ನವದೆಹಲಿ: 18ನೇ ಲೋಕಸಭೆಯ ಸ್ಪೀಕರ್ ಆಗಿ ಎನ್ಡಿಎ ಅಭ್ಯರ್ಥಿ ಓಂ ಬಿರ್ಲಾ ಅವರು ಆಯ್ಕೆಯಾಗಿದ್ದಾರೆ. ಧ್ವನಿ ಮತದ ಮೂಲಕ ಸ್ಪೀಕರ್ ಆಗಿ ಅವರು ಆಯ್ಕೆಯಾದರು.
ಪ್ರಧಾನಿ ನರೇಂದ್ರ ಮೋದಿ ಅವರು ಓಂ ಬಿರ್ಲಾ ಅವರನ್ನು ಲೋಕಸಭೆ ಸ್ಪೀಕರ್ ಆಗಿ ಆಯ್ಕೆ ಮಾಡುವಂತೆ ಪ್ರಸ್ತಾವನೆ ಮಂಡಿಸಿದ್ದರು. ಈ ಪ್ರಸ್ತಾಪವನ್ನು ಕೇಂದ್ರ ಸಚಿವ ರಾಜನಾಥ್ ಸಿಂಗ್ ಮತ್ತು ಜೆಡಿಯು ನಾಯಕ ಲಾಲನ್ ಸಿಂಗ್ ಅನುಮೋದಿಸಿದರು.
ಎನ್ಡಿಎ ಮತ್ತುಇಂಡಿ ಒಕ್ಕೂಟ ಸ್ಪೀಕರ್ ಅಭ್ಯರ್ಥಿಯ ಆಯ್ಕೆಯ ಬಗ್ಗೆ ಒಮ್ಮತಕ್ಕೆ ಬರಲು ವಿಫಲವಾದ ಹಿನ್ನೆಲೆಯಲ್ಲಿ ಸ್ಪೀಕರ್ ಹುದ್ದೆಗೆ ಚುನಾವಣೆಯನ್ನು ನಡೆಸುವುದು ಅನಿವಾರ್ಯವಾಯಿತು.
ಇಂಡಿ ಒಕ್ಕೂಟ ಓಂ ಬಿರ್ಲಾ ವಿರುದ್ಧ ಕೆ ಸುರೇಶ್ ಅವರನ್ನು ಕಣಕ್ಕಿಳಿಸಿತ್ತು. ಎನ್ಸಿಪಿ (ಎಸ್ಪಿ) ನಾಯಕಿ ಮತ್ತು ಬಾರಾಮತಿ ಸಂಸದೆ ಸುಪ್ರಿಯಾ ಸುಳೆ, ಇತರ ಇಂಡಿ ಬ್ಲಾಕ್ ನಾಯಕರು ಕೆ ಸುರೇಶ್ ಅವರನ್ನು ಬೆಂಬಲಿಸಿ ಪ್ರಸ್ತಾವನೆಯನ್ನು ಮಂಡಿಸಿದ್ದರು.
ಓಂ ಬಿರ್ಲಾ ಅವರು ಮೊದಲ ಬಾರಿಗೆ 17 ನೇ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾದರು. ಇದೀಗ ಎರಡನೇ ಅವಧಿಗೂ ಅವರು ಈ ಹುದ್ದೆಯನ್ನು ನಿಭಾಯಿಸಲಿದ್ದಾರೆ.
ವಿದ್ಯಾರ್ಥಿ ನಾಯಕರಾಗಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದ ಬಿರ್ಲಾ ಅವರು 2003, 2008 ಮತ್ತು 2013 ರಲ್ಲಿ ಸತತ ಮೂರು ಅವಧಿಗೆ ರಾಜಸ್ಥಾನ ವಿಧಾನಸಭೆಗೆ ಆಯ್ಕೆಯಾದರು.
ಅವರು 2014 ರಲ್ಲಿ ತಮ್ಮ ಮೊದಲ ಲೋಕಸಭಾ ಚುನಾವಣೆಯಲ್ಲಿ ಗೆದ್ದರು ಮತ್ತು ಈ ವರ್ಷ ಮತ್ತೆ ರಾಜಸ್ಥಾನದ ಕೋಟಾ-ಬುಂಡಿ ಕ್ಷೇತ್ರದಿಂದ ಆಯ್ಕೆಯಾದರು. ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿರ್ಲಾ ಅವರು 2.5 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ನ ರಾಮನಾರಾಯಣ ಮೀನಾ ಅವರನ್ನು ಸೋಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.