ಬೈಂದೂರು: ಕಸ್ತೂರಿ ರಂಗನ್ ವರದಿಯಿಂದ ಜನವಸತಿ ಪ್ರದೇಶಗಳನ್ನು ಕೈಬಿಡುವಂತೆ ಆಗ್ರಹಿಸಿ ಬೈಂದೂರು ತಾಲೂಕಿನ ಹಳ್ಳಿಹೊಳೆ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಬುಧವಾರ ಸುನಂದಾ ಗೇರು ಬೀಜ ಕಾರ್ಖಾನೆ ಸುಳುಗೋಡು ಚಕ್ರ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ವೈಜ್ಞಾನಿಕ ಕಸ್ತೂರಿ ರಂಗನ್ ವರದಿ ವಿರೋಧಿಸಿ, ಪ್ರತಿಭಟನೆಯನ್ನುದ್ದೇಶಿಸಿ ಮಾತಾಡಿದ ಹೋರಾಟಗಾರ ಬೆಳ್ತಂಗಡಿಯ ಫಾ| ಡಾ| ಸಲೀನ್ ಜೋಸೆಫ್ಪರಿಸರ ಸಂರಕ್ಷಣೆ ಉದ್ದೇಶದಿಂದ ಸುಪ್ರೀಂ ನಿರ್ದೇಶನದಂತೆ ಕಸ್ತೂರಿ ರಂಗನ್ ವರದಿ ಜಾರಿ ಸೂಚನೆಗಳು ಬಂದಿವೆ. ಈ ವರದಿಯಲ್ಲಿ ಜನ ವಸತಿ ಪ್ರದೇಶಗಳನ್ನು ಸಹ ಪರಿಸರ ಸೂಕ್ಷ್ಮ ವಲಯ ಎಂದು ಸೇರಿಸಿರುವುದು ದುರಂತ. ಇದರ ವಿರುದ್ಧ ಇನ್ನು ಜನರೇ ಧ್ವನಿ ಎತ್ತಬೇಕಿದೆ. ಉಡುಪಿ ಜಿಲ್ಲೆಯ ಸುಮಾರು 35 ಗ್ರಾಮಗಳ ಗ್ರಾಮಸ್ಥರು ಸಹ ಒಗ್ಗೂಡಿ ಹೋರಾಡದಿದ್ದರೆ ಕಾಡಂಚಿನಲ್ಲಿ ವಾಸಿಸುತ್ತರುವವರ ಬದುಕು ಶೋಚನೀಯವಾಗಲಿದೆ ಎಂದು ಎಚ್ಚರಿಸಿದರು.
ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಮಾತನಾಡಿ, ಜನರ ಉಳಿವಿಗಾಗಿ ಹೋರಾಡಲು ಸಿದ್ಧ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೇಗೆ ಹೋರಾಡಬೇಕು ಅನ್ನುವ ಬಗ್ಗೆ ಆದಷ್ಟು ಬೇಗ ಸಂಘಟಿತರಾಗಬೇಕಿದೆ. ಅರಣ್ಯ, ಪರಿಸರ ಸಂರಕ್ಷಣೆಗೆ ನಮ್ಮ ಬೆಂಬಲವಿದೆ. ಹಾಗಂತ ಈಗ ಬದುಕು ಕಟ್ಟಿಕೊಂಡಿರುವವರಿಗೆ ತೊಂದರೆ ಕೊಡುವುದು ಸರಿಯಲ್ಲ. ಈ ನೆಲೆಯಲ್ಲಿ ಪಕ್ಷಾತೀತ ಬೆಂಬಲವಿದೆ. ಕೇರಳದಲ್ಲಿ ಮನುಷ್ಯರೇ(ಫಿಸಿಕಲ್) ಸರ್ವೇ ನಡೆಸಿದ್ದಾರೆ. ಆದರೆ ಇಲ್ಲಿ ಸ್ಯಾಟಲೈಟ್ ಸರ್ವೇಯಿಂದ ಜನ ವಸತಿ ಪ್ರದೇಶಗಳು ಸೇರಿಕೊಂಡಿವೆ. ಇಲ್ಲಿಯೂ ಫಿಸಿಕಲ್ ಸರ್ವೇ ಆಗಲಿ ಎಂದು ಒತ್ತಾಯಿಸಿದರು.
ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಈ ವರದಿ ಜಾರಿಯಾದರೆ ಕಾಡಂಚಿನ ಗ್ರಾಮಗಳಲ್ಲಿ ನೆಲೆಸಿರುವ ಸಾವಿರಾರು ಕುಟುಂಬಗಳಿಗೆ ಎಲ್ಲದಕ್ಕೂ ಸಮಸ್ಯೆಯಾಗಲಿದೆ. ಜನರಿಗೆ ಮಾತ್ರವಲ್ಲ, ಕೆಲ ಗ್ರಾಮಗಳ ಸರಕಾರಿ ಕಟ್ಟಡಗಳು ಅದೇ ವಲಯದಲ್ಲಿವೆ. ನಮ್ಮ ಹಕ್ಕನ್ನು ಕಸಿಯಲು ನಾವು ಬಿಡಬಾರದು. ಈ ನೆಲೆಯಲ್ಲಿ ಒಗ್ಗೂಡಿ ಹೋರಾಡಬೇಕು. ರಾಜ್ಯದಿಂದ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ತೆರಳಿ ಮನವಿ ಮಾಡುವ ಅಗತ್ಯವಿದೆ. ಜನರೆಲ್ಲ ಒಗ್ಗೂಡಿ ವಿಧಾನಸೌಧದ ಎದುರು ಧರಣಿ ಮಾಡಬೇಕಾಗಿದೆ ಎಂದರು.
ಹಳ್ಳಿಹೊಳೆ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ಅ‘ಕ್ಷ ಮಂಜುನಾಥ್ ಶೆಟ್ಟಿ ಅ‘ಕ್ಷತೆ ವಹಿಸಿದ್ದರು.
ಮುದ್ದೂರು ಹಿತರಕ್ಷಣಾ ಸಮಿತಿ ಅಧ್ಯಕ್ಷ ಲಕ್ಷ್ಮಲ ಶೆಟ್ಟಿ, ವಂಡ್ಸೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ ಅತುಲ್ ಕುಮಾರ್ ಶೆಟ್ಟಿ, ಹಳ್ಳಿಹೊಳೆ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ಸದಸ್ಯರಾದ ಪ್ರಭಾಕರ ನಾಯ್ಕ, ಗುಲಾಬಿ, ನೇತ್ರಾವತಿ, ಗಿರಿಜಾ, ದಿನೇಶ್ ನಾಯ್ಕ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಳ್ಳಿಹೊಳೆ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್ ಕೃಷ್ಣ ಚಾತ್ರ ಸ್ವಾಗತಿಸಿದರು. ಜಡ್ಕಲ್ ಹಿತರಕ್ಷಣಾ ಸಮಿತಿ ಅಧ್ಯಕ್ಷ ದೇವದಾಸ್ ವಿ.ಜೆ. ಪ್ರಾಸ್ತಾವಿಕ ಮಾತನಾಡಿದರು. ಹಳ್ಳಿಹೊಳೆ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ಸದಸ್ಯ ಪ್ರದೀಪ್ ಕೊಠಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.