ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರ ಅತ್ಯಂತ ಭ್ರಷ್ಟತೆಯಿಂದ ಕೂಡಿದ್ದು, ಇದರ ಹಗರಣಗಳು ಒಂದೊಂದಾಗಿ ಹೊರಕ್ಕೆ ಬರುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಇಂದು ವಿಧಾನಪರಿಷತ್ ಉಪ ಚುನಾವಣೆ ಸಂಬಂಧ ನಡೆದ ಬಿಜೆಪಿ ಜನಪ್ರತಿನಿಧಿಗಳ ಸಮಾವೇಶದ ಸಂದರ್ಭದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದವರಿಗೆ ಮುಖ್ಯಮಂತ್ರಿಗಳ ಬಗ್ಗೆ ವಿಶ್ವಾಸ ಇಲ್ಲವಾಗಿದೆ. ತಮ್ಮ ಸರಕಾರದ ಬಗ್ಗೆಯೂ ಕಾಂಗ್ರೆಸ್ ಪಕ್ಷದವರಿಗೆ ವಿಶ್ವಾಸ ಇಲ್ಲ ಎಂದು ವಿಶ್ಲೇಷಿಸಿದರು.
ಯಡಿಯೂರಪ್ಪ ಅವರ ಸರಕಾರ ಇದ್ದಾಗ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವಧನ ಹೆಚ್ಚಿಸಿತ್ತು ಎಂದು ನೆನಪಿಸಿದರು. ಕಾಂಗ್ರೆಸ್ ಸರಕಾರ ಬಂದ ಬಳಿಕ ಗ್ರಾಮ ಪಂಚಾಯಿತಿಗಳು, ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವವೇ ಇಲ್ಲವಾಗಿದೆ ಎಂದು ಟೀಕಿಸಿದರು.
ಮುಡಾ ಹಗರಣದ ಸಂಬಂಧ ಬಿಜೆಪಿ- ಜೆಡಿಎಸ್ ಪಾದಯಾತ್ರೆ, ನಿರಂತರ ಹೋರಾಟದ ಬಳಿಕ ಸಿದ್ದರಾಮಯ್ಯನವರ ಕುಟುಂಬಕ್ಕೆ ಕೊಟ್ಟಿದ್ದ 14 ನಿವೇಶನಗಳನ್ನು ವಾಪಸ್ ಕೊಟ್ಟಿದ್ದಾರೆ. ಖರ್ಗೆಯವರ ಕುಟುಂಬವೂ ತಮಗೆ ಮಂಜೂರಾದ ಭೂಮಿಯನ್ನು ವಾಪಸ್ ಕೊಟ್ಟಿದೆ ಎಂದು ವಿವರಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಆಗಿಯೇ ಇಲ್ಲ ಎನ್ನುತ್ತಿದ್ದ ಮುಖ್ಯಮಂತ್ರಿಗಳು 187 ಕೋಟಿಯ ಹಗರಣ ನಡೆದಿಲ್ಲ; 87 ಕೋಟಿಯ ದುರುಪಯೋಗ ಆಗಿದೆ ಎಂದು ಸದನದಲ್ಲೇ ಒಪ್ಪಿಕೊಂಡಿದ್ದನ್ನು ಪ್ರಸ್ತಾಪಿಸಿದರು. ತಮಗೆ ಮತ್ತು ತಮ್ಮ ತಂದೆಯವರಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜೊತೆಗಿನ ಆತ್ಮೀಯ ಸಂಬಂಧವನ್ನೂ ಅವರು ತಿಳಿಸಿದರು. ಹುಬ್ಬಳ್ಳಿಯ ದೇಶದ್ರೋಹಿ ಕೃತ್ಯದ ಆರೋಪಿಗಳ ಕೇಸು ಹಿಂಪಡೆದ ರಾಜ್ಯದ ಕಾಂಗ್ರೆಸ್ ಸರಕಾರದ ಕ್ರಮವನ್ನು ಅವರು ತೀವ್ರವಾಗಿ ಖಂಡಿಸಿದರು.
ಯಡಿಯೂರಪ್ಪ ಅವರ ನೇತೃತ್ವದ ಹಿಂದಿನ ಬಿಜೆಪಿ ಸರಕಾರವು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2 ಸಾವಿರ ಕೋಟಿ, 3 ಸಾವಿರ ಕೋಟಿ ಅನುದಾನವನ್ನು ನೀಡಿತ್ತು. ಪಾಪ, ಸಿದ್ದರಾಮಯ್ಯನವರಿಗೆ ದಕ್ಷಿಣ ಕನ್ನಡ ಅಂದರೆ ಅಲರ್ಜಿ. ದಕ್ಷಿಣ ಕನ್ನಡದ ಜನರು ಎಂದರೆ ಅವರಿಗೆ ಆಸಕ್ತಿಯಿಲ್ಲ. ಯಾಕೆಂದರೆ, ದಕ್ಷಿಣ ಕನ್ನಡದ ಪ್ರತಿಯೊಬ್ಬ ಜನರ ಕಣಕಣದಲ್ಲೂ ಹಿಂದುತ್ವ ಇದೆ. ಅದಕ್ಕೋಸ್ಕರ ಸಿದ್ದರಾಮಯ್ಯನವರ ಸರಕಾರ ನಿಮ್ಮನ್ನು ವಿರೋಧಿಸುತ್ತಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡದ ಅಭಿವೃದ್ಧಿಗೆ ಒಂದು ರೂಪಾಯಿ ಅನುದಾನ ನೀಡುವ ಯೋಗ್ಯತೆ ಕಾಂಗ್ರೆಸ್ ಸರಕಾರಕ್ಕೆ ಇಲ್ಲ ಎಂದು ಆಕ್ಷೇಪಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಬಿಟ್ಟರೆ ಬೇರೆ ಸಚಿವರು ಈ ಜಿಲ್ಲೆಗೆ ಬರುತ್ತಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್ಗೆ ಇಲ್ಲಿನ ಜನರು ಮತ ಕೊಡುವುದಿಲ್ಲ ಎಂಬ ಕಾರಣಕ್ಕೆ ಅನುದಾನವೂ ಇಲ್ಲ; ಮಂತ್ರಿಗಳೂ ಬರುವುದಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಶಾಸಕ ರಾಜು ಕಾಗೆಯವರು ರಾಜ್ಯದಲ್ಲಿ ಅಭಿವೃದ್ಧಿಯೇ ಇಲ್ಲವಾಗಿದೆ. ಇಂಥ ಸರಕಾರದಲ್ಲಿ ಶಾಸಕರಾಗಿರುವ ಬದಲು ಆತ್ಮಹತ್ಯೆ ಮಾಡಿಕೊಳ್ಳುವುದೇ ಒಳಿತೆಂದು ಹೇಳಿದ್ದಾಗಿ ವಿವರಿಸಿದರು. ಅದೇ ಪಕ್ಷದ ಆರ್.ವಿ.ದೇಶಪಾಂಡೆಯವರು ಅಭಿವೃದ್ಧಿ ಇಲ್ಲದ ಕಾರಣ ಕ್ಷೇತ್ರದಲ್ಲಿ ತಲೆ ಎತ್ತಿಕೊಂಡು ಓಡಾಡಲು ಸಾಧ್ಯವಾಗುತ್ತಿಲ್ಲ ಎಂದಿರುವುದಾಗಿ ತಿಳಿಸಿದರು.
ಕರ್ನಾಟಕ ರಾಜ್ಯ ಸಹ-ಉಸ್ತುವಾರಿ ಸುಧಾಕರ್ ರೆಡ್ಡಿ ಅವರು ಮಾತನಾಡಿ, ಹರಿಯಾಣ ಮತ್ತು ಜಮ್ಮು- ಕಾಶ್ಮೀರದ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಫಲಿತಾಂಶ ಪಡೆದಿದೆ ಎಂದು ಮೆಚ್ಚುಗೆ ಸೂಚಿಸಿದರು. ಭಾರತ ಮಾತೆಯು ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ವಿಶ್ವ ನಾಯಕನಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಸ್ಥಳೀಯ ಸಂಸ್ಥೆಗಳ ಮೇಲೆ ಪ್ರಹಾರ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಕಲಿಸಿ; ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಸಿದ್ದರಾಮಯ್ಯರಿಗೆ ಹೋಗೋ ಕಾಲ ಬಂದಿದೆ. ಅದು ಅವರ ನಡವಳಿಕೆಗಳಿಂದ ಅರ್ಥವಾಗುತ್ತಿದೆ ಎಂದು ತಿಳಿಸಿದರು. ಮುಖ್ಯಮಂತ್ರಿ ಸ್ಥಾನಕ್ಕೆ ಟವೆಲ್ ಹಾಕಿಕೊಂಡು ಬಹಳಷ್ಟು ಜನರು ಕಾಯುತ್ತಿದ್ದಾರೆ. ಹೊಡೆದಾಟ, ಗುದ್ದಾಟ, ಕಿತ್ತಾಟ ಶುರುವಾಗಿದೆ. ಈ ಸರಕಾರ ಆರು ತಿಂಗಳಿರುತ್ತೋ, ಒಂದು ವರ್ಷ ಇರುತ್ತದೋ ಗ್ಯಾರಂಟಿ ಇಲ್ಲ ಎಂದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ,, ರಾಜ್ಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಎನ್ನುವವರು ದೇಶಪ್ರೇಮಿಗಳು; ಭಾರತ್ ಮಾತಾಕಿ ಜೈ ಎನ್ನುವವರು ದೇಶದ್ರೋಹಿಗಳು ಎಂಬ ಸ್ಥಿತಿ ಇದೆ. ಯಾರು ಬಾಂಬ್ ಹಾಕುತ್ತಾರೋ, ಬೆಂಕಿ ಹಾಕುತ್ತಾರೋ, ಕಾನೂನು ಕೈಗೆ ತೆಗೆದುಕೊಳ್ಳುವವರು ದೇಶಪ್ರೇಮಿಗಳು ಎಂಬಂತಾಗಿದೆ ಎಂದು ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರು ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ತುಷ್ಟೀಕರಣ ನೀತಿ ತುತ್ತತುದಿಗೆ ಮುಟ್ಟಿದೆ. ಭ್ರಷ್ಟಾಚಾರ ಮಿತಿ ಮೀರಿದೆ. ಇಂಥ ಆಡಳಿತದ ವಿರುದ್ಧ ಸೆಟೆದು ನಿಲ್ಲಬೇಕಿದೆ ಎಂದು ತಿಳಿಸಿದರು.
ಸಂಸದ ಬ್ರಿಜೇಶ್ ಚೌಟ ಅವರು ಮಾತನಾಡಿ, ಇದು ಕಾರ್ಯಕರ್ತರಿಗೆ ಹುಮ್ಮಸ್ಸು ಮತ್ತು ಪ್ರೇರಣೆ ಕೊಡುವ ಚುನಾವಣೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಉಪ ಚುನಾವಣೆ ನಡೆಯಲಿದೆ. ಕಿಶೋರ್ ಕುಮಾರ್ ಪುತ್ತೂರು ಅವರನ್ನು ಗೆಲ್ಲಿಸಿ ಕಳುಹಿಸೋಣ ಎಂದು ಮನವಿ ಮಾಡಿದರು.
ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ಮಾತನಾಡಿ, ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಅನುದಾನ, ಜವಾಬ್ದಾರಿ ಕೊಡುವ ಕೆಲಸವನ್ನು ನಮ್ಮ ಕೇಂದ್ರ- ರಾಜ್ಯ ಸರಕಾರಗಳು ಮಾಡಿವೆ. ಕೋಟ ಶ್ರೀನಿವಾಸ ಪೂಜಾರಿ ಅವರು ಪಂಚಾಯಿತಿಯಿಂದ ಬಂದು ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಅನುಭವ ಇದ್ದವರು. ಬಳಿಕ ವಿಧಾನಪರಿಷತ್ತಿನಲ್ಲಿ ಕೆಲಸ ಮಾಡಿದ್ದು, ಅವರು ಅದ್ಭುತವಾದ ಗ್ರಾಮ ಚಿಂತನೆ ಹೊಂದಿದವರು ಎಂದು ವಿವರಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್, ಶಾಸಕರಾದ ಉಮಾನಾಥ್ ಕೋಟ್ಯಾನ್, ಕು. ಭಾಗೀರಥಿ ಮುರಳ್ಯ, ವಿಧಾನಪರಿಷತ್ ಉಪಚುನಾವಣೆಯ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು, ನಿಕಟಪೂರ್ವ ವಿಭಾಗ ಪ್ರಭಾರಿ ಉದಯ್ಕುಮಾರ್ ಶೆಟ್ಟಿ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.