ಬೆಂಗಳೂರು: ದಾಸ ಪರಂಪರೆಯಲ್ಲಿ ಶ್ರೇಷ್ಠರಾದವರು ಕನಕದಾಸರು. ನೋವು ನಲಿವನ್ನು ಒಂದೇ ರೀತಿಯಲ್ಲಿ ಸ್ವೀಕರಿಸಿ ತಮ್ಮ ಧ್ಯೇಯೋದ್ದೇಶದ ಈಡೇರಿಕೆಗಾಗಿ ಶ್ರಮಿಸುವವರು ಭವಿಷ್ಯದಲ್ಲಿ ಸಮಾಜದ ಗೌರವಕ್ಕೆ ಪಾತ್ರರಾಗುತ್ತಾರೆ ಎಂಬುದಕ್ಕೆ ಕನಕದಾಸರು ಉದಾಹರಣೆ ಎಂದು ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಂ.ಬಿ. ಭಾನುಪ್ರಕಾಶ್ ಅವರು ತಿಳಿಸಿದರು.
ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರ, ಭಕ್ತಿ ಪಂಥದ ಹರಿಕಾರ ಕನಕದಾಸ ಅವರ ಜಯಂತಿಯನ್ನು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನಕದಾಸರು ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವರು. ಸೇನಾಧಿಪತಿಯಾಗಿದ್ದು, ಯುದ್ಧದಲ್ಲಿ ಬಹಳ ನೋವುಂಡಾಗ ಚನ್ನಕೇಶವನಿಂದಾಗಿ ಉಳಿದುದಾಗಿ ನಂಬಿದರು. ಭಕ್ತಿಪಂಥದಲ್ಲಿ ಒಲವು ತೋರಿ ವ್ಯಾಸರಾಯರ ಶಿಷ್ಯರಾದರು ಎಂದು ವಿವರಿಸಿದರು.
ಅನೇಕ ರೀತಿಯ ಪರೀಕ್ಷೆಗಳನ್ನು ಅವರು ಎದುರಿಸಬೇಕಾಯಿತು. ಕನಕನ ಕಿಂಡಿ ವಾಸ್ತುಶಿಲ್ಪಿಗಳು ಮಾಡಿದ ಕಿಂಡಿಯಲ್ಲ. ಪೂಜೆ ನಡೆಯುವಾಗ ಕನಕನಿಗೆ ಒಳಗೆ ಬಿಡಲಿಲ್ಲ ಎಂಬ ಕಾರಣಕ್ಕೆ ಕನಕದಾಸರು ದುಃಖಿತರಾಗಿ ಹಿಂದೆ ಬಂದು ನಿಂತಿದ್ದರು. ‘ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ’ ಹಾಡನ್ನು ಹಾಡಿದರು. ಆಗ ದೇವರು ತಿರುಗಿ ನಿಂತನೆಂಬ, ಕಿಂಡಿ ಸೃಷ್ಟಿಯಾಯಿತೆಂಬ ಪ್ರತೀತಿ ಇದೆ ಎಂದು ತಿಳಿಸಿದರು.
ಅವರು ಹೇಳಿದ ಹಾಡುಗಳು ತತ್ವಪದಗಳು. ಅಂಥ ಶ್ರೇಷ್ಠರನ್ನು ಸ್ಮರಿಸುವ ಅವಕಾಶ ನಮಗೆಲ್ಲರಿಗೂ ಲಭಿಸಿದೆ ಎಂದು ತಿಳಿಸಿದರು. ಕಷ್ಟ ಬಂದರೂ, ಅಪಮಾನಗಳು ಬಂದರೂ ಜೀವನದಲ್ಲಿ ಧ್ಯೇಯ- ಸತ್ಯ ಮಾರ್ಗವನ್ನು ಬಿಡಬಾರದು ಎಂಬ ಸಂದೇಶ ಕನಕದಾಸರದು ಎಂದು ನುಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.