ಬೆಂಗಳೂರು: ಮಹಿಳಾ ಸುರಕ್ಷತೆಯನ್ನು ನಿರಂತರವಾಗಿ ನಿರ್ಲಕ್ಷಿಸುತ್ತಿರುವ ಕಾಂಗ್ರೆಸ್ ಸರಕಾರವು ಕೂಡಲೇ ಗುರಪ್ಪ ನಾಯ್ಡುವನ್ನು ಬಂಧಿಸಬೇಕೆಂದು ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಕು. ಮಂಜುಳಾ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಸರಕಾರ ಚಂದ್ರಶೇಖರ್ ಸ್ವಾಮೀಜಿ ಅವರ ವಿರುದ್ಧ ಎಫ್ಐಆರ್ ಮಾಡಿ ಬಂಧಿಸಬಹುದೆಂಬ ವರದಿಗಳು ಬರುತ್ತಿವೆ. ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಗುರಪ್ಪ ನಾಯ್ಡು ಶಿಕ್ಷಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಡಿಯೋ ವಿಡಿಯೋ ಮಾಡಿಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ದೂರು ಕೊಟ್ಟಿದ್ದು, ಪೊಲೀಸ್ ಇಲಾಖೆ ಕೇವಲ ತನಿಖೆ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
ಜೀವಾ ಎಂಬ ವಕೀಲೆಯನ್ನು ವಿಚಾರಣೆಗೆ ಕರೆದು ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ದೌರ್ಜನ್ಯ ನಡೆದಿದೆ. ಇದನ್ನು ಉಗ್ರವಾಗಿ ಖಂಡಿಸುತ್ತೇನೆ. ಕೋರ್ಟ್ ಮತ್ತು ವಕೀಲರ ಪ್ರಯತ್ನದಿಂದ ಕೋರ್ಟ್ ಮಧ್ಯಪ್ರವೇಶ ಮಾಡಿದ್ದು, ಅವರ ಸಾವಿಗೆ ವಕೀಲರು ಈಗ ಹೋರಾಟ ಮಾಡುತ್ತಿದ್ದಾರೆ. ಸರಕಾರದ ಭಂಡತನ ಖಂಡನೀಯ. ಕೋರ್ಟ್ ಮಧ್ಯಪ್ರವೇಶದಿಂದ ಅವರಿಗೆ ನ್ಯಾಯ ಲಭಿಸುವುದೆಂಬ ಭರವಸೆ ವ್ಯಕ್ತಪಡಿಸಿದರು.
ಮೈಕ್ರೋ ಫೈನಾನ್ಸ್ನಲ್ಲಿ ಮಹಿಳೆಯರು ಇವತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇವತ್ತು ಹುಣಸೂರಿನಲ್ಲಿ ಒಬ್ಬರು ಮಹಿಳೆ ಮೈಕ್ರೋ ಫೈನಾನ್ಸ್ನ ಶೋಷಣೆಯಿಂದ, ದೌರ್ಜನ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂದೆ ಮಂಡ್ಯದಲ್ಲೂ ಇಂಥ ಘಟನೆ ನಡೆದಿತ್ತು. ಸರಕಾರವು ಕೂಡಲೇ ಇದರ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕಿದೆ. ಇದರ ತನಿಖೆ ನಡೆಸಿ ಮೈಕ್ರೋ ಫೈನಾನ್ಸ್ಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದ ಹೆಮ್ಮೆಯ ವಿಜಯನಗರ ಸಾಮ್ರಾಜ್ಯ ಇದ್ದ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಬಾಗಿಲು ಮುಚ್ಚುವ ಸ್ಥಿತಿ ಬಂದಿದೆ. ಗ್ಯಾರಂಟಿಗಳ ಹೊಡೆತದಿಂದ ಸರಕಾರದ ಆರ್ಥಿಕ ಸ್ಥಿತಿ ಕುಸಿದಿದೆ. ಹಂಪಿ ವಿವಿ ನಿರ್ವಹಣೆಗೆ ಹಣಕಾಸಿನ ವ್ಯವಸ್ಥೆ ಇಲ್ಲವಾಗಿದೆ. ರಾಜ್ಯದ ಸಿದ್ದರಾಮಯ್ಯರ ಸರಕಾರವೇ ಇದಕ್ಕೆ ಹೊಣೆ ಎಂದು ಕು. ಮಂಜುಳಾ ಅವರು ಆರೋಪಿಸಿದರು.
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ವಾರದಲ್ಲಿ 7 ಬಾಣಂತಿಯರ ಸಾವಿನ ಕುರಿತು ಅವರು ತೀವ್ರ ಬೇಸರ ವ್ಯಕ್ತಪಡಿಸಿದರು. ಬೆಂಗಳೂರಿನ ಅಧೀಕ್ಷಕಿ ಡಾ. ಸವಿತಾ ಅವರ ನೇತೃತ್ವದ ತಂಡವು ಅಲ್ಲಿಗೆ ತೆರಳಿದೆ. ಐವಿ ಗ್ಲುಕೋಸ್ ಪರಿಣಾಮಕಾರಿಯಾಗಿಲ್ಲ; ಇದರಿಂದ ಸಾವಾಗಿದೆ ಎಂದು ವರದಿ ಕೊಟ್ಟಿದೆ. ನಿಗಮದ ಅಧಿಕಾರಿ ಶಿವಮೊಗ್ಗದ ಚಂದ್ರಶೇಖರ್, ಪೊಲೀಸ್ ಅಧಿಕಾರಿ ಪರಶುರಾಮ್ ನಾಯಕ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿ.ಎ.ಯಿಂದ ತೊಂದರೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ರುದ್ರಣ್ಣ- ಈ ಸರಕಾರಿ ಪ್ರಾಯೋಜಿತ ಸಾವುಗಳಿಗೆ ಸಿದ್ದರಾಮಯ್ಯನವರ ಸರಕಾರ ಹೊಣೆಯಾಗಿದೆ ಎಂದು ಟೀಕಿಸಿದರು. ಬಾಣಂತಿಯರು ಸತ್ತ ಕುಟುಂಬದವರಿಗೆ ಪರಿಹಾರ ಕೊಡಬೇಕು. ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ನಿನ್ನೆ ಬಿಜೆಪಿ ಮಹಿಳಾ ಮೋರ್ಚಾದ ತಂಡವು ರಾಜ್ಯ ಕಾರ್ಯದರ್ಶಿ ಸುಗುಣಾ ಮತ್ತು ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಕರೂರು ಅವರ ನೇತೃತ್ವದಲ್ಲಿ ವಿಜಯನಗರ ವೈದ್ಯಕೀಯ ಕಾಲೇಜಿನ ಸೂಪರಿಂಟೆಂಡೆಂಟ್ ಶಂಕರೇಗೌಡ, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ತನಿಖೆಗೆ ಒತ್ತಾಯ ಮಾಡಿದ್ದಾರೆ. ಅಲ್ಲಿ ಖಾಯಂ ವೈದ್ಯರು, ಸಿಬ್ಬಂದಿ ಇಲ್ಲ. ಸಿಬ್ಬಂದಿ ಕೊರತೆ ಇದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. 3 ಉಪ ಚುನಾವಣೆ ಗೆದ್ದು ದೇಶ ಗೆದ್ದಂತೆ ಸ್ವಪ್ರತಿಷ್ಠೆ ತೋರಿಸುತ್ತಿರುವ ಕಾಂಗ್ರೆಸ್ ಸರಕಾರವು ಜನಸಾಮಾನ್ಯರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದೆ; ಈ ಬೇಜವಾಬ್ದಾರಿ ಸರಕಾರ ತೊಲಗಬೇಕಿದೆ ಎಂದು ತಿಳಿಸಿದರು.
ಶಕ್ತಿ ಯೋಜನೆಯನ್ನು ವೈಜ್ಞಾನಿಕವಾಗಿ ರೂಪಿಸದ ಕಾರಣ ಕಿಕ್ಕಿರಿದು ತುಂಬಿದ್ದ ಬಸ್ಸಿನಿಂದ ಬಿದ್ದು, ನರಗುಂದದ ರಾಘವೇಂದ್ರ ಎಂಬ ಡಿಸ್ಟಿಂಕ್ಷನ್ ಪಡೆಯುವ ವಿದ್ಯಾರ್ಥಿಯ ಪ್ರಾಣಹಾನಿಯಾಗಿದೆ. ಯೋಜನೆಯನ್ನು ವೈಜ್ಞಾನಿಕವಾಗಿ ರೂಪಿಸಿಲ್ಲ ಎಂದು ಜನರ ಮುಂದೆ ಒಪ್ಪಿಕೊಂಡು, ವೈಜ್ಞಾನಿಕವಾಗಿ ರೂಪಿಸಿ ಶಾಲೆ- ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಉದ್ಯೋಗಸ್ಥ ಮಹಿಳೆಯರು ಸರಿಯಾಗಿ, ಸಕಾಲಕ್ಕೆ ತಲುಪುವಂತೆ ಯೋಜನೆ ಪರಿವರ್ತಿಸಿ ಎಂದು ಒತ್ತಾಯಿಸಿದರು.
ಸಂಡೂರಿನಲ್ಲಿ ಮಹಿಳೆಯೊಬ್ಬರು ಬಸ್ ನಿಲ್ಲಿಸುತ್ತಿಲ್ಲ ಎಂಬ ಕುರಿತು ತಿಳಿಸಿದ್ದರು. ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ವ್ಯಾಪಾರದ ಮೂಟೆಗಳನ್ನು ಸಕಾಲಕ್ಕೆ ಒಯ್ಯಲಾಗುತ್ತಿಲ್ಲ ಎಂದಿದ್ದರು. ಸರಕಾರವು ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ ಎಂದು ಆಗ್ರಹಿಸಿದರು.
138 ಜನ ಶಾಸಕರನ್ನು ಹೊಂದಿರುವ ಈ ಸರಕಾರವು ರಾಜ್ಯದ ಜನರ ಜೀವನದ ಜೊತೆ ಆಟವಾಡುವುದನ್ನು ಬಿಟ್ಟು, ಸರಕಾರಿ ಪ್ರಾಯೋಜಿತ ಕೊಲೆಗಳನ್ನು ನಿಲ್ಲಿಸಬೇಕು. ವಿವಿಧ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.