ಬೆಂಗಳೂರು: ವಕ್ಫ್ ಆಸ್ತಿ ಒತ್ತುವರಿ ಸಮಸ್ಯೆ ವಿರುದ್ಧ ‘ನಮ್ಮ ಭೂಮಿ ನಮ್ಮ ಹಕ್ಕು’ ಶೀರ್ಷಿಕೆಯ ಅಡಿಯಲ್ಲಿ ಜನಾಂದೋಲನ ಮಾಡಲು ನಿರ್ಧರಿಸಿದ್ದೇವೆ. ನವೆಂಬರ್ 21 ಮತ್ತು 22ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿ ಮತ್ತು ತಾಲ್ಲೂಕು ತಹಸೀಲ್ದಾರರ ಕಚೇರಿಗಳ ಮುಂದೆ ದಿನವಿಡೀ ಪ್ರತಿಭಟನೆ ನಡೆಸಲಿದ್ದೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ತಿಳಿಸಿದ್ದಾರೆ.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯ ಜೊತೆಗೆ ಎಲ್ಲ ಸಂತ್ರಸ್ತರಿಂದ ಅರ್ಜಿಗಳ ಸ್ವೀಕಾರ, ವಕ್ಫ್ ಅಧಿಕಾರ ದುರ್ಬಳಕೆಯಿಂದ ಸಮಸ್ಯೆ -ಶೋಷಣೆಗೆ ಒಳಗಾದವರ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ವಿವರಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಜೊತೆಗೆ 3 ತಂಡಗಳನ್ನು ರಚಿಸಿದ್ದೇವೆ. ಕೇಂದ್ರದ ಸಚಿವರು, ಮಾಜಿ ಮುಖ್ಯಮಂತ್ರಿಗಳು, ಹಿರಿಯರು, ವರಿಷ್ಠರು ಸೇರಿ 3 ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಈ 3 ತಂಡಗಳ ನೇತೃತ್ವ ವಹಿಸುತ್ತಿದ್ದಾರೆ ಎಂದು ವಿವರಿಸಿದರು.
ಈ ತಂಡಗಳು ಡಿಸೆಂಬರ್ ಮೊದಲನೇ ವಾರದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲಿವೆ ಎಂದರು. ರೈತರು, ಮಠಾಧೀಶರು ಸೇರಿ ತೊಂದರೆಗೆ ಒಳಗಾದವರಿಂದ ಮಾಹಿತಿ ಪಡೆಯಲಿವೆ. ಚಳಿಗಾಲದ ಅಧಿವೇಶನದಲ್ಲಿ ವಿವರ ಮಂಡಿಸಿ, ಜನರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ ಎಂದು ತಿಳಿಸಿದರು.
ಅಧಿವೇಶನಕ್ಕೂ ಮೊದಲು ಬೆಳಗಾವಿಯಲ್ಲಿ ವಕ್ಫ್ ವಿಚಾರವಾಗಿ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗುವುದು. ಅಧಿಕಾರ ದುರ್ಬಳಕೆ ಕೈಬಿಡುವಂತೆ ಕಾಂಗ್ರೆಸ್ ಸರಕಾರ ಮತ್ತು ವಕ್ಫ್ ಮಂಡಳಿಗೆ ಸ್ಪಷ್ಟ ಸಂದೇಶ ನೀಡಲಿದ್ದೇವೆ ಎಂದು ಪ್ರಕಟಿಸಿದರು. ಅಹವಾಲು, ಮಾಹಿತಿ ಸಂಗ್ರಹಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ರೈತರು, ವಕೀಲರು ಸೇರಿ ಪ್ರಮುಖರುಳ್ಳ 5 ಜನರ ತಂಡ ರಚಿಸಿದ್ದೇವೆ ಎಂದರು.
ಬಿಜೆಪಿ ಒತ್ತಾಯ ಮತ್ತು ಹೋರಾಟದ ಬಳಿಕ ರಾಜ್ಯದ ಕಾಂಗ್ರೆಸ್ ಸರಕಾರವು ವಕ್ಫ್ ಸಂಬಂಧ ಹೊರಡಿಸಿದ್ದ ನೋಟಿಸ್ ಹಿಂದಕ್ಕೆ ಪಡೆಯಲು ಸೂಚನೆ ನೀಡಿದೆ. ಆರ್ಟಿಸಿಯಲ್ಲಿ ವಕ್ಫ್ ಹೆಸರು ನೋಂದಣಿ ಹಿಂಪಡೆಯಬೇಕು ಮತ್ತು 1974ರ ಗಜೆಟ್ ಹಿಂಪಡೆಯಲು ನಾವು ಒತ್ತಾಯಿಸುತ್ತಿದ್ದೇವೆ ಎಂದು ತಿಳಿಸಿದರು. ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 1700ಕ್ಕೂ ಹೆಚ್ಚು ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮುಂದಾದ ಕುರಿತು ಗಮನ ಸೆಳೆದರು.
ವಕ್ಫ್ ಮೂಲಕ ಆಸ್ತಿ ವಶಪಡಿಸಿಕೊಳ್ಳುವ ವಿಚಾರದಲ್ಲಿ ಜನಜಾಗೃತಿ ಆಗಿದೆ. ವಕ್ಫ್, ಕಾಂಗ್ರೆಸ್ ಸರಕಾರದ ಅಧಿಕಾರ ದುರ್ಬಳಕೆ, ಜಮೀರ್ ಅಹ್ಮದ್ ಖಾನ್ ಅವರು ಮುಖ್ಯಮಂತ್ರಿಗಳ ಆದೇಶ ಎಂದು ತಿಳಿಸಿ ತ್ವರಿತವಾಗಿ ಕಾಲಂ ನಂಬರ್ 9 ಹಾಗೂ 11ರಲ್ಲಿ ಇಂಡೀಕರಣ, ಆಸ್ತಿ ಬದಲಾವಣೆ ಪ್ರಯತ್ನ ಮಾಡಿದ್ದರು ಎಂದು ಆಕ್ಷೇಪಿಸಿದರು.
ಮಠ, ಮಂದಿರಗಳಿಗೂ ನ್ಯಾಯ ಲಭಿಸಬೇಕಿದೆ ಎಂದ ಅವರು, ವಕ್ಫ್ ವಿಚಾರದಲ್ಲಿ ಆದ ದುರ್ಬಳಕೆ ಸಂಬಂಧ ಮಾಹಿತಿ ಕಲೆಹಾಕುವ ಕೆಲಸ ನಡೆದಿದೆ. ಸಾರ್ವಜನಿಕರು, ರೈತರು ಪಹಣಿಗಳ ಕುರಿತು ಪರಿಶೀಲಿಸಬೇಕು; ವಕ್ಫ್ ಎಂಟ್ರಿ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು. 3 ತಂಡದಲ್ಲಿ ಯತ್ನಾಳ್ ಅವರೂ ಇದ್ದಾರೆ. ಅವರೂ ಪ್ರವಾಸ ಮಾಡಲಿದ್ದಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಕರ್ನಾಟಕದ ಕಾಂಗ್ರೆಸ್ ಸರಕಾರವು ಮುಸ್ಲಿಮರ ಓಲೈಕೆಯಲ್ಲಿ ತೊಡಗಿದೆ. ವಕ್ಫ್ ಹೊಸ ಕಾನೂನು ಬರುವ ಹಿನ್ನೆಲೆಯಲ್ಲಿ ತ್ವರಿತವಾಗಿ ಎಲ್ಲೆಲ್ಲಿ ರೈತರ ಆಸ್ತಿ, ಮಠ, ಮಂದಿರಗಳ ಜಮೀನು, ಶಾಲೆಗಳನ್ನು ವಕ್ಫ್ ಆಸ್ತಿಯಾಗಿ ವಶಪಡಿಸಲು ಮಾಡಿದ ಪ್ರಯತ್ನ ನಾಡಿನ ಜನತೆಗೆ ಗೊತ್ತಿದೆ ಎಂದರು.
ಕಾಂಗ್ರೆಸ್ ಆಡಳಿತದಲ್ಲಿ ಆಸ್ತಿ ತೆರಿಗೆ, ಪೆಟ್ರೋಲ್, ತೆರಿಗೆಗಳು ಗಗನಕ್ಕೇರಿವೆ. ಜಯನಗರದ ಬಿಜೆಪಿ ಶಾಸಕರಿಗೆ ಅನುದಾನ ನೀಡದೆ ಇರುವುದು, ಅವರನ್ನು ಅವಮಾನ ಮಾಡಿದ್ದನ್ನು ಖಂಡಿಸುತ್ತೇವೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿ ಸರಕಾರದ ಈ ನಡವಳಿಕೆಯನ್ನು ಖಂಡಿಸುತ್ತೇವೆ. ಅವರು ಕ್ಷಮೆ ಯಾಚಿಸಬೇಕು ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಅಧಿಕಾರ ದುರ್ಬಳಕೆ ಮಾಡದಿರಿ; ದುರಹಂಕಾರದ ಮಾತನಾಡದಿರಿ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಶಾಸಕರೊಬ್ಬರು ಅನುದಾನ ಸಿಗದೆ ಇರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸರಕಾರ ದಿವಾಳಿಯಾಗಿದೆ. ವೇತನ ನೀಡಲು ದುಡ್ಡಿಲ್ಲ; ರಾಜು ಕಾಗೆಯವರು ಅನುದಾನ ಸಿಗದ ಬಗ್ಗೆ ತಿಳಿಸಿ ಆತ್ಮಹತ್ಯೆಯ ಮಾತನಾಡಿದ್ದಾರೆ; ಗವಿಯಪ್ಪ, ರಾಯರೆಡ್ಡಿ, ಬಿ.ಆರ್.ಪಾಟೀಲ್ ಮತ್ತಿತರರು ಮಾತನಾಡಿದ್ದಾರೆ ಎಂದು ವಿವರಿಸಿದರು.
ಅರ್ಹ ಬಿಪಿಎಲ್ ಕಾರ್ಡ್ದಾರರಿಗೆ ಸರಕಾರ ಅನ್ಯಾಯ ಮಾಡಲು ಮುಂದಾಗಿದೆ. ನೀವೇ ಗ್ಯಾರಂಟಿ ಘೋಷಿಸಿದವರು. ಎಲ್ಲರಿಗೂ ಇದೀಗ ನಿರ್ಬಂಧ ಹಾಕುತ್ತಿದ್ದೀರಿ. ಮೋದಿಯವರು ಕೊಡುವ ರೇಷನ್, ಆಯುಷ್ಮಾನ್, ನರೇಗ ಯೋಜನೆ, ಶಿಕ್ಷಣ ಮತ್ತಿತರ ಸೌಲಭ್ಯಗಳು ಸಿಗದಂತೆ ಮಾಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ಸಂಸದ ಪಿ.ಸಿ. ಮೋಹನ್, ಬೆಂಗಳೂರು ಶಾಸಕ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ ಮತ್ತು ಕೇಂದ್ರ ಜಿಲ್ಲಾ ಅಧ್ಯಕ್ಷ ಸಪ್ತಗಿರಿ ಗೌಡ ಅವರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.