ಹೆಮ್ಮಾಡಿ : ಕೃಷಿಗಾಗಿ ಮಾಡಿದ ಸಾಲವನ್ನು ತೀರಿಸಲಾಗದೇ ಕೊನೆಗೆ ಆತ್ಮಹತ್ಯೆಗೆ ಶರಣಾದ ಅನೇಕ ರೈತರ ಕಥೆಗಳನ್ನು ಕೇಳಿದ್ದೇವೆ. ಇಲ್ಲೊಬ್ಬ ರೈತ ತನ್ನ ಹಳ್ಳಿಗೆ ಕರೆಂಟು ಬರಲಿಲ್ಲ ಎಂದು ಚಿಂತಿಸದೇ ಕೃಷಿ ನೀರಾವರಿಗಾಗಿ ಲಕ್ಷಾಂತರ ರೂ. ಬ್ಯಾಂಕ್ ಸಾಲ ಪಡೆದು ಸೋಲಾರ್ ಪವರ್ ಪ್ಲಾಂಟ್ ಸ್ಥಾಪಿಸಿ ಕೃಷಿ ನೀರಾವರಿ ಸೌಕರ್ಯ ಸೃಷ್ಟಿಸಿದ ಯಶೋಗಾಥೆ ಬದುಕಿದ್ದು ಸಾಧಿಸಬೇಕಾದ ಎಲ್ಲ ರೈತರಿಗೂ ಸ್ಫೂರ್ತಿಯಾಗಿದೆ.
ನಕ್ಸಲ್ ಪ್ರದೇಶ, ಕುಗ್ರಾಮ ಎಂದೆಲ್ಲಾ ಕುಖ್ಯಾತವಾಗಿ ಇದೀಗ ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಗೊಂಡ ಕೆರಾಡಿ ಗ್ರಾಮದ ಮೂಡುಗಲ್ಲುವಿನ ಪ್ರಗತಿಪರ ರೈತ ಸೂಲಿಯಣ್ಣ ಶೆಟ್ಟಿ ಅವರೇ ಸೋಲಾರ್ ಮೂಲಕ ಕೃಷಿ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆಯನ್ನಿಟ್ಟವರು. ಪ್ರಾಕೃತಿಕ ಗುಹಾದೇವಾಲಯವಾದ ಶ್ರೀ ಕೇಶವನಾಥ ದೇವಸ್ಥಾನವಿದ್ದು, ಪ್ರಸಿದ್ಧಿ ಪಡೆದ ಮೂಡುಗಲ್ಲು ಗ್ರಾಮ ರಸ್ತೆ, ನೀರು, ವಿದ್ಯುತ್ ಮೊದಲಾದ ಹತ್ತು ಹಲವು ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿರುವ ಹಳ್ಳಿ. ಇಲ್ಲಿನ ತಮ್ಮ ಮೂರೆಕರೆ ಪ್ರದೇಶದಲ್ಲಿ ಅಡಿಕೆ, ತೆಂಗು, ಭತ್ತ ಮತ್ತಿತರ ಕೃಷಿಯನ್ನು ಹೊಂದಿದ ಸೂಲಿಯಣ್ಣ ಶೆಟ್ಟರು ವರ್ಷವಿಡೀ ಕೆರೆಯ ನೀರನ್ನು ಹಾಯಿಸಿ ಕೃಷಿಯನ್ನು ಬದುಕಿಸಿಕೊಂಡಿದ್ದಾರೆ. ಕೆರಾಡಿ ಕೇಂದ್ರಸ್ಥಾನದಿಂದ 3.5 ಕಿ.ಮೀ. ಅಂತರದಲ್ಲಿರುವ ಕುಗ್ರಾಮ ಮೂಡುಗಲ್ಲು ಸುತ್ತಮುತ್ತ ವನ್ಯಜೀವಿ ವಲಯವಿರುವುದರಿಂದ ಈ ಹಳ್ಳಿಗೆ ವಿದ್ಯುತ್ ಸಂಪರ್ಕ ಇಂದಿಗೂ ಲಭಿಸಿಲ್ಲ.
ಆದ್ದರಿಂದ ಡೀಸೆಲ್ ಪಂಪ್ ಉಪಯೋಗಿಸಿ ಶೆಟ್ಟರು ತಮ್ಮ ಕೃಷಿತೋಟಕ್ಕೆ ಕೆರೆಯ ನೀರು ಹಾಯಿಸುತ್ತಾರೆ. ಆದರೆ ಕೆರಾಡಿಯಿಂದ ಲೀಟರುಗಟ್ಟಲೆ ಡೀಸೆಲ್ ಹೊತ್ತು ತರುವುದೊಂದು ಹರಸಾಹಸ. ಮೂಡುಗಲ್ಲುವಿಗೆ ಬರುವ ದುರ್ಗಮ ದಾರಿಯಲ್ಲಿ ವಾಹನ ಸಂಚಾರವೂ ಅತ್ಯಂತ ಭಯಾನಕ. ಇದು ಭಾರೀ ಶ್ರಮದಾಯಕ ಹಾಗೂ ಡೀಸೆಲ್ಗೆ ತಿಂಗಳಿಗೆ 60-70 ಸಾವಿರ ರೂ. ಖರ್ಚಾಗುತ್ತದೆ. ಪಂಪ್ ಬಳಕೆ ಸಾಕಷ್ಟು ವೆಚ್ಚದಾಯಕವಾದ್ದರಿಂದ ಅನ್ಯಮಾರ್ಗ ಹುಡುಕುವ ನಿಟ್ಟಿನಲ್ಲಿ ಪ್ರಗತಿಪರ ಚಿಂತನೆ ನಡೆಸಿದ ಶೆಟ್ಟರಿಗೆ ಸೋಲಾರ್ ಪವರ್ ಪ್ಲಾಂಟ್ ಸ್ಥಾಪನೆ ಐಡಿಯಾ ಹೊಳೆದಿದೆ.
ಪತ್ನಿ ಮೂಕಾಂಬು ಶೆಟ್ಟಿ ಅವರೊಂದಿಗೆ ವಾಸವಾಗಿರುವ ಸೂಲಿಯಣ್ಣ ಶೆಟ್ಟಿ ಅವರ ಮಕ್ಕಳು ಬೇರೆ ಊರುಗಳಲ್ಲಿ ಉದ್ಯೋಗ ನಿರತರಾಗಿದ್ದಾರೆ. ತಮ್ಮ ಮನೆಗೆ ಕಂಪೆನಿ ಯಿಂದ ಸೋಲಾರ್ ಲೈಟುಗಳನ್ನು ಹಾಕಿಸಿಕೊಂಡಿದ್ದ ಸೂಲಿಯಣ್ಣ ಶೆಟ್ಟಿ ಅವರು ಪಂಪ್ಗೂ ಸೋಲಾರ್ ಪವರ್ ಬಳಸಿದರೆ ಹೇಗೆ ಎಂದು ಯೋಚಿಸಿ ಕಾರ್ಯಪ್ರವೃತ್ತರಾದರು.
ಸೂಲಿಯಣ್ಣ ಶೆಟ್ಟಿಯವರು ಹೆಚ್ಚೇನೂ ಕಲಿತವರಲ್ಲ. ಆದರೆ ಅವರ ಯೋಚನೆ ಇದೀಗ ಯೋಜನೆಯಾಗಿ ಯಶಸ್ವಿಯಾಗಿದೆ. 3.5 ಲಕ್ಷ ರೂ. ಬ್ಯಾಂಕ್ ಸಾಲ ಪಡೆದು ಕಳೆದ ಎಪ್ರಿಲ್ ತಿಂಗಳಿನಲ್ಲಿ ತಮ್ಮ ಕೆರೆಯ ಸನಿಹದಲ್ಲಿ ಸೋಲಾರ್ ಪವರ್ ಪ್ಲಾಂಟ್ ಸ್ಥಾಪಿಸಿದ್ದಾರೆ. ಬಿಸಿಲಿನಲ್ಲಿ ಕಾರ್ಯಾಚರಿಸುವ ಸೋಲಾರ್ ಪ್ಲಾಂಟ್ಗೆ ಡಿಸಿ ಅಳವಡಿಸಲಾಗಿದ್ದು, ಹಗಲಿನಲ್ಲಿ ಬೆಳಗ್ಗೆ 8ರಿಂದ ಸಂಜೆ 6ರ ತನಕ ಬೇಕೆಂದಾಗ ಬಳಸಬಹುದಾಗಿದೆ. ಸೂಲಿಯಣ್ಣ ಶೆಟ್ಟಿ ಅವರು ತಮ್ಮ ಸೋಲಾರ್ ಪವರ್ ಪ್ಲಾಂಟ್ ಅವಲಂಬಿಸಿ 3ಎಚ್ಪಿ ಸಾಮರ್ಥ್ಯದ ಪಂಪ್ ಮೂಲಕ ಕೃಷಿ ತೋಟಕ್ಕೆ ನೀರುಣಿಸುತ್ತಾರೆ. ದಿನಕ್ಕೆರಡು ಬಾರಿಯಂತೆ ಒಂದೆರಡು ಗಂಟೆಗಳ ಕಾಲ ಮಾತ್ರ ತಮ್ಮ ತೋಟಕ್ಕೆ ನೀರು ಹಾಯಿಸಲು ಸೋಲಾರ್ ಪವರ್ ಪ್ಲಾಂಟ್ ಬಳಕೆ ಮಾಡುತ್ತಾರೆ. ಈ ಯಶಸ್ವೀ ಪ್ರಯೋಗ ಸುತ್ತಲಿನ ರೈತರ ಗಮನ ಸೆಳೆದಿದೆ.
ವಿದ್ಯುತ್ ಖರೀದಿಸಿ ಗ್ರಾಮಕ್ಕೆ ಹಂಚಲಿ:ಮೂಡುಗಲ್ಲುವಿನಲ್ಲಿರುವುದು ಕೇವಲ 5 ಮನೆಗಳು ಮಾತ್ರ. ಮೂಡುಗಲ್ಲು ಅಭಿವೃದ್ಧಿಯ ಹಾದಿಗೆ ವೈಲ್ಡ್ಲೈಫ್ ತೊಡರುಗಾಲಾಗಿದೆ. ಸಂಸದರ ಆದರ್ಶ ಗ್ರಾಮದ ವ್ಯಾಪ್ತಿಗೊಳಪಟ್ಟಿದ್ದರೂ ಎಷ್ಟರಮಟ್ಟಿಗೆ ಅಭಿವೃದ್ಧಿಯ ಪಾಲು ಈ ಗ್ರಾಮಕ್ಕೆ ದಕ್ಕೀತು ಎಂಬ ಲೆಕ್ಕಾಚಾರದಲ್ಲಿರುವಾಗಲೇ ಇಲ್ಲಿನ ಪ್ರಗತಿಪರ ರೈತ ಸೂಲಿಯಣ್ಣ ಶೆಟ್ಟಿ ಅವರ ಮಾದರಿ ಸಾಧನೆ ಗಮನಸೆಳೆದಿದೆ. ದೊಡ್ಡ ಮೊತ್ತವನ್ನು ಖರ್ಚು ಮಾಡಿ ಸೋಲಾರ್ ಪವರ್ ಪ್ಲಾಂಟ್ ಸ್ಥಾಪಿಸಿರುವ ಅವರಿಗೆ ಸರಕಾರ ಸಹಾಯಧನ ನೀಡಬೇಕು. ಅಥವಾ ವಿದ್ಯುತ್ ಇಲಾಖೆ ಒಪ್ಪಂದದ ಮೂಲಕ ಅವರಿಂದ ವಿದ್ಯುತ್ ಖರೀದಿಸಿ ಗ್ರಾಮದ ಕುಟುಂಬಗಳಿಗೆ ಹಂಚುವ ವ್ಯವಸ್ಥೆ ಮಾಡಿದಲ್ಲಿ ಇಡೀ ಗ್ರಾಮ ವಿದ್ಯುತ್ ಸ್ವಾವಲಂಬನೆ ಸಾಧಿಸಲು ಅವಕಾಶವಿದೆ. ಇಲ್ಲಿನ ಪ್ರತೀ ಮನೆಗೂ ಇನ್ವರ್ಟರ್ ಅಳವಡಿಸಿದಲ್ಲಿ ಹಗಲಿನಲ್ಲಿ ಮಾತ್ರವಲ್ಲದೇ ರಾತ್ರಿ ಕೂಡಾ ವಿದ್ಯುತ್ ಬಳಸಲು ಸಾಧ್ಯವಾಗುತ್ತದೆ. ಬಂಡವಾಳ ಹಾಕಿದವರಿಗೂ ಒಂದಷ್ಟು ಲಾಭವಾಗುತ್ತದೆ. ಈ ಬಗ್ಗೆ ಸರಕಾರ, ವಿದ್ಯುತ್ ಇಲಾಖೆ ಗಂಭೀರ ಚಿಂತನೆ ನಡೆಸಬೇಕು. – ರಾಘವೇಂದ್ರ ಕುಂಜತ್ತಾಯ, ಅರ್ಚಕರು, ಶ್ರೀ ಕೇಶವನಾಥ ದೇಗುಲ
ಹಳ್ಳಿಗೆ ವಿದ್ಯುತ್ ಬರುತ್ತದೆ ಎಂದು ಕಾದು ಕುಳಿತಿದ್ದರೆ ಏನೂ ಸಾಧನೆಯಾಗುತ್ತಿರಲಿಲ್ಲ. ಇದೀಗ ಸೋಲಾರ್ ಪವರ್ ಇರುವುದರಿಂದ ಕೃಷಿ ನೀರಾವರಿಯ ಚಿಂತೆ ಇಲ್ಲವಾಗಿದೆ. ಪವರ್ಕಟ್ ಸಮಸ್ಯೆಯೂ ಉದ್ಭವಿಸುವುದಿಲ್ಲ. ನಮ್ಮ ಕೆರೆ ವರ್ಷವಿಡೀ ಬತ್ತದೇ ಇರುವುದರಿಂದ ನೀರಿನ ಕೊರತೆಯೂ ಇಲ್ಲ. ಸೋಲಾರ್ ಪ್ಲಾಂಟ್ಗೆ ಇನ್ವರ್ಟರ್ ಅಳವಡಿಸಿದ್ದರೆ ಸೌರಶಕ್ತಿಯನ್ನು ಸಂಗ್ರಹಿಸಿಟ್ಟುಕೊಂಡು ಇತರ ಅಗತ್ಯ ಕಾರ್ಯಗಳಿಗೂ ಬಳಸಲು ಸಾಧ್ಯವಾಗುತ್ತಿತ್ತು. ಆದರೆ ಪವರ್ ಪ್ಲಾಂಟ್ ಸದ್ಯ ಕೃಷಿ ನೀರಾವರಿಗೆ ಮಾತ್ರ ಸೀಮಿತವಾಗಿದೆ. ಪೂರ್ಣ ಸಾಲದ ಹಣದಿಂದ ಪ್ಲಾಂಟ್ ಸ್ಥಾಪಿಸಿದ್ದೇನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.