತ್ತಿನಿಂದ ಅಟಲ್ಜಿ ಜನ್ಮ ಶತಾಬ್ದಿಯೂ ಆರಂಭವಾಗುತ್ತಿದೆ. ಆದ್ದರಿಂದ ಇದೊಂದು ಮಹತ್ವದ ದಿನ; ಇದು ಅರ್ಥಪೂರ್ಣ ಕಾರ್ಯಕ್ರಮ ಎಂದರು. ಬೆಂಗಳೂರು ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ ಕೆರೆಗಳು, ಕಟ್ಟೆಗಳನ್ನು, ಜೀವಂತ ಮಾರುಕಟ್ಟೆಗಳನ್ನು ನಾವು ಕಾಣುತ್ತಿದ್ದರೆ ನಾವು ನೆನಪಿಡಬೇಕಾದ ಒಂದೇ ಹೆಸರು ಕೆಂಪೇಗೌಡರದು ಎಂದು ತಿಳಿಸಿದರು. ಮಾಜಿ ಪ್ರಧಾನಿ ದೇವೇಗೌಡರ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಾಧನೆಗಳನ್ನೂ ಅವರು ವಿವರಿಸಿದರು.
ದೇಶದ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾಗವಹಿಸಿದ್ದರು. ಸಾಹಿತಿ ಮತ್ತು ನಾಡಪ್ರಭು ಕೆಂಪೇಗೌಡ ಜನಪರ ವೇದಿಕೆಯ ಅಧ್ಯಕ್ಷ ಪ್ರೊ.ಕೃಷ್ಣೇಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ವಿವಿ ಕುಲಪತಿ ಪ್ರೊ. ತಿಮ್ಮೇಗೌಡ, ನಿವೃತ್ತ ಹಿರಿಯ ಅಧಿಕಾರಿ ಮದನ್ಗೋಪಾಲ್ ಉಪಸ್ಥಿತರಿದ್ದರು. ಸುಶಾಸನ ಕುರಿತ ಭಿತ್ತಿಪತ್ರಗಳ ಪ್ರದರ್ಶನವನ್ನು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಉದ್ಘಾಟಿಸಿದರು. ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.