ಬೆಂಗಳೂರು: ಬೈಂದೂರು ಶಾಸಕ ಗುರುರಾಜ್ ಗಂಟಿ ಹೊಳೆಯವರು ಇಂದು ಅಧಿವೇಶನದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರು ಎದುರಿಸುತ್ತಿರುವ ಎಂಒ4 ಭತ್ತದ ಬಿತ್ತನೆ ಬೀಜದ ಕೊರತೆಯ ಬಗ್ಗೆ ಸರ್ಕಾರದ ಗಮನವನ್ನು ಸೆಳೆದಿದ್ದಾರೆ.
ಎಂಒ4 ಭತ್ತದ ಬಿತ್ತನೆ ಬೀಜದ ಕೊರತೆಯನ್ನು ಪ್ರತಿ ವರ್ಷ ಕರಾವಳಿ ಭಾಗದ ರೈತರು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಕಾಲದಲ್ಲಿ ಬೀಜ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಮತ್ತು ಸಬ್ಸಿಡಿ ದರದಲ್ಲಿ ಬೀಜವನ್ನು ನೀಡಬೇಕು ಎಂದು ಶಾಸಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಾತ್ರವಲ್ಲದೆ ಉಡುಪಿ ಜಿಲ್ಲೆಯಲ್ಲಿ ಇರುವ ಏಕೈಕ ಕೃಷಿ ಡಿಪ್ಲೋಮಾ ಕಾಲೇಜನ್ನು ಮುಚ್ಚಲು ನೀಡಿರುವ ಆದೇಶವನ್ನು ತಡೆಹಿಡಿಯಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಲ್ಲದೇ ಕರಾವಳಿ ಜನರ ಆಶಯದಂತೆ ಉಡುಪಿ ಜಿಲ್ಲೆಯಲ್ಲಿ ಕೃಷಿ ಕಾಲೇಜನ್ನು ಸ್ಥಾಪಿಸಿ ಕೃಷಿಗೆ ಉತ್ತೇಜನ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ರೈತರ ಪಹಣಿಯಲ್ಲಿ ಬೆಳೆ ವಿವರ ದಾಖಲಾಗದಿದ್ದರೆ ಬೆಳೆ ನಷ್ಟದ ಸಂದರ್ಭಗಳಲ್ಲಿ ಬೆಳೆ ವಿಮೆ ಯೋಜನೆಯ ಪ್ರಯೋಜನವನ್ನು ಪಡೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ, ಹೀಗಾಗಿ ಶೇ.100ರಷ್ಟು ರೈತರ ಪಹಣಿಗಳಿಗೆ ಬೆಳೆ ವಿವರ ದಾಖಲಾಗಬೇಕು ಮತ್ತು ಬೆಳೆ ವಿಮಾ ನೋಂದಣಿ ಅವಧಿ ತೀರಾ ಕಡಿಮೆ ಇರುತ್ತದೆ ಅದನ್ನು ಹೆಚ್ಚು ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಅಲ್ಲದೆ ನೆರೆ, ಪ್ರವಾಹ ಮತ್ತು ಇತರ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಉಂಟಾಗುವ ಬೆಳೆ ನಷ್ಟದ ಸಂದರ್ಭದಲ್ಲಿ ಸರ್ಕಾರ ಸಕಾಲದಲ್ಲಿ ರೈತರ ಖಾತೆಗೆ ಮೊತ್ತವನ್ನು ಜಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೆ ಕೇಂದ್ರದ ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆಯಡಿ ಹನಿ ನೀರಾವರಿಗೆ ನೀಡಲಾಗುತ್ತಿದ್ದ ಸಹಾಯಧನವನ್ನು ಕಡಿತ ಮಾಡಲಾಗಿದೆ, ಇದನ್ನು ಮತ್ತೆ ಹಿಂದಿನ ಮೊತ್ತಕ್ಕೆ ಏರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕರಾವಳಿ ಭಾಗದ ರೈತರು ಎದುರಿಸುತ್ತಿರುವ ಬಿತ್ತನೆ ಬೀಜ ಸರಬರಾಜು ಕೊರತೆ ಸಮಸ್ಯೆಯ ಬಗ್ಗೆ ಸದನದಲ್ಲಿ ಗಮನಸೆಳೆಯಲಾಯಿತು.
ಕೃಷಿ ಇಲಾಖೆ ಮತ್ತು ಬೀಜ ಅಭಿವೃದ್ಧಿ ನಿಗಮದ ನಡುವೆ ಹೊಂದಾಣಿಕೆಯೇ ಇಲ್ಲ. ರೈತರ ಸಮಸ್ಯೆಗಳಿಗೆ ಇಲಾಖೆ ಮತ್ತು ನಿಗಮ ಸ್ಪಂದಿಸುತ್ತಿಲ್ಲ.#ಸಮೃದ್ಧಬೈಂದೂರು pic.twitter.com/B0BVE4voWP
— Gururaj Gantihole (@gantihole) July 22, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.