ಬೆಳ್ತಂಗಡಿ : ಜಾಗತೀಕರಣದ ಪ್ರಭಾವದಿಂದ ಶಿಕ್ಷಣವು ವ್ಯಾಪಾರೀಕರಣಗೊಂಡಿದೆ. ಸಾಹಿತ್ಯ, ಕಾವ್ಯಗಳಿಗೆ ಎಡೆ ಇಲ್ಲವಾಗಿದೆ ಎಂದು ಧಾರವಾಡದ ವಿಮರ್ಶಕ ಡಾ| ಗಿರಡ್ಡಿ ಗೋವಿಂದರಾಜ ಹೇಳಿದರು.
ಅವರು ಶುಕ್ರವಾರ ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ಡಾ|ಬೆಟಗೇರಿ ಕೃಷ್ಣಶರ್ಮರ ಕಾವ್ಯಗಳ ಬಗ್ಗೆ ಕಾವ್ಯಾರ್ಥ ಚಿಂತನ ಎಂಬ ಎರಡು ದಿನಗಳ ಕಾವ್ಯ ಸ್ಪಂದನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಪೋಷಕರು ಮಕ್ಕಳನ್ನು ಕೇವಲ ಹಣಗಳಿಕೆಯ ಶಿಕ್ಷಣದ ಕಡೆಗೇ ಒಲವನ್ನು ತೋರಿಸುತ್ತಿದ್ದಾರೆ. ಸಾಹಿತ್ಯದ ಬದುಕು ಅವರಿಗೆ ಬೇಡವಾಗಿದೆ. ಸಾಹಿತ್ಯಾಸಕ್ತಿ, ಅಧ್ಯಯನ ಇಂದು ಕಡಿಮೆಯಾಗಿದೆ. ಜೀವನಾದರ್ಶ, ಮೌಲ್ಯಗಳನ್ನು ಸಾಹಿತ್ಯ ತೋರಿಸುತ್ತದೆ. ಹೀಗಾಗಿ ಸಾಹಿತ್ಯ ಶಿಬಿರಗಳನ್ನು ಆಯೋಜಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ನಾಡಿನ ಹೆಚ್ಚಿನ ಸಾಹಿತಿಗಳು ಪದವಿತನಕ ಓದಿದವರಾಗಿರಲಿಲ್ಲ. ಆದರೆ ಅವರು ಅನುಭವಗಳ ಗಣಿಯಾಗಿದ್ದರು. ಮೌಲ್ಯಯುತ ಶಿಕ್ಷಣ ಅಂದು ದೊರೆಯುತ್ತಿತ್ತು. ಕಾವ್ಯ, ಸಾಹಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಿತ್ತು. ಇಂತಹ ಸಾಲಿನಲ್ಲಿ ಬೆಟಗೇರಿ ಕೃಷ್ಣಶರ್ಮರು ಓರ್ವರು. ಅವರು ಕಯ್ಯಾಡಿಸದ ಕ್ಷೇತ್ರವಿರಲಿಲ್ಲ. ಕವಿತೆ, ಬರಹಗಳು, ಪತ್ರಿಕೋದ್ಯಮ, ಸಣ್ಣ ಕತೆಗಳು, ಶಿಶುಗೀತೆಗಳಲ್ಲಿ ಪರಿಣತರಾಗಿದ್ದರು. ಜನಪದದ ಲೇಪ ಅವರ ಕಾವ್ಯಗಳಲ್ಲಿರುತ್ತಿತ್ತು ಎಂದರು.
ಪಾಶ್ಚಾತ್ಯ ವಿಮರ್ಶಕರು ನಮಗೆ ಇತಿಹಾಸವಿಲ್ಲ ಎಂದು ಗೇಲಿ ಮಾಡುತ್ತಿದ್ದರು. ಆದರೆ ದೇಶದಲ್ಲಿ ಅಪಾರವಾದ ದಂತಕಥೆಗಳು, ಐತಿಹ್ಯಗಳು ಇವೆ. ಆದರೆ ಇದನ್ನು ಸಮರ್ಪಕವಾಗಿ ಅಧ್ಯಯನ, ದಾಖಲೀಕರಣ ಮಾಡದೆ ಸೊರಗಿದೆ. ಬೆಟಗೇರಿಯವರ ಕೃತಿಗಳಲ್ಲಿ ಇದನ್ನು ಕಾಣಬಹುದಾಗಿದೆ ಎಂದ ಅವರು, ಯೋಗ ಸಾಧನೆಗಿಂತ, ಆತ್ಮ ಸಾಧನೆ ಮುಖ್ಯ ಎಂದರು.
ಆಶಯ ನುಡಿಗಳನ್ನಾಡಿದ ಡಾ|ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನ ಬೆಳಗಾಗಿ ಇದರ ಅಧ್ಯಕ್ಷ ಪ್ರೊ.ರಾಘವೇಂದ್ರ ಪಾಟೀಲ ಅವರು, ಬೆಟಗೇರಿಯವರು ಬಾಲ್ಯದಲ್ಲಿ ಶಿಕ್ಷಣ, ಆರೋಗ್ಯದಿಂದ ವಂಚಿತರಾಗಿದ್ದರೂ ಕಿಚ್ಚಿನ ವ್ಯಕ್ತಿತ್ವವನ್ನು ಬದುಕಿನಲ್ಲಿ ಹೆಚ್ಚಿಸಿಕೊಂಡಿದ್ದರು. ಅವಕಾಶ ಸಿಗದಿದ್ದರೂ ದೇಶಿಯ ಸಂಪನ್ಮೂಲವನ್ನು ಕಟ್ಟಿಕೊಟ್ಟವರು. ಅವರ ಕಾವ್ಯ,ಸಾಹಿತ್ಯಗಳಲ್ಲಿ ಅವರ ಬದುಕಿನ ಕಷ್ಟಗಳನ್ನು ಹೇಳಿಕೊಂಡಿಲ್ಲ ಮಾತ್ರವಲ್ಲ ನಿರಾಶಾವಾದವನ್ನು ಬೆಳೆಸಿಕೊಂಡಿರಲಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ| ಬಿ. ಯಶೋವರ್ಮ ಅವರು ಯವಜನತೆಯಲ್ಲಿ ಸಾಹಿತ್ಯಕ ಚಿಂತನೆ, ತಾಳ್ಮೆ, ಓದುವ ಹವ್ಯಾಸ ಕಡಿಮೆಯಾಗಿದೆ. ಶಿಕ್ಷಣದ ನಡುವೆ ಇಂತಹ ಕಾರ್ಯಕ್ರಮಗಳನ್ನು ಸಂಸ್ಥೆ ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸು ಕೆಲಸ ಮಾಡುತ್ತಿದ್ದೇವೆ. ಅವಕಾಶಗಳನ್ನು ನಾವು ಹುಡುಕಿಕೊಂಡು ಹೋಗಬೇಕೇ ಹೊರತು ಅವು ನಮ್ಮಲ್ಲಿಗೆ ಬರುವುದಿಲ್ಲ. ಸಾಹಿತ್ಯವನ್ನು ಓದುವುದರಿಂದ ಮಾತ್ರ ಪ್ರಯೋಜನವಿಲ್ಲ. ಅದರ ಬಗ್ಗೆ ಪ್ರಶ್ನಿಸುವ, ಅದರ ಗುಣಮಟ್ಟವನ್ನು ವಿಮರ್ಶಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಬಳಿಕ ನಡೆದ ಮೊದಲ ಗೋಷ್ಠಿಯಲ್ಲಿ ಆನಂದಕಂದರ ಕಾವ್ಯದ ವಸ್ತು ವೈವಿಧ್ಯದ ಬಗ್ಗೆ ಪ್ರೊ.ಎಂ.ರಾಮಚಂದ್ರ ಕಾರ್ಕಳ, ಆನಂದಕಂದರ ಕಾವ್ಯದ ದಾಂಪತ್ಯದ ಕುರಿತು ಉಪನ್ಯಾಸಕ ಡಾ.ಎಚ್.ಎಸ್. ಸತ್ಯನಾರಾಯಣ ವಿಚಾರ ಮಂಡಿಸಿದರು. ಎರಡನೇ ಗೋಷ್ಠಿಯಲ್ಲಿ ಆನಂದಕಂದರ ಕಾವ್ಯ ಮತ್ತು ಜನಪದ ಬಗ್ಗೆ ಕಾದಂಬರಿಕಾರ ಡಾ| ಬಾಳಾಸಾಹೇಬ ಲೋಕಾಪೂರ, ಆನಂದಕಂದರ ಕಾವ್ಯದಲ್ಲಿ ವ್ಯಕ್ತಗೊಳ್ಳುವ ಜೀವನದೃಷ್ಟಿ ಕುರಿತು ಅಧ್ಯಾಪಕ ಡಾ| ವೆಂಕಟಗಿರಿ ದಳವಾಯಿ ವಿಚಾರ ಮಂಡಿಸಿದರು. ನಂತರ ಗೋಷ್ಠಿಯಲ್ಲಿನ ವಿಚಾರಗಳ ಬಗ್ಗೆ ಪ್ರಶ್ನೋತ್ತರ ನಡೆಯಿತು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ, ಶಿಬಿರದ ಸಂಯೋಜಕ ಡಾ| ಬಿ. ಪಿ. ಸಂಪತ್ ಕುಮಾರ್ ಪ್ರಾಸ್ತಾವಿಸಿ, ಸ್ವಾಗತಿಸಿದರು. ಉಪನ್ಯಾಸಕ ಡಾ| ದಿವಾಕರ ಕೆ. ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.ಇಂದು(ಸೆ.12) ನಡೆಯುವ ಮೂರನೇ ಗೋಷ್ಠಿಯಲ್ಲಿ ಡಾ|ರಾಜಶೇಖರ ಹಳೆಮನೆ ಅವರ ನಿರ್ವಹಣೆಯಲ್ಲಿ ಶಿಬಿರಾರ್ಥಿಗಳಿಂದ ಕಾವ್ಯ ಪ್ರತಿಸ್ಪಂದನೆಯ ಪ್ರಬಂಧಗಳ ಮಂಡನೆ ಮತ್ತು ಚರ್ಚೆ ನಡೆಯಲಿದೆ. ಮಧ್ಯಾಹ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ಲೇಖಕ ಡಾ| ನಾ.ಮೊಗಸಾಲೆ ಸಮಾರೋಪ ನುಡಿಯಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.