ಬೆಂಗಳೂರು: ಬಿಜೆಪಿ ನಡೆಸುವ ಎಸ್ಸಿ, ಎಸ್ಟಿ ಸಮಾವೇಶಗಳಲ್ಲೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಪ್ರತಿದಿನ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಬಿಜೆಪಿ ಸ್ವಂತ ಬಲದಲ್ಲಿ, ಬಹುಮತ ಪಡೆದು ಸರಕಾರ ರಚಿಸಲಿದೆ. ಲಕ್ಷಾಂತರ ಕಾರ್ಯಕರ್ತರ ಆಸೆ- ಅಭಿಲಾಷೆಗಳಿಗೆ ಪ್ರಾತಿನಿಧ್ಯದ ರೂಪದಲ್ಲಿ ಬಹುಮತ ಪಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಮನ್ಮ್ಯಾನ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸರಕಾರ ಮೀಸಲಾತಿಯನ್ನು ಹೆಚ್ಚಿಸುವ ಮೂಲಕ ಇತಿಹಾಸ ಬರೆದಿದೆ. 10 ವರ್ಷಕ್ಕೆ ಒಮ್ಮೆಯಾದರೂ ಮೀಸಲಾತಿ ಪ್ರಗತಿ ಪರಿಶೀಲನೆ ಆಗಬೇಕೆಂದು ಡಾ. ಅಂಬೇಡ್ಕರ್ ಅವರೇ ಹೇಳಿದ್ದರು. ಆದರೆ, 60 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷವು ರಾಜ್ಯ- ಕೇಂದ್ರದಲ್ಲಿ ಈ ಕೆಲಸ ಮಾಡಿರಲಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಪ್ರಗತಿಯ ದಾರಿ, ವಿಶ್ಲೇಷಣೆ, ಚರ್ಚೆ ಮಾಡಲೇ ಇಲ್ಲ. ಇದು ಈ ದೇಶದ ಎಸ್ಸಿ, ಎಸ್ಟಿ, ಒಬಿಸಿ, ಸಾಮಾನ್ಯ ಜನರ ದುರಂತ ಎಂದ ಅವರು, ಬೊಮ್ಮಾಯಿಯವರು ಅದನ್ನು ವಿಶ್ಲೇಷಣೆ ಮಾಡಿದರು. ವಿವಿಧ ಆಯೋಗಗಳ ವರದಿಯನ್ನು ಜಾರಿಗೊಳಿಸುವ ಗೋಜಿಗೇ ಕಾಂಗ್ರೆಸ್ ಸರಕಾರ ಹೋಗಿರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬೊಮ್ಮಾಯಿಯವರು ಜೇನುಹುಟ್ಟಿಗೂ ಕೈ ಹಾಕಿ ಅದರ ಸಿಹಿಯನ್ನು (ಜೇನು) ಸಮಾಜಕ್ಕೆ ಕೊಟ್ಟಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು. ಗ್ರೂಪ್ 1ಗೆ 6 ಶೇಕಡಾ ಮೀಸಲಾತಿ ಕೊಡಲು ಸದಾಶಿವ ಆಯೋಗ ತಿಳಿಸಿದೆ. ನಮ್ಮ ಕ್ಯಾಬಿನೆಟ್ ಉಪ ಸಮಿತಿಯು ಗ್ರೂಪ್ 1 ಎಸ್ಸಿ ಎಡಕ್ಕೆ ಅದೇ ಪ್ರಮಾಣವನ್ನು ಕೊಟ್ಟಿದೆ. ಎಸ್ಸಿ ಬಲಕ್ಕೆ ಶೇ 5ಅನ್ನು ಆಯೋಗ ತಿಳಿಸಿದ್ದು, ನಮ್ಮ ಸರಕಾರ ಶೇ 5.5 ಕೊಟ್ಟಿದೆ. ಬಂಜಾರ, ಕೊರಮ, ಕೊರಚ, ಬೋವಿ ಮತ್ತಿತರರಿಗೆ ಆಯೋಗ ಶೇ 3 ನೀಡಲು ತಿಳಿಸಿದ್ದು, ಬೊಮ್ಮಾಯಿಯವರ ಸರಕಾರ 4.5 ಶೇಕಡಾ ನೀಡಿದೆ. ಅಂದರೆ ಶಿಫಾರಸಿಗಿಂತ ಇದು ಹೆಚ್ಚು ಎಂದು ವಿವರಿಸಿದರು.
ಇತರರಿಗೆ ಶೇ 1 ಶಿಫಾರಸು ಇದ್ದು ನಾವು ಅಷ್ಟೇ ಕೊಟ್ಟಿದ್ದೇವೆ. ಎಸ್ಸಿ, ಎಸ್ಟಿ, ಒಕ್ಕಲಿಗರು, ಒಬಿಸಿಯವರಿಗೆ ಅನುಕೂಲ ಕೊಡುವುದರಲ್ಲಿ ನಾವು ಕಾಂಗ್ರೆಸ್ಗಿಂತ ಮುಂದಿದ್ದೇವೆ. ಎಸ್ಸಿ, ಎಸ್ಟಿ, ಒಬಿಸಿಗಳ ಪಾರ್ಟಿ ಎನ್ನುವ ಕಾಂಗ್ರೆಸ್ನವರು ಇದನ್ನು ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಚಾಂಪಿಯನ್ ಆಫ್ ಒಬಿಸಿ, ಬಿಜೆಪಿಯವರು ಸಾಮಾಜಿಕ ನ್ಯಾಯದ ವಿರೋಧಿಗಳು ಎನ್ನುತ್ತಿದ್ದ ಸಿದ್ದರಾಮಯ್ಯರವರು ಯಾಕೆ ಆತ್ಮಾವಲೋಕನ ಮಾಡಿಕೊಳ್ಳಲಿಲ್ಲ ಎಂದು ಕೇಳಿದರು.
ಸಿದ್ದರಾಮಯ್ಯರು ಲಿಂಗಾಯತರನ್ನು ಒಡೆಯಲು ಮುಂದಾದರು. ಈಗ ನಾವು ಲಿಂಗಾಯತರಿಗೆ ಶೇ 7 ಮೀಸಲಾತಿ ಕೊಟ್ಟಿದ್ದು, ಆ ಸಮಾಜ ಖುಷಿಯಿಂದಿದೆ. ಒಕ್ಕಲಿಗರಿಗೆ ಶೇ 6 ಮೀಸಲಾತಿ ನೀಡಿದ್ದು, ಆ ಸಮಾಜ ಅತ್ಯಂತ ಸಂತಸದಿಂದಿದೆ. ನೀವು (ಕಾಂಗ್ರೆಸ್) ಆಯೋಗದ ಶಿಫಾರಸನ್ನು ಚರ್ಚೆಯೂ ಮಾಡಲಿಲ್ಲ ಎಂದು ಆಕ್ಷೇಪಿಸಿದರು.
ನಾವು ಜನರ ಜೊತೆ ಇರುವ ಪಕ್ಷ. ಜನರ ನಾಡಿಮಿಡಿತ ಅರಿತ ಪಕ್ಷ ನಮ್ಮದು. ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಮರಿಗೆ ನೀಡಿದ ಶೇ 4 ಮೀಸಲಾತಿಯನ್ನು ಶೇ 2 ಲಿಂಗಾಯತರಿಗೆ, ಶೇ 2 ಒಕ್ಕಲಿಗರಿಗೆ ಕೊಡುವ ಕೆಲಸವನ್ನು ಬಿಜೆಪಿ ಮಾಡಿದೆ. ಸಂವಿಧಾನದತ್ತವಾಗಿ ಅಲ್ಪಸಂಖ್ಯಾತರಿಗೆ ಕೊಡಬೇಕಾದ ಅನುಕೂಲವನ್ನು ಗಮನದಲ್ಲಿ ಇಟ್ಟುಕೊಂಡು ಶೇ 10 ಇಡಬ್ಲ್ಯುಎಸ್ ಅಡಿಯಲ್ಲಿ ಅವರಿಗೂ ಮೀಸಲಾತಿ ಕೊಡುತ್ತಿದ್ದೇವೆ ಎಂದರು.
ಕಾಂಗ್ರೆಸ್ ಪಕ್ಷವು ಸಮಾಜದಲ್ಲಿ ಗಲಾಟೆ ಮಾಡಿಸಿ ಅಶಾಂತಿ ಸೃಷ್ಟಿಸುತ್ತಿದೆ ಎಂದು ಎನ್. ರವಿಕುಮಾರ್ ಅವರು ಆರೋಪಿಸಿದರು.
ರಾಜ್ಯದಲ್ಲಿ ಬಂಜಾರ-ಲಂಬಾಣಿ ಸಮುದಾಯದ ಹೋರಾಟ ನಡೆಯುತ್ತಿಲ್ಲ. ಆ ಸಮುದಾಯದ ಕೆಲವು ಕಾಂಗ್ರೆಸ್ ಪಕ್ಷದವರ ಪಿತೂರಿಯಿಂದ ರಾಜ್ಯದ ವಿವಿಧೆಡೆ ಗಲಭೆ ನಡೆದಿದೆ. ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲೆಸೆತಕ್ಕೆ ಮೊದಲು ಅಲ್ಲಿನ ಕಾಂಗ್ರೆಸ್ಸಿನ ಯುವ ನಾಯಕ, ಪೆಟ್ರೋಲ್ ಬಂಕ್ ಇರುವವರು ಕಾರಣ. ಅವರು ಏನು ಮೀಟಿಂಗ್ ಮಾಡಿದರು, ಪ್ಲಾನ್ ಮಾಡಿದರೆಂಬುದು ಜಗಜ್ಜಾಹೀರಾಗಿದೆ ಎಂದು ತಿಳಿಸಿದರು.
ಅಂಬೇಡ್ಕರ್ ಅವರು ಹೇಳಿದ ವಿಚಾರ ಜಾರಿಗೊಳಿಸಿದ ಪಕ್ಷ ಮತ್ತು ಸದಾಶಿವ ಆಯೋಗದ ವರದಿಯ ಅಂಶಗಳನ್ನು ಪರಿಗಣಿಸಿ ಜಾರಿಗೊಳಿಸಿದ ಪಕ್ಷ ಬಿಜೆಪಿ ಎಂದು ತಿಳಿಸಿದರು. ಬೊಮ್ಮಾಯಿಯವರು ಮತ್ತು ಅವರ ಸರಕಾರ ಇದನ್ನು ಜಾರಿ ಮಾಡಿದೆ. ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.