ಅಯೋಧ್ಯಾ: ಜನವರಿ 22ರಂದು ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯುವ ಸಮಯದಲ್ಲಿ ಅಯೋಧ್ಯೆಯಲ್ಲಿ ಲಂಗರ್ (ಅನ್ನಸಂತರ್ಪಣೆ) ಆಯೋಜಿಸಲು ನಿಹಾಂಗ್ ಬಾಬಾ ಫಕೀರ್ ಸಿಂಗ್ ಖಾಲ್ಸಾ ಅವರ ವಂಶಸ್ಥರಾದ ಜತೇದಾರ್ ಬಾಬಾ ಹರ್ಜಿತ್ ಸಿಂಗ್ ಅವರು ಅನುಮತಿ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಬಾ ಹರ್ಜಿತ್ ಸಿಂಗ್, ನಾವು ಸನಾತನ ಧರ್ಮದ ಭಾಗವಾಗಿದ್ದೇವೆ. ಇದೇ ನಮ್ಮ ಧರ್ಮ. ಅದನ್ನು ಜೀವಂತವಾಗಿಡಲು ನಾವು ಶ್ರಮಿಸಿದ್ದೇವೆ ಎಂದಿದ್ದಾರೆ. ಅಲ್ಲದೇ 2024 ರ ಜನವರಿ 22 ರಂದು ರಾಮಲಲ್ಲಾನಿಗಾಗಿ ರಾಮಮಂದಿರದಲ್ಲಿ ನಡೆಯುವ ಪ್ರತಿಷ್ಠಾಪನೆಯನ್ನು ಒಟ್ಟಿಗೆ ಆಚರಿಸುವಂತೆ ಅವರು ಹಿಂದೂಗಳು ಮತ್ತು ಸಿಖ್ಖರನ್ನು ವಿನಂತಿಸಿದ್ದಾರೆ.
ಸನಾತನ ಧರ್ಮ ಮತ್ತು ಸಿಖ್ ಧರ್ಮದಲ್ಲಿ ಸಮಾನ ನಂಬಿಕೆ ಹೊಂದಿರುವುದಾಗಿ ಹೇಳಿಕೊಳ್ಳುವ ಹರ್ಜಿತ್ ಸಿಂಗ್ ಅವರು, “ಸಿಖ್ ಮತ್ತು ಹಿಂದೂಗಳನ್ನು ವಿಭಜಿಸಲು ಪ್ರಯತ್ನಿಸುವ ಮೂಲಭೂತವಾದಿಗಳು ರಾಮ ಮಂದಿರವನ್ನು ಮರಳಿ ಪಡೆಯುವ ಸಂದರ್ಭದಲ್ಲಿ ದಾಖಲಾದ ಮೊದಲ ಎಫ್ಐಆರ್ ಹಿಂದೂಗಳ ವಿರುದ್ಧ ಅಲ್ಲ ಸಿಖ್ ಗುಂಪಿನ ವಿರುದ್ಧ ಎಂದು ತಿಳಿಯಬೇಕು. ನಾನು ನಿಹಾಂಗ್ಗಳು ಮತ್ತು ಸನಾತನ ಧರ್ಮದ ನಡುವಿನ ಸಂಪರ್ಕವನ್ನು ಕಾಪಾಡಿಕೊಂಡಿದ್ದಕ್ಕೆ ಟೀಕೆಗಳನ್ನು ಎದುರಿಸಿದೆ. ನಾನು ಅಮೃತಧಾರಿ (ದೀಕ್ಷಾಸ್ನಾನ ಪಡೆದ ಸಿಖ್) ಮತ್ತು ರುದ್ರಾಕ್ಷಿಯ ಮಾಲೆಯನ್ನು ಧರಿಸುವವನು ಎಂದಿದ್ದಾರೆ.
ಲಂಗರ್ ಸೇವೆ 2024 ರ ಜನವರಿ 10 ರಂದು ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ 2024 ರ ಅಂತ್ಯದವರೆಗೆ ಅದನ್ನು ಮುಂದುವರಿಸಲು ಪ್ರಯತ್ನಿಸುತ್ತೇವೆ ಎಂದು ಬಾಬಾ ಹರ್ಜಿತ್ ಸಿಂಗ್ ಹೇಳಿದ್ದಾರೆ.
ನಿಹಾಂಗ್ ಬಾಬಾ ಫಕೀರ್ ಸಿಂಗ್ ಖಾಲ್ಸಾ ಅವರು ನವೆಂಬರ್ 1858 ರಲ್ಲಿ 25 ನಿಹಾಂಗ್ ಸಿಖ್ಖರೊಂದಿಗೆ ವಿವಾದಿತ ಬಾಬ್ರಿ ಕಟ್ಟಡಕ್ಕೆ ನುಗ್ಗಿದ್ದರು. ನಿಹಾಂಗ್ ಸಿಖ್ಖರು ಭಗವಾನ್ ರಾಮನ ಜನ್ಮಸ್ಥಳದ ಮೇಲೆ ನಿರ್ಮಿಸಿದ ಮೊಘಲ್ ಮಸೀದಿಯ ಗೋಡೆಗಳ ಮೇಲೆ ‘ರಾಮ’ ಎಂದು ಬರೆದರು ಮತ್ತು ಅಲ್ಲಿ ಕೇಸರಿ ಧ್ವಜವನ್ನು ಹಾರಿಸಿದರು. 1858 ರ ನವೆಂಬರ್ 30 ರಂದು ಅವಧ್ ಪೊಲೀಸ್ ಠಾಣೆಯಲ್ಲಿ 25 ನಿಹಾಂಗ್ ಸಿಖ್ಗಳ ವಿರುದ್ಧ ಮಸೀದಿಯ ಅಧಿಕಾರಿಯ ಮುಅಜ್ಜೀನ್ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಲಾಯಿತು. ರಾಮ ಜನ್ಮಭೂಮಿ ಪ್ರಕರಣದಲ್ಲಿ ಹಿಂದೂಗಳ ಪರವಾಗಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಲ್ಲಿ, 1858 ರ ಘಟನೆಯನ್ನು ಉಲ್ಲೇಖಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.