ಬೆಂಗಳೂರು: ಬಿಜೆಪಿ ರಾಜ್ಯ ಸರಕಾರದ 3 ವರ್ಷಗಳ ಸಾರ್ಥಕ ಸೇವೆ ಮತ್ತು ಸಬಲೀಕರಣದ ಕಾರ್ಯದ ಹಿನ್ನೆಲೆಯಲ್ಲಿ ಜನಸ್ಪಂದನ ಕಾರ್ಯಕ್ರಮವು ಸೆ.10ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ ಎಂದು ರಾಜ್ಯದ ಸಚಿವ ಡಾ|| ಕೆ. ಸುಧಾಕರ್ ಅವರು ತಿಳಿಸಿದರು.
ಬಿಜೆಪಿ ಸರ್ಕಾರದ 3 ವರ್ಷಗಳ ಸಾಧನೆಯ ಕುರಿತು ಇಂದು ದೊಡ್ಡಬಳ್ಳಾಪುರದ ದೇವನಹಳ್ಳಿ ರಸ್ತೆಯ ರಘುನಾಥಪುರದ ಎಲ್ ಆಂಡ್ ಟಿ ಮುಂಭಾಗದಲ್ಲಿ “ಜನಸ್ಪಂದನ” ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆ ಮತ್ತು ವೀಕ್ಷಣೆ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
2 ವರ್ಷಗಳ ಕಾಲ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಳ್ಳೆಯ ಸೇವೆ ಮಾಡಿದ್ದಾರೆ. 2 ವರ್ಷಗಳಲ್ಲಿ ಅವರು ಕೈಗೊಂಡ ಪ್ರಮುಖ ನಿರ್ಧಾರಗಳು ಮತ್ತು ಕಾರ್ಯಾನುಷ್ಠಾನ, ಕಾಮನ್ಮ್ಯಾನ್ ಮುಖ್ಯಮಂತ್ರಿ ಎಂದು ಖ್ಯಾತಿ ಪಡೆದ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಕೈಗೊಂಡ ಹೊಸ ಕಾರ್ಯಕ್ರಮಗಳನ್ನು ಸೇರಿ 3 ವರ್ಷಗಳ ರಿಪೋರ್ಟ್ ಕಾರ್ಡನ್ನು ಜನರ ಮುಂದಿಡುವುದಾಗಿ ತಿಳಿಸಿದರು.
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ, ತುಮಕೂರಿನ ಕೆಲವು ತಾಲ್ಲೂಕುಗಳಿಂದ ಜನರು ಬರಲಿದ್ದು, ಬಿಜೆಪಿಯ ದೊಡ್ಡ ಜನಸಭೆ ಇದಾಗಲಿದೆ. ರಾಜ್ಯದ ಆರು ವಲಯಗಳಲ್ಲಿ ಇಂಥ ಜನಸಭೆ ಏರ್ಪಡಿಸಲಾಗುವುದು. ಈ ಭಾಗದಲ್ಲಿ ಬಿಜೆಪಿಯ ಶಕ್ತಿಯನ್ನು ಪ್ರಶ್ನಿಸುವವರಿಗೆ ಇದು ಉತ್ತರ ನೀಡಲಿದೆ ಎಂದು ಆಶಿಸಿದರು.
ಇಲ್ಲಿನ 40 ಎಕರೆಗೂ ಹೆಚ್ಚು ವಿಸ್ತೀರ್ಣದ ಪ್ರದೇಶದಲ್ಲಿ ಸಮಾವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಜನರು ಪಾಲ್ಗೊಳ್ಳಲಿದ್ದಾರೆ. ಇಲ್ಲಿಯೇ ತಾತ್ಕಾಲಿಕ ಅಡುಗೆ ಮನೆಯನ್ನೂ ಮಾಡಲಾಗಿದೆ. ಅಲ್ಲಿಯೂ ದೊಡ್ಡದಾಗಿ ಉಪಹಾರ- ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಎರಡು ದೊಡ್ಡ ಕ್ಯಾಟರಿಂಗ್ ಸಂಸ್ಥೆಗಳಿಗೆ ಇದರ ಗುತ್ತಿಗೆ ಕೊಡಲಾಗಿದೆ ಎಂದು ವಿವರ ನೀಡಿದರು.
3 ಲಕ್ಷ ಜನರಿಗೆ ಊಟ ಸಿದ್ಧವಾಗುತ್ತಿದೆ. ವೆಜಿಟೇಬಲ್ ಪಲಾವ್, ಮೊಸರನ್ನ, ಬಾದುಷಾ ಸಿಹಿತಿಂಡಿ ನೀಡಲಾಗುತ್ತದೆ. ವಾಹನ ನಿಲುಗಡೆಗೆ 200 ಎಕರೆಗೂ ಹೆಚ್ಚಿನ ವಿಸ್ತೀರ್ಣದಲ್ಲಿ 12 ಕಡೆ ಜಾಗಗಳನ್ನು ಗುರುತಿಸಲಾಗಿದೆ. ಟ್ರಾಫಿಕ್ ಜಾಮ್ ಆಗದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಪೊಲೀಸ್ ಅಧಿಕಾರಿಗಳ ಜೊತೆ ವಿಶೇಷ ಸಭೆ ಮಾಡಿದ್ದು, ಮನವಿ ಮಾಡಿದ್ದೇವೆ ಎಂದರು.
ಕೋವಿಡ್ ಸಂಕಷ್ಟವನ್ನು ನಮ್ಮ ಸರಕಾರ ಎದುರಿಸಿ ಶೇಕಡಾ 100 ಕನ್ನಡಿಗರಿಗೆ ಲಸಿಕೆ ನೀಡಿ ಅದನ್ನು ಮಣಿಸುವ ಪ್ರಯತ್ನ ಮಾಡಿದೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಸೇರಿದಂತೆ 3 ಬಾರಿ ಅತಿವೃಷ್ಟಿಯನ್ನು ನಮ್ಮ ಸರಕಾರ ಸಮರ್ಥವಾಗಿ ಎದುರಿಸಿದೆ. ಬೊಮ್ಮಾಯಿಯವರು ರೈತರ ಮಕ್ಕಳಿಗೆ ವಿದ್ಯಾಸಿರಿ ಪ್ರಕಟಿಸಿದ್ದಾರೆ. ಇಡೀ ದೇಶದಲ್ಲಿ ನಮ್ಮ ರಾಜ್ಯ ಮೊದಲನೆಯದು ಎಂಬ ಹೆಗ್ಗಳಿಕೆಗೆ ನಾವು ಪಾತ್ರರಾಗಿದ್ದೇವೆ. ಇದರಿಂದ 10 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನ ಲಭಿಸುತ್ತಿದೆ ಎಂದು ವಿವರಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡವರಿಗೆ 75 ಯೂನಿಟ್ ವಿದ್ಯುತ್ ನೀಡುವ ಯೋಜನೆ ಜಾರಿಯಾಗಿದೆ. 700ರಿಂದ 800 ರೂಪಾಯಿ ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ಸರಕಾರದ ಜನಪರ ಯೋಜನೆಗಳನ್ನು ಜನರ ಮುಂದಿಡುತ್ತೇವೆ. ನೂತನ ಶಿಕ್ಷಣ ನೀತಿಯನ್ನು ಮೊದಲ ಬಾರಿಗೆ ಜಾರಿಗೆ ತಂದಿದ್ದೇವೆ. ಆರೋಗ್ಯ ವ್ಯವಸ್ಥೆಯಲ್ಲಿ ಕೇವಲ 2 ವರ್ಷಗಳಲ್ಲಿ ಆರೇಳು ಪಟ್ಟುಗಳಷ್ಟು ಮೂಲಸೌಕರ್ಯ ವೃದ್ಧಿಯಾಗಿದೆ. ವೈದ್ಯರ ತೀವ್ರ ಕೊರತೆಯನ್ನು ನೀಗಿಸಲಾಗಿದೆ; ಆರೋಗ್ಯವಂತ ಕರ್ನಾಟಕ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕಕ್ಕೆ ನೀತಿ ಆಯೋಗದ ಮೆಚ್ಚುಗೆ
ನೂತನ ಆವಿಷ್ಕಾರ ಮಾಡುವ ಗರಿಷ್ಠ ಸಂಸ್ಥೆಗಳು ಕರ್ನಾಟಕದಲ್ಲಿವೆ ಎಂದು ನೀತಿ ಆಯೋಗವು ಗುರುತಿಸಿ ರಾಜ್ಯಕ್ಕೆ ಮೊದಲನೇ ಸ್ಥಾನವನ್ನು ನೀಡಿದೆ ಎಂದು ಡಾ|| ಕೆ. ಸುಧಾಕರ್ ಅವರು ತಿಳಿಸಿದರು. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲೂ 450ಕ್ಕೂ ಹೆಚ್ಚು ಸಂಸ್ಥೆಗಳು ಕರ್ನಾಟಕದಲ್ಲಿವೆ. ಕೋವಿಡ್ ಆರ್ಥಿಕ ಹಿಂಜರಿತ ಇಡೀ ಜಗತ್ತಿನಲ್ಲಿದ್ದರೂ ಮಾನ್ಯ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಿಂದ ಈ ದೇಶವು ಆರ್ಥಿಕವಾಗಿ ವೇಗ ಪಡೆದಿದೆ. ಪುನಶ್ಚೇತನ ಪಡೆದಿದೆ. ಬೊಮ್ಮಾಯಿಯವರ ನೇತೃತ್ವದಲ್ಲಿ ಅತ್ಯಧಿಕ ವಿದೇಶಿ ನೇರ ಹೂಡಿಕೆ (ಎಫ್ಡಿಐ) ನಮಗೆ ಬಂದಿದೆ ಎಂದರು. ದೇಶಕ್ಕೆ ಬಂದ ಎಫ್ಡಿಐಯ ಶೇ 30ಕ್ಕೂ ಹೆಚ್ಚು ಪಾಲನ್ನು ಕರ್ನಾಟಕ ಪಡೆದಿದೆ ಎಂದು ವಿವರ ನೀಡಿದರು.
ಜಿಎಸ್ಟಿ ಆದಾಯ ಹೆಚ್ಚಾಗಿದೆ. ಹೆಚ್ಚು ಕೈಗಾರಿಕೆಗಳ ಸ್ಥಾಪನೆ ಮೂಲಕ ಹೆಚ್ಚು ಉದ್ಯೋಗ ಸಿಗುತ್ತಿದೆ. ಇದೆಲ್ಲವನ್ನೂ ಜನರ ಮುಂದಿಡುತ್ತೇವೆ. ಈ ಕಾರ್ಯಕ್ರಮ ವ್ಯಕ್ತಿಪೂಜೆ ಅಲ್ಲ. ಜನರ ಹಬ್ಬದಂತೆ ಇರುತ್ತದೆ ಎಂದು ನುಡಿದರು. ಅನೇಕ ಫಲಾನುಭವಿಗಳೂ ಬರಲಿದ್ದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ ಎಂದರು.
ಛತ್ತೀಸಗಡದಲ್ಲಿ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಇಲ್ಲಿನ ಭಾಗವಹಿಸುವಿಕೆ ಖಾತ್ರಿಯಾಗಿಲ್ಲ. ಕೇಂದ್ರದ ನಮ್ಮ ಹಿರಿಯ ಸಚಿವೆ ಸ್ಮೃತಿ ಇರಾನಿ ಭಾಗವಹಿಸಲಿದ್ದಾರೆ. ವಿಧಾನಸಭಾ ಚುನಾವಣೆಗೆ ಕೇವಲ ಏಳೆಂಟು ತಿಂಗಳು ಬಾಕಿ ಇದೆ. ರಾಜಕೀಯ ಚುನಾವಣಾ ರಣಕಹಳೆಯನ್ನು ದೊಡ್ಡಬಳ್ಳಾಪುರದಿಂದ ಊದಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಮುಂದೂಡಿದರೂ ಸ್ಥಳೀಯ ನಾಯಕರು ಗರಿಷ್ಠ ಸಹಕಾರ ಕೊಡುತ್ತಿದ್ದಾರೆ. 5 ಸಾವಿರ ಬಸ್ಗಳನ್ನು ಈಗ ನಿಗದಿಪಡಿಸಲಾಗಿದೆ. ಈ ಎಲ್ಲ ನಾಯಕರಿಗೆ ಕೃತಜ್ಞತೆಗಳು ಎಂದು ತಿಳಿಸಿದರು. ಸಾವಿರಾರು ಸಂಖ್ಯೆಯಲ್ಲಿ ದ್ವಿಚಕ್ರ- ಚತುಷ್ಚಕ್ರ ವಾಹನಗಳು ಬರಲಿವೆ ಎಂದರು. 12 ಗಂಟೆಗೆ ಸಭೆ ಇದ್ದರೂ 10 ಗಂಟೆಯೊಳಗೆ ಬಂದು ಆಸೀನರಾಗುವಂತೆ ಅವರು ಮನವಿ ಮಾಡಿದರು.
ಇಲ್ಲಿ ಕಾರ್ಯಕ್ರಮ ನಡೆಸಲು ಒಪ್ಪಿಗೆ ನೀಡಿದ ಹಿರಿಯ ನಾಯಕ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರ ನಾಯಕರಿಗೆ ಕೃತಜ್ಞತೆ ಸಲ್ಲಿಸಿದರು.
ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಬೆಂಗಳೂರು ಮತ್ತು ಇತರ ಕಡೆಗಳಲ್ಲಿ ಅತಿವೃಷ್ಟಿಯನ್ನು ಸವಾಲಾಗಿ ಸ್ವೀಕರಿಸಿ ಸಿಎಂ ಮತ್ತು ಜನಪ್ರತಿನಿಧಿಗಳು ಅಹರ್ನಿಶಿ ದುಡಿಯುತ್ತಿದ್ದಾರೆ. ಬೆಂಗಳೂರಿನಲ್ಲಿ ಒತ್ತುವರಿಯು ದೀರ್ಘಕಾಲದ ಸಮಸ್ಯೆ ಎಂದು ಪ್ರಶ್ನೆಗೆ ಉತ್ತರ ನೀಡಿದರು. ಹಿಂದಿನ ಸರಕಾರಗಳ ಬಳುವಳಿ ಇದು ಎಂದರು.
ಕಾಂಗ್ರೆಸ್ನ ಸಿದ್ದರಾಮಯ್ಯ ವೈಯಕ್ತಿಕ ಕಾರ್ಯಕ್ರಮ ಮಾಡಿಕೊಂಡರು. ನಾವು ಅದಕ್ಕೂ ಮೊದಲೇ ಯೋಜನೆ ಮಾಡಿದ್ದೆವು. ನಾವು ಕಾರ್ಯಕರ್ತನ ಹತ್ಯೆ ಕಾರಣಕ್ಕೆ ಕಾರ್ಯಕ್ರಮ ಮುಂದೂಡಿದ್ದೇವೆ. ಅವರೇನು ಮಾಡಿದರು? ಯಾರು ಸತ್ತರೂ, ನೆರೆ ಬಂದರೂ ಕಾಂಗ್ರೆಸ್ ಪಕ್ಷದವರಿಗೆ ಏನೂ ಲೆಕ್ಕ ಇಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ನಾವೇನು ಬೊಮ್ಮಾಯಿ ಅಥವಾ ಯಡಿಯೂರಪ್ಪ ಅವರ ಬರ್ತ್ಡೇ ಮಾಡುತ್ತಿದ್ದೇವಾ ಎಂದು ಪ್ರಶ್ನಿಸಿದರು.
ಏನು ಮಾಡಿದ್ದಾರೆ, ಏನು ಮಾಡುವವರಿದ್ದಾರೆ ಎಂಬುದನ್ನು ಮಾನ್ಯ ಮುಖ್ಯಮಂತ್ರಿಯವರೇ ನಾಳೆ ತಿಳಿಸಲಿದ್ದಾರೆ. ನಾಳೆವರೆಗೆ ಕಾಯಿರಿ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು. ಕೊನೆಯ ಸಮಾವೇಶ ಬೆಂಗಳೂರಿನಲ್ಲಿ ನಡೆಯಲಿದೆ ಎಂದರು. ರಾಜ್ಯದ ಸಚಿವರಾದ ಎಂ.ಟಿ.ಬಿ.ನಾಗರಾಜ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಅವರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.