ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ನುಡಿದಂತೆ ನಡೆದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರವು ನುಡಿದಂತೆ ನಡೆದ ಸರ್ಕಾರವೇ ಅಲ್ಲ. ಅದು ಹೇಳಿದ್ದು ಒಂದು, ಮಾಡಿದ್ದು ಮತ್ತೊಂದು. ಗ್ಯಾರಂಟಿ ಕಾರ್ಯಕ್ರಮ ಕೊಟ್ಟರು. ಆದರೆ ಅವುಗಳು ಜನರಿಗೆ ತಲುಪಿಸುವ ಕುರಿತು ಗ್ಯಾರಂಟಿ ನೀಡಲಿಲ್ಲ ಎಂದು ಟೀಕಿಸಿದರು. ದಲಿತ ಸಮುದಾಯಗಳಿಗೆ ಕಾಂಗ್ರೆಸ್ ಸರ್ಕಾರವು ಯಾವುದೇ ಗ್ಯಾರಂಟಿ ನೀಡಲಿಲ್ಲ. ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ ೨೫,೩೮೬ ಕೋಟಿ ರೂ.ಗಳನ್ನು ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿ ದಲಿತರಿಗೆ ದ್ರೋಹ ಎಸಗಿದೆ ಎಂದರು.
ಈ ಪ್ರಶ್ನೆಗೆ ಮುಖ್ಯಮಂತ್ರಿಯಾಗಲೀ, ಉಳಿದವರಾಗಲೀ ಉತ್ತರ ಕೊಡಲು ಸಿದ್ಧರಿಲ್ಲ. ದಲಿತರನ್ನು ಬಡವರನ್ನಾಗಿಯೇ ಉಳಿಸುವ, ಬರೀ ವೋಟ್ಗೆ ಮಾತ್ರ ಬಳಕೆ ಮಾಡಿ, ಗುಲಾಮರನ್ನಾಗಿಸುವುದು ಕಾಂಗ್ರೆಸ್ನ ಕುತಂತ್ರವಾಗಿದೆ. ಇದು ದಲಿತರಿಗೆ ಮಾಡಿದ ಮೋಸ ಎಂದರು.
ಇದು ಲೋಕಸಭೆ ಚುನಾವಣೆ. ಇಲ್ಲಿ ದೇಶ ಮತ್ತು ಅಂತಾರಾಷ್ಟ್ರೀಯ ವಿಚಾರಗಳು ಚರ್ಚೆಗೆ ಬರಬೇಕು. ಆದರೆ ಸಿದ್ಧರಾಮಯ್ಯ ಈ ಚುನಾವಣೆಯನ್ನೂ ರಾಜ್ಯದ ಚುನಾವಣೆ ಎಂದು ಭಾವಿಸಿದ್ದಾರೆ. ದೇಶದ ಬಗ್ಗೆ ಚಕಾರವೆತ್ತದೇ, ಬರೀ ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ ಅಲ್ಲದೇ ಮುಂಜಾನೆಯಿಂದ ಸಂಜೆವರೆಗೂ ಬರೀ ಸುಳ್ಳು ಹೇಳುತ್ತಾರೆ. ಪ್ರಧಾನಿ ಮೋದಿ ವಿರುದ್ಧ ಬರೀ ಅಪಪ್ರಚಾರ ಮಾಡುತ್ತಾರೆ. ಕಾಂಗ್ರೆಸ್ನವರು ದೇಶಕ್ಕಾಗಿ ಏನು ಮಾಡಿದ್ದಾರೆ ಹೇಳಬೇಕು. ಈ ಬಗ್ಗೆ ಮಾತನಾಡದೇ ಕ್ಷುಲ್ಲಕ ವಿಚಾರಗಳನ್ನು ಪ್ರಸ್ತಾಪಿಸಿ, ಬರೀ ಪ್ರಧಾನಿ ಮೋದಿ ಹಾಗೂ ಬಿಜೆಪಿಯನ್ನು ನಿಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ಕಾಂಗ್ರೆಸ್ನವರಿಗೆ ಬಿಜೆಪಿಯನ್ನಾಗಲೀ, ಮೋದಿಯನ್ನಾಗಲೀ ಟೀಕಿಸಲು ನೈತಿಕ ಹಕ್ಕಿಲ್ಲ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತಾರೆ ಎಂದು ಆರೋಪಿಸುತ್ತಾರೆ. ಆದರೆ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಅವರೇ ಸ್ಪಷ್ಟನೆ ನೀಡಿದ್ದಾರೆ ಎಂದರು.
ಸೋಲಿನ ಹತಾಶೆಯಿಂದ ಕಾಂಗ್ರೆಸ್ ನಾಯಕರು ವಿನಾಕಾರಣ ಏನೇನೋ ಬಡಬಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎನ್.ಮಹೇಶ ಆರೋಪಿಸಿದರು. ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ಅವರನ್ನು ಏಕವಚನದಲ್ಲಿ ಕರೆದಿರುವುದು, ಇನ್ನೋರ್ವ ಕಾಂಗ್ರೆಸ್ ಧುರೀಣ ರಾಜು ಕಾಗೆ ಮೋದಿ ಅವರ ಬಗ್ಗೆ ಅವಳಹೇಳನಕಾರಿ ಮಾತು ಹೇಳಿರುವುದು ಇದಕ್ಕೆ ಸಾಕ್ಷಿ ಎಂದರು. ಯುವಜನರು ಪ್ರೀತಿಯಿಂದ ಮೋದಿ- ಮೋದಿ ಎನ್ನುತ್ತಾರೆ. ಇದು ಹತ್ತು ವರ್ಷ ಸ್ವಚ್ಛ ಆಡಳಿತ ನೀಡಿ ವಿಶ್ವಾಸ ಗಳಿಸಿದ್ದರ ಫಲ ಎಂದರು.
ಸಂವಿಧಾನ ಬದಲಾಯಿಸಲು ಅದೇನು ಪಠ್ಯಪುಸ್ತಕವೇ ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್ ತುರ್ತು ಪರಿಸ್ಥಿತಿ ಸಮಯದಲ್ಲಿ ಸಂವಿಧಾನವನ್ನೇ ಅಮಾನತು ಮಾಡಿ ಅಪಚಾರವೆಸಗಿದೆ ಎಂದು ಆರೋಪಿಸಿದರು. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ವಿಡಿಯೋ ತುಣುಕುಗಳು ಅಂತರ್ಜಾಲದಲ್ಲಿ ಪ್ರಸಾರವಾಗದಂತೆ ನಿರ್ಬಂಧ ವಿಧಿಸಬೇಕೆಂದು ಮಹೇಶ್ ಒತ್ತಾಯಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.