ತಿರುವನಂತಪುರಂ: ಸದಾ ಹಸನ್ಮುಖಿ, ಕ್ರಿಯಾಶೀಲರಾಗಿರುವ ತಿಫಾನಿ ಮರಿಯಾ ಬ್ರಾರ್ ಅವರೊಬ್ಬ ಸಮರ್ಥ ಶಿಕ್ಷಕಿಯಾಗಿ ವಿದ್ಯಾರ್ಥಿ ಸಮೂಹವನ್ನು ಶ್ರೇಷ್ಠ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಅವರ ಕಣ್ಣುಗಳಿಗೆ ದೃಷ್ಟಿಯಿಲ್ಲ. ಆದರೆ ಅವರಿಗೆ ದೂರದೃಷ್ಟಿಯಿದೆ, ನಿರ್ದಿಷ್ಟ ದೃಷ್ಟಿಕೋನವಿದೆ.
ಜ್ಯೋತಿರ್ಗಮಯ ಎಂಬ ಅಂಧರಿಗೆ ತರಬೇತಿ ನೀಡುವ ಫೌಂಡೇಶನ್ ಸ್ಥಾಪಿಸಿರುವ 27 ವರ್ಷದ ಬ್ರಾರ್, ಮಕ್ಕಳಿಗೆ ಕಂಪ್ಯೂಟರ್ ಕೌಶಲವನ್ನು ಮಾತ್ರವಲ್ಲ ಬದುಕುವ ಕೌಶಲ್ಯವನ್ನು, ಜೀವನ ಪಾಠವನ್ನೂ ಹೇಳಿಕೊಡುತ್ತಿದ್ದಾರೆ.
ಸೇನಾಧಿಕಾರಿಯ ಮಗಳಾಗಿರುವ ಅವರಿಗೆ ಹೋರಾಡುವ ಗುಣ ಹುಟ್ಟುತ್ತಲೇ ಬಂದಿದೆ. ಅಂಧರ ಶಾಲೆಯಲ್ಲಿ ಓದಿದ ಅವರಿಗೆ ಶಿಕ್ಷಕರ ನಿರ್ಲಕ್ಷ್ಯದ ದಿವ್ಯದರ್ಶನವಾಗಿದೆ. ಅಂಧರು ಎಂಬ ಕಾರಣಕ್ಕೆ ಶಿಕ್ಷಕರು ಸರಿಯಾಗಿ ಪಾಠ ಮಾಡದೆಯೇ ತರಗತಿಯಿಂದ ಹೊರಹೋಗುತ್ತಿದ್ದರು ಎಂಬುದನ್ನು ಅವರು ನೆನೆಪಿಸಿಕೊಳ್ಳುತ್ತಾರೆ. ಶಿಕ್ಷಕರ ಈ ವರ್ತನೆಯೇ ಇಂದು ಅವರನ್ನೊಬ್ಬ ಉತ್ತಮ ಶಿಕ್ಷಕಿಯಾಗಿ ರೂಪಿಸಿದೆ.
ತಮ್ಮಂತೆ ಎಂದಿಗೂ ಅಂಧ ಮಕ್ಕಳು ಕಷ್ಟ ಪಡಬಾರದು ಎಂಬ ಕಾರಣಕ್ಕೆ ಜ್ಯೋತಿರ್ಗಮಯ ಫೌಂಡೇಶನ್ ಸ್ಥಾಪಿಸಿ ಅದರ ಮುಖೇನ ಅಂಧ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ, ಕಂಪ್ಯೂಟರ್ ಕಲಿಸುತ್ತಿದ್ದಾರೆ. ಇಲ್ಲಿ ಇಂಗ್ಲೀಷ್ನ್ನು ಕೂಡ ಮಕ್ಕಳಿಗೆ ಕಲಿಸಿಕೊಡಲಾಗುತ್ತದೆ.
ಅಂಧರಿಗೆ ಜೀವನಪೂರ್ತಿ ಒಂದನ್ನೇ ಕಲಿಸಿಕೊಡಲಾಗುತ್ತದೆ, ಅದೇನೆಂದರೆ ನಿನ್ನಿಂದ ಸಾಧ್ಯವಿಲ್ಲ, ನಿನ್ನಿಂದ ಸಾಧ್ಯವಿಲ್ಲ ಎಂದು. ನನ್ನ ತಂದೆ ಕೂಡ ನನ್ನನ್ನು ಸದಾ ರಕ್ಷಣಾತ್ಮಕವಾಗಿ ಇಡುತ್ತಿದ್ದರು. ಆದರೆ ಸ್ವತಂತ್ರವಾಗಿ ಬದುಕುವ ಇಚ್ಛೆ ಇದ್ದ ನಾನು ಇದನ್ನು ತಿರಸ್ಕರಿಸಿದ್ದೆ. ಒಬ್ಬಳೇ ನಡೆದೆ, ಒಬ್ಬಳೇ ಓಡಿದೆ. ಇತರ ಅಂಧರನ್ನೂ ಸ್ವತಂತ್ರರನ್ನಾಗಿಸಬೇಕು ಎಂಬ ಅದಮ್ಯ ಆಸೆ ನನಗಿತ್ತು ಎನ್ನುತ್ತಾರೆ ಬ್ರಾರ್.
ದೃಷ್ಟಿಹೀನರನ್ನು ಸದಾ ರಕ್ಷಣಾತ್ಮಕವಾಗಿ ಇಡಬೇಡಿ, ಅವರನ್ನು ಓಡಾಡಲು ಬಿಡಿ. ಪ್ರಪಂಚ ಜ್ಞಾನ ತಿಳಿಯುವಂತೆ ಮಾಡಿ ಎಂಬುದು ಅವರ ಕೋರಿಕೆ. ಈ ಬಗ್ಗೆ ಅವರು ಅಂಧರಿಗೆ, ಅವರ ಪೋಷಕರಿಗೆ ಕೌನ್ಸೆಲಿಂಗನ್ನೂ ನೀಡುತ್ತಾರೆ.
ದೃಷ್ಟಿಹೀನತೆಯ ಸಮಸ್ಯೆಯನ್ನು ಮೆಟ್ಟಿನಿಂತು ಅತ್ಯುತ್ತಮ ಶಿಕ್ಷಕಯಾಗಿ ಅಂಧಮಕ್ಕಳ ಬಾಳು ಬೆಳಗುತ್ತಿರುವ ಬ್ರಾರ್ ಅವರ ಕಾರ್ಯ ಶ್ಲಾಘನಾರ್ಹ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.