ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ರಾಜಕೀಯ ಬೆಳವಣಿಗೆಯ ಬಗ್ಗೆಯೇ ಇಂದು ಚರ್ಚೆ ನಡೆಯುತ್ತಿದೆ. ಉದ್ದವ್ ಠಾಕ್ರೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಮಹಾವಿಕಾಸ ಅಘಾಡಿ ಸರ್ಕಾರವನ್ನು ಪತನಗೊಳಿಸಿ ಮುಖ್ಯಮಂತ್ರಿ ಪಟ್ಟಕ್ಕೆ ಏರಿರುವ ಶಿಂಧೆ ಅವರ ರಾಜಕೀಯ ನಡೆ ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ. ಶಿವಸೇನೆಯ ಸಂಸ್ಥಾಪಕ ಭಾಳ ಸಾಹೇಬ್ ಠಾಕ್ರೆ ಅವರ ಮಗನನ್ನೇ ಎದುರು ಹಾಕಿಕೊಂಡ ಅವರ ಧೈರ್ಯ ಕುಟುಂಬ ರಾಜಕಾರಣ ನೆಚ್ಚಿಕೊಂಡಿರುವ ಪಕ್ಷಗಳಿಗೊಂದು ಪಾಠದಂತಿದೆ.
1964ರ ಫೆಬ್ರವರಿ 19ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಬಡ ಕುಟುಂಬದಲ್ಲಿ ಹುಟ್ಟಿ, ಆಟೋ ಡ್ರೈವರ್ ಆಗಿ, ಫ್ಯಾಕ್ಟರಿ ಕಾರ್ಮಿಕನಾಗಿ ತನ್ನ ಕುಟುಂಬವನ್ನು ಪೋಷಣೆ ಮಾಡುತ್ತಿದ್ದ ಸಾಮಾನ್ಯ ವ್ಯಕ್ತಿಯಾಗಿದ್ದ 58 ವರ್ಷದ ಶಿಂಧೆ ಇಂದು ಉನ್ನತ ಸ್ಥಾನಕ್ಕೆ ಏರಿದ್ದಾರೆ ಎಂದರೆ ಅದಕ್ಕೆ ಅವರ ಪರಿಶ್ರಮ ಮತ್ತು ರಾಜಕೀಯ ಬದ್ಧತೆಗಳೇ ಕಾರಣ.
ಭಾಳ ಸಾಹೇಬ್ ಠಾಕ್ರೆ ಅವರ ಭಾಷಣಗಳು ಮತ್ತು ಚಿಂತನೆಗಳಿಂದ ಪ್ರೇರಿತರಾಗಿ 1980 ರಲ್ಲಿ ಶಿವಸೇನೆಯನ್ನು ಸೇರಿದ್ದ ಶಿಂಧೆಗೆ ರಾಜಕೀಯದಲ್ಲಿ ಆನಂದ್ ದಿಗೆ ಎಂಬ ರಾಜಕೀಯ ಗುರು ಸಿಗುತ್ತಾರೆ. ಅವರ ಬೆಂಬಲದೊಂದಿಗೆ 1997ರಲ್ಲಿ ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಗೆದ್ದು ಬರುತ್ತಾರೆ. ಅಲ್ಲಿ ಅವರು ಕಾರ್ಪೋರೇಶನ್ ನಾಯಕನಾಗಿಯೂ ಆಯ್ಕೆಯಾಗುತ್ತಾರೆ. ಬಳಿಕ ವಿಧಾನಸಭಾ ಚುನಾವಣೆಗಳಿಗೂ ಸ್ಪರ್ಧಿಸಿ ನಾಲ್ಕು ಬಾರಿ ಗೆದ್ದು ಬರುತ್ತಾರೆ. ಕೊಪ್ರಿ-ಪಚ್ಪಖಡಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.
2014-19ರಲ್ಲಿ ದೇವೇಂದ್ರ ಫಡ್ನವಿಸ್ ಸರಕಾರದಲ್ಲಿ ಅವರು ಸಚಿವರಾಗುತ್ತಾರೆ. 2019 ರಲ್ಲಿ ಶಿವಸೇನಾ ಶಾಸಕಾಂಗ ಪಕ್ಷದ ನಾಯಕರಾಗುತ್ತಾರೆ. ಮಹಾವಿಕಾಸ್ ಅಘಾಡಿ ಸರಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ.
ಹಿಂದುತ್ವಕ್ಕೆ ಬದ್ಧರಾಗಿರುವ ಶಿಂಧೆ ಅವರಿಗೆ ಉದ್ಧವ್ ಠಾಕ್ರೆ ಅವರ ನಡೆ ಸಮಂಜಸ ಎನಿಸಲಿಲ್ಲ. ಕಾಂಗ್ರೆಸ್ ಜೊತೆಗಿನ ಮೈತ್ರಿಗಾಗಿ ಹಿಂದುತ್ವದ ಸಿದ್ಧಾಂತದ ಜೊತೆ ರಾಜಿ ಮಾಡಿಕೊಳ್ಳುವ ಮನಸ್ಥಿತಿ ಶಿಂಧೆಗೆ ಇರಲಿಲ್ಲ. ಇದೇ ಕಾರಣಕ್ಕೆ ಅವರು ಠಾಕ್ರೆ ವಿರುದ್ಧ ಬಂಡಾಯ ಎದ್ದರು. ಶಿವಸೇನೆಯ 40ಕ್ಕೂ ಅಧಿಕ ಶಾಸಕರು ಅವರಿಗೆ ಬೆಂಬಲ ನೀಡಿದರು. ಹಲವು ದಿನಗಳ ರಾಜಕೀಯ ತಿಕ್ಕಾಟದ ಬಳಿಕ ಠಾಕ್ರೆ ಅವರು ಶಿಂಧೆ ಬಣದ ಬಂಡಾಯಕ್ಕೆ ಮಣಿಯಲೇ ಬೇಕಾಯಿತು ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ಬಳಿಕ ಶಿಂಧೆ ಅವರು ಬಿಜೆಪಿ ಜೊತೆ ಸೇರಿ ಸರ್ಕಾರವನ್ನು ರಚಿಸುವ ನಿರ್ಣಯ ತೆಗೆದುಕೊಳ್ಳುತ್ತಾರೆ. ಅದರಂತೆ ಮಾತುಕತೆಗಳು ನಡೆದು ಸರ್ಕಾರ ರಚನೆಗೆ ರಾಜ್ಯಪಾಲರಿಂದ ಅನುಮತಿಯನ್ನೂ ಪಡೆದುಕೊಳ್ಳುತ್ತಾರೆ. ಕೊನೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿ ನೇಮಕವಾಗುತ್ತಾರೆ. ಇದು ಶಿಂಧೆ ಅವರ ವಿಸ್ತೃತ ರಾಜಕೀಯ ಪಯಣ. ಹಿಂದುತ್ವದ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳದ ಅವರ ದಿಟ್ಟ ನಡೆ ಅವರನ್ನು ಬಾಳ ಸಾಹೇಬ್ ಠಾಕ್ರೆ ಅವರ ನಿಜವಾದ ಅನುಯಾಯಿಯನ್ನಾಗಿ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.