ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರ ರಾಜಕೀಯ ದ್ವೇಷದೊಂದಿಗೆ ಆಡಳಿತ ನಡೆಸುತ್ತಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾದ ಅಧ್ಯಕ್ಷ ಈರಣ್ಣ ಕಡಾಡಿ ಅವರು ಟೀಕಿಸಿದರು.
ಮೋರ್ಚಾದ ಪದಾಧಿಕಾರಿಗಳ ಜೊತೆ ಇಂದು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟ ಅವರು, ಬಂಧನದಲ್ಲಿರುವ ಕೋಲಾರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರನ್ನು ಭೇಟಿ ಮಾಡಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದರು. ಕೋಲಾರದ ಸಂಸದ ಮುನಿಸ್ವಾಮಿ ಅವರ ಮೇಲೂ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರನ್ನು ಬಂಧಿಸಿದ್ದಾರೆ ಎಂದು ಆಕ್ಷೇಪಿಸಿದರು. ಭಯದ ವಾತಾವರಣ ಮೂಡಿಸಲು ಕಾನೂನಿನ ದುರುಪಯೋಗ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮೊನ್ನೆ ನಾವು ಸರಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ. ರೈತ ವಿರೋಧಿ ನಿರ್ಣಯಗಳನ್ನು ಆಕ್ಷೇಪಿಸಿ ಪ್ರತಿಭಟನೆ ನಡೆದಿದೆ. ಅದರ ಮರುದಿನ ಕಾಂಗ್ರೆಸ್ ನೇತೃತ್ವದ ಸರಕಾರದ ಅಧಿಕಾರಿಗಳು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರೋಣೂರು ಹೋಬಳಿಯ ನಾರಮಾಕನಹಳ್ಳಿ ಗ್ರಾಮದ ರೈತರ ಮೇಲೆ ದೊಡ್ಡ ಪ್ರಮಾಣದ ದೌರ್ಜನ್ಯವನ್ನು ಮಾಡಿದ್ದಾರೆ. ನಾವು ಬಂಧಿತ ರೈತರನ್ನು ಭೇಟಿ ಮಾಡಿದ್ದೇವೆ ಎಂದರು.
3,850 ಎಕರೆ ಪ್ರದೇಶದಲ್ಲಿ ರೈತರು ಸಾಗುವಳಿ ಮಾಡಿ ಹೂಕೋಸು, ಮೆಣಸು, ಕ್ಯಾರೆಟ್ ಬೆಳೆದಿದ್ದರು. ಅಲ್ಲದೆ, ಹಲವಾರು ವರ್ಷಗಳಿಂದ ಮಾವಿನ ತೋಟ ಬೆಳೆಯುತ್ತಿದ್ದಾರೆ. ಸರಕಾರದ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ನುಗ್ಗಿ ಜೆಸಿಬಿ ಮೂಲಕ ಬೆಳೆ ನಾಶ ಮಾಡಿದ್ದಾರೆ. ಅದಲ್ಲದೆ, ಅಲ್ಲಿರುವ ರೈತರ ಮೇಲೆ ದೌರ್ಜನ್ಯ ಮಾಡಿ ಹಲವರನ್ನು ಬಂಧಿಸಿದ್ದಾರೆ. ಸುಮಾರು 3 ಕೇಸುಗಳನ್ನು ದಾಖಲಿಸಿ 150 ಜನರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. 15 ಜನರನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ತಂದಿಟ್ಟಿದ್ದಾರೆ ಎಂದು ವಿವರಿಸಿದರು.
ಕಳೆದ 20-30 ವರ್ಷಗಳಿಂದ ಅಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿತ್ತು. ಆ ಜಮೀನು ಅರಣ್ಯ ಇಲಾಖೆಯದು ಎಂದು ತಿಳಿಸಿ ದೌರ್ಜನ್ಯ ಮಾಡಿದ್ದಾರೆ. ಅದು ಅರಣ್ಯ ಇಲಾಖೆ ಜಮೀನೇ ಆಗಿದ್ದರೆ ಅದನ್ನು ಬೇಲಿ ಹಾಕಿ ರಕ್ಷಿಸುವ ಹೊಣೆಯೂ ಇಲಾಖೆಯದಾಗಿತ್ತು. 5-6 ಕೋಟಿ ಬೆಲೆ ಬಾಳುವ ತರಕಾರಿಯನ್ನು ಹಾನಿ ಮಾಡಿದೆ. ಗಂಡ, ಮನೆಯ ಪುರುಷರ ಬಂಧನದಿಂದ ಮನನೊಂದ ಅನೇಕ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದರು.
ಇದು ನಿಶ್ಚಿತವಾಗಿಯೂ ರೈತವಿರೋಧಿ ಸರಕಾರ ಎಂದು ಟೀಕಿಸಿದ ಅವರು, ಸಂಸದರಿಗೆ ಮನವಿ ನೀಡಲು ತೆರಳಿದ್ದ ಶಿಕ್ಷಕರೊಬ್ಬರನ್ನೂ ಬಂಧಿಸಿದ್ದಾರೆ. ಒಬ್ಬ ಅಂಗವಿಕಲನ ಮೇಲೂ ದೌರ್ಜನ್ಯ ಮಾಡಿ ಬಂಧಿಸಲಾಗಿದೆ. ಇದು ಪೂರ್ವಯೋಜಿತ ಹಲ್ಲೆ; ಬಿಜೆಪಿ ಸಂಸದರ ಜೊತೆ ಇರುವವರು, ಕಾರ್ಯಕರ್ತರಿಗೆ ಭಯ ಹುಟ್ಟಿಸುವ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸರಕಾರಕ್ಕೆ ಕಣ್ಣು, ಕಿವಿ ಇದ್ದರೆ ತಕ್ಷಣ ರಾಜ್ಯದ ಜವಾಬ್ದಾರಿಯುತ ಸಚಿವರು ಶ್ರೀನಿವಾಸಪುರದ ಆ ಹಳ್ಳಿಗೆ ಭೇಟಿ ಕೊಡಬೇಕು. ಗ್ರಾಮದಲ್ಲಿ ಭಯದ ವಾತಾವರಣ ಇದೆ. ಅದನ್ನು ಹೋಗಲಾಡಿಸಲು ಸಚಿವರು ತೆರಳಿ ಸಾಂತ್ವನ ಹೇಳಬೇಕು. ಸುಳ್ಳು ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಅಮಾಯಕರ ಮೇಲಿನ ಕೇಸು ಹಿಂಪಡೆಯಬೇಕು. ಇದೇರೀತಿ ದೌರ್ಜನ್ಯವನ್ನು ಮಾಡುತ್ತ ಮುಂದುವರೆದರೆ ರೈತರ ಮೇಲಿನ ದೌರ್ಜನ್ಯ ಖಂಡಿಸಿ ಶ್ರೀನಿವಾಸಪುರ ಚಲೋ ಕಾರ್ಯಕ್ರಮದನ್ನು ಬಿಜೆಪಿ ರೈತ ಮೋರ್ಚಾ ಮಾಡಲಿದೆ ಎಂದು ಎಚ್ಚರಿಸಿದರು. ಬಾರುಕೋಲು ಚಳವಳಿ ಮಾಡಲು ಸಿದ್ಧ ಎಂದು ತಿಳಿಸಿದರು. ಬೆಳೆಹಾನಿ ತುಂಬಿಸಲು ಪರಿಹಾರ ಕೊಡಿ ಎಂದು ಅವರು ಆಗ್ರಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.