ಈಶಾನ್ಯ ಭಾರತವು ದೇಶದ ಮನೋಹರ ಪ್ರಾಕೃತಿಕ ಗುಣಲಕ್ಷಣಗಳನ್ನು ಹೊಂದಿರುವ ಸುಂದರ ಭಾಗವಾಗಿದೆ. ಇಲ್ಲಿರುವ ಎಂಟು ಸಣ್ಣ ಸಣ್ಣ ರಾಜ್ಯಗಳಲ್ಲೂ ಹಲವು ಭಾಷೆಗಳು, ಆಚರಣೆಗಳು ಮತ್ತು ತನ್ನದೆ ಆದಂತಹ ಹಿರಿಮೆ ಗರಿಮೆಯ ಜೊತೆಯಲ್ಲಿ ಸುದೀರ್ಘ ಇತಿಹಾಸವೂ ಇದೆ. ಈ ಮಧ್ಯೆ ಈಶಾನ್ಯ ಭಾರತದ ರಾಜ್ಯಗಳೆಷ್ಟು? ಈಶಾನ್ಯದ ರಾಜ್ಯಗಳನ್ನು ಹೆಸರಿಸಿ? ಈಶಾನ್ಯ ರಾಜ್ಯಗಳ ರಾಜಧಾನಿಯನ್ನು ಹೆಸರಿಸಿ? ಆ ರಾಜ್ಯಗಳ ಮುಖ್ಯಮಂತ್ರಿಗಳ ಹೆಸರುಗಳೇನು ಎಂಬ ಪ್ರಶ್ನೆಗಳನ್ನು ಕೇಳಿದರೆ ಹೆಸರಿಸುವುದು ಸ್ವಲ್ಪ ಕಷ್ಟವೇ ಆಗಬಹುದು. ಒಂದೋ ಬಹಳ ಯೋಚನೆ ಮಾಡಬೇಕು ಇಲ್ಲವೇ ಗೂಗಲ್ ಸರ್ಚ್ ಮಾಡಬೇಕು.
ಸಿಕ್ಕಿಂ ರಾಜ್ಯವು ಸೆವನ್ ಸಿಸ್ಟರ್ ಭಾಗವೇ ಎಂಬ ಕುತೂಹಲವೂ ಇದೆ. ಇವುಗಳ ಮಧ್ಯೆ ರಾಜತಾಂತ್ರಿಕವಾಗಿ ಭಾರತದ ಸಮೀಪವರ್ತಿ ಮತ್ತು ಸ್ನೇಹಮಯಿ ರಾಷ್ಟ್ರವಾದ ವಾಂಗ್ಚುಕ್ ರಾಜಾಧಿಪತ್ಯವಿದ್ದ ಭೂತಾನ್ ಭಾರತದಿಂದ ಯಾವಾಗ ಹೊರತಾಯಿತು ಅಥವಾ ಹೇಗೆ ಹೊರತಾಗಿದೆ ಎಂಬ ಪ್ರಶ್ನೆಯೂ ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಮತ್ತು ಬಲಿದಾನ ನೀಡಿದ ಈಶಾನ್ಯ ಭಾರತದ ವೀರರ ಹೆಸರುಗಳು ಬಹಳಷ್ಟು ಮಂದಿಯನ್ನು ಪುಳಕಿತಗೊಳಿಸಿವೆ. ಈಶಾನ್ಯ ಭಾರತದ ಧೀಮಂತ ಚರಿತ್ರೆ, ಮೊಘಲರ ವಿರುದ್ಧ ಧೀರೋದಾತ್ತವಾಗಿ ಹೋರಾಡಿದ ಲಚಿತ್ ಬರ್ಫುಕಾನ್, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಮತ್ತು ಹೋರಾಟ ನಡೆಸಿದ್ದ ಮಣಿರಾಂ ದೇವನ್, ರಾಣಿ ಗೈದಿಂಗ್ಲ್ಯೂ, ಹೇಮಾ ಬರುವಾ ಅವರುಗಳ ಹೆಸರುಗಳು ಇತ್ತೀಚೆಗೆ ಹೆಚ್ಚು ಮುನ್ನೆಲೆಗೆ ಬರುತ್ತಿವೆ ಎಂಬುದು ಸಂತಸದ ವಿಚಾರವೇ ಆಗಿದೆ. ಇಷ್ಟು ಮಾತ್ರವಲ್ಲದೆ ಈಶಾನ್ಯವು ದೇಶದ ಪ್ರವಾಸೋದ್ಯಮ, ಆರ್ಥಿಕತೆ, ಕ್ರೀಡಾಕ್ಷೇತ್ರದ ಸಾಧನೆಗೆ ಸ್ಪೂರ್ತಿಯೂ ಆಗುತ್ತಿದೆ. ಸ್ವಾತಂತ್ರ್ಯದ ನಂತರ ಮೊತ್ತಮೊದಲ ಬಾರಿಗೆ ನಾಗಾಲ್ಯಾಂಡಿಗೆ ಎರಡನೇ ರೈಲ್ವೇ ನಿಲ್ದಾಣ ಪ್ರಾಪ್ತಿಯಾಗಿದೆ. ಉಡಾನ್ ಯೋಜನೆಯ ಮೂಲಕ ದೇಶದ ಇತರೇ ನಗರಗಳೊಂದಿಗೆ ಈಶಾನ್ಯ ಭಾರತದ ನಗರಗಳು ಸಂಪರ್ಕಿಸಲ್ಪಡುತ್ತಿವೆ. ಅಂತಾರಾಷ್ಟ್ರೀಯ ವಾಣಿಜ್ಯ ಮತ್ತು ಆರ್ಥಿಕಾಭಿವೃದ್ಧಿಯಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ.
ಅಸ್ಸಾಂ ರಾಜ್ಯವನ್ನು ಈಶಾನ್ಯದ ಹೆಬ್ಬಾಗಿಲು ಎಂದೂ ಕರೆಯುವುದುಂಟು. ಇತ್ತೀಚಿನ ವರ್ಷಗಳಲ್ಲಿ ದಿಬ್ರುಗಢ, ಕೊಹಿಮಾ, ಗುವಾಹಟಿ, ಇಂಫಾಲದಂತಹ ಈಶಾನ್ಯದ ರಾಜ್ಯಗಳಲ್ಲಿರುವ ನಗರ ಮತ್ತು ಪ್ರಾಂತ್ಯಗಳ ಹೆಸರುಗಳು ಆಗಾಗ್ಗೆ ಕಿವಿಗೆ ಬೀಳುತ್ತಿರುತ್ತವೆ. ಅರುಣಾಚಲದ ತವಾಂಗ್ ಎಂಬ ಹೆಸರೂ ಚೀನಾದ ಕುಮ್ಮಕ್ಕಿನ ಕಾರಣ ಹೆಚ್ಚು ಪ್ರಚಲಿತದಲ್ಲಿದೆ. ರಾಜ್ಯಗಳ ಮಧ್ಯೆಯಿರುವ ದಶಕಗಳ ಹಿಂದಿನ ಗಡಿ ಸಮಸ್ಯೆಗಳು ಕೇಂದ್ರ ಸರಕಾರದ ಮಧ್ಯಸ್ಥಿಕೆಯಲ್ಲಿ ಶಮನ ಕಾಣುತ್ತಿದೆ. ಉಳಿದಂತೆ ಹಲವು ವರ್ಷಗಳಿಂದ ನಿರಂತರವಾಗಿ ಸಮಸ್ಯೆಯಾಗಿದ್ದ ಬುಡಕಟ್ಟು ಸಮುದಾಯಗಳ ನಡುವಿನ ವೈಷಮ್ಯ, ಬಂಡುಕೋರರ ಸಮಸ್ಯೆಗಳು ಸಂಪೂರ್ಣ ಇಲ್ಲವಾಗಿದೆ. ರಾಜಕೀಯವಾಗಿ, ಸಾಮಾಜಿಕವಾಗಿ ಈಶಾನ್ಯ ಭಾರತದಲ್ಲಿ ದೊಡ್ಡ ಬದಲಾವಣೆಯ ಪರ್ವ ಆರಂಭವಾಗಿದೆ ಮಾತ್ರವಲ್ಲ ಇಲ್ಲಿನ ಪ್ರದೇಶಗಳು ಆರ್ಥಿಕವಾಗಿಯೂ ಸದೃಢವಾಗುತ್ತಿವೆ. ಹೀಮಂತ ಬಿಸ್ವಾ ಸರ್ಮಾ, ಕಾನ್ರಾಡ್ ಸಂಗ್ಮಾ, ಮಾಣಿಕ್ ಸಾಹಾ ಮೊದಲಾದ ಮುಖ್ಯಮಂತ್ರಿಗಳ ಹೆಸರುಗಳು ದೇಶದ ಉಳಿದ ರಾಜ್ಯಗಳ ಮುಖ್ಯಮಂತ್ರಿಗಳ ಹೆಸರುಗಳಂತೆ ಮಾಧ್ಯಮಗಳಲ್ಲಿ ಗುನಗುನಿಸುತ್ತವೆ. ಈಶಾನ್ಯದ ಸೆವೆನ್ ಸಿಸ್ಟರ್ಸ್ ಎನ್ನುವ , ಇಂದಿರುವ ಒಟ್ಟು 7 ರಾಜ್ಯಗಳ, ಮೂರು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಘೋಷಣೆಯಾಗಿದೆ. ತ್ರಿಪುರಾ ರಾಜ್ಯದಲ್ಲಿ ಫೆ. 16 ರಂದು ಚುನಾವಣೆ ನಡೆದರೆ, ಮೇಘಾಲಯ ಮತ್ತು ನಾಗಾಲ್ಯಾಂಡಿನಲ್ಲಿ ಫೆ. 29 ರಂದು ಚುನಾವಣೆಗಳು ನಡೆಯಲಿವೆ. ವಿವಿಧ ಪಕ್ಷಗಳು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಭರಾಟೆಯ ಪ್ರಚಾರದಲ್ಲಿ ತೊಡಗಿವೆ.
ರಸ್ತೆ ಮತ್ತು ರೈಲು ಸಂಪರ್ಕದ ಜೊತೆಜೊತೆಯಲ್ಲಿ ಈ ಭಾಗದಲ್ಲಿ ಕೇಂದ್ರ ಸರಕಾರದ ಮೂಲಕ ಸುಸಜ್ಜಿತ ವಿಮಾನನಿಲ್ದಾಣಗಳ ನಿರ್ಮಾಣ ಉಡಾನ್ ಯೋಜನೆಯ ಮೂಲಕ ನೆರವೇರಿದೆ. ನದಿ ಒಳಸಾರಿಗೆಯ ವಿಶೇಷ ನೌಕೆ ಗಂಗಾ ವಿಲಾಸ್ ಕೂಡಾ ಈಶಾನ್ಯದ ಎರಡು ರಾಜ್ಯಗಳನ್ನು ಇತ್ತೀಚೆಗೆ ಸ್ಪರ್ಶಿಸಿದೆ. ರಾಷ್ಟ್ರದ ಹೊಸ ಆರ್ಥಿಕ ನೀತಿಗೆ ಅದರಲ್ಲೂ ಆಕ್ಟ್ ಈಸ್ಟ್ ಪಾಲಿಸಿಯ ಅಡಿಯಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳತ್ತ ಮುಖ ಮಾಡುವಲ್ಲಿ ಈಶಾನ್ಯ ರಾಜ್ಯಗಳು ಸಹಾಯಕವಾಗಿವೆ. ಭಾರತ-ಥೈಲ್ಯಾಂಡ್ ಸಹಿತ ದಕ್ಷಿಣ ಏಷ್ಯಾ ರಾಷ್ಟ್ರಗಳತ್ತ ಮುಖ ಮಾಡುವ ಪ್ರಮುಖ ಅಂತಾರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೂ ಪ್ರಗತಿಯಲ್ಲಿದೆ. ದೇಶದ ಪರಿಸರ ಸ್ನೇಹಿ ಗ್ರೀನ್ ಫೀಲ್ಡ್ ಏರಪೋರ್ಟ್ ತಿಂಗಳುಗಳ ಹಿಂದೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಉದ್ಘಾಟನೆ ಕಂಡಿತ್ತು. ಇದು ಪ್ರವಾಸೋದ್ಯಮ ಕ್ಷೇತ್ರದ ಪ್ರಗತಿಯಲ್ಲೂ ಮಹತ್ವಪೂರ್ಣವೆನಿಸಿದೆ. ಅಸ್ಸಾಂಮಿನ ಕಾಜಿರಂಗ ವನ್ಯಜೀವಿಧಾಮ, ಸಿಕ್ಕಿಂನ ಬೌದ್ಧ ವಿಹಾರಗಳು, ನಾಗಾಲ್ಯಾಂಡ್, ಮಣಿಪುರದ ಸಾಂಪ್ರಾದಾಯಿಕ ಉಡುಗೆ ತೊಡುಗೆ ಸಹಿತ ಕಲೆಗಳು ಹೆಚ್ಚಿನ ವಿದೇಶಿಗರನ್ನು ಈಶಾನ್ಯ ಭಾರತದತ್ತ ಆಕರ್ಷಿಸುತ್ತವೆ. ಅಸ್ಸಾಂಮಿನ ಕಾಮಾಖ್ಯ ದೇಗುಲ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾಗಿದ್ದು ಅಸಂಖ್ಯಾತ ಹಿಂದೂ ಯಾತ್ರಾರ್ಥಿಗಳ ಶ್ರದ್ಧಾಕೇಂದ್ರವಾಗಿದೆ. ಸಮೀಪವರ್ತಿ ರಾಷ್ಟ್ರಗಳಾದ ಭೂತಾನ್, ಮಯನ್ಮಾರ್, ಬಾಂಗ್ಲಾದೇಶಗಳಿಗೂ ಸಂಪರ್ಕ ಕಲ್ಪಿಸುವ ಈಶಾನ್ಯ ರಾಜ್ಯಗಳು ಆಗ್ನೇಯ ಏಷ್ಯಾದ ಪ್ರವೇಶ ದ್ವಾರ ಎಂದೇ ಉಲ್ಲೇಖಿಸಬಹುದಾಗಿದೆ. ಧರ್ಮ, ಸಂಸ್ಕೃತಿ, ಪ್ರಕೃತಿ ಪ್ರೇರಿತ ಪ್ರವಾಸೋದ್ಯಮವು ಈಶಾನ್ಯ ರಾಜ್ಯಗಳ ಆರ್ಥಿಕತೆಯಲ್ಲಿ ಪ್ರಧಾನ ಭೂಮಿಕೆ ವಹಿಸಿದರೆ, ಕೇಂದ್ರ ಸರಕಾರದ ಹೊಸ ಯೋಜನೆಗಳು ಈ ಭಾಗದ ವ್ಯಾಪಾರ ವಹಿವಾಟು ಸಹಿತ ವಾಣಿಜ್ಯಿಕ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯುತ್ತಿದೆ. ದಶಕಗಳ ಹಿಂದಿನ ಅಂಕಿಅಂಶಗಳು ಮತ್ತು ಇಂದಿನ ಯೋಜನಾಬದ್ಧತೆಯ ಅಂಕಿ ಅಂಶಗಳು ಈಶಾನ್ಯ ಭಾರತದ ಸುಸ್ಥಿರ ಪ್ರಗತಿಯನ್ನು ದರ್ಶಿಸುತ್ತವೆ.
15 ನೇ ಹಣಕಾಸು ಆಯೋಗದ ಮೂಲಕ ಈಶಾನ್ಯ ಭಾರತದ ಸಮಗ್ರ ಅಭಿವೃದ್ಧಿಯ ಧ್ಯೇಯವನ್ನಿಟ್ಟು ಕೇಂದ್ರ ಸರಕಾರವು 12882.2 ಕೋಟಿ ರೂ. ಮೀಸಲಿಟ್ಟಿದೆ. ಆರಂಭಗೊಂಡಿರುವ ಹಲವು ಯೋಜನೆಗಳನ್ನು 2025-26 ರೊಳಗೆ ಪೂರ್ಣಗೊಳಿಸುವ ಉದ್ದೇಶವನ್ನು ಕೇಂದ್ರ ಸರಕಾರವಿರಿಸಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವರು ಇತ್ತೀಚೆಗಷ್ಟೇ ಹೇಳಿದ್ದಾರೆ. ಪಿ.ಎಂ Devine ಯೋಜನೆಯು ಈಶಾನ್ಯ ರಾಜ್ಯಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕೊಡಮಾಡಿ, ಇಲ್ಲಿನ ಸಮಾಜಿಕ ಮತ್ತು ಜನಸಾಮಾನ್ಯರ ಆಶೋತ್ತರಗಳನ್ನು ಪೂರೈಸುವ ಇರಾದೆ ಹೊಂದಿದೆ. ಆತ್ಮನಿರ್ಭರ ಭಾರತದ ಅಧೀನದ ಹಲವು ಯೋಜನೆಗಳು ಐದು ಪ್ರಮುಖ ಆಧಾರಸ್ಥಂಭಗಳಾದ ಆರ್ಥಿಕತೆ, ಮೂಲಭೂತ ಸೌಕರ್ಯ, ಆಡಳಿತ, ಪ್ರಖರ ಜನಸಾಂದ್ರತೆ ಮತ್ತು ಅವರ ಬೇಡಿಕೆಯನ್ನು ಮುಂದಿಟ್ಟು ಮುನ್ನಡೆಯಲಿವೆ. ಕೇಂದ್ರ ಸರಕಾರವು ಇದರ ಜೊತೆಜೊತೆಯಲ್ಲಿ ಮುಂದಿನ 450 ದಿನಗಳೊಳಗೆ ದೂರವಾಣಿ ಸಂಪರ್ಕ ಸೇವೆಯನ್ನು ಈಶಾನ್ಯದ ಎಲ್ಲಾ ಭಾಗಗಳಿಗೆ ಕೊಡಮಾಡಲಿದೆ. 2014 ರಲ್ಲಿ ಕೇವಲ ಒಂದೇ ಒಂದು ರಾಷ್ಟ್ರೀಯ ಜಲಸಾರಿಗೆಯಿದ್ದ ಈ ಭಾಗದಲ್ಲಿ ಇಂದು ಒಟ್ಟು 18 ರಾಷ್ಟ್ರೀಯ ಜಲಸಾರಿಗೆಯ ಪಥಗಳಿವೆ. ಇತ್ತೀಚೆಗಷ್ಟೇ ಸರಕಾರವು 6000 ಕೋಟಿ. ರೂ ಗಳನ್ನು ಬಿಡುಗಡೆ ಮಾಡಿದ್ದು, ರಾಷ್ಟ್ರೀಯ ಜಲಸಾರಿಗೆ 2 ಮತ್ತು 16 ರನ್ನು ಅಭಿವೃದ್ಧಿಪಡಿಸುತ್ತಿದೆ. ಕೌಶಲ್ಯ ವೃದ್ಧಿಗಾಗಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಈ ಭಾಗದಲ್ಲಿ ಪೂರೈಸಲಾಗುತ್ತಿದೆ. ಇದಕ್ಕೆ ಅಗತ್ಯವಿರುವ ಸಾಂಸ್ಥಿಕತೆಗಳ ಸೃಷ್ಠಿಯೂ ಇದರಲ್ಲಿ ಬಹುಮುಖ್ಯವಾಗಿದ್ದು ಒಟ್ಟು 193 ಇಂತಹ ಕೇಂದ್ರಗಳ ನಿರ್ಮಾಣವು ಈಶಾನ್ಯದ ಹಲವು ಭಾಗಗಳಲ್ಲಾಗುತ್ತಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕಾಭಿವೃದ್ಧಿಗಾಗಿ ಪ್ರೋತ್ಸಾಹ ನೀಡಲಾಗಿದ್ದು ಒಟ್ಟು 3,865 ಹೊಸ ಸ್ಟಾರ್ಟಪ್ ಗಳು ನೋಂದಣಿ ಹೊಂದಿವೆ. ಇದರ ಹೊರತಾಗಿ ಆರೋಗ್ಯ ಕ್ಷೇತ್ರವೂ ಹೊಸತನದತ್ತ ಹೆಜ್ಜೆಯಿಟ್ಟಿದ್ದು ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣವಾಗಿದೆ. ಅರುಣಾಚಲ ಪ್ರದೇಶದ ಗಡಿ ಭಾಗದ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸೇವೆಗಾಗಿ ಪ್ರಧಾನಮಂತ್ರಿಗಳು ಒಟ್ಟು 550 ಕೋಟಿ ರೂ. ಗಳನ್ನು ಘೋಷಿಸಿದ್ದರು.
ಇತ್ತೀಚೆಗಷ್ಟೇ ಮಂಡನೆಯಾದ ಕೇಂದ್ರ ಬಜೆಟ್ ಮೂಲಕ 2023-24 ರಲ್ಲಿ 740 ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಸೂಕ್ತ ಮಾನವ ಸಂಪನ್ಮೂಲವನ್ನು ಕಲ್ಪಿಸುವ ಯೋಜನೆಗೆ ಹಣ ಮೀಸಲಿರಿಸಲಾಗಿದೆ. ಈಶಾನ್ಯ ಭಾಗದಲ್ಲಿ ಅತಿ ಹೆಚ್ಚಿನ ಬಡುಕಟ್ಟು ಸಮುದಾಯಗಳಿವೆ ಅವರ ಶಿಕ್ಷಣಕ್ಕೆ ಅನುಕೂಲವಾಗುವಂತೆ ಈ ಘೋಷಣೆಯಾಗಿದ್ದು 38,800 ಶಾಲಾ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳ ನೇಮಕವೂ ಆಗಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಏಕಲವ್ಯ ಶಾಲೆಗಳ ಮೂಲಕ ಒಟ್ಟು 3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲಿದೆ.
ಈಶಾನ್ಯ ಭಾರತದ ಪ್ರಗತಿಯ ಸೂಚಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಲೇಬೇಕಾದುದು ಇಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಕಾರ್ಯ ಮತ್ತದರ ವೇಗಗತಿ. 2014 ರ ಮೊದಲು ಇಲ್ಲಿನ ರಸ್ತೆಗಳು ನಿರ್ಮಾಣವು ದಿನವೊಂದಕ್ಕೆ ಕೇವಲ 0.6 ಕಿ.ಮೀ ಅಷ್ಟೇ ಆಗಿತ್ತು. 2014-19 ರಲ್ಲಿ ದಿನವೊಂದಕ್ಕೆ ರಾ.ಹೆ ನಿರ್ಮಾಣವು 1.5 ಕಿ.ಮೀ ತನಕ ತಲುಪಿತ್ತು. ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗಡಿ ರಸ್ತೆ ಪ್ರಾಧಿಕಾರ (BRO) ಮೂಲಕ ಒಟ್ಟು 2731 ಕಿ.ಮೀ ಹೆದ್ದಾರಿ ನಿರ್ಮಾಣವು ಪೂರ್ಣಗೊಂಡಿದೆ. ಒಟ್ಟು 8 ರಾಜ್ಯಗಳ ಉದ್ದಕ್ಕೂ ಸೂಕ್ತ ಹೆದ್ದಾರಿ ನಿರ್ಮಾಣದ ಮೂಲಕ ಸಾರಿಗೆ ಸಂಪರ್ಕ ಸಹಿತ ವಾಣಿಜ್ಯಿಕ ವಹಿವಾಟಿಗೆ ನಾಂದಿ ಹಾಡಲಾಗಿದೆ. ಲುಕ್ ಈಸ್ಟ್ ಪಾಲಿಸಿಯಿಂದ ಆಕ್ಟ್ ಈಸ್ಟ್ ಪಾಲಿಸಿಯತ್ತ ದೃಷ್ಠಿನೆಟ್ಟ ಸರಕಾರವು ಇಂದು ಭಾರತ, ಮಯನ್ಮಾರ್, ಥೈಲ್ಯಾಂಡ್ ಮಧ್ಯೆ ಟ್ರಯಲಾಟರಲ್ ಅಂತಾರಾಷ್ಟ್ರೀಯ ಹೆದ್ದಾರಿಯನ್ನು ಸಾಕಾರಗೊಳಿಸಿದೆ. ಈ ಯೋಜನೆಯು ಸಾರ್ಥಕತೆಯತ್ತ ಹೆಜ್ಜೆಯಿಟ್ಟಿದ್ದು, ಈಶಾನ್ಯ ಭಾಗದಲ್ಲಿನ ಹಲವು ಯೋಜನೆಗಳ ಕ್ರಿಯಾ ಚಟುವಟಿಕೆಗಳ ಮುಂದುವರಿದ ಭಾಗವಾಗಿದೆ. ಈ ಯೋಜನೆಗೆ ಒಟ್ಟು 1,177 ಕೋಟಿ. ರೂ ಅನುಮೋದನೆಗೊಂಡಿತ್ತು. ಭಾರತದ ಈಶಾನ್ಯ ರಾಜ್ಯದ ಇಂಫಾಲ, ಮಯನ್ಮಾರಿನ ಮಾಂಡಲೇ ಮತ್ತು ಥೈಲ್ಯಾಂಡಿನ ಬ್ಯಾಂಕಾಕಿಗೆ ಒಟ್ಟು 1397 ಕಿ.ಮೀ ದೂರದ ಸುಸಜ್ಜಿತ ಅಂತಾರಾಷ್ಟ್ರೀಯ ಹೆದ್ದಾರಿಯಾಗಿರಲಿದೆ. ಪ್ರವಾಸೋದ್ಯಮ, ವಾಣಿಜ್ಯ, ಸರಕು ಸಾಗಾಟಕ್ಕೆ ಪೂರಕ ವಾತಾವರಣವನ್ನು ಈ ಹೆದ್ದಾರಿ ಸೃಷ್ಠಿಸಲಿದೆ.
✍️ ವಿವೇಕಾದಿತ್ಯ ಕನಿಯಾಲ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.