ಬೆಂಗಳೂರು: ಯೋಗೇಶ್ವರ್ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಚನ್ನಪಟ್ಟಣದಲ್ಲಿ ದುರ್ಬಲವೆಂದು ಕಾಂಗ್ರೆಸ್ ಪಕ್ಷ ಒಪ್ಪಿಕೊಂಡಂತಾಗಿದೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ವಿಶ್ಲೇಷಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗಳಿಗೆ ಉತ್ತರ ನೀಡಿದರು. ಯೋಗೇಶ್ವರ್ ಅವರು ಕಾಂಗ್ರೆಸ್ಸಿಗೆ ಹೋದುದರಿಂದ ಒಂದಂತೂ ನಾವು ಊಹಿಸಬಹುದು. 136 ಶಾಸಕರಿದ್ದು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ರಂಥ ಪ್ರಬಲ ನಾಯಕರನ್ನು ಹೊಂದಿದ ಕಾಂಗ್ರೆಸ್ ಪಕ್ಷ ಚನ್ನಪಟ್ಟಣದಲ್ಲಿ ದುರ್ಬಲ ಎಂದು ಅವರೇ ಒಪ್ಪಿಕೊಂಡಂತಾಗಿದೆ ಎಂದು ತಿಳಿಸಿದರು.
ನಿನ್ನೆ ಮೊನ್ನೆಯವರೆಗೂ ನಾನೇ ಕ್ಯಾಂಡಿಡೇಟ್ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿದ್ದರು. ಪೂರ್ವತಯಾರಿ ಮಾಡಿ ಓಡಾಡುತ್ತಿದ್ದರು. ಡಿ.ಕೆ. ಸುರೇಶ್ ಅಲ್ಲಿ ಅಭ್ಯರ್ಥಿ ಎಂದು ಬಹಳ ಜನ ಅಂದುಕೊಂಡಿದ್ದರು. ಅಲ್ಲಿ ಯೋಗೇಶ್ವರ್ಗೇ ಟಿಕೆಟ್ ಕೊಟ್ಟು ಅಸಹಾಯಕತೆ ತೋರಿಸುತ್ತಾರೋ, ಅಥವಾ ಯೋಗೇಶ್ವರ್ ಜತೆಗಿಟ್ಟುಕೊಂಡು ಡಿ.ಕೆ.ಸುರೇಶ್ ಅಭ್ಯರ್ಥಿ ಆಗುತ್ತಾರೋ ನೋಡಬೇಕಿದೆ. ಆದರೆ, ಕಾಂಗ್ರೆಸ್ ತಾನು ಚನ್ನಪಟ್ಟಣದಲ್ಲಿ ದುರ್ಬಲ ಎಂದು ಒಪ್ಪಿಕೊಂಡಂತಾಗಿದೆ ಎಂದು ತಿಳಿಸಿದರು.
ಯೋಗೇಶ್ವರ್ ಅವರು ಮಹತ್ವಾಕಾಂಕ್ಷೆ ಇಟ್ಟುಕೊಂಡ ರಾಜಕಾರಣಿ. ಸುದೀರ್ಘ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿ ರಾಜಕಾರಣ ಮಾಡಿದವರು. ಡಿ.ಕೆ.ಶಿವಕುಮಾರ್ ಮತ್ತು ಅವರ ನಡುವಿನ ಶತ್ರುತ್ವ ಇವತ್ತು ನಿನ್ನೆಯದಲ್ಲ. ಹುಲಿ ಬೋನಿಗೆ ಹೋಗಿದ್ದಾರೆ. ಒಂದೋ ಹುಲಿಯನ್ನು ಮಣಿಸಬೇಕು; ಇಲ್ಲವೇ ಹುಲಿಗೆ ಬಲಿ ಆಗಬೇಕು ಎಂದು ತಿಳಿಸಿದರು.
ಇವತ್ತೇ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ನಮ್ಮ ರಾಜಕಾರಣ ಮತ್ತು ಯೋಗೇಶ್ವರ್ ರಾಜಕಾರಣದ ಚಿಂತನೆಯ ನಡುವೆ ಅಗಾಧವಾದ ಅಂತರವಿದೆ. ಯೋಗೇಶ್ವರ್ ಅವರು ವೈಯಕ್ತಿಕ ನೆಲೆಯಲ್ಲಿ ರಾಜಕಾರಣ ಮಾಡುತ್ತಾರೆ. ಸದಾಕಾಲ ರಾಜಕೀಯ ಕ್ಷೇತ್ರದ ಲಾಭ ನಷ್ಟದ ಲೆಕ್ಕ ಹಾಕುತ್ತಾರೆ. ನಮ್ಮದು ಸೈದ್ಧಾಂತಿಕ ಬದ್ಧತೆಯ ರಾಜಕಾರಣ ಎಂದು ವಿವರಿಸಿದರು. ಲಾಭ ನಷ್ಟದ ಲೆಕ್ಕಾಚಾರಕ್ಕೆ ಅವಕಾಶವೂ ಇಲ್ಲ; ಆ ಚಿಂತನೆಯೂ ನಮ್ಮಲ್ಲಿಲ್ಲ ಎಂದು ನುಡಿದರು.
ಯೋಗೇಶ್ವರ್ ರಾಜೀನಾಮೆ ಕೊಟ್ಟ ಮೇಲೆ ಸೋದರಿಕೆ ಸಂಬಂಧವೇನೂ ಇಲ್ಲ. ನಾವು ಎನ್ಡಿಎ ಆಗಿ ಚನ್ನಪಟ್ಟಣದಲ್ಲಿ ಹೋರಾಟ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ನಾವು ನಿರ್ಣಯಿಸಿ ಚರ್ಚೆ ಮಾಡುವುದಿಲ್ಲ. ಚರ್ಚಿಸಿ ನಿರ್ಣಯಕ್ಕೆ ಬರುತ್ತೇವೆ. ಒಂದೂವರೆ ಎರಡು ತಿಂಗಳ ಹಿಂದೆಯೇ ನಾವು ಚನ್ನಪಟ್ಟಣದ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿಯವರ ಜೊತೆ ಚರ್ಚಿಸಿದ್ದೇವೆ. ಚನ್ನಪಟ್ಟಣ ಕುಮಾರಸ್ವಾಮಿಯವರು ಪ್ರತಿನಿಧಿಸಿದ ಕ್ಷೇತ್ರ. ಏಕಪಕ್ಷೀಯ ನಿರ್ಣಯ ಹೇರುವುದು, ನಮ್ಮ ನಿರ್ಣಯ ಹೇರುವುದಾಗಲೀ ಮೈತ್ರಿ ಅನಿಸುವುದಿಲ್ಲ. ಇಬ್ಬರೂ ಸೇರಿ ನಿರ್ಣಯಿಸಬೇಕಾಗುತ್ತದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ಬೆಂಗಳೂರಿನಲ್ಲಿ ಜನರ ಬದುಕು ಬೀದಿಗೆ ಬಿದ್ದಿದೆ. ಇವತ್ತು ಜನಹಿತ ಮರೆತ ಸರಕಾರ ರಾಜ್ಯದಲ್ಲಿದೆ ಎಂದು ಟೀಕಿಸಿದರು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿಯನ್ನು ಸ್ವಾಗತ ಮಾಡುವುದು ಜನರ ಬದುಕಿಗೆ ಸ್ಪಂದಿಸುವುದಕ್ಕಿಂತ ಮುಖ್ಯವಾಗಿದೆ. ಜನರ ಸಮಸ್ಯೆಗಳಿಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಸ್ಪಂದಿಸುತ್ತಿಲ್ಲ ಎಂದು ಆಕ್ಷೇಪಿಸಿದರು. ಇಂಥ ಸರಕಾರ ಯಾಕಿರಬೇಕು ಹೇಳಿ ಎಂದು ಪ್ರಶ್ನಿಸಿದರು.
ಮಳೆಯಿಂದ ಕಟ್ಟಡ ಕುಸಿತ ಸೇರಿ ಮಳೆ ಕಾರಣಕ್ಕೆ 8ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಸರಕಾರಕ್ಕೆ ಮಾನವೀಯತೆ ಇದೆಯೇ? ಸ್ಪಂದನೆ ಏನು? ಎಂದು ಕೇಳಿದರಲ್ಲದೆ, ಭ್ರಷ್ಟಾಚಾರದಲ್ಲಿ ತೊಡಗಿದ ಬದುಕಿದ್ದೂ ಸತ್ತಂತಿರುವ ಸರಕಾರ ಇಲ್ಲಿದೆ ಎಂದು ಟೀಕಿಸಿದರು.
ಭಾರತದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು. ಆಗ ಎಲ್ಲರೂ ಸಮಾನರಾಗುತ್ತಾರೆ. ಆಗ ಸಂವಿಧಾನದ ಆಶಯವನ್ನು ಎತ್ತಿ ಹಿಡಿದಂತಾಗಲಿದೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.