ಬೆಂಗಳೂರು: ನಿಮಗೆ ಅರ್ಹತೆಯಿದ್ದರೆ ಸಿದ್ದರಾಮಯ್ಯರಿಂದ ಒಂದು ಶ್ಲೋಕ ಹೇಳಿಸಿ. ನಿಮ್ಮ ತಂದೆಯಿಂದ ಒಂದು ಶ್ಲೋಕ ಹೇಳಿಸಿ. ಆಮೇಲೆ ಜಗತ್ತಿಗೆ ಬುದ್ಧಿ ಹೇಳಲು ಬನ್ನಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಪ್ರಿಯಾಂಕ್ ಖರ್ಗೆಯವರಿಗೆ ಸವಾಲು ಹಾಕಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ, ವಿಚಾರಧಾರೆ ಮತ್ತು ಪರಂಪರೆಯ ಮೇಲೆ ಬೆಳೆದಿದೆ. ತಂದೆ ಹಾಕಿದ ಆಲದ ಮರದ ನೆರಳಲ್ಲಿ ಬೆಳೆದವರು ಬಿಜೆಪಿ ಕಾರ್ಯಕರ್ತರಲ್ಲ. ಪ್ರಿಯಾಂಕ್ ಖರ್ಗೆಗೆ ಯಾವ ಪರಿಶ್ರಮದ ಅನುಭವವೂ ಇಲ್ಲ. ಬರಿಯ ಭಗವದ್ಗೀತೆ ಅಲ್ಲ. ವೇದ, ಉಪನಿಷತ್ ಎಲ್ಲವನ್ನೂ ಕೂಡ ಮಾತನಾಡುವಂಥವರು ಬಿಜೆಪಿಯಲ್ಲಿ ಇದ್ದಾರೆ. ನಾನು ನೂರು ಶ್ಲೋಕಗಳನ್ನು ಹೇಳಬಲ್ಲೆ. ಪ್ರಿಯಾಂಕ್ ಖರ್ಗೆಯವರಿಗೆ ನಾನು ಸವಾಲೆಸೆಯುತ್ತೇನೆ ಎಂದು ನುಡಿದರು. ಅವರ ಬಾಲಿಶ ವರ್ತನೆಗೆ ಪ್ರತಿಕ್ರಿಯೆ ಕೊಡುವಂಥದ್ದು ಏನೂ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ಸಿನ ತುಷ್ಟೀಕರಣ ನೀತಿಯಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬೀಳುತ್ತಿದೆ. ಬೆಂಗಳೂರಿನ ವಿಜಯನಗರದಲ್ಲಿ ಅಯೋಧ್ಯೆ ರಾಮಮಂದಿರದ ಫೋಟೊ ಹಾಕಿದಾಗ, ಮೋದಿಯವರ ಭಾವಚಿತ್ರ ಇರುವ ಬ್ಯಾನರ್ ಹಾಕಿದಾಗ ಕೇಸು ಹಾಕುತ್ತಾರೆ. ಆದರೆ, ಪ್ರಿಯಕೃಷ್ಣ, ಕೃಷ್ಣಪ್ಪ ಅವರ ಫೋಟೊ ಇರುವ ಬ್ಯಾನರ್ಗಳು ರಾರಾಜಿಸುತ್ತಿವೆ ಎಂದು ಆಕ್ಷೇಪಿಸಿದರು.
ಒಂದು ಕಡೆ ಪ್ರಧಾನಿ ನರೇಂದ್ರ ಮೋದಿಯವರು ಸಮಾಜ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್ನ ತುಷ್ಟೀಕರಣ ನೀತಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ಸಿಗೆ ಅಧಿಕಾರ ಸಿಕ್ಕಿದಲ್ಲೆಲ್ಲ ಇದು ಪರಾಕಾಷ್ಠೆಯನ್ನು ಮುಟ್ಟುತ್ತಿದೆ ಎಂದು ನುಡಿದರು.
ರಾಜ್ಯದಲ್ಲಿ ಮುಸ್ಲಿಂ ಮಹಿಳೆಯರಿಗೆ ಸುರಕ್ಷತೆ ಇಲ್ಲವೇ ಇಲ್ಲ. ಮುಸ್ಲಿಂ ಮಹಿಳೆಯರು ಯಾರೊಬ್ಬರ ಜೊತೆಗೂ ಸೌಹಾರ್ದ, ಸೌಜನ್ಯದಿಂದ ಬದುಕಲೇ ಬಾರದು ಎಂಬ ಭಯವನ್ನು ಬಿತ್ತಲಾಗುತ್ತಿದೆ. ಇದೊಂದು ಮೋಡೆಸ್ ಅಪರೆಂಡಿ. ಇತ್ತೀಚೆಗೆ ಮುಸ್ಲಿಂ ಮಹಿಳೆಯರು ಪರಿಚಯಸ್ಥರು, ಅಣ್ಣ ತಮ್ಮಂದಿರು ಅಥವಾ ಆತ್ಮೀಯರ ಜೊತೆಗೆ ಎಲ್ಲೋ ಹೋಗುತ್ತಿದ್ದರೆ, ಕುಳಿತಿದ್ದರೆ ದಾಳಿಗಳಾಗುತ್ತಿವೆ. ಇಂಥ 10-15 ಘಟನೆಗಳು ಕರ್ನಾಟಕದಲ್ಲಿ ನಡೆದಿವೆ ಎಂದು ಪಿ.ರಾಜೀವ್ ಅವರು ವಿವರಿಸಿದರು.
ಬುರ್ಖಾ ಹಾಕಿದ ಮಹಿಳೆ ಎಲ್ಲೋ ಹೋಗುತ್ತಿದ್ದರೆ, ಕುಳಿತಿದ್ದರೆ ತಕ್ಷಣಕ್ಕೆ ಡಿ.ಕೆ.ಶಿವಕುಮಾರರ ಬ್ರದರ್ಸ್ 20-30 ಜನ ಒಟ್ಟಾಗುತ್ತಾರೆ. ನಂತರ ಮುಸ್ಲಿಂ ಮಹಿಳೆಯ ಮೇಲೂ ಹಲ್ಲೆ ಮಾಡುತ್ತಾರೆ. ನಿರಪರಾಧಿ ಮೇಲೂ ಹಲ್ಲೆ ಮಾಡುತ್ತಾರೆ. ಹಾವೇರಿ, ಬೆಳಗಾವಿ ಸೇರಿ ಎಲ್ಲ ಕಡೆ ಇದು ಸಾಮಾನ್ಯ ಎನಿಸಿಬಿಟ್ಟಿದೆ ಎಂದು ವಿಶ್ಲೇಷಿಸಿದರು. ಇದರ ಹಿಂದೆ ದೊಡ್ಡ ಷಡ್ಯಂತ್ರ ಕೆಲಸ ಮಾಡುತ್ತಿದೆ. ಆ ಷಡ್ಯಂತ್ರ ಹುಟ್ಟಲು ಕಾಂಗ್ರೆಸ್ ಪಕ್ಷದ ತುಷ್ಟೀಕರಣ ಕಾರಣ ಎಂದು ಟೀಕಿಸಿದರು.
ದೇಶ ಒಗ್ಗಟ್ಟಾಗುವುದು, ಜಗತ್ತು ಸಂಭ್ರಮಿಸುವುದನ್ನು ಕಾಂಗ್ರೆಸ್ ನಾಯಕರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ತಾಳ್ಮೆ ಕಳಕೊಂಡಿದ್ದರ ಫಲವಾಗಿ ರಾಜಣ್ಣನಂಥವರು, ಪ್ರಿಯಾಂಕ್ ಖರ್ಗೆ ಅಂಥವರು ಈ ರೀತಿ ವರ್ತನೆ ಮಾಡುತ್ತಾರೆ. ಅವರು ಹೀಗೆ ಮಾತನಾಡುತ್ತಿದ್ದು, ನಾನು ಇದನ್ನು ಖಂಡಿಸುತ್ತೇನೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.