ಬೆಂಗಳೂರು: ಕಿಯೋನಿಕ್ಸ್ ಭ್ರಷ್ಟಾಚಾರ, ಕೆಇಎ ಪರೀಕ್ಷಾ ವ್ಯಾಪಕ ಅಕ್ರಮಕ್ಕೆ ಸಂಬಂಧಿಸಿ ಪ್ರಿಯಾಂಕ್ ಖರ್ಗೆಯವರು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಅವರು ಒತ್ತಾಯಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷಾ ಅಕ್ರಮ ಮತ್ತು ಇದರಲ್ಲಿ ಪ್ರಿಯಾಂಕ್ ಖರ್ಗೆಯವರ ಕಬಂಧ ಬಾಹುಗಳ ಕುರಿತು ಸಿಬಿಐ ತನಿಖೆ ಮಾಡಲು ಗೃಹ ಸಚಿವ ಪರಮೇಶ್ವರ್ ಅವರು ಶಿಫಾರಸು ಮಾಡಬೇಕು ಎಂದರು. ತಾವು ಪ್ರಾಮಾಣಿಕರಲ್ಲವೇ? ಹಾಗಿದ್ದರೆ ನೀವ್ಯಾಕೆ ಸಿಬಿಐ ತನಿಖೆಗೆ ಹಿಂದೇಟು ಹಾಕುತ್ತೀರಿ? ಎಂದು ಅವರು ವ್ಯಂಗ್ಯವಾಗಿ ಪ್ರಶ್ನಿಸಿದರು.
ರಾಜ್ಯದ ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಎಲ್ಲ ರಾಜಕೀಯ ಪಕ್ಷಗಳ ಬಗ್ಗೆ ದೊಡ್ಡದಾಗಿ ಮಾತನಾಡುವ ಪ್ರಿಯಾಂಕ್ ಖರ್ಗೆಯವರು ಇವತ್ತು ಈ ಎಲ್ಲ ವಿದ್ಯಮಾನಗಳ ಕೇಂದ್ರಬಿಂದು ವಿನಂತಿದ್ದಾರೆ ಎಂದು ಆರೋಪಿಸಿದರು. ಪ್ರಿಯಾಂಕ್ ಖರ್ಗೆ ಸಂಪೂರ್ಣ ಕರ್ತವ್ಯವಿಮುಖರಾಗಿದ್ದು, ಸಚಿವರಾಗಿ ಮುಂದುವರೆಯಲು ನೈತಿಕತೆ ಹೊಂದಿಲ್ಲ ಎಂದು ತಿಳಿಸಿದರು. ಬೇರೆ ಪಕ್ಷವನ್ನು ಲೀಡರ್ಲೆಸ್, ಕೇಡರ್ಲೆಸ್ ಪಾರ್ಟಿ ಅನ್ನುವ ನೀವು ಬೇಸ್ಲೆಸ್ ಮತ್ತು ಶೇಮ್ಲೆಸ್ ವ್ಯಕ್ತಿ ಎಂದು ಟೀಕಿಸಿದರು.
ಕಾಂಗ್ರೆಸ್ ಭ್ರಷ್ಟಾಚಾರದ ಕುರಿತು ಬಿಜೆಪಿ ಜನಜಾಗೃತಿ ಮೂಡಿಸಲಿದೆ. ನಾಗರಿಕರ ನ್ಯಾಯಾಲಯದಲ್ಲಿ ಇದನ್ನು ಬಿಜೆಪಿ ಪ್ರಶ್ನಿಸಲಿದೆ. ಇಡೀ ಅಕ್ರಮದ ಬಗ್ಗೆ ಬಿಜೆಪಿ ಪೋಸ್ಟರ್ ಬಿಡುಗಡೆ ಮಾಡುತ್ತಿದೆ ಎಂದರು. ಪರೀಕ್ಷೆಯಲ್ಲಿ ಹಿಜಾಬ್ ಧರಿಸಲು ಅವಕಾಶ ಕೊಡಲಾಗುತ್ತದೆ. ಇನ್ನೊಂದೆಡೆ ಪರೀಕ್ಷೆಗೆ ಬಂದ ಮಹಿಳೆಯರ ತಾಳಿ, ಕಾಲುಂಗುರ ತೆಗೆಸುತ್ತಾರೆ. ಹಿಂದುತ್ವ, ಹಿಂದೂ ಸಂಸ್ಕೃತಿಗೆ ಈ ಸರಕಾರ ಬೆಲೆ ಕೊಡುತ್ತಿಲ್ಲ ಎಂದು ಆಕ್ಷೇಪಿಸಿದರು. ಹಿಂದೂ ಮಹಿಳೆಯರ ಮಾಂಗಲ್ಯ ತೆಗೆಸುವ ದುಸ್ಸಾಹಸದ ಈ ಸರಕಾರದ ಮನಸ್ಥಿತಿ ಎಂಥದ್ದು ಎಂದು ಎಂ.ಜಿ.ಮಹೇಶ್ ಅವರು ಪ್ರಶ್ನಿಸಿದರು.
ಈ ಸರಕಾರಕ್ಕೆ ನಾಚಿಕೆ ಆಗಬೇಕು. ತಾಳಿ ತೆಗೆಸುವ ಮೂಲಕ ಸರಕಾರವು ರಾಜ್ಯದ ಹಿಂದೂಗಳ ಪರಿಸ್ಥಿತಿ ದುಸ್ಥಿತಿಗೆ ತಲುಪಿಸಿದ್ದರ ಸಂಕೇತ ಎಂದು ವಿಶ್ಲೇಷಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕಳೆದ ಆರು ತಿಂಗಳಿನಿಂದ ಭ್ರಷ್ಟಾಚಾರ ಎಂಬುದು ಒಂದು ಸೀಮೆ ಮೀರಿದ ವಿದ್ಯಮಾನವಾಗಿದೆ. ಕಿಯೋನಿಕ್ಸ್ ಎಂಡಿ, ಗುತ್ತಿಗೆದಾರರ ಬಳಿ ಸುಮಾರು 12 ಶೇಕಡಾ ಕಮಿಷನ್ಗಾಗಿ ಒತ್ತಾಯ ಮಾಡಿದ್ದಾರೆ. ಸರಕಾರವು ತನ್ನೆಲ್ಲ ಕರ್ತವ್ಯವನ್ನು ಲೂಟಿ ಮಾಡುವ ಕಡೆ ಗಮನ ಹರಿಸಿದಂತಿದೆ ಎಂದು ದೂರಿದರು. ಕಾಂಗ್ರೆಸ್ನಲ್ಲಿ ಗಜೆಟೆಡ್ ಹುದ್ದೆಗೆ ರೇಟ್ ನಿಗದಿಯಾಗಿದೆ. ಐಎಎಸ್ ಹುದ್ದೆಗಳು ಬಿಕರಿ ಆಗುತ್ತಿವೆ ಎಂದು ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಎಲ್ಲ ರಾಜಕೀಯ ಪಕ್ಷಗಳ ಬಗ್ಗೆ ದೊಡ್ಡದಾಗಿ ಮಾತನಾಡುವ ಪ್ರಿಯಾಂಕ್ ಖರ್ಗೆಯವರು ಇವತ್ತು ಈ ಎಲ್ಲ ವಿದ್ಯಮಾನಗಳ ಕೇಂದ್ರಬಿಂದುವಿನಂತಿದ್ದಾರೆ. ಗುಲ್ಬರ್ಗದ ಕೆಇಎ ಪರೀಕ್ಷೆಯ ಅಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಪ್ರಯತ್ನ ಪಟ್ಟಿದ್ದ ಆರ್.ಡಿ.ಪಾಟೀಲ್ ಪ್ರಮುಖ ಆರೋಪಿ. ಪರೀಕ್ಷೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಯಾರನ್ನು ಬೊಟ್ಟು ಮಾಡಿದರೋ ಆ ಆರ್.ಡಿ.ಪಾಟೀಲ್ಗೆ ಸರಕಾರವೇ ಕೃಪಾಪೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರಿಯಾಂಕ್ ಖರ್ಗೆ ಬಳಿಗೆ ಇದೆಲ್ಲವೂ ತಲುಪುತ್ತದೆ. ರಾಜ್ಯದ ಪರ್ಯಾಯ ಶಕ್ತಿಯಾಗಿ, ಬದಲಿ ಸಿಎಂ ಆಗಿ, ಎಐಸಿಸಿ ಅಧ್ಯಕ್ಷರ ನೆರಳಿನಂತೆ ಅವರು ವರ್ತಿಸುತ್ತಿದ್ದಾರೆ. ಘಟನೆ ನಡೆದ ಆರೇಳು ದಿನಗಳಾಗಿವೆ. ಆರ್.ಡಿ.ಪಾಟೀಲ್ ತಪ್ಪಿಸಿಕೊಳ್ಳಲು ಸರಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಟೀಕಿಸಿದರು.
ಇದಕ್ಕೆ ಗೃಹ ಸಚಿವ ಪರಮೇಶ್ವರ್ ಉತ್ತರಿಸಬೇಕಿತ್ತು. ಅವರ ಬದಲು ಪ್ರಿಯಾಂಕ್ ಖರ್ಗೆಯವರು ಉತ್ತರ ಕೊಡುತ್ತಿದ್ದಾರೆ. ಆರೋಪಿಗಳ ಸಂರಕ್ಷಣೆಯನ್ನು ಪ್ರಿಯಾಂಕ್ ಖರ್ಗೆಯವರು ಮಾಡುತ್ತಿದ್ದಾರೆ ಎಂದ ಅವರು, ಪ್ರಿಯಾಂಕ್ ಅವರು ಸಿಬಿಐ ತನಿಖೆ ಬೇಡ ಎಂದಿದ್ದು ಯಾಕೆ ಎಂದು ಪ್ರಶ್ನಿಸಿದರು. ಸಿಬಿಐ ತನಿಖೆ ಬೇಕೇ ಅಥವಾ ಬೇಡ ಎನ್ನಲು ನಿಮಗೆ ಯಾವ ಅಧಿಕಾರ ಇದೆ ಎಂದು ಕೇಳಿದರು. ಇದು ಗೃಹ ಸಚಿವರ ಕೆಲಸ. ನೀವ್ಯಾಕೆ ಸಿಬಿಐ ತನಿಖೆ ಬೇಡ ಎನ್ನುತ್ತೀರಿ ಎಂದು ಆಕ್ಷೇಪಿಸಿದರು.
ನಿಮ್ಮ ಸಚಿವಾಲಯದ ಸಂಗಪ್ಪ ಇವತ್ತು ಹಣ ಕೇಳುತ್ತಾರೆ. ಗುತ್ತಿಗೆದಾರರು ಇವತ್ತು ಸರಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸರಕಾರ 300 ಕೋಟಿ ಹಣಕ್ಕೆ ಕಮಿಷನ್ ಕೇಳಿದ್ದಾಗಿ ಹೇಳಿದ್ದಾರೆ. ಇದಕ್ಕೆ ಉತ್ತರದಾಯಿ ಗ್ರಾಮೀಣಾಭಿವೃದ್ಧಿ ಸಚಿವರಾದ ನೀವೇ ಅಲ್ಲವೇ? ಎಂದು ಕೇಳಿದರು. ಕಳೆದ 5 ತಿಂಗಳಿನಿಂದ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸೇರಿ ಸುಮಾರು 80 ಸಾವಿರ ಜನರಿಗೆ ನೀವು ಗೌರವಧನ ಕೊಡಲು ಪ್ರಯತ್ನಿಸಿಲ್ಲ ಎಂದು ಟೀಕಿಸಿದರು.
ಜಲಜೀವನ್ ಮಿಷನ್ ಹಣ ಕೊಡಲು ನಿಮಗೆ ಪುರುಸೊತ್ತಿಲ್ಲ. ಆದರೆ, ಕಿಂಗ್ಪಿನ್ಗಳ ರಕ್ಷಣೆ ಮಾಡಿ ಭ್ರಷ್ಟಾಚಾರಿಗಳನ್ನು ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ. ಕಲಬುರ್ಗಿ ಒಳಗಿನ ವಿದ್ಯಮಾನಗಳ ಬಗ್ಗೆ ನಿಮಗೆ ನೈತಿಕತೆ ಎಲ್ಲಿದೆ? ಎಂದು ಕೇಳಿದರಲ್ಲದೆ, ಆರ್.ಡಿ.ಪಾಟೀಲನ್ನು ಬೆಳೆಸಿ, ಪೋಷಿಸಿ ಸಂರಕ್ಷಿಸಿದ್ದು ಪ್ರಿಯಾಂಕ್ ಖರ್ಗೆ ಎಂದು ದೂರಿದರು. ಈ ಎಲ್ಲ ಪ್ರಕರಣಗಳ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಸಿದ್ದರಾಮಯ್ಯರ ಸರಕಾರ ಅತ್ಯಂತ ಭ್ರಷ್ಟ ಸರಕಾರ ಎಂದು ಆರೋಪಿಸಿದರು. ಎಲ್ಲ ಸಚಿವರು ರಣಹದ್ದುಗಳಂತೆ ಜನರನ್ನು ಲೂಟಿ ಮಾಡುತ್ತಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.