ಇತ್ತೀಚಿನ ಕೆಲವು ವರ್ಷಗಳವರೆಗೂ ಹಿಂದುತ್ವದ ಪರವಾಗಿ ಮಾತನಾಡುವುದು ಅಥವಾ ಬರೆಯುವುದು ಅದೊಂದು ಅಕಡೆಮಿಕ್ ಸ್ವರೂಪದ ಚಟುವಟಿಕೆ ಎಂದು ಪರಿಗಣಿಸುವ ಮನಸ್ಥಿತಿ ಇದ್ದಿರಲಿಲ್ಲ.ಹಿಂದುತ್ವವನ್ನು ವಿರೋಧಿಸುವ ಎಡಪಂಥೀಯ ಸೆಕ್ಯುಲರ್ವಾದಿಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ,ಪ್ರಮುಖ ವಿಚಾರಗೋಷ್ಠಿಗಳಲ್ಲಿ ವ್ಯಕ್ತಪಡಿಸುತ್ತಿದ್ದ ನಿಂದನೆಗಳನ್ನೇ ಅಕಡೆಮಿಕ್ ವಲಯದಲ್ಲಿ ವೈಭವೀಕರಿಸಲಾಗುತ್ತಿತ್ತು.ಅದೇ ಹೊತ್ತಿಗೆ ಹಿಂದುತ್ವವಾದಿ ಹಿನ್ನೆಲೆಯ ವ್ಯಕ್ತಿಗಳ ಮಾತುಗಳನ್ನು ಕೇವಲ ಭಾವೋದ್ರೇಕದ ಮಾತುಗಳೆಂಬಂತೆ ನಗಣ್ಯವಾಗಿಸಲಾಗುತ್ತಿತ್ತು.
ಆದರೆ ಈಗ ಕಾಲ ಬದಲಾಗುತ್ತಿದೆ.ಎಡಪಂಥೀಯ ಸೆಕ್ಯುಲರ್ವಾದಿಗಳ ಮಾತು, ಬರಹಗಳ ಪೊಳ್ಳುತನವೆಲ್ಲಾ ಬಟಾಬಯಲಾಗಿದೆ ಮಾತ್ರವಲ್ಲ,ಹಿಂದುತ್ವದ ಕುರಿತಾದ ಚರ್ಚೆಗಳು, ಬರವಣಿಗೆಗಳು ಅಕಡೆಮಿಕ್ ಸ್ವರೂಪವನ್ನೂ ಪಡೆದುಕೊಂಡಿದೆ. ಅದು ಕೇವಲ ಭಾವೋದ್ವೇಗದ ಮಾತುಗಳಾಗಿಲ್ಲ. ಸಂಶೋಧನೆಯ ಎಲ್ಲಾ ಮಾನದಂಡಗಳನ್ನೂ, ಮಾದರಿಗಳನ್ನೂ ಒಳಗೊಂಡೇ ಪ್ರಕಟವಾಗುತ್ತಿದೆ. ಆಧಾರ ಸಹಿತ ತರ್ಕಬದ್ಧವಾದ ಈ ವಿಚಾರ ಸರಣಿಯಿಂದ ಮುಂದಿನ ದಿನಗಳಲ್ಲಿ ಸೆಕ್ಯುಲರ್ವಾದದ ಮುಖವಾಡ ತೊಟ್ಟವರನ್ನು ನಿರುದ್ಯೋಗಿಗಳನ್ನಾಗಿಸಿದರೆ ಅಚ್ಚರಿ ಏನಿಲ್ಲ.ಪ್ರಬುದ್ಧವಾದ, ತಾರ್ಕಿಕವಾದ ಅಧ್ಯಯನದ ಈ ಪರಂಪರೆಗೆ ಡಾ.ಅಜಕ್ಕಳ ಗಿರೀಶ್ ಭಟ್ ಅವರ “ಬಹುವಚನಕ್ಕೊಂದೇ ತತ್ವ: ಏಕತ್ವ-ಅನೇಕತ್ವಗಳ ಹಿಂದುತ್ವ” ಕೃತಿಯೂ ಸೇರಿಕೊಳ್ಳುತ್ತದೆ(ಪ್ರಕಾಶನ-ಸಾಹಿತ್ಯ ಪ್ರಕಾಶನ,ಹುಬ್ಬಳ್ಳಿ). ಸ್ವಾತಂತ್ರ್ಯಾ ನಂತರದ ಎಪ್ಪತ್ತೈದು ವರ್ಷಗಳಲ್ಲಿ ನಮ್ಮ ಅಕಡೆಮಿಕ್ ವಲಯವು ವಸಾಹತುಶಾಹಿ ಆಡಳಿತ ತನ್ನ ಅನುಕೂಲಕ್ಕಾಗಿ ರೂಪುಗೊಳಿಸಿದ ಲೋಕದೃಷ್ಟಿಯನ್ನೇ ಮುಖವಾಡವಾಗಿ ತೊಟ್ಟುಕೊಂಡು ಬಂದ ಎಡಪಂಥೀಯ ಸೆಕ್ಯುಲರ್ವಾದಿಗಳ ವಾದಗಳ ಮಿತಿಯನ್ನು ಅರಿತುಕೊಳ್ಳಬೇಕಾದರೆ ಈ ಕೃತಿಯು ನಮಗೊಂದು ಮಾರ್ಗಸೂಚಿಯಾಗಬಲ್ಲುದು. ಧರ್ಮ ಮತ್ತು ರಿಲಿಜನ್ಗಳ ಭಾಷಾಂತರದ ಸಮಸ್ಯೆಯೇ ನಮ್ಮ ಭೌದ್ದಿಕ ಜಗತ್ತಿನ ಸಮಸ್ಯೆಯ ಮೂಲವೂ ಹೌದು. ರಿಲಿಜನ್ ಪರಿಕಲ್ಪನೆಯನ್ನು ಧರ್ಮಕ್ಕೆ ಸಂವಾದಿಯಾಗಿ ಬಳಸಿದ ಪರಿಣಾಮ ಇಸ್ಲಾಂ, ಕ್ರಿಶ್ಚಿಯಾನಿಟಿಗಳನ್ನು ಹಿಂದೂ ಎನ್ನುವ ಜೀವನ ವಿಧಾನದ ಜತೆಗೆ ಸಮೀಕರಿಸಲಾಯಿತು. ಈ ತಪ್ಪು ಗ್ರಹಿಕೆಯೇ ನಮ್ಮ ಚರ್ಚೆಯನ್ನು ಹಾದಿ ತಪ್ಪಿಸಿತು. ಏಕರೂಪವನ್ನು ಬಯಸುವ ರಿಲಿಜನ್ಗೂ, ಬಹುತ್ವವನ್ನೇ ಆಶಯವನ್ನಾಗಿ ಹೊಂದಿದ ಹಿಂದುತ್ವಕ್ಕೂ ಭಿನ್ನತೆ ಇದೆ. ಹಿಂದುತ್ವದ ವಿಶಾಲ ಚೌಕಟ್ಟನ್ನು ಅರ್ಥಮಾಡಿಕೊಳ್ಳುವುದಕ್ಕೂ ಈ ತಪ್ಪು ಭಾಷಾಂತರ ಸಮಸ್ಯೆಯಾಯಿತು. ದೇವರು ‘ಗಾಡ್’ ಆದುದು, ಪುರೋಹಿತರು ‘ಪ್ರೀಸ್ಟ್ ‘ ಆದುದು ಒಂದೆಡೆಯಾದರೆ, ಸಂಸ್ಕಂತ-ಪ್ರಾಕೃತ,ವೈದಿಕ-ಶೂದ್ರ,ಆರ್ಯ-ದ್ರಾವಿಡ ಎಂಬ ಪರಸ್ಪರ ವಿರುದ್ಧ ಸಂಗತಿಗಳೆಂಬಂತೆ ಬಿಂಭಿಸಲಾಯಿತು.ಚಲನಶೀಲತೆ ಮತ್ತು ಬಹುತ್ವವು ಹಿಂದುತ್ವದ ಬಹುಮುಖ್ಯ ಲಕ್ಷಣ ಎನ್ನುವುದನ್ನು ಮರೆಗೆ ಸರಿಸಿ, ಋಣಾತ್ಮಕವಾಗಿಯೇ ತೋರಿಸಲಾಯಿತು. ಇದಕ್ಕೆ ಮುಖ್ಯ ಕಾರಣಗಳಲ್ಲಿ ನಾವು ಅನುಸರಿಸಿದ ಸೆಕ್ಯುಲರಿಸಂನ ಮಾದರಿಯೂ ಒಂದು.ಯಾವುದು ಬೆಸೆಯುವ ಕ್ರಿಯೆಯಾಗಬೇಕಾಗಿತ್ತೋ, ಅದು ಪ್ರತ್ಯೇಕತಾ ಭಾವೋದ್ದೀಪನದ ಕಿಡಿಯಾಯಿತು.
ಹಿಂದುಗಳ ಜೀವನ ದರ್ಶನ ಒಳಗೊಳ್ಳುವಿಕೆಯ ಮಾದರಿಯದ್ದೇ ಹೊರತು ಸೆಕ್ಯುಲರಿಸಂ ಪ್ರತಿಪಾದಿಸಿದ ಮಾದರಿಯ ಸಹಿಷ್ಣತೆಯದ್ದಲ್ಲ. ಸೆಕ್ಯುಲರಿಸಂನ ಹೆಸರಿನಲ್ಲಿ ಹಿಂದುತ್ವವಾದಿಗಳನ್ನು ಮೂಲಭೂತವಾದಿಗಳೆಂಬಂತೆ ತೋರಿಸಲಾಯಿತು. ವಾಸ್ತವದಲ್ಲಿ ಹಿಂದುತ್ವದೊಳಗಿರುವ ಎಲ್ಲರನ್ನೂ ಒಳಗೊಳ್ಳುವ ಸಹಜವಾದ ಸೆಕ್ಯುಲರಿಸಂನ್ನು ಗೌಣವಾಗಿಸಿ,ಎಡಪಂಥೀಯ ಸೆಕ್ಯುಲರ್ವಾದಿಗಳು ಪ್ರತಿಪಾದಿಸುತ್ತಿರುವ ಪ್ರತ್ಯೇಕತಾಭಾವದ ಸೆಕ್ಯುಲರಿಸಂನ್ನು ವೈಭವೀಕರಿಸಲಾಯಿತು.ಹಿಂದುತ್ವಕ್ಕೆ ಬಹುತ್ವದ ಬಗೆಗೆ ಆತಂಕವಿಲ್ಲ, ವಿಜ್ಞಾನ, ಸಾಮಾಜಿಕ ಸುಧಾರಣೆಗಳ ಕುರಿತು ಸಂಘರ್ಷವಿಲ್ಲ.ಆದರೆ ಎಡಪಂಥೀಯ ಸೆಕ್ಯುಲರ್ವಾದಿಗಳು ಮುಸ್ಲಿಮರನ್ನು ರಿಲಿಜನ್ ಕೋಟೆಯೊಳಗಿಂದ ಹೊರಬರದಂತೆ ಕಾವಲು ಕಾಯುವ ಕೆಲಸವನ್ನು ಮಾಡುತ್ತಿದ್ದಾರೆ. ಹೊಸತನಕ್ಕೆ ತೆರೆದುಕೊಳ್ಳಬೇಕೆಂದು ಬಯಸುವ ಮುಸ್ಲಿಮರನ್ನು ಯಾವತ್ತೂ ಬೆಂಬಲಿಸದ, ಮುಸ್ಲಿಂ ಸಮುದಾಯದ ಸುಧಾರಣಾವಾದಿಗಳು ಮುಸ್ಲಿಮರ ಪ್ರತಿನಿಧಿಗಳಲ್ಲ ಎಂಬ ತಿರಸ್ಕಾರದ ಭಾವವೇ ಈ ಸೆಕ್ಯುಲರ್ವಾದಿಗಳಲ್ಲಿ ಇರುವುದನ್ನು ಆಧಾರಗಳ ಸಹಿತವಾಗಿ ಈ ಕೃತಿಯಲ್ಲಿ ಮಂಡಿಸುತ್ತಾರೆ.
ಮೈನಾರಿಟಿಗೆ ಹೆಚ್ಚಿನ ಅನುಕೂಲಗಳು ಹಾಗೂ ಹಕ್ಕುಗಳನ್ನು ಒದಗಿಸಬೇಕೆನ್ನುವ ಎಡಪಂಥೀಯ ಸೆಕ್ಯುಲರ್ವಾದಿಗಳ ಓಲೈಕೆಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೆಕ್ಯುಲರಿಸಂ ಎನ್ನುವುದು ಅಲ್ಪಸಂಖ್ಯಾತರ ಪರವಾದ ನೀತಿ ಎಂಬಂತೆ ನಡೆದುಕೊಳ್ಳುವ ಮನಸ್ಥಿತಿಯ ಪೊಳ್ಳುತನವನ್ನು ಎತ್ತಿತೋರಿಸುತ್ತಾರೆ.ನೆಹರೂ ಸೇರಿದಂತೆ ಆಧುನಿಕ ಭಾರತದ ಬುದ್ಧಿಜೀಗಳು ಸುಧಾರಣೆಗೆ ತೆರೆದುಕೊಳ್ಳದ ಇಸ್ಲಾಂನ ಮನಸ್ಥಿತಿಯ ಕುರಿತಾಗಿ ತಾಳಿದ ನಿಲುವು ವ್ಯಂಗ್ಯವಾಗಿಯೇ ಕಾಣುತ್ತದೆ. ಬಹುಸಂಖ್ಯಾತ ಹಿಂದೂ ಭಾರತವು ಸೆಕ್ಯುಲರ್ ಆಗಿ ಉಳಿದುದರ ಹಿಂದಿದ್ದ ಭಾರತದ ಸೆಕ್ಯುಲರ್ ಮನಸ್ಥಿತಿಯನ್ನು ಹೇಳುತ್ತಲೇ, ಇಲ್ಲಿನ ರಾಷ್ಟ್ರವಾದವು ಬಹುತ್ವವುಳ್ಳ ಸಾಂಸ್ಕೃತಿಕ ಏಕಸೂತ್ರತೆಯನ್ನು ಆಧರಿಸಿರುವುದರಿಂದ ಅದು ರಿಲಿಜಿಯಸ್ ರಾಷ್ಟ್ರವಾದವಲ್ಲ ಎನ್ನುವುದನ್ನು ಸ್ಪಷ್ಟವಾಗಿ ಗುರುತಿಸುತ್ತಾರೆ. ರಿಲಿಜಿಯಸ್ ರಾಷ್ಟ್ರವಾದವನ್ನು ಮೊದಲು ಪ್ರತಿಪಾದಿಸಿದ ಸಯ್ಯದ್ ಅಹಮ್ಮದ್ ಖಾನ್, ಜಿನ್ನಾ ಮೊದಲಾದವರು ಪರಿಭಾವಿಸಿದಂತೆ, ಹಿಂದೂ ರಾಷ್ಟ್ರೀಯತೆಯನ್ನು ರಿಲಿಜಿಯಸ್ ಎಂದೇ ತಪ್ಪಾಗಿ ಗ್ರಹಿಸಿದ ಚಿಂತಕರು ಇಲ್ಲಿನ ಬಹುತ್ವವುಳ್ಳ ಕಲ್ಪನೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಹೇಗೆ ವಿಫಲರಾದರು ಎನ್ನುವುದನ್ನು ವಿಶ್ಲೇಶಿಸಲಾಗಿದೆ.ವಾಸ್ತವದಲ್ಲಿ ಬಹುತ್ವವನ್ನು ಉಳಿಸಿಕೊಳ್ಳಬಹುದಾದ ಏಕೈಕ ತತ್ವವೇ ಹಿಂದುತ್ವ. ಸಹಬಾಳ್ವೆಗೆ ಹೊಂದುವ ತತ್ವಗಳು ಇರುವುದು ಹಿಂದುತ್ವದಲ್ಲಿಯೇ, ಬಹುತ್ವಕ್ಕೆ ಇನ್ನೊಂದು ಹೆಸರೇ ಹಿಂದುತ್ವ ಎನ್ನುವುದನ್ನು ಸೆಕ್ಯುಲರ್ ಮುಖವಾಡ ತೊಟ್ಟವರು ಅರಿತುಕೊಳ್ಳದೇ ಹೋದದ್ದು ದುರಂತ. ಸಾವರ್ಕರ್ ಮತ್ತು ಅಂಬೇಡ್ಕರ್ ಇಬ್ಬರಿಗೂ ತಥ್ಯವಾಗಿ ಕಂಡ ವಿಚಾರಗಳನ್ನು ವಿವರಿಸುತ್ತಲೇ, ಸಯ್ಯದ್ ಅಹಮ್ಮದ್ ಖಾನ್ ಬಿತ್ತಿದ ದ್ವಿರಾಷ್ಟ್ರ ಸಿದ್ಧಾಂತದ ಹೊರೆಯನ್ನು ಸಾವರ್ಕರ್ ಹೆಗಲಿಗೇರಿಸಿದ ಎಡಪಂಥೀಯರ ಸುಳ್ಳುಗಳ ಸರಮಾಲೆಯನ್ನು ನಿದರ್ಶನಗಳ ಸಹಿತ ವಿವರಿಸುತ್ತಾರೆ.ಇಸ್ಲಾಂನ ಪ್ರತ್ಯೇಕತಾವಾದದ ಮೂಲ ಬೇರುಗಳನ್ನು ಚೆನ್ನಾಗಿಯೇ ಅರಿತಿದ್ದ ಅಂಬೇಡ್ಕರ್, ಈ ಮನಸ್ಥಿತಿಯು ಹೇಗೆ ಪ್ರಜಾಪ್ರಭುತ್ವಕ್ಕೆ ಮತ್ತು ಸಹಬಾಳ್ವಗೆ ಅಡ್ಡಿಯಾಗಬಹುದೆನ್ನುವುದನ್ನು ಗಂಭೀರವಾಗಿ ಯೋಚನೆ ಮಾಡಿಯೇ ಹೇಳಿದ್ದರು. ಹೀಗಿದ್ದರೂ ಎಡಪಂಥೀಯ ಸೆಕ್ಯುಲರ್ವಾದಿಗಳಲ್ಲಿ ಈ ವಿಷಯವನ್ನು ವಿಮರ್ಶಿಸುವ ಗೋಜಿಗೆ ಹೋಗಲಾರದಷ್ಟು ವೈಚಾರಿಕ ದುರ್ಬಲತೆಯಿದೆ.
ಇದೇ ದೌರ್ಬಲ್ಯ ಭಾರತೀಯ ಪ್ರಗತಿಪರ ಸಾಹಿತಿ, ಚಿಂತಕರಲ್ಲೂ ಪ್ರತಿಫಲಿತವಾಗುತ್ತದೆ. ಸಂವಿಧಾನ ಎಲ್ಲರಿಗೂ ಪವಿತ್ರ ಗ್ರಂಥವೇ. ಹಿಂದುಗಳಿಗೆ ಸಂವಿಧಾನದ ಚೌಕಟ್ಟಿನೊಳಗೆ ಬದುಕಲು ಅವರ ಧಾರ್ಮಿಕ ನಂಬಿಕೆ, ನಡವಳಿಕೆಗಳು ಅಡ್ಡಿಯಾಗುವುದಿಲ್ಲ. ಹೀಗಿದ್ದರೂ ಸಂವಿಧಾನ ಮತ್ತು ರಿಲಿಜಿಯಸ್ ಪವಿತ್ರ ಗ್ರಂಥಗಳ ನಡುವೆ ಸಂಘರ್ಷ ಬಂದಾಗ ಎಲ್ಲರಿಗೂ ಸಂವಿಧಾನವೇ ಆಧ್ಯತೆಯಾಗಬೇಕೇ ಹೊರತು ರಿಲಿಜಿಯಸ್ ಗ್ರಂಥವಲ್ಲ ಎನ್ನುವ ವಿಷಯದಲ್ಲಿ ನಮ್ಮ ಬುದ್ಧಿಜೀವಿಗಳ ನಿಲುವು ಅನುಮಾನಾಸ್ಪದವಾಗಿ ಇರುವುದರ ಕುರಿತು ಬಹುಮುಖ್ಯವಾದ ಪ್ರಶ್ನೆಯನ್ನು ಈ ಕೃತಿ ಎತ್ತುತ್ತದೆ.
ಮುಸ್ಲಿಮರ ಆಧುನಿಕೀಕರಣವನ್ನೇ ನಿರುತ್ತೇಜನಗೊಳಿಸುವಂತಿರುವ ಎಡಪಂಥೀಯ ಸೆಕ್ಯುಲರ್ವಾದಿಗಳೇ ಭಾರತದ ಹಿಂದೂ-ಮುಸ್ಲಿಂ ಐಕ್ಯತೆಗೆ, ಜೊತೆಗೂಡಿದ ಮುನ್ನಡೆಗೆ ಅಡ್ಡಿಯಾಗಿರುವುದನ್ನು ಗುರುತಿಸುತ್ತಾರೆ. ಮತೀಯ ಮೂಲಭೂತವಾದದಿಂದ ಹುಟ್ಟಿದ ಭಯೋತ್ಪಾದನೆಯನ್ನು, ಅದು ಭಯೋತ್ಪಾದನೆ ಎಂದೂ ಒಪ್ಪಲು ಸಿದ್ದರಿಲ್ಲದ ಸೆಕ್ಯುಲರ್ ಚಿಂತಕರಿದ್ದಲ್ಲಿ, ಮತ್ತೆ ಭಯೋತ್ಪಾದಕರ ಅಗತ್ಯವಿಲ್ಲ ಎನ್ನುವ ಮಾತು ಉತ್ಪ್ರೇಕ್ಷೆಯಲ್ಲ,ಸೆಕ್ಯುಲರಿಸಂಗೆ ಹಿಡಿದ ಕನ್ನಡಿಯಾಗಿದೆ.
ನಮ್ಮ ವಿಶ್ವವಿದ್ಯಾಲಯಗಳು, ಅದರಲ್ಲೂ ಇಲ್ಲಿನ ಸಮಾಜ ವಿಜ್ಞಾನ ಸಂಶೋಧನೆಗಳು ಎಷ್ಟೊಂದು ಬರಡಾಗಿದೆ,ಅವುಗಳ ಥಿಯರಿಗಳು ಇನ್ನೂ ವಸಾಹತುಶಾಹಿ ಮನಸ್ಥಿತಿಯಿಂದ ಬಳಲುತ್ತಿದೆ ಎನ್ನುತ್ತಲೇ, ಎಡಪಂಥೀಯ ಸೆಕ್ಯುಲರ್ವಾದಿಗಳಿಗೆ ಭಾರತೀಯ ದೃಷ್ಟಿ ನಷ್ಟವಾದುದರ ಒಟ್ಟು ಪರಿಣಾಮ ಭಾರತಕ್ಕಾದ ನಷ್ಟ ಅಪಾರವಾದುದು. ಐಕ್ಯತೆಯು ಅರ್ಥವಾಗದ ಈ ಮನಸ್ಥಿತಿಗಳು ಸದಾ ಪ್ರತ್ಯೇಕತೆಯಲ್ಲಿ, ವೈರುಧ್ಯದಲ್ಲಿ ಸಂಭ್ರಮಿಸುತ್ತಿರುವುದನ್ನು ಹದಿನೈದು ಅಧ್ಯಾಯಗಳುಳ್ಳ ಈ ಕೃತಿ ಸೋದಾಹರಣವಾಗಿ ವಿಮರ್ಶಿಸಿದೆ. ಕನ್ನಡ ಬೌದ್ಧಿಕ ಜಗತ್ತಿಗೆ ಹೊಸದೊಂದು ಅರಿವಿನ ಹರಿವು ಈ ಕೃತಿಯ ಮೂಲಕವಾಗಿದೆ.ಈ ಕುರಿತು ಇನ್ನಷ್ಟು ವಿಸ್ತಾರವಾದ ಚರ್ಚೆಗಳು,ಸಂವಾದಗಳು ನಡೆಯುವಂತಾದರೆ ಜಡ್ಡುಗಟ್ಟಿದ ನಮ್ಮ ಬೌದ್ಧಿಕ ಜಗತ್ತಿನಲ್ಲಿ ಒಂದು ಸಣ್ಣ ಕಂಪನವಾದರೂ ಆಗಬಹುದು.
✍️ಡಾ. ರೋಹಿಣಾಕ್ಷ ಶಿರ್ಲಾಲು
ಸಹಾಯಕ ಪ್ರಾಧ್ಯಾಪಕರು
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.