ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರದ ಒಂದು ವರ್ಷದ ಅವಧಿಯನ್ನು ಅಸಮರ್ಥ ಸಂಪುಟ, ಅಭಿವೃದ್ಧಿಶೂನ್ಯ ಸರಕಾರ ಎಂದು ವಿಶ್ಲೇಷಿಸಬಹುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್ ಅವರು ತಿಳಿಸಿದರು.
ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರ ಹೋಟೆಲ್ ಜಿ.ಎಂ. ರಿಜಾಯ್ಸ್ ನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಮುಗಿದು ಸರಕಾರ ರಚನೆಯಾಗಿ ಒಂದು ವರ್ಷ ಮುಗಿಯುತ್ತಿದೆ. ಗೊತ್ತುಗುರಿ ಇಲ್ಲದ ಆಡಳಿತವನ್ನು ಕರ್ನಾಟಕದ ಜನತೆ ಕಳೆದ ಒಂದು ವರ್ಷದಲ್ಲಿ ನೋಡಿದ್ದಾರೆ. ಅಭಿವೃದ್ಧಿ ಶೂನ್ಯ ಸರಕಾರ ಇದು ಎಂದು ಟೀಕಿಸಿದರು.
ಈ ಒಂದು ವರ್ಷದ ಅವಧಿಯಲ್ಲಿ ಯಾವ ಯೋಜನೆಗೆ ಅನುದಾನ ಕೊಟ್ಟಿದ್ದಾರೆ ಎಂಬ ಮಾಹಿತಿಯನ್ನು ಸರಕಾರ ಬಿಡುಗಡೆ ಮಾಡಬೇಕು. ಸ್ಥಳೀಯ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಯಾವ ಯೋಜನೆಗಳಿಗೆ, ಎಷ್ಟು ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನ ಕೊಟ್ಟಿದ್ದಾರೆ ಎಂದು ಸರಕಾರ ಬಹಿರಂಗಪಡಿಸಿದರೆ ಸಾಕು ಎಂದು ವ್ಯಂಗ್ಯವಾಗಿ ನುಡಿದರು.
ಇಂಥ ಅಭಿವೃದ್ಧಿಶೂನ್ಯ ಆಡಳಿತ, ಸರಕಾರವನ್ನು ಕರ್ನಾಟಕದ ಜನತೆ ಯಾವತ್ತೂ ನೋಡಿರಲಿಲ್ಲ. ವಿಧಾನಸಭಾ ಕ್ಷೇತ್ರಗಳು, ಇಲಾಖೆಗಳಿಗೆ ಒಂದು ರೂಪಾಯಿ ಅನುದಾನವನ್ನೂ ಕೊಡದೆ ಒಂದು ವರ್ಷ ಕಾಲವನ್ನು ಈ ಸರಕಾರ ಕಳೆದಿದೆ. ನಾವೆಲ್ಲ ಶಾಸಕರು ಒಂದು ವರ್ಷದಿಂದ ಒಂದು ಗುದ್ದಲಿ ಪೂಜೆ ಮಾಡಲಾಗಿಲ್ಲ. ಒಂದು ಅನುದಾನ ಬಂದಿದೆ ಎಂದು ಜನರ ಹತ್ತಿರ ಹೋಗಲೂ ಆಗಿಲ್ಲ ಎಂದು ವಿವರಿಸಿದರು.
ಜನರು ಕೂಡ ಈ ಸರಕಾರದಿಂದ ಅನುದಾನ ಬರುವುದಿಲ್ಲ ಎಂಬಷ್ಟರ ಮಟ್ಟಿಗೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಸಂಪುಟವನ್ನು ಗಮನಿಸಿದರೆ ಇಡೀ ಸಂಪುಟವೇ ಅಸಮರ್ಥವಾಗಿದೆ. ಸಚಿವರ ಮೇಲೆ ಹಿಡಿತವಿಲ್ಲದೆ ಮುಖ್ಯಮಂತ್ರಿಗಳು ಅಸಮರ್ಥವಾಗಿದ್ದಾರೆ. ಯೋಜನೆ ರೂಪಿಸುವುದರಲ್ಲಿ ಮುಖ್ಯಮಂತ್ರಿಗಳು ಅಸಮರ್ಥವಾಗಿದ್ದಾರೆ. ಸರಕಾರಿ ನೌಕರರಿಗೆ ಸಂಬಳ ಸಿಗುತ್ತಿಲ್ಲ ಅನ್ನುವಷ್ಟರ ಮಟ್ಟಿಗೆ ಅಸಮರ್ಥ ಮುಖ್ಯಮಂತ್ರಿಯ ಆಡಳಿತವನ್ನು ಕರ್ನಾಟಕದಲ್ಲಿ ನೋಡುತ್ತಿದ್ದೇವೆ ಎಂದು ವಿ. ಸುನೀಲ್ ಕುಮಾರ್ ಅವರು ತಿಳಿಸಿದರು.
ಕಾನೂನು, ಸುವ್ಯವಸ್ಥೆ ನಿಭಾಯಿಸುವುದರಲ್ಲಿ ಗೃಹ ಸಚಿವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಬರ ಪರಿಹಾರದಲ್ಲಿ ಕಂದಾಯ ಸಚಿವರು ಎಷ್ಟು ದೊಡ್ಡ ಪ್ರಮಾಣದಲ್ಲಿ ವೈಫಲ್ಯ ಕಂಡಿದ್ದಾರೆಂದರೆ ಮಂತ್ರಿಮಂಡಲದ ಒಬ್ಬ ಸದಸ್ಯರೂ ಬರ ಪರಿಹಾರದ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ ಎಂದು ಅವರು ಆಕ್ಷೇಪಿಸಿದರು. ಹಣ ಬಿಡುಗಡೆ ಮಾಡಿಲ್ಲ. ಕಂದಾಯ ಸಚಿವರಿಂದ ಗ್ರಾಮೀಣಾಭಿವೃದ್ಧಿ ಸಚಿವರವರೆಗೆ ಎಲ್ಲ ಸಂಪುಟವು ಬರ ಪರಿಹಾರದ ನಿರ್ವಹಣೆಯಲ್ಲಿ ಅಸಮರ್ಥವಾಗಿದೆ ಎಂದು ಟೀಕಿಸಿದರು.
ರೈತರಿಗೆ ಈಗ ಹೊಸ ಸಾಲ ಸಿಗುತ್ತಿಲ್ಲ. ರೈತರ ಸಾಲದ ಬಡ್ಡಿ ಮನ್ನಾ ಮಾಡಿದ್ದಾಗಿ ಘೋಷಣೆ ಮಾಡಿ, 496 ಕೋಟಿ ಅನುದಾನವನ್ನು ಬಿಡುಗಡೆ ಮಾಡದ ಕಾರಣ ಪಿಎಲ್ಡಿ ಬ್ಯಾಂಕ್, ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳಲ್ಲಿ ರೈತರಿಗೆ ಮರುಸಾಲ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಅದಕ್ಕೆ ಕೃಷಿ- ಸಹಕಾರಿ ಸಚಿವರು ಇವತ್ತು ಅಸಮರ್ಥವಾಗಿರುವುದೇ ಕಾರಣ ಎಂದು ವಿಶ್ಲೇಷಿಸಿದರು.
ಈ ಸರಕಾರ ಬಂದ ಬಳಿಕ ಕರ್ನಾಟಕದ ಒಬ್ಬನೇ ಒಬ್ಬ ರೈತನಿಗೆ ಹೊಸ ಪಂಪ್ಸೆಟ್ ಸಂಪರ್ಕ ಸಿಗಲಿಲ್ಲ. ರೈತರು ಹಣ ಕಟ್ಟಿದರೂ ಹೊಸ ಸಂಪರ್ಕ ಸಿಕ್ಕಿಲ್ಲ 24 ಗಂಟೆ ವಿದ್ಯುತ್ ನಿರಂತರ ಬಿಡಿ; ಗ್ರಾಮೀಣ ಪ್ರದೇಶದಲ್ಲಿ 10- 12 ಗಂಟೆ ವಿದ್ಯುತ್ ಕೊಡಲಾಗದ ಅಸಮರ್ಥ ಇಂಧನ ಸಚಿವರು ನಮ್ಮ ನಡುವೆ ಇದ್ದಾರೆ ಎಂದು ಟೀಕಿಸಿದರು.
ಶಿಕ್ಷಣದ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗ್ರೇಸ್ ಮಾರ್ಕ್ ಕೊಟ್ಟಿದ್ದನ್ನು ಗಮನಿಸಿದರೆ ಶಿಕ್ಷಣ ಇಲಾಖೆ ಎಷ್ಟು ಅಸಮರ್ಥ ಎಂಬುದನ್ನು ನಾವು ನೋಡುತ್ತಿದ್ದೇವೆ. ಅಂಗನವಾಡಿಯವರಿಗೆ ಗೌರವಧನ ಹೆಚ್ಚಿಸಿಲ್ಲ; ಅಂಗನವಾಡಿಗಳ ಮೊಟ್ಟೆ ವಿತರಣೆಯಲ್ಲಿ ವ್ಯತ್ಯಾಸವಾಗಿದೆ. ಅಲ್ಲೂ ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಅಸಮರ್ಥರಾಗಿದ್ದಾರೆ ಎಂದು ದೂರಿದರು.
ಬ್ರ್ಯಾಂಡ್ ಬೆಂಗಳೂರು ಇವತ್ತು ದಿಕ್ಕೆಟ್ಟ ಬೆಂಗಳೂರಾಗಿದೆ. ಬೆಂಗಳೂರಿಗೆ ಯಾವ ರೀತಿಯ ಯೋಜನೆ ರೂಪಿಸುವುದರಲ್ಲಿ ನಗರಾಭಿವೃದ್ಧಿ ಸಚಿವರು ಅಸಮರ್ಥರಾಗಿದ್ದಾರೆ. ಇದೊಂದು ಅಸಮರ್ಥ ಸಂಪುಟ; ಅಭಿವೃದ್ಧಿ ಶೂನ್ಯ ಸರಕಾರ ಎಂದು ಆರೋಪಿಸಿದರು.
ಬೆಲೆ ಹೆಚ್ಚಳ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಪಿಕ್ ಪಾಕೆಟ್ ಕಾಂಗ್ರೆಸ್ ಎಂದು ನಾವು ಈ ಹಿಂದೆ ಹೇಳಿದ್ದೆವು. ಅದನ್ನು ಸರಕಾರ ಸರಿ ಮಾಡಿಕೊಂಡಿಲ್ಲ. ಕರ್ನಾಟಕದಲ್ಲಿ ಆಡಳಿತವನ್ನು ಕೆಲವು ಕುಟುಂಬದ ಸದಸ್ಯರು, ಇವೆಂಟ್ ಮ್ಯಾನೇಜ್ಮೆಂಟಿನ ಸದಸ್ಯರು ಸರಕಾರ ನಡೆಸುತ್ತಿದ್ದಾರೆ. ಜನಪ್ರತಿನಿಧಿಗಳಿಗೆ ಅಪಮಾನ ಮಾಡುವ ರೀತಿಯಲ್ಲಿ ಈ ಸರಕಾರ ನಡೆಯುತ್ತಿದೆ ಎಂದು ವಿ. ಸುನೀಲ್ ಕುಮಾರ್ ಅವರು ಆಕ್ಷೇಪ ವ್ಯಕ್ತಪಡಿಸಿದರು.
ವಿಧಾನಸೌಧದ ಆಡಳಿತ ಯಾರದೋ ಮನೆಯ ಕಿಚನ್ನಲ್ಲಿ ನಡೆಯುವಂತೆ ಭಾಸವಾಗುತ್ತಿದೆ. ಒಂದು ವರ್ಷದ ಈ ಸರಕಾರದ ಅವ್ಯವಸ್ಥೆ ದಿನದಿಂದ ದಿನಕ್ಕೆ ಬಯಲಾಗುತ್ತಿದೆ. ಈ ಅಸಮರ್ಥ ಸರಕಾರದ ವಿರುದ್ಧ ಬಿಜೆಪಿ ಜನಾಂದೋಲನ ನಡೆಸಲಿದೆ ಎಂದು ಪ್ರಕಟಿಸಿದರು.
ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಹಕಾರ ನೀಡಿದ ಎಲ್ಲ ಮಾಧ್ಯಮ ಮಿತ್ರರಿಗೆ ಅವರು ಪಕ್ಷ- ವೈಯಕ್ತಿಕ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.