ಉಡುಪಿ: ಕೇಂದ್ರ ಕಾನೂನು ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ಮಂದಾರ್ತಿ ಹೆಗ್ಗುಂಜೆ ಮೂಲದ ಉದಯ ಕುಮಾರ್ ಶೆಟ್ಟಿ ನೇಮಕ ಗೊಂಡಿದ್ದಾರೆ. ಕಾನೂನು ಇಲಾಖೆಯ ಜಂಟಿ ಕಾರ್ಯದರ್ಶಿಯಾದ ಪ್ರಥಮ ಕನ್ನಡಿಗ ಎಂಬ ಹಿರಿಮೆಗೆ ಪಾತ್ರರಾಗಿದ್ದು, ಇಲಾಖೆಯಲ್ಲಿ ಅಧಿಕಾರಿ ಸ್ಥರದ ನಂಬರ್ 3 ಹುದ್ದೆ ಇದಾಗಿದೆ.
ಪ್ರಧಾನಿ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟ ನೇಮಕಾತಿ ಸಮಿತಿಯು ಉದಯ ಕುಮಾರ್ ಶೆಟ್ಟಿ ಅವರನ್ನು ನೇಮಿಸಿದೆ.
ಉದಯ ಕುಮಾರ್ ಶೆಟ್ಟಿ ಅವರು ಹೆಗ್ಗುಂಜೆಯ ಭಂಡಾರ ದೇವಸ್ಥಾನ ಖಾ.ಹಿ.ಪ್ರಾ. ಶಾಲೆ, ಮಂದಾರ್ತಿ ದುರ್ಗಾಪರಮೇಶ್ವರಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರು. ಬಾರಕೂರು ನೇಶನಲ್ ಪ.ಪೂ. ಕಾಲೇಜಿನಲ್ಲಿ ಪಿಯುಸಿ, ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಪದವಿ, ಬೆಂಗಳೂರು ವಿ.ವಿ.ಯಲ್ಲಿ ಕಾರ್ಮಿಕ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ವೈಕುಂಠ ಬಾಳಿಗಾ ಕಾಲೇಜಿನಲ್ಲಿ 1992ರಿಂದ 2000ರ ವರೆಗೆ ಪ್ರಾಧ್ಯಾಪಕರಾಗಿ, ಭಾರತೀಯ ಕಾನೂನು ಆಯೋಗದಲ್ಲಿ 2001ರಿಂದ 2003ರ ವರೆಗೆ ಕಾನೂನು ಅಧಿಕಾರಿಯಾಗಿ, 2003ರಲ್ಲಿ ಭಾರತೀಯ ಕಾನೂನು ಸೇವೆ ಪರೀಕ್ಷೆಯಲ್ಲಿ ಉತ್ತಿರ್ಣರಾಗಿ ಕಾನೂನು ಸಚಿವಾಲಯದ ಸಹಾಯಕ ಶಾಸಕಾಂಗ ಸಮಾಲೋಚಕರಾಗಿ ಸೇರ್ಪಡೆಗೊಂಡರು. ಬಳಿಕ ಉಪ ಶಾಸಕಾಂಗ ಸಮಾಲೋಚಕರಾಗಿ, ಹೆಚ್ಚುವರಿ ಸಮಾಲೋಚಕರಾಗಿ ಕಾರ್ಯನಿರ್ವಹಿಸಿದ್ದರು.
ಸಂಸತ್ತಿನಲ್ಲಿ ಮಂಡನೆಯಾಗುವ ಮಸೂದೆಗಳ ಕರಡು ತಯಾರಾಗುವುದು ಕಾನೂನು ಸಚಿವಾಲಯದಲ್ಲಿ. ಕೇಂದ್ರ ಸರಕಾರದ ಕಾನೂನುಗಳ ತಯಾರಿ ಹೊಣೆಗಾರಿಕೆಯನ್ನು ಉದಯ ಕುಮಾರ್ ಶೆಟ್ಟಿ ನಿರ್ವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.