ಗೌತಮಬುದ್ಧ ಕೇಳಿದಂತೆ ಸಾವಿಲ್ಲದ ಮನೆಯ ಸಾಸಿವೆಯನ್ನಾದರೂ ತರಬಹುದು, ದೇವನೂರರ ಪುಸ್ತಕದಲ್ಲಿ ಸುಳ್ಳಿಲ್ಲದ ಸಾಲನ್ನು ತೋರಿಸುವುದು ಕಷ್ಟ! ಇಲ್ಲಿ ಪುಟ ಪುಟಗಳಲ್ಲೂ, ಪ್ರತಿ ಸಾಲಿನಲ್ಲೂ ಸತ್ಯದ ತಲೆಗೆ ಹೊಡೆದಂತೆ ಸುಳ್ಳುಗಳನ್ನು ಪೋಣಿಸಲಾಗಿದೆ. ಈ ಉದಾಹರಣೆಗಳನ್ನು ನೋಡಿ:
(6) ಸ್ವಾಮಿ ವಿವೇಕಾನಂದರನ್ನು ಅನವಶ್ಯಕ ಎಳೆದುತರುವ ದೇವನೂರ, ವಿವೇಕಾನಂದರು ಗೀತೆಯ ಅಧಿಕೃತತೆಯನ್ನು ಪ್ರಶ್ನಿಸಿದ್ದಾರೆಂದೂ, ಗೀತೆ ತೀರ ಇತ್ತೀಚಿನ ಬರಹ ಎಂದೂ ಅಪ್ಪಣೆ ಕೊಡಿಸುತ್ತಾರೆ. “ವಿವೇಕಾನಂದರು ಗೀತೆಯ ಅಧಿಕೃತತೆಯ ಬಗ್ಗೆ ಮಾತಾಡುತ್ತ – ʼಶಂಕರಾಚಾರ್ಯರು ಭಾಷ್ಯವನ್ನು ಬರೆದು ಗೀತೆಯನ್ನು ಪ್ರಸಿದ್ಧ ಮಾಡುವುದಕ್ಕೆ ಮುಂಚೆ ಜನರಿಗೆ ಗೀತೆಯ ವಿಷಯವೇ ಹೆಚ್ಚಾಗಿ ಗೊತ್ತಿರಲಿಲ್ಲ. ಅದಕ್ಕಿಂತಲೂ (ಶಂಕರಾಚಾರ್ಯರಿಗಿಂತಲೂ) ಮುಂಚೆ ಗೀತೆಯ ಮೇಲೆ ಬೋಧಾಯನ ವೃತ್ತಿ ಎಂಬುದೊಂದು ಇತ್ತು ಎಂದು ಅನೇಕರ ಅಭಿಪ್ರಾಯವಾಗಿದೆ. ಆದರೆ ಬೋಧಾಯನರು ವೇದಾಂತ ಸೂತ್ರಗಳ ಮೇಲೆ ಬರೆದ ಭಾಷ್ಯವು, ನಾನು ಭರತಖಂಡವನ್ನೆಲ್ಲಾ ಸಂಚಾರ ಮಾಡುವಾಗ ಎಲ್ಲೂ ಸಿಕ್ಕಲಿಲ್ಲ. ವೇದಾಂತ ಸೂತ್ರಗಳ ಮೇಲೆ ಬರೆದರೆಂದು ಪ್ರಖ್ಯಾತಿ ಪಡೆದ (ಪುರಾತನ) ಬೋಧಾಯನ ಭಾಷ್ಯವೇ ಅನುಮಾನಾಸ್ಪದ ಕಾರ್ಗತ್ತಲಿನಲ್ಲಿ ಹುದುಗಿರುವಾಗ ಗೀತೆಯ ಮೇಲೆ ಬೋಧಾಯನ ಭಾಷ್ಯವಿತ್ತು ಎಂಬುದನ್ನು ದೃಢಪಡಿಸಲು ಸಾಧ್ಯವೇ ಇಲ್ಲ. ಕೆಲವರು ಶಂಕರಾಚಾರ್ಯರೇ ಗೀತೆಯ ಕರ್ತೃವೆಂದೂ ಅದನ್ನು ಅವರು ಮಹಾಭಾರತದಲ್ಲಿ ಸೇರ್ಪಡೆ ಮಾಡಿದರೆಂದೂ ಹೇಳುತ್ತಾರೆʼ – ಎಂದಿದ್ದಾರೆ” – ಎಂಬುದು ಮಹಾದೇವ ಬರೆದುಕೊಂಡಿರುವ ಸಾಲುಗಳು. ಬಹುಶಃ ತಮ್ಮ ವಾದನಿರ್ಮಿತಿಯಲ್ಲಿ ಸ್ವಾಮಿ ವಿವೇಕಾನಂದರನ್ನು ಒಮ್ಮೆಯಾದರೂ ಎಳೆದುತರದೇ ಹೋದರೆ ಬುದ್ಧಿಜೀವಿಗಳಿಗೆ ತಿಂದದ್ದು ಅರಗುವುದಿಲ್ಲವೆಂದು ಕಾಣುತ್ತದೆ. ಐದಾರು ವರ್ಷಗಳ ಹಿಂದೆ ಸಿದ್ದರಾಮಯ್ಯನ ಮಾಜಿ ಸಲಹೆಗಾರ ಬುದ್ಧಿಜೀವಿಯೊಬ್ಬ ವಿವೇಕಾನಂದರ ಕುರಿತು ಇಲ್ಲಸಲ್ಲದ ಮಾತುಗಳನ್ನೆಲ್ಲ ಬರೆದು ಕುಪ್ರಸಿದ್ಧನಾದದ್ದು ಗೊತ್ತೇ ಇದೆ. ಪ್ರಗತಿಪರರ ಆಸ್ಥಾನವಿದ್ವಾಂಸರಾದ ಬರಗೂರು ರಾಮಚಂದ್ರಪ್ಪ ಕೂಡ ತಮ್ಮ ಬರಹಗಳಲ್ಲಿ ಆಗಾಗ ವಿವೇಕಾನಂದರನ್ನು ತಪ್ಪುತಪ್ಪಾಗಿ ಕೋಟ್ ಮಾಡಿ, ಮೈಲೇಜ್ ಗಿಟ್ಟಿಸಿಕೊಳ್ಳುತ್ತಾರೆ. ತಾನು ಪರಿಷ್ಕರಣೆ ಮಾಡಿದ ಪಠ್ಯಪುಸ್ತಕಗಳಲ್ಲಂತೂ ಅವರು ತನ್ನ ಸೋಷಿಯಲಿಸ್ಟ್ ವಾದಗಳನ್ನೆಲ್ಲ ವಿವೇಕಾನಂದರ ಬಾಯಿಯಲ್ಲಿ ಹೇಳಿಸಿದ್ದರು!
ಇರಲಿ, ಈಗ ಇಲ್ಲಿ ದೇವನೂರು ಮಾಡಿರುವ ತಪ್ಪೇನು, ಹೇಳಿರುವ ಸುಳ್ಳೇನು ಎಂಬುದನ್ನು ಗಮನಿಸೋಣ. ವಿವೇಕಾನಂದರು ಕಲಕತ್ತೆಯ ರಾಮಕೃಷ್ಣ ಮಿಷನಿನ ಮುಖ್ಯ ಕಚೇರಿಯಾದ ರಾಮಕೃಷ್ಣ ಮಠದಲ್ಲಿದ್ದಾಗ, 1897ರಲ್ಲಿ, ಮಠಕ್ಕೆ ಸಂನ್ಯಾಸಿಗಳಾಗುವ ಇಚ್ಛೆಯಿಂದ ಬರುತ್ತಿದ್ದ ಯುವಕರಿಗೆ ಭಗವದ್ಗೀತೆ ಮತ್ತು ವೇದಾಂತದ ಪಾಠ ಮಾಡುತ್ತಿದ್ದರು. ಆಗ ಒಮ್ಮೆ ಅವರು ಗೀತೆಯ ಬಗ್ಗೆ ಬಂಗಾಳಿ ಭಾಷೆಯಲ್ಲಿ ಅಸ್ಖಲಿತವಾಗಿ ಒಂದು ಉಪನ್ಯಾಸ ಕೊಟ್ಟರು. ಆ ಉಪನ್ಯಾಸವನ್ನು ನಂತರ ಪೂರ್ಣವಾಗಿ ಬರೆದಿಡಲಾಯಿತು ಮತ್ತು ಅದು ವಿವೇಕಾನಂದರ ಸಮಗ್ರ ಕೃತಿ ಶ್ರೇಣಿಯಲ್ಲೂ ಸೇರಿತು. ಆ ಉಪನ್ಯಾಸದ ಪ್ರಾರಂಭದಲ್ಲಿ ಸ್ವಾಮಿ ವಿವೇಕಾನಂದರು, ಭಗವದ್ಗೀತೆ ನಿಜಕ್ಕೂ ಪ್ರಾಚೀನವೇ ಅಥವಾ ಇತ್ತೀಚಿನ ಯಾವುದಾದರೂ ವ್ಯಕ್ತಿ ಬರೆದಿರುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಯನ್ನು ತಾವೇ ಹಾಕಿಕೊಂಡು ಒಂದಷ್ಟು ವಿವರಣೆ ಕೊಡುತ್ತಾರೆ. ಆ ಸಂದರ್ಭದಲ್ಲಿ, ಅವರು ಕೇಳಿಕೊಳ್ಳುವ ನಾಲ್ಕು ಪ್ರಶ್ನೆಗಳು: (1) ಅದು ನಿಜಕ್ಕೂ ಮಹಾಭಾರತದ ಭಾಗವೆ? (2) ಶ್ರೀಕೃಷ್ಣನೆಂಬ ಐತಿಹಾಸಿಕ/ಪೌರಾಣಿಕ ವ್ಯಕ್ತಿ ನಿಜಕ್ಕೂ ಇದ್ದನೆ? (3) ಗೀತೆಯಲ್ಲಿ ಪ್ರಸ್ತಾಪ ಮಾಡಿರುವಂತೆ ಕುರುಕ್ಷೇತ್ರದ ಮಹಾಯುದ್ಧವೆಂಬುದು ನಿಜಕ್ಕೂ ನಡೆಯಿತೆ? (4) ಮಹಾಭಾರತದಲ್ಲಿ ಬರುವ ಕೌರವ-ಪಾಂಡವಾದಿಗಳು ನಿಜಕ್ಕೂ ಪ್ರಪಂಚದಲ್ಲಿ ನಡೆದಾಡಿದ ವ್ಯಕ್ತಿಗಳೆ? – ಅವರ ಇಡೀ ಉಪನ್ಯಾಸವು ಈ ಪ್ರಶ್ನೆಗಳಿಗೆ ಉತ್ತರ ಕೊಟ್ಟುಕೊಂಡು, ನಂತರ ಗೀತೆಯ ಮಹತ್ವವನ್ನು ತಿಳಿಸುವ ಕಡೆಗೆ ಹೊರಳಿಕೊಳ್ಳುತ್ತದೆ.
ಹೀಗೆ ಲೇಖನದ ಅಥವಾ ಉಪನ್ಯಾಸದ ಪ್ರಾರಂಭದಲ್ಲಿ ಸ್ವಯಂ ಒಂದಷ್ಟು ಪ್ರಶ್ನೆಗಳನ್ನು ಹಾಕಿಕೊಂಡು, ಅವಕ್ಕೆ ಉತ್ತರ ಕೊಡುತ್ತ ತನ್ನ ಅಭಿಪ್ರಾಯ ಅಥವಾ ಸಿದ್ಧಾಂತವನ್ನು ಮಂಡಿಸುತ್ತಹೋಗುವುದು ಬಹಳಷ್ಟು ಪ್ರಾಜ್ಞರ ತರ್ಕದ ರೀತಿ. ಡಾ. ಅಂಬೇಡ್ಕರರ ಬರಹಗಳನ್ನು ಓದಿದವರಿಗಂತೂ ಇದು ಚಿರಪರಿಚಿತ ಮಾರ್ಗ. ಈ ಸ್ವರೂಪದಲ್ಲಿರುವ ಸ್ವಾಮಿ ವಿವೇಕಾನಂದರ ಭಾಷಣದ ಕೆಲವೇ ಕೆಲವು ಸಾಲುಗಳನ್ನು (ಮುಖ್ಯವಾಗಿ ಪ್ರಶ್ನೆಗಳನ್ನಷ್ಟೇ) ಎತ್ತಿಕೊಂಡು, “ನೋಡಿ, ಸ್ವಾಮಿ ವಿವೇಕಾನಂದರೇ ಈ ರೀತಿ ಅನುಮಾನ ವ್ಯಕ್ತಪಡಿಸಿದ ಮೇಲೆ ಇನ್ನೇನು!” ಎಂದು ಹೇಳುವ ಮಹಾದೇವರ ಬುದ್ಧಿವಂತಿಗೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ವಿವೇಕಾನಂದರ ಬರಹ/ಭಾಷಣದಲ್ಲಿ ಮುಂದಿನ ಸಾಲುಗಳಲ್ಲಿ – “ಶಂಕರಾಚಾರ್ಯರು ಭಗವದ್ಗೀತೆಗೆ ಭಾಷ್ಯ ಬರೆಯುವ ತನಕವೂ ಅದು ಅಷ್ಟೊಂದು ಪ್ರಸಿದ್ಧವಾಗಿರಲಿಲ್ಲ. ಆಚಾರ್ಯರು ಭಾಷ್ಯ ಬರೆದು ಗೀತೆಗೆ ಒಂದು ಉನ್ನತ ಸ್ಥಾನವನ್ನು ತಂದುಕೊಟ್ಟರು. ಆದರೆ ಅವರಿಗಿಂತ ಮೊದಲು ಬೋಧಾಯನರು ಕೂಡ ಗೀತೆಗೆ ಒಂದು ಭಾಷ್ಯವನ್ನು ಬರೆದಿದ್ದರಂತೆ. ಹಾಗೊಂದು ಭಾಷ್ಯ ಸಿಕ್ಕಿದ್ದೇ ಆದರೆ ಗೀತೆಯ ಪ್ರಾಚೀನತೆ ಕಿಂಚಿತ್ ಸಂಶಯವೂ ಇಲ್ಲದಂತೆ ಸಿದ್ಧವಾಗಿಬಿಡುತ್ತದೆ. ಬೋಧಾಯನರು ವೇದಾಂತಸೂತ್ರಗಳ ಮೇಲೆಯೂ ಭಾಷ್ಯವನ್ನು ಬರೆದಿದ್ದಾರೆ. ರಾಮಾನುಜಾಚಾರ್ಯರು ತಮ್ಮ ಶ್ರೀಭಾಷ್ಯವನ್ನು ಈ ಭಾಷ್ಯವನ್ನಿಟ್ಟುಕೊಂಡೇ ಬರೆದರೆಂದು ಪ್ರತೀತಿ. ಆಚಾರ್ಯ ಶಂಕರರು ಬೋಧಾಯನರ ಉಲ್ಲೇಖ ಮಾಡುತ್ತಾರೆ. ಸ್ವಾಮಿ ದಯಾನಂದ ಸರಸ್ವತಿಗಳಂತೂ ತಮ್ಮ ಬರಹಗಳಲ್ಲಿ ಬೋಧಾಯನರನ್ನು ಹಲವು ಬಾರಿ ನೆನೆಸಿಕೊಂಡಿದ್ದಾರೆ. ರಾಮಾನುಜರಿಗೆ ಸಿಕ್ಕಿದ ಬೋಧಾಯನಭಾಷ್ಯವೇ ಜರಾಜೀರ್ಣ ಸ್ಥಿತಿಯಲ್ಲಿತ್ತೆಂದು ಹೇಳುತ್ತಾರೆ. ನನಗಂತೂ, ನನ್ನ ಭಾರತಸಂಚಾರದ ಸಮಯದಲ್ಲಿ ಬೋಧಾಯನರ ಕೃತಿ ಸಿಗಲಿಲ್ಲ. ವೇದಾಂತಸೂತ್ರಗಳಿಗೆ ಬರೆದ ಭಾಷ್ಯದ ಗತಿಯೇ ಇಂತಿರುವಾಗ ಇನ್ನು ಬೋಧಾಯನರು ಗೀತೆಗೆ ಬರೆದ ಭಾಷ್ಯವನ್ನು ಎಲ್ಲಿ ಹುಡುಕೋಣ?” ಎಂಬ ಮಾತುಗಳು ಬಂದಿವೆ. ಈಗ ಇದನ್ನೂ ಮೇಲೆ ಮಹಾದೇವರು ಬರೆದ ಕುತ್ಸಿತ ಮನಸ್ಸಿನ ಸಾಲುಗಳನ್ನೂ ಹೋಲಿಸಿ ನೋಡಿ. ವಿವೇಕಾನಂದರ ಮಾತುಗಳಲ್ಲಿ ಗೀತೆಯ ಬಗ್ಗೆ ತುಚ್ಛಭಾವನೆ ಎಲ್ಲಿದೆ?
ಗೀತೆಯ ಬಗ್ಗೆ ಮುಂದುವರಿದು ಸ್ವಾಮಿ ವಿವೇಕಾನಂದರು, ಗೀತೆಯು ಕೊಡುವ ಜ್ಞಾನದ ಮುಂದೆ ಅದರ ಪ್ರಾಚೀನತ್ವ-ಅರ್ವಾಚೀನತ್ವಗಳ ಪ್ರಶ್ನೆಯೇ ಉದ್ಭವಿಸುವುದಿಲ್ಲವೆಂದು ನಿರ್ಣಯ ಕೊಡುತ್ತಾರೆ. ತಾನು ಕೇಳಿಕೊಂಡ ನಾಲ್ಕು ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಗಳನ್ನು ಕೊಟ್ಟುಕೊಂಡ ಮೇಲೆ, ಉಪನ್ಯಾಸದ ಮುಕ್ಕಾಲುಭಾಗವನ್ನು ಸ್ವಾಮಿ ವಿವೇಕಾನಂದರು ಮೀಸಲಿಡುವುದು ಭಗವದ್ಗೀತೆಯ ಮಹತ್ತಿನ ಕುರಿತು ವರ್ಣಿಸುವುದಕ್ಕಾಗಿ! ಆದರೆ ಆ ಎಲ್ಲ ಭಾಗಗಳನ್ನು ಬಹಳ ಜಾಣ್ಮೆಯಿಂದ ಮುಚ್ಚಿಟ್ಟು ತನಗನುಕೂಲವಾಗುವ ಎರಡೇ ಎರಡು ಸಾಲುಗಳನ್ನು ಎತ್ತಿ, ವಿವೇಕಾನಂದರ ವ್ಯಕ್ತಿತ್ವವನ್ನು ವಿದ್ವಾಂಸರ ಕಣ್ಣಿಗೂ ಸಂಶಯಾಸ್ಪದವಾಗಿಸುವ ಮಹಾದೇವರ ಜಾಣ್ಮೆಯನ್ನು ಮೆಚ್ಚಲೇಬೇಕು!
(7) ಇನ್ನು ಈ ಬುದ್ಧಿಜೀವಿಗಳ ಸದಾ ಕಾಲದ ಇನ್ನೊಂದು ಗೋಳಾಟವೆಂದರೆ ಸಂಸ್ಕೃತವನ್ನು ಭಾರತದ ಆಡಳಿತಭಾಷೆಯಾಗಿ ಮಾಡಲು ಸಂಘಿಗಳು ಹೊರಟಿದ್ದಾರೆ ಎಂಬುದು. “ಸಂಸ್ಕೃತವು ಭಾರತದ ಸಂಪರ್ಕಭಾಷೆಯ ಸ್ಥಾನವನ್ನು ಪಡೆಯುವವರೆಗೆ ಅನುಕೂಲಕರ ದೃಷ್ಟಿಯಿಂದ ಹಿಂದಿ ಭಾಷೆಗೆ ಆದ್ಯತೆ ನೀಡಬೇಕು ಎನ್ನುತ್ತಾರೆ ಗೋಲ್ವಾಲ್ಕರ್” – ಎಂಬುದು ಮಹಾದೇವರು ತಮ್ಮ ಸುಳ್ಳುಗಳ ಪುಸ್ತಕದಲ್ಲಿ ಬರೆಯುವ ಸಾಲು. ಇಲ್ಲಿ ಇವರ ಜಾಣ್ಮೆಯನ್ನು ಗಮನಿಸಿ. ಮೊದಲನೆಯದಾಗಿ ಸಂಸ್ಕೃತವಿರೋಧಿ ಭಾವನೆಗಳನ್ನು ಜನರಲ್ಲಿ ಜಾಗೃತಗೊಳಿಸಬೇಕು ಮತ್ತು ಸಂಘವು ಸಂಸ್ಕೃತದ ಪ್ರತಿಪಾದಕ ಎಂದು ಪ್ರಚಾರಮಾಡಬೇಕು. ಎರಡನೆಯದಾಗಿ, ಸಂಘವು ಹಿಂದಿಯನ್ನು ದೇಶದಲ್ಲಿ ಸಂಪರ್ಕಭಾಷೆಯಾಗಿ ಪ್ರಚಾರಮಾಡಲು ಶ್ರಮಿಸುತ್ತಿದೆ ಎಂದೂ ಜನಮಾನಸದಲ್ಲಿ ಬಿಂಬಿಸಬೇಕು! ಆದರೆ ವಾಸ್ತವ ಏನು? ಗೋಲ್ವಾಲ್ಕರರ ಚಿಂತನಗಂಗೆಯಲ್ಲಿ “In fact all our languages, whether Tamil or Bengali, Marathi or Punjabi are our national languages. All these languages and dialects are like so many flowers shedding the same rich fragrance of our national culture.” ಎಂಬ ಮಾತುಗಳು ಬಂದಿವೆ. ಮುಂದಿನ ಸಾಲುಗಳಲ್ಲಿ “ಭಾರತಕ್ಕೆ ನಿಜಕ್ಕೂ ಅಪಾಯವಿದ್ದರೆ ಅದು ಇಂಗ್ಲೀಷಿನಿಂದ ಮಾತ್ರ. ಯಾಕೆಂದರೆ ಆ ಭಾಷೆ, ಕೇವಲ ಭಾಷೆಯಾಗಿ ಭಾರತದ ನೆಲಕ್ಕೆ ಬರುವುದಲ್ಲ; ತನ್ನ ಜೊತೆ ವಿದೇಶೀ ಸಂಸ್ಕೃತಿ, ಚಿಂತನೆ, ಜೀವನಪದ್ಧತಿಗಳನ್ನು ಕೂಡ ತರುತ್ತದೆ. ಹಾಗಾಗಿ ಭಾರತವು ತನ್ನದೇ ನೆಲದಲ್ಲಿ ಹುಟ್ಟಿದ ಯಾವುದಾದರೂ ಭಾಷೆಯನ್ನೇ ಸಂಪರ್ಕಭಾಷೆಯಾಗಿ ಇಟ್ಟುಕೊಳ್ಳುವುದು ಅತ್ಯಂತ ಅಗತ್ಯ” ಎಂಬುದನ್ನು ಗೋಲ್ವಾಲ್ಕರ್ ಪ್ರತಿಪಾದನೆ ಮಾಡುತ್ತಾರೆ. ಇಂಗ್ಲೀಷಿನಲ್ಲಿ ಸಾವಿರಾರು ಪುಟಗಳನ್ನು ಬರೆದ, ವಿದೇಶೀ ವಿಶ್ವವಿದ್ಯಾಲಯಗಳಲ್ಲಿ ಓದಿಬಂದ ಡಾ. ಅಂಬೇಡ್ಕರ್ ಕೂಡ ಇದೇ ಅಭಿಪ್ರಾಯವನ್ನು ಹೊಂದಿದ್ದರು ಎಂಬುದನ್ನು ಗಮನಿಸಬೇಕು. ತನ್ನ ವಾದಕ್ಕೆ ಪುಷ್ಟಿಯಾಗಿ ಗೋಲ್ವಾಲ್ಕರ್ ಒಂದು ಉದಾಹರಣೆ ಕೊಟ್ಟಿದ್ದಾರೆ. ತಮಿಳನೊಬ್ಬ “ನಮಗೆ ಹಿಂದಿ ಬೇಡ” ಎಂದಾಗ, “ಹಾಗಾದರೆ ನಿಮ್ಮ ಸ್ಥಳೀಯ ಕೋರ್ಟುಗಳಲ್ಲಿ ನೀವು ತಮಿಳಲ್ಲದೆ ಇಂಗ್ಲೀಷಿನಲ್ಲೇಕೆ ವಾದಮಾಡುತ್ತೀರಿ, ತೀರ್ಪು ಬರೆಯುತ್ತೀರಿ? ನಿಮ್ಮ ನಿಜವಾದ ಶತ್ರು ಹಿಂದಿಯಲ್ಲ, ಇಂಗ್ಲೀಷ್” ಎನ್ನುತ್ತಾರೆ ಗೋಲ್ವಾಲ್ಕರ್. ಹಾಗೆ ಹೇಳುವುದರ ಜೊತೆಗೇ, ಭಾರತದೊಳಗೆ ಭಾಷೆಯ ವಿಷಯದಲ್ಲಿ ನಡೆಯುವ ಕಚ್ಚಾಟಗಳ ಬಗ್ಗೆ ಕೂಡ ಗಮನಸೆಳೆಯುತ್ತಾರೆ. ದಕ್ಷಿಣದವನೊಬ್ಬ ಹಿಂದಿಯನ್ನು ಬಯ್ಯುವ, ಅದಕ್ಕೆ ಪ್ರತಿಯಾಗಿ ಉತ್ತರದವನೊಬ್ಬ ದ್ರವಿಡ ಭಾಷೆಗಳನ್ನು ಹೀಯಾಳಿಸುವ ಪ್ರಸಂಗಗಳನ್ನು ಉದಾಹರಿಸಿ ಗೋಲ್ವಾಲ್ಕರರು “ಇಂಥ ಪರಭಾಷಾ ಅಸಹಿಷ್ಣುತೆ ಹಾಗೂ ಸ್ವಭಾಷೆಯ ಅತಿಮೋಹ ಎರಡೂ ದೇಶದ ಸಮಗ್ರತೆಗೆ ಅಪಾಯ ತಂದೊಡ್ಡುತ್ತವೆ” ಎಂಬ ಮಾತನ್ನು ಚಿಂತನಗಂಗೆಯಲ್ಲಿ ಹೇಳಿದ್ದಾರೆ. “Long live all languages” ಎಂಬುದು ಆ ಪುಸ್ತಕದ ಒಂದು ಭಾಗದ ಉಪಶೀರ್ಷಿಕೆ. ಇದೆಲ್ಲವನ್ನೂ ಮರೆಮಾಚಿ ಸಂಘವನ್ನು ಹಿಂದಿಪ್ರತಿಪಾದಕನೆಂದೂ ಕನ್ನಡವಿರೋಧಿಯಾಗಿಯೂ ಬಿಂಬಿಸಲು ಪಾಪ, ದೇವನೂರರು ಅದೆಷ್ಟು ಬುದ್ಧಿಶಕ್ತಿ ಖರ್ಚುಮಾಡಬೇಕಾಯಿತೋ!
(8) ದೇವನೂರರು ತಮ್ಮ ಕೃತಿಯಲ್ಲಿ ಎತ್ತಿರುವ ಇನ್ನೊಂದು ಅಂಶವಂತೂ ಹಾಸ್ಯಾಸ್ಪದವಾಗಿದೆ. ಅದು ಆರ್ಯ (ʼಆರ್ಯನ್ʼ) ಜನಾಂಗದ ಕುರಿತಾದದ್ದು. ಇಷ್ಟು ದಿನ ಆರ್ಯ ಎಂಬ ರೇಸ್/ಜನಾಂಗ ಇರಲಿಲ್ಲ; ಅದೆಲ್ಲ ಎಡದವರ ಸೃಷ್ಟಿ ಎಂದು ಬಲಪಂಥೀಯರು ಹೇಳಿಕೊಂಡುಬರುತ್ತಿದ್ದರು. ಆದರೆ ದೇವನೂರ ತನ್ನ ಕೃತಿಯಲ್ಲಿ ಈ ಒಟ್ಟಾರೆ ಚರ್ಚೆಯ ಮೇಜನ್ನೇ ಉತ್ತರ-ದಕ್ಷಿಣ ತಿರುಗಿಸಿ, ಸಂಘಿಗಳೆಲ್ಲರೂ ಆರ್ಯಸಿದ್ಧಾಂತದ ಪ್ರತಿಪಾದಕರು ಎಂಬ ಹೊಸ ವಾದವನ್ನು ಮುಂದಿಟ್ಟಿದ್ದಾರೆ! ಇದನ್ನು ಓದಿದರೆ ಬಹುಶಃ ಸಂಘಿಗಳಿಗಿಂತಲೂ ಎಡಪಂಥೀಯ ಎಡಬಿಡಂಗಿಗಳಿಗೇ ಒಮ್ಮೆ ಅಚ್ಚರಿಯಾಗಬಹುದು. ದೇವನೂರರ ಪ್ರಕಾರ ಆರೆಸ್ಸೆಸ್ ನಂಬಿಕೆಗಳಲ್ಲಿ ಒಂದು, ʼಆರ್ಯನ್ ಶ್ರೇಷ್ಠ ತಳಿ ಸಿದ್ಧಾಂತʼ! “ಇದು ಆರೆಸ್ಸೆಸ್ನ ಅಂತರಂಗದ ಗೀಳಾಗಿದೆ. ಇದರಲ್ಲೂ ಕೂಡ ಆರ್ಯನ್ ಶ್ರೇಷ್ಠ ತಳಿಯ ಕ್ರೂರ ಸರ್ವಾಧಿಕಾರಿ ಹಿಟ್ಲರನೇ ಆರೆಸ್ಸೆಸ್ಸಿಗೆ ಆಚಾರ್ಯ ಪುರುಷ. ಗೋಲ್ವಾಲ್ಕರ್ ತಳಿವಿಜ್ಞಾನದ ಬಗ್ಗೆ ಹಿಟ್ಲರನಗಿಂತಲೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ಸನಾತನ ಭಾರತದಲ್ಲಿ ಆರ್ಯನ್ ತಳಿ ಪ್ರಯೋಗ ಪುರಾತನ ಕಾಲದಿಂದಲೂ ಇದೆ ಅನ್ನುತ್ತಾರೆ” – ಎಂದು ಬರೆದಿದ್ದಾರೆ ಮಹಾದೇವ. ಇವರು ಗೋಲ್ವಾಲ್ಕರರನ್ನು ಸಂಪೂರ್ಣ ಓದಿಕೊಂಡಿದ್ದರೆ, ಇವರ ದ್ವೇಷವೂ ಕೂಡ ಸಕಾರಣವೂ ತರ್ಕಬದ್ಧವೂ ಅರ್ಥಪೂರ್ಣವೂ ಆಗುತ್ತಿತ್ತು. ಆದರೆ ಇವರ ದ್ವೇಷ ಹುಟ್ಟಿಬಂದಿರುವುದು ಯಾವ ಮೂಲದಿಂದ ಎಂದು ತಿಳಿಯುವುದಿಲ್ಲ. ಬಹುಶಃ ಒಂದೆರಡು ದಶಕದಿಂದ ಪ್ರಯತ್ನಿಸುತ್ತಿದ್ದರೂ ಇನ್ನೂ ಎದ್ದೇಳದ ರಾಜಕೀಯ ಪಕ್ಷವೊಂದರ ನೇತಾರನಾಗಿರುವ ದೇವನೂರರಿಗೆ ಅಖಿಲಭಾರತ ಮಟ್ಟದಲ್ಲಿ ಸಶಕ್ತ ಸಂಘಟನೆ ಕಟ್ಟಿದ ಗೋಲ್ವಾಲ್ಕರರ ಬಗ್ಗೆ ವೃತ್ತಿಮಾತ್ಸರ್ಯವೇ ಇರಬಹುದೇನೋ! ಗೋಲ್ವಾಲ್ಕರರ ಚಿಂತನಗಂಗೆಯಲ್ಲಿ “ಮಹಾಮಿಥ್ಯೆ” ಎಂಬ ಶೀರ್ಷಿಕೆಯಡಿಯಲ್ಲಿ ಬಂದಿರುವ ಸಾಲುಗಳನ್ನು ಗಮನಿಸಿ: (1) Today so many other new points of dissension and disintegration are cropping up. The Aryan-Dravidian controversy, for example, is very recent and artificial. It is one of the modern superstitions being assiduously built up by unscrupulous power-seeking persons. (2) The people in the South were always considered to be as much ‘Aryan’ as those in the North. In our country the word ‘Aryan’ was always a sign of culture and not the name of a race. All through the puranic literature, wives address husbands as ‘Arya’. Surely the wives were not anarya! (3) ‘Arya’ simply conveyed ‘a noble person’. We find Sri Krishna too using the word ‘Arya’ in the same sense in Bhagavad-Gita. When Arjuna’s heart fails on the opening day of Kurukshetra war, Sri Krishna chides him for his anaryajustam i.e., ignoble attitude. ಈ ಸಾಲುಗಳಿಗೆ ಯಾವ ವಿವರಣೆಯೂ ಬೇಕಾಗಿಲ್ಲ. ದೇವನೂರರ ವಿಷಕಾರುವಿಕೆಯ ಹಿಂದಿರುವ ಅರ್ಥಹೀನತೆ, ತರ್ಕಶೂನ್ಯತೆಗಳನ್ನು ಈ ಮೇಲಿನ ಸಾಲುಗಳು ಢಾಳಾಗಿ ತೆರೆದುತೋರುತ್ತವೆ.(ಮುಂದುವರಿಯುವುದು)
✍️ ರೋಹಿತ್ ಚಕ್ರತೀರ್ಥ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.