ಮಂಗಳೂರು: ಸೋಷಿಯಲ್ ಮೀಡಿಯಾ ಎನ್ನುವುದು ಸಮಾಜದಲ್ಲಿ ಆಳವಾಗಿ ನಮ್ಮ ದಿನನಿತ್ಯದ ಬದುಕಿನ ಸಂಗಾತಿಯಂತೆ ಇದ್ದು ನಮ್ಮ ಜೀವನದ ಮೌಲ್ಯಗಳನ್ನೇ ಅಧೋಪತನಕ್ಕೆ ಒಯ್ಯುತ್ತಿರುವ ಹೊಸ ಶತ್ರುವಾಗಿದೆ. ಪ್ರತಿಯೊಬ್ಬರು ದಿನದಲ್ಲಿ ಎಷ್ಟು ಸಮಯ ಮತ್ತು ಯಾವ ವಿಷಯಕ್ಕೆ ಸಾಮಾಜಿಕ ಜಾಲತಾಣವನ್ನು ಅವಲಂಬಿಸಬೇಕು ಎನ್ನುವುದರ ಬಗ್ಗೆ ಸಾಕಷ್ಟು ಜಾಗೃತೆ ವಹಿಸಬೇಕು ಎಂದು ಭಾರತೀಯ ಶಿಕ್ಷಣ ಮಂಡಲ, ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ಹಾಗೂ ಜನಪ್ರಿಯ ಸಾಹಿತ್ಯ ಹಬ್ಬ ‘ಮಂಗಳೂರು ಲಿಟ್ ಫೆಸ್ಟ್’ ಆಯೋಜಿಸುವ ಭಾರತ್ ಟ್ರಸ್ಟ್ನ ಟ್ರಸ್ಟಿಯೂ ಆಗಿರುವ ಶ್ರೀ ಸುನಿಲ್ ಕುಲಕರ್ಣಿ ಅವರು ಹೇಳಿದರು.
ಆಧುನಿಕತೆಯ ಜಾಲದಲ್ಲಿ ಸಿಕ್ಕಿರುವ ನಾವು ‘ಮೊಬೈಲ್’ ದಾಸರಾಗಿ, ಯುವಜನತೆಯಲ್ಲಿ ನೆನಪಿನ ಶಕ್ತಿ ಕುಂಠಿತವಾಗುತ್ತಿದೆ. ಅತಿಯಾದ ಮೊಬೈಲ್ ಬಳಕೆಯಿ೦ದ ಅನವಶ್ಯಕ ವಿಷಯಗಳನ್ನು ಹಂಚಿಕೊಳ್ಳುವುದು, ಕಾಮೆಂಟ್ ಮಾಡುವುದರಿಂದ ‘ಸೈಬರ್ ಬುಲ್ಲಿಂಗ್’ ಮತ್ತು ಟ್ರಾಲ್ ನಂತಹ ಅಪಹಾಸ್ಯಕ್ಕೆ ಒಡ್ಡಿಕೊಂಡು ಮಾನಸಿಕ ಮತ್ತು ದೈಹಿಕವಾಗಿ ಅಪಾಯದಲ್ಲಿ ಸಿಕ್ಕಿಸಿಕೊಳ್ಳುತ್ತಿದ್ದೇವೆ ಎಂದರು.
ಇವತ್ತಿನ ಕಾಲದಲ್ಲಿ ನಮ್ಮ ಯಾವುದೇ ವೈಯಕ್ತಿಕ ಮಾಹಿತಿ ಗೌಪ್ಯವಾಗಿ ಉಳಿದಿಲ್ಲ,ಸಾಮಾಜಿಕ ಜಾಲತಾಣದಲ್ಲಿ ಯಾವುದನ್ನು ಹಂಚಿಕೊಳ್ಳುಬಾರದು ಎನ್ನುವ ವಿವೇಚನೆ ಅತ್ಯಗತ್ಯ. ಅಂಧಾನುಕರಣೆ ಮತ್ತು ಇನ್ನೊಬ್ಬರ ಜೊತೆ ಹೋಲಿಸಿಕೊಂಡು ಅವರಿಗಿಂತ ಹೆಚ್ಚು ಫಾಲವರ್ಸ್,ಲೈಕ್ಸ್,ಶೇರ್ ಪಡೆಯಬೇಕು ಎನ್ನುವ ಅವಾಸ್ತವ ಆಕಾಂಕ್ಷೆ,ಅಪಾಯಕಾರಿ ಸಾಹಸಕ್ಕೆ ಕೈ ಹಾಕುವುದು, ಸೆಲ್ಫಿ ಹುಚ್ಚಿನಂತಹ ಚಟದಿಂದ ಎಷ್ಟೊ ಜನರ ಮಾನ ಮತ್ತು ಪ್ರಾಣಹಾನಿ ಆಗುತ್ತಿರುವುದು ಹೊಸ ವಿಚಾರವಾಗಿ ಉಳಿದಿಲ್ಲ. ಮೊಬೈಲ್ ವ್ಯಸನದಿಂದ ನಮ್ಮ ಭಾರತೀಯ ಜೀವಾಳವಾದ ಕುಟುಂಬ ಪದ್ದತಿಯ ಮೌಲ್ಯ ಕುಸಿಯುತ್ತಿರುವುದು ಒಂದು ರೀತಿಯ ನಿಧಾನಗತಿಯ ವಿಷವನ್ನು(Slow poison) ಸೇವಿಸುತ್ತಿರುವಂತೆ ಆಗಿದೆ.ಇತ್ತೀಚಿನ ಮೈಕ್ರೋ ಸಂಸಾರದಲ್ಲಿ ಎಲ್ಲರೂ ಒಟ್ಟಿಗೆ ಇದ್ದರೂ ಸಹ,ಬಾಂಧವ್ಯ ಮಾಯವಾಗುತ್ತಿದೆ.ಒಟ್ಟಿಗೆ ಕೂತು ಮಾತನಾಡುವುದನ್ನು ಊಟ ಮಾಡುವುದನ್ನು ಮರೆತಿದ್ದೇವೆ. ಜಾಲತಾಣಗಳಲ್ಲಿ ಕಾಣಸಿಗುವ ಒಬ್ಬರನೊಬ್ಬರು ಹಾಸ್ಯ ಮಾಡಿಕೊಳ್ಳುವ ವೀಡಿಯೋಗಳು, ರೀಲ್ಸ್ ಗಳು ತತ್ಕ್ಷಣಕ್ಕೆ ನಗು ತರಿಸಿದರೂ, ಭಾವನಾತ್ಮಕವಾಗಿ ಸಂಬಂಧಗಳ ಮೌಲ್ಯ ಕುಸಿಯುತ್ತಿರುವುದು ನಮ್ಮ ಗಮನಕ್ಕೆ ಬರುತ್ತಿಲ್ಲ ಎಂದು ಅಭಿಪ್ರಾಯ ಪಟ್ಟರು.
ಇಂದಿನ ಜೀವನ ಪದ್ದತಿಗೆ ಮೊಬೈಲ್ ಬಳಕೆ ಅತ್ಯಗತ್ಯ ಎನ್ನುವುದು ಕಟು ವಾಸ್ತವ.ಆದರೆ ಯಾವತ್ತೂ ಇದು ಅನಿವಾರ್ಯವಲ್ಲ ಎನ್ನುವ ಮನಸ್ಥಿತಿ ನಮ್ಮಲ್ಲಿ ಜಾಗೃತವಾಗಬೇಕು.ಸಾಮಾಜಿಕ ಜಾಲತಾಣದಲ್ಲಿ ತೊಡಗಿದರೆ, ನಾವು ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗಿದ್ದೇನೆ ಎಂದು ತಿಳಿಯುವುದು ಸಮಾಜಕ್ಕೆ ಮಾರಕವಾಗಿದೆ ಎಂದರು.
‘ಮಂಥನ’ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಆಗಮಿಸಿದ್ದ,ಅಮೃತ ವಿದ್ಯಾಲಯಮ್ ನ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಶೆಣೈ ಅವರು ಮಾತನಾಡಿ, ಬೆಳಿಗ್ಗೆ ಎದ್ದ ತಕ್ಷಣ ದೇವರ ನೆನೆಯುತ್ತಿದ್ದ ಕಾಲದಿಂದ,ಮೊಬೈಲ್ ಹಿಡಿದು ನಮ್ಮ ಸೋಷಿಯಲ್ ಮೀಡಿಯಾ ಖಾತೆ ನೋಡದೆ ದಿನ ಪ್ರಾರಂಭವೇ ಆಗುವುದಿಲ್ಲ ಎನ್ನುವಷ್ಟರ ಮಟ್ಟಿಗೆ ನಾವು ಬದಲಾಗಿದ್ದೇವೆ. ಖಾಯಿಲೆಗಳು ಬಂದಾಗ ಗೂಗಲ್ ನಂತ ಸರ್ಚ ಎಂಜಿನ್ ಬಳಸಿ ನಾವೇ ಔಷಧಗಳನ್ನು ಹುಡುಕಿ ಸ್ವತಃ ಡಾಕ್ಟರ್ ರೀತಿಯಲ್ಲಿ ನಡೆದು ಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ. ನಾವೇ ಸೃಷ್ಟಿಸಿಕೊಂಡ ಈ ಮಾಯಾಜಾಲದ ಚಟದಿಂದ,ನಾವುಗಳು ಮನಸ್ಸು ಮಾಡಿದರೆ ಮಾತ್ರ ಹೊರಬರಲು ಸಾಧ್ಯ ಎಂದು ಕಿವಿ ಮಾತು ಹೇಳಿದರು.
ರಾ.ಸ್ವ.ಸೇವಕ ಸಂಘದ ಮಾನ್ಯ ಸಂಘಚಾಲಕ್ ಶ್ರೀ ಬಿ.ಕೆ.ಕುಮಾರ್ ಅವರ ಮಾರ್ಗದರ್ಶನದಲ್ಲಿ, ಆಗಸ್ಟ್ 28ರಂದು ಕಾವೂರು ಸೊಸೈಟಿ ಹಾಲ್ ನಲ್ಲಿ ನಡೆದ 8ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಶ್ರೀಮತಿ ಸುಮಿತಾ ಹರೀಶ ಸ್ವಾಗತಿಸದರೆ,ಶ್ರೀ ರೋಹಿತಾಕ್ಷ ಧನ್ಯವಾದ ಸಮರ್ಪಿಸಿದರು.ಶ್ರೀ ಮೋಹನ್ ದಾಸ್ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.