ಉಡುಪಿ : ಇಷ್ಟರ ವರೆಗೆ ದಿನನಿತ್ಯದ ಕ್ರೈಂ ಎಫ್ಐಆರ್ ಅಪ್ಡೇಟ್, ಜಿಲ್ಲೆಯ ಪೊಲೀಸ್ ಠಾಣೆ ಮತ್ತು ಅಧಿಕಾರಿಗಳ ವಿವರ ಒಳಗೊಂಡಿದ್ದ ಉಡುಪಿ ಜಿಲ್ಲಾ ಪೊಲೀಸ್ ವೆಬ್ಸೈಟ್ www.udupipolice.blogspot.in ಅನ್ನು ಬದಲಾಯಿಸಲಾಗಿದೆ. ಸಕಲ ಮಾಹಿತಿ ಒಳಗೊಂಡಿರುವ ವೆಬ್ ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ರೂಪುಗೊಂಡು www.udupipolice.org ಚಾಲನೆಗೊಂಡಿದೆ.
ಉಡುಪಿ ಜಿಲ್ಲಾ ಎಸ್ಪಿ ಅಣ್ಣಾಮಲೈ ಕೆ. ಅವರು ಬುಧವಾರ ಉಡುಪಿಯ ಪೊಲೀಸ್ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನೂತನ ಪೊಲೀಸ್ ವೆಬ್ಸೈಟಿಗೆ ಚಾಲನೆ ನೀಡಿ ವಿಷಯ ತಿಳಿಸಿದರು.
ಹೆಚ್ಚುವರಿ ಎಸ್ಪಿ ಸಂತೋಷ್ ಕುಮಾರ್, ಕಾರ್ಕಳ ಎಎಸ್ಪಿ ಡಾ| ಸುಮನಾ ಡಿ.ಪಿ., ಉಡುಪಿ ಡಿವೈಎಸ್ಪಿ ಕೆ.ಎಂ. ಚಂದ್ರಶೇಖರ್ ಉಪಸ್ಥಿತರಿದ್ದರು. ವೆಬ್ಸೈಟ್ ಮತ್ತು ಆ್ಯಪ್ ಅನ್ನು ವಿನ್ಯಾಸಗೊಳಿಸಿದ ಉಡುಪಿಯ ಚಿಪ್ಸಿ ಸಂಸ್ಥೆಯ ತಂತ್ರಜ್ಞರನ್ನು ಎಸ್ಪಿ ಅವರು ಅಭಿನಂದಿಸಿದರು.
ವೆಬ್ನಲ್ಲಿ ಏನೇನಿರಲಿದೆ ಅಂದರೆ…
ಉಡುಪಿ ಜಿಲ್ಲೆಯ ಈಗಿನ ಮತ್ತು ಹಿಂದಿನ ಎಲ್ಲ ಎಸ್ಪಿಯವರ ಭಾವಚಿತ್ರ ವಿವರ, ಪದಕ ಪುರಸ್ಕೃತರ ಪಟ್ಟಿ, ಜಾಗೃತಿ ವೀಡಿಯೋ, ಗ್ಯಾಲರಿ, ಸರ್ಕ್ನೂಲರ್, ಕಾಣೆಯಾದ ವ್ಯಕ್ತಿಗಳ ಭಾವಚಿತ್ರ ಸಹಿತ ಸಂಪೂರ್ಣ ವಿವರ, ಪೊಲೀಸ್ ಅಧಿಕಾರಿಗಳ ವಿವರ, ಸಾಧನೆಗಳ ಪಟ್ಟಿ, ಠಾಣಾ ವ್ಯಾಪ್ತಿಯ ಗ್ರಾಮಗಳ ವಿವರ, ಕಾನೂನು ಸುವ್ಯವಸ್ಥೆ ಮಾಹಿತಿ, ಟ್ರಾಫಿಕ್ ರೂಲ್ಸ್, ಟ್ರಾಫಿಕ್ ದಂಡಗಳ ವಿವರ, ಪೊಲೀಸ್ ವಿಭಾಗಗಳ ಮಾಹಿತಿ ಇರುತ್ತದೆ. ಪತ್ರಕರ್ತರಿಗಾಗಿ ನಿತ್ಯದ ಕ್ರೈಂ ಸುದ್ದಿಗಳ ವಿವರ, ಪ್ರಸ್ ರಿಲೀಸ್, ಪೊಲೀಸರ ಕಾರ್ಯಕ್ರಮ, ಸರ್ಕ್ನೂಲರ್ ಅಪ್ಡೇಟ್ ಆಗುತ್ತಲಿರುತ್ತದೆ. ಎಮರ್ಜೆನ್ಸಿ ಸುದ್ದಿಗಳನ್ನು ಕೂಡ ಹಾಕಲಾಗುತ್ತದೆ. ಇನ್ನೆರಡು ದಿನದಲ್ಲಿ ಪೂರ್ಣ ಪ್ರಮಾಣದಲ್ಲಿ ವೆಬ್ಸೈಟ್ ಕಾರ್ಯನಿರ್ವಹಿಸಲಿದೆ ಎಂದು ಅಣ್ಣಾಮಲೈ ಹೇಳಿದರು.
ಸಾರ್ವಜನಿಕ ಸೇವೆಗಳು:
ಸಾರ್ವಜನಿಕರ ಫೀಡ್ಬ್ಯಾಕ್, ದೂರು ಸಲ್ಲಿಕೆಗೆ ಅವಕಾಶವಿದೆ. ಪಾಸ್ಪೋರ್ಟ್ ಸಂಬಂಧಿತ ಸೇವೆಗಳ ಎಲ್ಲ ವಿವರಗಳಿವೆ. ಆರ್ಟಿಐ ಕಾಯ್ದೆಯ ಅಂಶಗಳು ಮತ್ತು ಇಲಾಖೆಯ ಸಕಾಲ ಸೇವೆಯ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಪಾರದರ್ಶಕವಾಗಿ ನೂತನ ವೆಬ್ಸೈಟಿನಲ್ಲಿ ಅಳವಡಿಕೆ ಮಾಡಲಾಗಿದೆ ಎಂದರು.
ಉತ್ತಮ ಸೇವೆಯಲ್ಲಿ “ಸುರಕ್ಷಾ ಆ್ಯಪ್’
ಆ್ಯಂಡ್ರಾಯ್ಡ ಮೊಬೈಲಿನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾದ ಸುರಕ್ಷಾ ಪೊಲೀಸ್ ಆ್ಯಪ್ಗೆ ಈವರೆಗೆ 460ಕ್ಕೂ ಮಿಕ್ಕಿ ದೂರುಗಳು ಬಂದಿದೆ. ಇಲ್ಲಿಂದ ಹೊರದೇಶಕ್ಕೆ ಹೋದವರು ಕೂಡ ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಕೆಲ ದೂ ಸಲ್ಲಿಸಿದ್ದಾರೆ. ಸುರಕ್ಷಾ ಆ್ಯಪ್ ಇನ್ನು ಮುಂದಕ್ಕೆ ಆ್ಯಪಲ್ ಐಒಎಸ್ ವರ್ಸನ್ನಲ್ಲಿಯೂ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಆ್ಯಪ್ ಅನ್ನು ಸುಧಾರಣೆ ಮಾಡಲಾಗಿದ್ದು, ಅಪಘಾತದ ಸಂದರ್ಭ ಯಾವ ಪೊಲೀಸ್ ಠಾಣೆಗೆ ಸಂಬಂಧಿಸಿದ ಸ್ಥಳ ಮತ್ತು ಆಯ ಪೊಲೀಸ್ ಠಾಣೆಯ ದೂರವಾಣಿ ಮತ್ತು ಅಧಿಕಾರಿಯ ಮೊಬೈಲ್ ಸಂಖ್ಯೆ ತಿಳಿಯಲಿದೆ. ಆ್ಯಪ್ನಿಂದಲೇ ಪೊಲೀಸರಿಗೆ ಕರೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ನೇವಿಗೇಶನ್ ಮೂಲಕ ಠಾಣೆಯ ಮಾರ್ಗವನ್ನೂ ಗುರುತಿಸಬಹುದಾಗಿದೆ. ಪ್ರವಾಸಿಗರಿಗೆ ಇದರಿಂದ ತುಂಬಾ ಅನುಕೂಲತೆ ಇದೆ ಎಂದರು ಎಸ್ಪಿ.
ಕ್ರೈಂ ಅಪ್ಡೇಟ್ 2 ಹೊತ್ತಿಗೆ ಇಳಿಕೆ
ಈ ಹಿಂದೆ ಚಾಲ್ತಿಯಲ್ಲಿದ್ದ ಪೊಲೀಸ್ ವೆಬ್ಸೈಟಿನಲ್ಲಿ ಜಿಲ್ಲೆಯ ಎಲ್ಲ ಠಾಣೆಗಳಲ್ಲಿ ದಾಖಲಾದ ಪ್ರತಿದಿನದ ಎಫ್ಐಆರ್ ವಿವರಗಳನ್ನು ಬೆಳಗ್ಗೆ 7, ಸಂಜೆ 5 ಮತ್ತು ರಾತ್ರಿ 7.30ಕ್ಕೆ ಅಪ್ಡೇಟ್ ಮಾಡಲಾಗುತ್ತಿತ್ತು. ಹೊಸ ವೆಬ್ಸೈಟಿನಲ್ಲಿ ಇನ್ನು ಮುಂದಕ್ಕೆ ಬೆಳಗ್ಗೆ 8.30 ಮತ್ತು ರಾತ್ರಿ 7 ಗಂಟೆಗೆ ಮಾತ್ರ ಅಪ್ಡೇಟ್ ಮಾಡಲಾಗುವುದು. ಹಿಂದಿನ ವೆಬ್ಸೈಟ್ ಕೆಲವೇ ದಿನಗಳಲ್ಲಿ ಸ್ಥಗಿತಗೊಳ್ಳಲಿದೆ ಎಂದು ಎಸ್ಪಿಯವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.