ಭಾರತ -ಮಯನ್ಮಾರ್ ಬಾಂಧವ್ಯ ಆಗ್ನೇಯ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳೊಂದಿಗಿನ ಭಾರತದ ವಾಣಿಜಿಕ ಮತ್ತು ವ್ಯಾಪಾರ ಸಂಬಂಧಗಳ ವೃದ್ಧಿಗೆ ರಹದಾರಿಯಾಗಿದೆ. ವರ್ತಮಾನದ ಮಯನ್ಮಾರ್ ಅಸ್ಥಿರತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತವು ಅಲ್ಲಿನ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಆ ರಾಷ್ಟ್ರದ ಸಹಜತೆಯನ್ನು ಎದುರು ನೋಡುತ್ತಿದೆ ಎಂದೇ ಹೇಳಬಹುದು. ಭಾರತವು ಈಗಾಗಲೇ ಚಾಲ್ತಿಯಲ್ಲಿರುವ ಆಕ್ಟ್ ಈಸ್ಟ್ ಪಾಲಿಸಿಯ ಭಾಗವಾಗಿರುವ ಬೃಹತ್ ಯೋಜನೆಗಳನ್ನು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ದೃಷ್ಠಿ ನೆಟ್ಟಿದೆ. ಸದ್ಯದ ಮಟ್ಟಿಗೆ ಮಯನ್ಮಾರ್ ಪ್ರಕ್ಷುಬ್ದತೆಯತ್ತ ಸಾಗಿದೆ ಎಂದೇ ಹೇಳಬೇಕು. ಉತ್ತರ ಮತ್ತು ವಾಯುವ್ಯದಿಂದ ಬಂಡುಕೋರರ ಗುಂಪುಗಳು ದೇಶದ ಪ್ರಧಾನ ಕೇಂದ್ರಗಳನ್ನು ಆಕ್ರಮಿಸಿವೆ.
ಇತ್ತೀಚಿಗಿನ ಮಯನ್ಮಾರ್ ಬೆಳವಣಿಗೆಯನ್ನು ಮೂರು ದಿಶೆಗಳಲ್ಲಿ ವಿಶ್ಲೇಷಿಸಬಹುದಾಗಿದೆ. ಮಯನ್ಮಾರ್ ಬೆಳವಣಿಯನ್ನು ಏಕಮುಖವಾಗಿ ಯೋಚಿಸಿ, ಅದಕ್ಕೆ ಉತ್ತರ ಹುಡುಕುವುದು ಕಷ್ಟಸಾಧ್ಯ. ಮಯನ್ಮಾರ್ ಬೆಳವಣಿಗೆಯಲ್ಲಿ ಪ್ರಜಾಪ್ರಭುತ್ವಕ್ಕಾಗಿರುವ ನಾಗರಿಕರ ಕೂಗು ಒಂದೆಡೆಯಾದರೆ, ಜುಂಟಾ ಮಿಲಿಟರಿ ಆಡಳಿತದಿಂದ ಹೈರಾಣಾಗಿ ಶಸಸ್ತ್ರ ಯುದ್ಧದ ಹಾದಿಯನ್ನು ಹಿಡಿದ ಯುವಕರ ಪಡೆಯು ಇದೆ. ತ್ರಿ ಬ್ರದರಹುಡ್ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಈ ಗುಂಪು ಜುಂಟಾ ಪರಮಾಧಿಕಾರದಿಂದ ಮುಕ್ತಿಯನ್ನು ಬಯಸುತ್ತಿದೆ.
ಬಹಳ ಹಿಂದೆ ರಾಯ ಅನವರತನ ಕಾಲಘಟ್ಟದ ಮಯನ್ಮಾರ್ ಶ್ರೀಮಂತಿಕೆ ಉತ್ತುಂಗದಲ್ಲಿತ್ತು. 12 ನೇ ಶತಮಾನದಲ್ಲಿ ಈ ಪ್ರದೇಶದ ಮೇಲಾದ ಮಂಗೋಲಿಯನ್ನರ ಪ್ರಭಾವ ಒಂದರ್ಥದಲ್ಲಿ ಈ ಪ್ರಾಂತ್ಯವನ್ನು ಸಂಕುಚಿತೆಯಡೆಗೆ ಕೊಂಡೊಯ್ಯಿತೆ ಎಂಬ ಪ್ರಶ್ನೆ ಮೂಡುತ್ತದೆ. ಆಧುನಿಕ ಕಾಲಘಟ್ಟದಲ್ಲಿ ಈ ಪ್ರಾಂತ್ಯವು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದು ಮಾತ್ರವಲ್ಲದೆ ಹಲವು ಯುದ್ಧಗಳನ್ನು ಕಂಡಿತು, ವಸಾಹತುಶಾಹಿಯ ಕೊನೆ ಕಾಲಘಟ್ಟದಲ್ಲಿ ನಿರ್ಮಾಣಗೊಂಡ ಬರ್ಮಾ ರೋಡ್ ನಂತಹ ಬೃಹತ್ ಸಂಪರ್ಕ ಸೇತು ವಿಶ್ವಮಹಾಯುದ್ಧದಲ್ಲೂ ಪ್ರಧಾನ ಭೂಮಿಕೆ ವಹಿಸಿತ್ತು ಎಂಬುದು ಇಂದಿಗೆ ಇತಿಹಾಸ. ಬ್ರಿಟಿಷ್ ಸೇನೆ ಮತ್ತು ಜಪಾನ್ ಸೇನೆಯ ನಡುವಣ ಯುದ್ಧದಲ್ಲಿ ಮಯನ್ಮಾರ್ ರಣಭೂಮಿಯಾಗಿತ್ತು. ಇಂತಹ ಗತ ಇತಿಹಾಸದ ಮಜಲುಗಳು ಒಂದರ್ಥದಲ್ಲಿ ಮಯನ್ಮಾರನ್ನು ಹೊಸ ಪ್ರಜಾಪ್ರಭುತ್ವವಾದಿ ಆಲೋಚನೆಗಳಿಗೆ ತೆರೆಯಲು ಅಡ್ಡಿಪಡಿಸುತ್ತವೆ ಎಂದು ಹೇಳಬಹುದು. ಪ್ರಜಾಸತ್ತೆಯ ಬದಲಾಗಿ ಮಿಲಿಟರಿ ವ್ಯವಸ್ಥೆ, ಸೈನಿಕ ಶಕ್ತಿ ಮತ್ತು ಆಡಳಿತದ ಪ್ರಭಾವ ಇದ್ದರೆ ಮಾತ್ರವೇ ದೇಶವು ಸುರಕ್ಷಿತವಾಗಿರಬಹುದು ಎಂಬ ಭ್ರಮೆಯಲ್ಲಿ ಮಯನ್ಮಾರ್ ಇದ್ದಂತೆ ಭಾಸವಾಗುತ್ತದೆ. ಇಂದಿಗೂ ಮಯನ್ಮಾರ್ ಆಧುನಿಕತೆಗೆ ತೆರೆದುಕೊಂಡಿಲ್ಲ, ಯುವ ಮಂದಿಗೆ ಉದ್ಯೋಗವಿಲ್ಲ, ಆಧುನಿಕ ಸಂವಹನ ವ್ಯವಸ್ಥೆಗಳಿಲ್ಲ. ಹೀಗೆ ಏಷ್ಯಾದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಮಯನ್ಮಾರ್ ಒಂದು 20 ವರ್ಷ ಹಿಂದೆ ಇದೆ ಎಂದೆನ್ನಬಹುದು. ಭೌಗೋಳಿಕವಾಗಿ ಭಾರತದ ಈಶಾನ್ಯ ರಾಜ್ಯಗಳಿಗೆ ಅಂಟಿಕೊಂಡಿರುವ ಮಯನ್ಮಾರ್ ಭಾರತದ ಪ್ರಮುಖ ವ್ಯಾಪಾರಿ ಕೇಂದ್ರವೂ ಹೌದು. ಆ ದೇಶದಲ್ಲಿ ಆಗುತ್ತಿರುವ ವರ್ತಮಾನದ ಬೆಳವಣಿಗೆಗಳು ಭಾರತದ ಈಶಾನ್ಯ ರಾಜ್ಯಗಳಲ್ಲೂ ಪ್ರತ್ಯಕ್ಷ ಮತ್ತು ಪರೋಕ್ಷ ಪ್ರತಿಫಲನಕ್ಕೂ ಸಾಕ್ಷಿಯಾಗಿವೆ. ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ಮಿಜೋರಾಂ ರಾಜ್ಯಕ್ಕೆ ತಲುಪಿರುವ ಸುಮಾರು 5000 ಮಂದಿ ಬರ್ಮಾ ನಿರಾಶ್ರಿತರ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆಯನ್ನು ಅಲ್ಲೆಗಳೆಯುವಂತಿಲ್ಲ. ಈ ಹಿಂದೆ ಬಾಂಗ್ಲಾ ನಿರಾಶ್ರಿತರು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಜನಸಾಂದ್ರತೆಗೆ ದೊಡ್ಡ ಹೊಡೆತ ನೀಡಿದಂತೆ ಈ ಬೆಳವಣಿಗೆಯು ದೇಶದ ಅಭದ್ರತೆಗೂ ಕಾರಣವಾಗಬಹುದು. ಇತ್ತೀಚೆಗಷ್ಟೇ ಮೀಜೊರಾಂನಲ್ಲಿ ಆಶ್ರಯ ಪಡೆದವರಲ್ಲಿ ಅಲ್ಲಿನ ಜುಂಟಾ ಮಿಲಿಟರಿ ಪಡೆಯ 40 ಮಂದಿ ಸೈನಿಕರೂ ಇದ್ದು, ಭಾರತದ ಮಧ್ಯಸ್ಥಿಕೆಯಲ್ಲಿ ಅವರನ್ನು ಬಂಧಿಸಿ ಮಯನ್ಮಾರಿಗೆ ವಾಪಾಸು ಕಳುಹಿಸಲಾಗಿರುವ ಅಂಶ ಗಮನಾರ್ಹವಾಗಿದೆ.
ವರ್ತಮಾನದಲ್ಲಿ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯದ ಕೂಗಿನ ಬಂಡುಕೋರ ಸಮಸ್ಯೆ, ಪ್ರಜಾಪ್ರಭುತ್ವವಾದದ ಪರವಾದ ನಾಗರಿಕ ಕೂಗಿನ ಮಧ್ಯೆ ಮಯನ್ಮಾರಿನ ಜುಂಟಾ ಮಿಲಿಟರಿ ವ್ಯವಸ್ಥೆಯು ನಿಧಾನವಾಗಿ ತನ್ನ ಪಾರಮ್ಯ ಮತ್ತು ಪ್ರಭುತ್ವವನ್ನು ಕಳೆದುಕೊಳ್ಳುತ್ತಿರುವುದು ಒಂದರ್ಥದಲ್ಲಿ ಉತ್ತಮ ಬೆಳವಣಿಗೆಯಾದರೆ, ಚುನಾವಣೆಗಳ ಮೂಲಕ ಅಧಿಕಾರ ಪಡೆಯಬೇಕಾದ ಮತ್ತು ಈ ಹಿಂದೆ ಹಲವು ಆರೋಪಗಳ ಮೂಲಕ ಬಂಧಿತರಾಗಿ ಜೈಲುವಾಸ ಅನುಭವಿಸುತ್ತಿರುವ ದಿಟ್ಟ ಮಹಿಳೆ ಆಂಗ್ ಸಾನ್ ಸೂಕಿಯ ಬಿಡುಗಡೆಯು ಅಷ್ಟೇ ಮುಖ್ಯವಾಗುತ್ತದೆ. ಸಂಪೂರ್ಣ ಪ್ರಜಾಪ್ರಭುತ್ವಕ್ಕಾಗಿ ಹೋರಾಡಿ ಅಧಿಕಾರದ ಗದ್ದುಗೆಯಲ್ಲಿ ಕೂತು ಜನಪರ ಆಡಳಿತವನ್ನು ನೀಡಬೇಕಿದ್ದ ಆಂಗ್ ಸಾನ್ ಗೃಹ ಬಂಧನದಲ್ಲಿದ್ದಾರೆ. ದೇಶದ ಹಲವೆಡೆ ನಾಗರಿಕ ಪ್ರತಿಭಟನೆಗಳು ನಡೆಯುತ್ತಿರುತ್ತವೆ, ಅದೇ ರೀತಿ ಜುಂಟಾ ಆಡಳಿತವು ಪ್ರತಿಭಟನೆಗಳು ಮತ್ತು ನಾಗರಿಕ ಹೋರಾಟಗಳನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಜುಂಟಾ ಆಡಳಿತವನ್ನು ವಿರೋಧಿಸುವುದು ಬಿಡಿ, ಅದನ್ನು ವಿಮರ್ಶಿಸುವ ಅಧಿಕಾರವು ಯಾರಿಗೂ ಇಲ್ಲ ಎನ್ನುವಂತಾಗಿದೆ. ಮಯನ್ಮಾರಿನಲ್ಲಿ ಅತಿ ಹೆಚ್ಚು ಸಂಖ್ಯೆಯ ಪತ್ರಕರ್ತರು ಬಂಧನಕ್ಕೊಳಗಾಗಿದ್ದಾರೆ. ಇಡಿ ಪ್ರಪಂಚದಲ್ಲಿ ಅತಿ ಹೆಚ್ಚು ಪತ್ರಕರ್ತರ ಬಂಧನವಾಗಿದ್ದರೆ ಅದು ಮಯನ್ಮಾರಿನಲ್ಲಿ! ಪ್ರಸ್ತುತ ಅರಕ್ಕನ್ ಪ್ರದೇಶ ಸೇರಿದಂತೆ ಮಯನ್ಮಾರಿನ ಉತ್ತರ ಮತ್ತು ಪಶ್ಚಿಮದಲ್ಲಿ ಬಂಡುಕೋರರು ತಮ್ಮ ಪಾರಮ್ಯವನ್ನು ಹೆಚ್ಚಿಸಿದ್ದು ಸುಮಾರು 50% ಭೂಪ್ರದೇಶದ ಮೇಲೆ ತಮ್ಮ ಹಿಡಿತ ಸಾಧಿಸಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ ಚಿನ್ ಲ್ಯಾಂಡ್ ಎಂಬ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮತ್ತು ಹೋರಾಟಕ್ಕೂ ಭೂಮಿಕೆ ಹಾಕಲಾಗಿದೆ. ಇವೆಲ್ಲದರ ಮಧ್ಯೆ ಮಯನ್ಮಾರ್ ಉತ್ತರದಲ್ಲಿರುವ ಬಂಡುಕೋರ ಸಂಘಟನೆಗಳಿಗೆ ಚೀನಾದ ಸಹಾಯಹಸ್ತವಿದ್ದು ಅವರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ಬಗ್ಗೆ ಮಾಹಿತಿಯು ಉತ್ತಮ ಬೆಳವಣಿಗೆಯಲ್ಲ.
ಒಂದು ದೇಶ ಅಥವಾ ಪ್ರಾಂತ್ಯದಲ್ಲಿನ ಬದಲಾವಣೆಗಳಲ್ಲಿ ಮತ್ತೊಂದು ದೇಶದ ಸಹಕಾರ, ಪ್ರಭಾವ ಇದ್ದೇ ಇರುತ್ತದೆ. ಭಾರತದ ವಿದೇಶಾಂಗ ನೀತಿಯು ಸಮೀಪವರ್ತಿ ರಾಷ್ಟ್ರವಾದ ಮಯನ್ಮಾರಿನ ಮೇಲೆ ತಕ್ಕ ಮಟ್ಟಿನ ಪ್ರಭಾವವನ್ನು ಬೀರುತ್ತದೆ. 2002 ರ ಜುಂಟಾ ಮಿಲಿಟರಿ ಕಾಲಾವಧಿಯಲ್ಲಿಯೇ ಭಾರತದ ಮಹತ್ವಾಕಾಂಕ್ಷಿ ಅಂತಾರಾಷ್ಟ್ರೀಯ ರಸ್ತೆ ಯೋಜನೆಯು ಜ್ಯಾರಿಗೆ ಬಂದಿತ್ತು. 2012 ರಲ್ಲಿ ಈ ರಸ್ತೆ ಯೋಜನೆಯ ಕಾಮಗಾರಿಯು ಆರಂಭಗೊಂಡಿತ್ತು., ಇತ್ತೀಚೆಗೆ ಈ ಬಗ್ಗೆ ಮಾಹಿತಿ ನೀಡಿದ್ದ ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಈ ರಸ್ತೆ ನಿರ್ಮಾಣವು 70% ದಷ್ಟು ಪೂರ್ಣಗೊಂಡಿದೆ ಎಂದು ಹೇಳಿದ್ದರು. ಹೀಗೆ ದ್ವಿಪಕ್ಷೀಯ ಒಪ್ಪಂದಗಳಿಗೆ ಸಂಬಂಧಿಸಿದಂತೆ ಮಯನ್ಮಾರಿನ ಜುಂಟಾ ಮಿಲಿಟರಿ ಅಧಿಕಾರಿಗಳು ಭಾರತಕ್ಕೆ ಆಗಮಿಸಿ ಮಾತುಕತೆ ನಡೆಸಿದ್ದೂ ಇದೆ. ಇಂತಹ ಸಂದರ್ಭ ಅವರು ತಮ್ಮ ರಾಷ್ಟ್ರದ ಆಂತರಿಕ ವ್ಯವಸ್ಥೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಭಾರತಕ್ಕೆ ಮಯನ್ಮಾರ್ ರಾಜತಾಂತ್ರಿಕವಾಗಿ ಬಹಳ ಮುಖ್ಯವಾಗಿದೆ.
ಮಣಿಪುರದಲ್ಲಿ ಇತ್ತೀಚೆಗಷ್ಟೇ ನಡೆದ ಪ್ರಕ್ಷುಬ್ದ ವಾತಾವರಣ ಇಂದು ತಿಳಿಯಾಗುವತ್ತ ಸಾಗಿದೆ. ಮಣಿಪುರದ ಮೂಲಕ ಸಾಗುವ ಭಾರತದ ಮಹತ್ವಾಕಾಂಕ್ಷಿ ತ್ರಿರಾಷ್ಟ್ರ ಹೆದ್ದಾರಿಯು ಮೊರೆ ತಮು ಮೂಲಕ ಮಯನ್ಮಾರಿನ ಮಾಂಡಲೇ ನಗರಕ್ಕೆ ಸಂಪರ್ಕ ಕಲ್ಪಿಸಿ ನಂತರ ದಕ್ಷಿಣ ಮಯನ್ಮಾರಿನ ಬಗೋ ಮೂಲಕ ಥೈಲ್ಯಾಂಡನ್ನು ಸಂಪರ್ಕವೀಯುತ್ತದೆ.
ಆಗ್ನೇಯ ಏಷ್ಯಾ ರಾಷ್ಟ್ರಗಳತ್ತ ಉತ್ತಮ ಸಂಪರ್ಕ ಸೇವೆ ಮತ್ತು ವಾಣಿಜಿಕ ವ್ಯವಹಾರಕ್ಕೆ ಮಯನ್ಮಾರ್ ಪ್ರಮುಖ ಕೊಂಡಿಯಾಗಿದೆ. ಭಾರತದ ಅಂತಾರಾಷ್ಟ್ರೀಯ ರಸ್ತೆಯು ಥೈಲ್ಯಾಂಡ್ ಮಾತ್ರವಲ್ಲದೆ ಲಾವೋಸ್, ಕಾಂಬೋಡಿಯ ಸಹಿತ ವಿಯೆಟ್ನಾಂ ರಾಷ್ಟ್ರಗಳನ್ನು ಆರ್ಥಿಕ ಮತ್ತು ವಾಣಿಜಿಕವಾಗಿ ಮತ್ತಷ್ಟೂ ಸಮೀಪಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮಧ್ಯೆ ಮಯನ್ಮಾರಿನ ಆಂತರಿಕ ಸಮಸ್ಯೆಗಳು ಸದ್ಯದ ಮಟ್ಟಿಗೆ ಭಾರತಕ್ಕೂ ಸಂಕಷ್ಟವನ್ನು ಒಡ್ಡಿವೆ. 1935 ರ ತನಕ ಬ್ರಿಟಿಷ್ ಅಧೀನದಲ್ಲಿದ್ದ ಅಂದಿನ ಬರ್ಮಾ- ಮಯನ್ಮಾರ್ ನಂತರ 1948 ರಲ್ಲಿ ಸ್ವಾತಂತ್ರ ರಾಷ್ಟ್ರವಾಯಿತು. 1950 ರ ಸುಮಾರಿಗೆ ಭಾರತ ಮಯನ್ಮಾರ್ ಸಂಬಂಧಗಳು ತಕ್ಕ ಮಟ್ಟಿಗೆ ಜಟಿಲಗೊಂಡರೂ 1990 ರ ದಶಕದ ಲುಕ್ ಈಸ್ಟ್ ಪಾಲಿಸಿಯು ದ್ವಿರಾಷ್ಟ್ರ ಸಂಬಂಧಗಳನ್ನು ಸುಸ್ಥಿರತೆಗೆ ತರುವಲ್ಲಿ ಯಶಶ್ವಿಯಾಯಿತು, ಪ್ರಸ್ತುತ ಆಕ್ಟ್ ಈಸ್ಟ್ ಪಾಲಿಸಿಯು ಎರಡೂ ರಾಷ್ಟ್ರಗಳ ಸಂಬಂಧಗಳನ್ನು ಗಾಢವಾಗಿಸುವಲ್ಲಿಯ ತನಕ ಬೆಳೆದಿದೆ. 1962 ರಲ್ಲಿ ಜುಂಟಾ ಮಿಲಿಟರಿ ನಾಯಕ ಜನರಲ್ ಯು ನೆ ವಿನ್ ಅವರ ಮಿಲಿಟರಿ ದಂಗೆಯು ಅಲ್ಲಿನ ಸಂವಿಧಾನಿಕ ಪ್ರಜಾಸತ್ತೆಗೆ ದೊಡ್ಡ ಹೊಡೆತವನ್ನು ನೀಡಿತು ಮಾತ್ರವಲ್ಲ ಭಾರತ-ಮಯನ್ಮಾರ್ ಸಂಬಂಧಗಳು ಹಳಸಿದ್ದವು. ಇದೇ ಸಂದರ್ಭ ಜುಂಟಾ ಮಿಲಿಟರಿ ಆಡಳಿತ ವ್ಯವಸ್ಥೆಯನ್ನು ತನ್ನ ತೆಕ್ಕೆಗೆ ಪಡೆದಿದ್ದು ಮಾತ್ರವಲ್ಲದೆ ಭಾರತೀಯ ಮೂಲದವರನ್ನು ಗಡಿಪಾರು ಮಾಡಿತ್ತು. ಈ ಮಧ್ಯೆ ಭಾರತವು ರಾಜತಾಂತ್ರಿಕವಾಗಿ ಮಧ್ಯಮಮಾರ್ಗವನ್ನು ಅನುಸರಿಸಿ ಅಲ್ಲಿನ ಸರಕಾರಗಳೊಂದಿಗೆ ಪುನಃ ಸಂಬಂಧವನ್ನು ಬೆಳೆಸುವಲ್ಲಿ ಯಶಸ್ವಿಯಾಯಿತು. ಭಾರತವು ಅಂದಿನ ಪದಚ್ಯುತ ಪ್ರಧಾನಿಯಾಗಿದ್ದ ಆಂಗ್ ಸಾನ್ ಕುಟುಂಬಸ್ಥರಿಗೆ ಆಶ್ರಯ ನೀಡಿತ್ತು. ಜನಲರ್ ನೆ ವಿನ್ ಯಾವಾಗ ಆಂಗ್ ಅವರನ್ನು ಗಡಿಪಾರು ಮಾಡಿತೋ ಆಗ ಭಾರತವು ಅವರಿಗೆ ರಾಜಕೀಯ ಆಶ್ರಯ ನೀಡಿತ್ತು. ಇಷ್ಟು ಮಾತ್ರವಲ್ಲದೆ 1968,1970,1980 ರ ಕಾಲಾವಧಿಯಲ್ಲಿ ಜನರಲ್ ನೆ ವಿನ್ ಭಾರತಕ್ಕೆ ಆಗಮಿಸಿದ್ದರು, ಅದೇ ರೀತಿ ಪ್ರಧಾನಿ ಮನಮೋಹನ್ ಸಿಂಗ್ ಸಹಿತ ಭಾರತ ಪ್ರಧಾನಿ ನರೇಂದ್ರ ಮೋದಿ ಮಯನ್ಮಾರಿಗೆ ತೆರಳಿದ್ದರು.
ಚೀನಾ ನಡೆ
1950 ರ ನಂತರ ಚೀನಾ ಮತ್ತು ಮಯನ್ಮಾರ್ ಸಂಬಂಧಗಳು ಭಾರತವನ್ನು ಚಿಂತೆಗೆ ಈಡು ಮಾಡಿತ್ತು. ದಕ್ಷಿಣ ಏಷ್ಯಾ ರಾಷ್ಟ್ರಗಳೊಂದಿಗೆ ಚೀನಾ ಬೆಳೆಸಿಕೊಂಡ ಸ್ನೇಹ ಮತ್ತು ಈ ರಾಷ್ಟ್ರಗಳು ಚೀನಾದೊಂದಿಗೆ ವ್ಯವಹರಿಸುತ್ತಿದ್ದ ರೀತಿ ನವದೆಹಲಿಯನ್ನು ಯೋಚಿಸುವಂತೆ ಮಾಡಿತ್ತು. ಭಾರತದ ಪ್ರಭಾವವನ್ನು ಕಡಿಮೆ ಮಾಡುವಲ್ಲಿ ಚೀನಾ ಅನುಸರಿಸಿದ ಸ್ಟ್ರಿಂಜ್ ಆಫ್ ಪರ್ಲ್ಸ್ ಕಾರ್ಯತಂತ್ರವೂ ಇದರಲ್ಲೊಂದು. 1962 ರ ಸೈನೋ-ಇಂಡಿಯಾ ಯುದ್ಧದ ಸಮಯ ಮಯನ್ಮಾರ್ ತಟಸ್ಥ ನೀತಿಯನ್ನು ಅನುಸರಿಸಿತ್ತು ಎಂಬುದು ಇಲ್ಲಿ ಗಮನಿಸತಕ್ಕ ವಿಚಾರವಾಗಿದೆ. 1988 ರ ಸುಮಾರಿಗೆ ಭಾರತವು ಜುಂಟಾ ಮಿಲಿಟರಿ ಆಡಳಿತವನ್ನು ವಿಮರ್ಶೆ ನಡೆಸಿತ್ತು. ಹೀಗೆ ಮಯನ್ಮಾರ್ ಸುಮಾರು 2000 ಕಿ.ಮೀ ನಷ್ಟು ಉದ್ದದ ಗಡಿಯನ್ನು ಚೀನಾದೊಂದಿಗೆ ಹಂಚಿಕೊಂಡಿದೆ. ಚೀನಾದ ಪ್ರಮುಖ ವ್ಯಾಪಾರಿ ಕೇಂದ್ರವೆನಿಸಿರುವ ಮಯನ್ಮಾರ್ ನಲ್ಲಿ ಚೀನಾವು ದೊಡ್ಡ ಪ್ರಮಾಣದ ವಿದೇಶಿ ಹೂಡಿಕೆಯನ್ನು ಮಾಡಿದೆ. 26% ವಿದೇಶಿ ನೇರ ಹೂಡಿಕೆ ಮಾಡಿರುವ ಚೀನಾ ಮತ್ತು ಮಯನ್ಮಾರಿನ ವ್ಯಾಪಾರವು 2 ಬಿಲಿಯನ್ ಡಾಲರನಷ್ಟಿದೆ. ಭಾರತ ಮತ್ತು ಮಯನ್ಮಾರಿನ ದ್ವಿಪಕ್ಷೀಯ ವ್ಯಾಪಾರವು 2022ರಲ್ಲಿ 1 ಬಿಲಿಯನ್ ಡಾಲರಿನಷ್ಟಿತ್ತು. ಹೊಸ ಹೆದ್ದಾರಿಯು ಪೂರ್ಣಗೊಂಡಲ್ಲಿ ಸಂಪರ್ಕ ಸಾಧ್ಯತೆಗಳ ಮೂಲಕ ದ್ವಿರಾಷ್ಟ್ರಗಳ ವ್ಯಾಪಾರ ಮತ್ತು ವಾಣಿಜ್ಯಿಕ ಆರ್ಥಿಕತೆಯೂ ನಾಲ್ಕು ಪಟ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಭಾರತ-ಮಯನ್ಮಾರ್ ಸಂಬಂಧಗಳು
1990 ರ ಭೌಗೋಳಿಕ ರಾಜಕಾರಣದಿಂದ ಭಾರತಕ್ಕೆ ಮಯನ್ಮಾರ್ ರಾಜತಾಂತ್ರಿಕವಾಗಿ ಮತ್ತಷ್ಟೂ ಪ್ರಮುಖವಾಯಿತು. ಆಗ್ನೇಯ ಏಷ್ಯಾ ರಾಷ್ಟ್ರಗಳತ್ತ ಭಾರತದ ಆರ್ಥಿಕ ಸಂಬಂಧಗಳು ಉತ್ತಮವಾಯಿತು. ಸಂಬಂಧಗಳು ಯಥಾವತ್ತಾಗಿ ಇರಿಸಲು ಸಹಿತ ಸಾರಿಗೆ ಸಂಪರ್ಕಕ್ಕಾಗಿ ನವದೆಹಲಿಗೆ ಮಯನ್ಮಾರಿನ ಸಹಜತೆಯು ಇಂದಿಗೂ ಮುಖ್ಯವಾಗಿದೆ. 2011 ರಿಂದ 2021 ರ ತನಕದ ಮಯನ್ಮಾರಿನ ಅರೆ- ಪ್ರಜಾಪ್ರಭುತ್ವದ ಗುಣಲಕ್ಷಣವು ಭಾರತಕ್ಕೆ ಹೊಸ ಅವಕಾಶಗಳನ್ನು ನೀಡಿತ್ತು. ಇದೇ ಸಂದರ್ಭ ಚೀನಾದ ಹಲವು ಯೋಜನೆಗಳಿಗೆ ದೊಡ್ಡ ಹೊಡೆತವು ಸಿಕ್ಕಿತು. ಜುಂಟಾ ಮಿಲಿಟರಿ ವ್ಯವಸ್ಥೆಯ ಸಮರ್ಥಕ ರಾಷ್ಟ್ರ ಎನ್ನುವ ನಿಟ್ಟಿನಲ್ಲಿ ಮಯನ್ಮಾರಿನ ಜನಸಾಮಾನ್ಯರು ಚೀನಾದ ಬೃಹತ್ ಯೋಜನೆಗಳಿಗೆ ತಡೆಯೊಡ್ಡಿದರು. 2011 ರಲ್ಲಿ ಚೀನಾ ಹೂಡಿಕೆಯ 3.6 ಬಿಲಿಯನ್ ಡಾಲರ್ ಮೊತ್ತದ ಮಿಟ್ ಸೋನ್ ಅಣೆಕಟ್ಟು ಯೋಜನೆ ತಟಸ್ಥವಾಯಿತು. ದಶಕಗಳಿಂದ ಚೀನಾವು ಮಯನ್ಮಾರಿನ ಬಲು ದೊಡ್ಡ ಮಿಲಿಟರಿ ಶಸ್ತ್ರ ಪೂರೈಕೆಯ ರಾಷ್ಟ್ರವಾಗಿದೆ. 1990 ರಿಂದ ಭಾರತದ ಸಮೀಪವರ್ತಿ ರಾಷ್ಟ್ರಗಳಾದ ಪಾಕಿಸ್ಥಾನ, ಮಯನ್ಮಾರ್, ಬಾಂಗ್ಲಾದೇಶಗಳಿಗೆ ಚೀನಾ ನಿರ್ಮಿಸಿದ 60% ಶಸ್ತ್ರಗಳು ಪೂರೈಕೆಯಾಗಿವೆ.
ಮಯನ್ಮಾರಿನಲ್ಲಾಗುತ್ತಿರುವ ಆಂತರಿಕ ಸಂಘರ್ಷದ ಕಾರಣದಿಂದ ಇಂದು ಒಟ್ಟು 1 ರಿಂದ 2 ಲಕ್ಷ ಮಂದಿ ಅತಂತ್ರರಾಗಿದ್ದಾರೆ. ಮಯನ್ಮಾರಿನಲ್ಲಿರುವ ಭಾರತೀಯರಿಗೆ ಭಾರತ ಸರಕಾರವು ನಿರ್ದೇಶನ ನೀಡಿದ್ದು, ದಂಗೆಗ್ರಸ್ತ ಪ್ರದೇಶಗಳಿಗೆ ತೆರಳದಂತೆ ನಿರ್ದೇಶನ ನೀಡಿದೆ ಮಾತ್ರವಲ್ಲ ದೂತವಾಸ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸುವಂತೆ ಕೇಳಿಕೊಂಡಿದೆ. ಮಯನ್ಮಾರಿನ ದಕ್ಷಿಣ ಪ್ರಾಂತ್ಯದಲ್ಲಿದ್ದ ರೋಹಿಂಗ್ಯಾ ಮುಸಲ್ಮಾನರ ಮೇಲೆ ಇದೇ ಜುಂಟಾ ಅಥವಾ ಹುಂಟಾ ಮಿಲಿಟರಿ ಎಸಗಿದ ಕೃತ್ಯಗಳು ವಿಶ್ವಕ್ಕೆ ತಿಳಿದೇ ಇದೆ. ಮಯನ್ಮಾರಿನಿಂದ ಹೊರದೂಡಲ್ಪಟ್ಟ ಇದೇ ರೋಹಿಂಗ್ಯಾ ಸಮೂಹ ಇಂದು ಬಾಂಗ್ಲಾದೇಶ, ಭಾರತ ಸಹಿತ ದಕ್ಷಿಣ ಏಷ್ಯಾದ ಹಲವು ರಾಷ್ಟ್ರಗಳಿಗೆ ತಲೆನೋವಾಗಿ ಪರಿಣಮಿಸಿದೆ. ಹೆಚ್ಚಿನ ರೋಹಿಂಗ್ಯಾ ನಿರಾಶ್ರಿತರು ಸಮುದ್ರ ಮಾರ್ಗದ ಮೂಲಕ ಮಲೇಷ್ಯಾಗೂ ತೆರಳಿ ಆಶ್ರಯ ಪಡೆಯುತ್ತಿದ್ದಾರೆ. ಭಾರತದ ಕೆಲ ರಾಜ್ಯಗಳಲ್ಲಿ ಆಶ್ರಯ ಪಡೆದಿರುವ ಇವರು ಸ್ಥಳೀಯ ಜನಸಾಂದ್ರತೆಯ ಮೇಲೆ ದುಷ್ಪರಿಣಾಮ ಬೀರುವ ಆತಂಕವಿದೆ. ಸಮೀಪವರ್ತಿ ರಾಷ್ಟ್ರದಲ್ಲಿ ಆಗುತ್ತಿರುವ ಆಂತರಿಕ ರಾಜಕೀಯ ಬದಲಾವಣೆಗಳು ಭಾರತದ ಮೇಲೂ ದುಷ್ಪ್ರಭಾವ ಬೀರಿದೆ. ಭಾರತ ಮಯನ್ಮಾರ್ ಗಡಿ ಭಾಗದಲ್ಲಿರುವ ಹಲವು ಬಂಡುಕೋರ ಗುಂಪುಗಳು, ಇದರ ಮೂಲಕ ನಡೆಯುತ್ತಿರುವ ಅಕ್ರಮ ಮಾದಕ ದ್ರವ್ಯಗಳ ಸಾಗಾಟ, ವ್ಯಾಪಾರ, ಶಸ್ತ್ರಗಳ ಶೇಖರಣೆ ಮತ್ತು ಪೂರೈಕೆ ರಕ್ಷಣಾ ವ್ಯವಸ್ಥೆಗೂ ಸವಾಲಾಗಿ ಪರಿಣಮಿಸುವ ಸಾಧ್ಯತೆಗಳನ್ನು ಅಲ್ಲೆಗಳೆಯುವಂತಿಲ್ಲ, ಮಣಿಪುರದಲ್ಲಿ ಆದಂತಹ ಸಂಘರ್ಷಕ್ಕೂ ಮುನ್ನ ಇದೇ ಮಯನ್ಮಾರಿನ ಗಡಿ ಭಾಗವು ಕೆಲ ಬಂಡುಕೋರ ಸಂಘಟನೆಗಳಿಗೆ ಆಶ್ರಯ ನೀಡಿತ್ತು ಎಂಬುದು ಗಮನಿಸಬೇಕಾದ ಪ್ರಮುಖ ಅಂಶ. ಇಂದು ಮಿಜೋರಾಂ ನಿರಾಶ್ರಿತರ ವಲಸೆಯ ಆತಂಕವನ್ನು ಎದುರು ನೋಡುತ್ತಿದೆ.
ಈ ಮಧ್ಯೆ ನಾಗಾಲಿಮ್ ಎಂಬ ಪ್ರತ್ಯೇಕವಾದಿ ಸಂಘಟನೆಯು ವರ್ಷಗಳ ನಂತರ ಪುನಃ ಚಿಗುರೊಡೆದಂತೆ ಕಾಣುತ್ತಿದೆ. ಮಯನ್ಮಾರಿನ ವಾಯುವ್ಯ ಭಾಗ ಹಾಗೆಯೇ ಭಾರತದ ಈಶಾನ್ಯದಲ್ಲಿರುವ ನಾಗಾ ಪ್ರಾಬಲ್ಯವಿರುವ ಪ್ರದೇಶಗಳನ್ನು ಒಟ್ಟುಗೂಡಿಸಿ ಸ್ವತಂತ್ರ ನಾಗಾಲಿಮ್ ಪ್ರಾಂತ್ಯದ ಸ್ಥಾಪನೆ ಮಾಡಬೇಕು ಎಂಬುದು ಈ ಪ್ರತ್ಯೇಕವಾದಿ ಸಂಘಟನೆಯ ಪ್ರಮುಖ ಲಕ್ಷ್ಯವಾಗಿದೆ. ಮಯನ್ಮಾರಿನ ಜಟಿಲತೆಯ ಮಧ್ಯೆ 1980 ರ ದಶಕದ ಹಳೆಯ ನಾಗಾಲಿಮ್ ಪ್ರತ್ಯೇಕವಾದಿ ಸಂಘಟನೆಯೂ ಗಟ್ಟಿಯಾದರೆ ಭಾರತದ ಮೇಲೂ ಪ್ರತಿಕೂಲ ಪರಿಣಾಮವನ್ನು ಬೀರಬಹುದು. ಇದರ ಜೊತೆಜೊತೆಯಲ್ಲಿ ಮಣಿಪುರದಲ್ಲಿ ಎದ್ದಂತಹ ಸಂಘರ್ಷ ಜನಾಂಗೀಯ ಕಲಹ ಎಂದು ಮೇಲ್ನೋಟಕ್ಕೆ ಕಂಡರೂ ಅದರೊಳಗೆ ಮಿಷನರಿ ಚಟುವಟಿಕೆಗಳು, ಮಾದಕ ವಸ್ತುಗಳ ಜಾಲ, ಗಡಿಯಾಚೆಗಿನ ಶಸ್ತ್ರಾಸ್ತ್ರ ಪೂರೈಕೆಯಂತಹ ಸೂಕ್ಷ್ಮ ಅಂಶಗಳು ಒಂದರ ಜೊತೆಗೊಂದು ಬೆಸೆದುಕೊಂಡಿವೆ. ಭಾರತೀಯ ಸೇನೆಯು ಈ ಪ್ರದೇಶಗಳಲ್ಲಿ ಸೂಕ್ಷ್ಮ ದೃಷ್ಠಿಯನ್ನಿಟ್ಟುಕೊಂಡಿದ್ದು ಗಡಿಯಾಚೆಗಿನ ಅಕ್ರಮ ಚಟುವಟಿಕೆಗಳು ಸಹಿತ ಪ್ರಚೋದನೆಯನ್ನು ಹದ್ದುಬಸ್ತಿನಲ್ಲಿಟ್ಟಿದೆ.
ಭಾರತ ಸರಕಾರ ಮತ್ತು ಭಾರತದ ವಿದೇಶಾಂಗ ನೀತಿಯು ಹಿಂದಿಗಿಂತಲೂ ಇಂದು ಪ್ರಬಲವಾಗಿದೆ. ಮಯನ್ಮಾರ್ ನಲ್ಲಾಗುತ್ತಿರುವ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸಂದರ್ಭ ಒದಗಿದರೆ ಮಯನ್ಮಾರ್ ಬೆಳವಣಿಗೆಯನ್ನು ಕೈಗೆತ್ತಿಕೊಂಡು ಸರಿಯಾದ ದಿಶೆಯಲ್ಲಿ ಮುನ್ನಡೆಸುವ ಜಾಣ್ಮೆಯು ಭಾರತಕ್ಕಿದೆ. ಬಾಂಗ್ಲಾ ವಿಮೋಚನೆಯಲ್ಲಿ ಭಾರತ ಪಾತ್ರ ವಹಿಸಿದಂತೆ ಮಯನ್ಮಾರಿನ ಸಹಜತೆಗಾಗಿ ಭಾರತ ಏನು ಮಾಡಬಲ್ಲದು ಎಂಬುದನ್ನು ಕಾಲವೇ ಉತ್ತರಿಸಬಹುದಷ್ಟೇ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.