ಭಾರತದ ಅಭಿವೃದ್ಧಿಯಲ್ಲಿ ಸ್ಟಾರ್ಟ್ ಅಪ್ (ನವೋದ್ಯಮ)ಗಳು ಮಹತ್ತರವಾದ ಪಾತ್ರವನ್ನು ವಹಿಸುತ್ತಿವೆ. ಯುವ ಹಾಗೂ ಪ್ರತಿಭಾವಂತ ಉದ್ಯಮಿಗಳು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸ್ಟಾರ್ಟ್ ಅಪ್ಗಳನ್ನು ಆರಂಭಿಸಿ ಪ್ರಗತಿಯನ್ನು ಕಾಣುತ್ತಿದ್ದಾರೆ. ಅಮೇರಿಕಾ ಹಾಗೂ ಚೀನಾಗಳನ್ನು ಹೊರತುಪಡಿಸಿದರೆ ಅತೀ ಹೆಚ್ಚು ನವೋದ್ಯಮಗಳಿರುವುದು ಭಾರತದಲ್ಲೇ. ಪ್ರಸ್ತುತ ಭಾರತದಲ್ಲಿ ಸುಮಾರು 68,000 ಸ್ಟಾರ್ಟ್ ಅಪ್ಗಳು ಕಾರ್ಯಾಚರಿಸುತ್ತಿವೆ. 2013-14 ರಲ್ಲಿ ಭಾರತದಲ್ಲಿ ಸುಮಾರು 400 ರಿಂದ 800 ಸ್ಟಾರ್ಟ್ ಅಪ್ಗಳು ಇದ್ದವು. 2021 ರಲ್ಲಿ ಭಾರತದಲ್ಲಿ 14,000 ಸ್ಟಾರ್ಟ್ ಅಪ್ಗಳು ರೂಪುಗೊಂಡಿವೆ. ಸ್ಟಾರ್ಟ್ ಅಪ್ ಗಳನ್ನು ಅವುಗಳ ಮೌಲ್ಯದ ಮೇಲೆ ವರ್ಗೀಕರಿಸಲಾಗಿದೆ. ಒಂದು ಸ್ಟಾರ್ಟ್ ಅಪ್ ನ ಮೌಲ್ಯವು ದಶಲಕ್ಷ (ಮಿಲಿಯನ್) ಡಾಲರ್ ಗಳನ್ನು ದಾಟಿದರೆ ಅದನ್ನು ಮಿನಿಕಾರ್ನ್ ಸ್ಟಾರ್ಟ್ ಅಪ್ ಎಂದು ಗುರುತಿಸಲಾಗುತ್ತದೆ. ಮಿನಿಕಾರ್ನ್ ಸ್ಟಾರ್ಟ್ ಅಪ್ ತನ್ನ ಮೌಲ್ಯವನ್ನು 900 ಮಿಲಿಯನ್ ಡಾಲರ್ಗಳಿಗೆ ವೃದ್ಧಿಸಿಕೊಂಡು ಇನ್ನೇನು ಬಿಲಿಯನ್(ಶತಕೋಟಿ) ಡಾಲರ್ಗಳಿಗೆ ತಲುಪಲಿದೆ ಎನ್ನುವ ಸ್ಥಿತಿಯ ಸ್ಟಾರ್ಟ್ ಅಪ್ಗಳನ್ನು ಸೂನಿಕಾರ್ನ್ ಸ್ಟಾರ್ಟ್ ಅಪ್ ಗಳು ಎಂದು ಕರೆಯಲಾಗುತ್ತದೆ. ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದ ಸ್ಟಾರ್ಟ್ ಅಪ್ ಗಳನ್ನು ಯುನಿಕಾರ್ನ್ ಸ್ಟಾರ್ಟ್ ಅಪ್ ಗಳು ಎಂದು ಕರೆಯಲಾಗುತ್ತದೆ. 10 ಬಿಲಿಯನ್ ಡಾಲರ್ ಮೌಲ್ಯವನ್ನು ತಲುಪಿದ ಸ್ಟಾರ್ಟ್ ಅಪ್ ಗಳನ್ನು ಡೆಕಾಕಾರ್ನ್ ಹಾಗೂ 100 ಬಿಲಿಯನ್ ಮೌಲ್ಯವನ್ನು ತಲುಪಿದ ನವೋದ್ಯಮಗಳನ್ನು ಹೆಕ್ಟಾಕಾರ್ನ್ ಸ್ಟಾರ್ಟ್ ಅಪ್ ಗಳೆಂದು ಗುರುತಿಸಲಾಗುತ್ತದೆ.
ಭಾರತದ ಓಪನ್ ಮನಿ ನಿಯೋಬ್ಯಾಂಕ್ ಹೆಸರಿನ ಸ್ಟಾರ್ಟ್ ಅಪ್ ತನ್ನ ಮೌಲ್ಯವನ್ನು ಬಿಲಿಯನ್ ಡಾಲರ್ಗಳಿಗೆ ಏರಿಸಿಕೊಳ್ಳುವುದರೊಂದಿಗೆ ಭಾರತದ ಯುನಿಕಾರ್ನ್ ಸ್ಟಾರ್ಟ್ ಅಪ್ಗಳ ಸಂಖ್ಯೆ 100 ನ್ನು ತಲುಪಿದೆ. ಇದು ಸಣ್ಣ ಸಾಧನೆಯಲ್ಲ. ಭಾರತದಲ್ಲಿರುವ ಯುನಿಕಾರ್ನ್ ಸ್ಟಾರ್ಟ್ ಅಪ್ಗಳ ಮೌಲ್ಯವನ್ನು ಒಟ್ಟು ಸೇರಿಸಿದಾಗ ಅದು ಸರಿ ಸುಮಾರು 332 ಶತಕೋಟಿ ಡಾಲರ್ ಅನ್ನು ತಲುಪುತ್ತದೆ. ಇದನ್ನು ಭಾರತೀಯ ರುಪಾಯಿಗಳಿಗೆ ಪರಿವರ್ತಿಸಿದಾಗ ಈ ಮೊತ್ತವು 25 ಲಕ್ಷ ಕೋಟಿ ರುಪಾಯಿಗಳಿಗೆ ಸರಿಸಮಾನವಾಗುತ್ತದೆ. ಜಾಗತಿಕವಾಗಿ ಅಮೇರಿಕಾ ಹಾಗೂ ಚೀನಾಗಳ ನಂತರ ಅತೀ ಹೆಚ್ಚು ಯುನಿಕಾರ್ನ್ ಸ್ಟಾರ್ಟ್ ಅಪ್ಗಳು ಇರುವುದೂ ಭಾರತದಲ್ಲೇ. 2021 ರಲ್ಲಿ ಕರೋನಾ ಎರಡನೆಯ ಅಲೆಯ ನಡುವೆಯೂ ಭಾರತದ 44 ಸ್ಟಾರ್ಟ್ ಅಪ್ಗಳು ಯುನಿಕಾರ್ನ್ ಸ್ಟಾರ್ಟ್ ಅಪ್ಗಳಾಗಿ ಪರಿವರ್ತನೆ ಹೊಂದಿರುವುದು ಭಾರತದ ನವೋದ್ಯಮಗಳ ಯಶಸ್ಸಿನ ಕಥೆಯನ್ನು ಹೇಳುತ್ತವೆ. 2025 ರಲ್ಲಿ ಭಾರತದ ಯುನಿಕಾರ್ನ್ ಸ್ಟಾರ್ಟ್ ಅಪ್ಗಳ ಸಂಖ್ಯೆ 250 ಕ್ಕೆ ತಲುಪಬಹುದು ಎಂದು ಅಂದಾಜಿಸಲಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಕ್ಲಿಯರ್ ಟ್ಯಾಕ್ಸ್, ಜ್ಯುಪಿಟರ್, ರಾಪಿಡೋ ಮೊದಲಾದ 26 ನವೋದ್ಯಮಗಳು ಸೂನಿಕಾರ್ನ್ ಸ್ಟಾರ್ಟ್ ಅಪ್ ಆಗಿ ರೂಪೀಕರಣಗೊಂಡಿದ್ದು ಮುಂದಿನ ಕೆಲವೇ ತಿಂಗಳುಗಳಲ್ಲಿ ಅವುಗಳು ತಮ್ಮ ಮೌಲ್ಯವನ್ನು ಶತಕೋಟಿ ಡಾಲರ್ಗಳಿಗೆ ಏರಿಸಿಕೊಂದು ಯುನಿಕಾರ್ನ್ ಸ್ಟಾರ್ಟ್ ಅಪ್ಗಳಾಗಿ ಬದಲಾಗಲಿವೆ. ಫ್ಲಿಪ್ ಕಾರ್ಟ್, ಬೈಜೂಸ್, ನೈಕಾ ಹಾಗೂ ಸ್ವಿಗ್ಗಿಗಳು ತಲಾ 10 ಬಿಲಿಯನ್ ಡಾಲರಿಗಿಂತಲೂ ಹೆಚ್ಚಿನ ಮೌಲ್ಯವನ್ನು ಹೊಂದಿ ಡೆಕಾಕಾರ್ನ್ಗಳಾಗಿ ಪರಿವರ್ತನೆ ಹೊಂದಿವೆ.
ಭಾರತವಿಂದು ಯುನಿಕಾರ್ನ್ ಸ್ಟಾರ್ಟ್ ಅಪ್ ಗಳ ಹಾಟ್ ಸ್ಪಾಟಾಗಿ ಬೆಳೆಯುತ್ತಿರುವುದು ಆಕಸ್ಮಿಕವಲ್ಲ. ಭಾರತದ ಮೂಲಭೂತ ವ್ಯವಸ್ಥೆಗಳಲ್ಲಾಗುತ್ತಿರುವ ಸುಧಾರಣೆಯು ನವೋದ್ಯಮಗಳಿಗೆ ಪೂರಕ ವಾತಾವರಣವನ್ನು ನಿರ್ಮಿಸಿವೆ. ಯುವಕರು ಉದ್ದಿಮೆಗಳನ್ನು ಆರಂಭಿಸಲು ಅನುಕೂಲವಾಗುವಂತೆ 2015 ರಲ್ಲಿ ಭಾರತ ಸರಕಾರವು ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯನ್ನು ಆರಂಭಿಸಿತು. ಹೊಸ ಉದ್ಯಮಿಗಳಿಗೆ ಮೂರು ವರ್ಷಗಳ ಕಾಲ ಉಚಿತವಾಗಿ ಕಚೇರಿ, ಇಂಟರ್ನೆಟ್, ವಿದ್ಯುತ್, ಪೀಠೋಪಕರಣಗಳನ್ನು ಒದಗಿಸುವ ಸ್ಟಾರ್ಟ್ ಅಪ್ ಇನ್ಕ್ಯುಬೇಟರ್ ಸೆಂಟರ್ಗಳನ್ನು ದೇಶದೆಲ್ಲೆಡೆ ತೆರೆಯಲಾಯಿತು. ಪ್ರಸ್ತುತ ದೇಶದಲ್ಲಿ 326 ಕ್ಕಿಂತಲೂ ಹೆಚ್ಚು ಸ್ಟಾರ್ಟ್ ಅಪ್ ಇನ್ಕ್ಯುಬೇಟರ್ಗಳಿವೆ. ನವೋದ್ಯಮಿಗಳಿಗೆ ಉದ್ಯಮವನ್ನು ಬೆಳೆಸಲು ಸಹಾಯಕವಾಗುವಂತೆ ಮೂಲಧನವನ್ನೂ ಸರಕಾರದ ವತಿಯಿಂದ ಕೊಡಲಾಗುತ್ತಿದೆ. ಮುದ್ರಾ ಸಾಲದಂತಹ ಯೋಜನೆಗಳೂ ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಗೆ ಪೂರಕವಾಗಿ ಮೂಡಿ ಬಂದವು. ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯಡಿಯಲ್ಲಿ ಆರಂಭವಾದ ನವೋದ್ಯಮಗಳ ಆದಾಯಕ್ಕೆ ಮೂರು ವರ್ಷಗಳ ಕಾಲ ತೆರಿಗೆ ವಿನಾಯಿತಿಯನ್ನು ನೀಡಲಾಗುತ್ತಿದೆ. ಈ ನವೋದ್ಯಮಗಳಲ್ಲಿ ಹೂಡಿಕೆ ಮಾಡುವ ಆಂಜೆಲ್ ಇನ್ವೆಸ್ಟರ್ಗಳಿಗೂ ಈ ಹೂಡಿಕೆಯಿಂದ ಬಂದ ಲಾಭಾಂಶದ ಮೇಲೆ ತೆರಿಗೆ ವಿನಾಯಿತಿಯನ್ನು ಘೋಷಿಸಲಾಗಿದೆ. ಈ ಪ್ರೋತ್ಸಾಹಕಗಳು ಹಾಗೂ ಸುಧಾರಣೆಗಳ ಪರಿಣಾಮವಾಗಿ ಯುವಕರು ನವೋದ್ಯಮಗಳತ್ತ ಆಕರ್ಷಿತರಾದರು. ಆಂಜೆಲ್ ಇನ್ವೆಸ್ಟರ್ಗಳು ಕೂಡಾ ಈ ನವೋದ್ಯಮಗಳಲ್ಲಿ ಹೂಡಿಕೆ ಮಾಡಲು ಆರಂಭಿಸಿದರು.
2013-14 ರ ಅವಧಿಯಲ್ಲಿ ಭಾರತವು ವಿಶ್ವಬ್ಯಾಂಕ್ ಬಿಡುಗಡೆ ಮಾಡುವ ಉದ್ಯಮ ಸ್ನೇಹೀ ರಾಷ್ಟ್ರಗಳ ಪಟ್ಟಿ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ನಲ್ಲಿ 142 ನೇ ಸ್ಥಾನದಲ್ಲಿತ್ತು. ಭಾರದಲ್ಲಿ ಸುಧಾರಿಸಲ್ಪಟ್ಟ ರಸ್ತೆ, ವಿದ್ಯುತ್, ನೀರು ಮೊದಲಾದ ಮೂಲಭೂತ ಸೌಕರ್ಯಗಳು, ಕೇಂದ್ರ ಸರಕಾರದ ಮಟ್ಟದಲ್ಲಿ ಇಳಿಮುಖವಾದ ಭ್ರಷ್ಟಾಚಾರ, ಓಬೀರಾಯನ ಕಾಲದ ಕಾನೂನುಗಳನ್ನು ಸುಧಾರಣೆ ಮಾಡಿದ್ದು, ಚುರುಕುಗೊಂಡ ಸರಕಾರೀ ಆಡಳಿತ ವ್ಯವಸ್ಥೆ ಇವೇ ಮೊದಲಾದವುಗಳಿಂದಾಗಿ ಭಾರತವು ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಪಟ್ಟಿಯಲ್ಲಿ 79 ಸ್ಥಾನಗಳನ್ನು ಏರಿ ಜಾಗತಿಕವಾಗಿ 63 ನೇ ಸ್ಥಾನಕ್ಕೆ ತಲುಪಿತು. ಭಾರತದಲ್ಲಿ ಸುಲಲಿತ ವ್ಯವಹಾರಕ್ಕೆ ಪೂರಕವಾದ ವಾತಾವರಣವು ರೂಪುಗೊಂಡ ಪರಿಣಾಮವಾಗಿ ವಿದೇಶೀ ಹೂಡಿಕೆದಾರರು ಭಾರತದ ನವೋದ್ಯಮಗಳಲ್ಲೂ ಹೂಡಿಕೆಯನ್ನು ಮಾಡಲು ಆರಂಭಿಸಿದರು. 2021 ನೇ ಇಸವಿಯಲ್ಲಿ ಭಾರತದ ಸ್ಟಾರ್ಟ್ ಅಪ್ಗಳು 42 ಶತಕೋಟಿ ಡಾಲರ್ಗಳಷ್ಟು ನೇರ ವಿದೇಶೀ ಹೂಡಿಕೆಯನ್ನು ಆಕರ್ಷಿಸಿವೆ.
ಭಾರತದಲ್ಲಿ ಬದಲಾದ ಹೂಡಿಕೆ ಮತ್ತು ಉದ್ಯಮಾವಕಾಶವನ್ನು ಪ್ರತಿಭಾವಂತ ಹಾಗೂ ಯುವಕರು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಭಾರತದಲ್ಲಿರುವ ಯುನಿಕಾರ್ನ್ ಸ್ಟಾರ್ಟ್ ಅಪ್ಗಳ ಸ್ಥಾಪಕರು ದೊಡ್ಡ ಆರ್ಥಿಕ ಹಿನ್ನೆಲೆಯ ಮನೆಗಳಿಂದ ಬಂದವರಲ್ಲ. ಬಹಳಷ್ಟು ಜನರು ಕೆಳ ಹಾಗೂ ಮಧ್ಯಮ ವರ್ಗದ ಆರ್ಥಿಕ ಹಿನ್ನಲೆಯಿಂದ ಬಂದವರು. ಗ್ರಾಮೀಣ ಹಿನ್ನಲೆಯಿಂದ ಬಂದವರೂ ಇದ್ದಾರೆ. ಪೇಟಿಎಂನ ಸ್ಥಾಪಕರಾದ ವಿಜಯ್ ಶಂಕರ ಶರ್ಮಾ ಅವರು ಉತ್ತರ ಪ್ರದೇಶದ ಅಲೀಘರ್ನ ಶಾಲಾ ಅಧ್ಯಾಪಕರ ಮಗ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಿಂದೀ ಮೀಡಿಯಂನಲ್ಲೇ ಪಡೆದವರು. ಕೇರಳದ ಕಣ್ಣುರು ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಬೈಜೂಸ್ನ ಸ್ಥಾಪಕರಾದ ಬೈಜೂ ರವೀಂದ್ರನ್ ಅವರ ತಾಯಿ ವೃತ್ತಿಯಲ್ಲಿ ಗಣಿತ ಅಧ್ಯಾಪಿಕೆಯಾಗಿದ್ದರು. ನೈಕಾದ ಸ್ಥಾಪಕಿ ಫಲ್ಗುಣಿ ನಾಯರ್ ಅವರು ಸಣ್ಣ ಬೇರಿಂಗ್ ತಯಾರಕರ ಮಗಳು. ಓಯೋ ರೂಮ್ಸ್ನ ಸ್ಥಾಪಕ ರಿತೇಶ್ ಅಗರ್ವಾಲ್ ಒರಿಸ್ಸಾದ ಸಣ್ಣ ವ್ಯಾಪಾರಿಯ ಮಗ. ಭಾರತದ ಸ್ಟಾರ್ಟ್ ಅಪ್ ಹಾಗೂ ಯುನಿಕಾರ್ನ್ ಸ್ಟಾರ್ಟ್ ಅಪ್ಗಳನ್ನು ನಡೆಸುತ್ತಿರುವವರಲ್ಲಿ ಬಹಳಷ್ಟು ಜನರು ಐಐಟಿ, ಐಐಎಂ, ಎಂಜಿನೀರಿಂಗ್ ಪದವೀಧರರಿದ್ದಾರೆ. ಕರ್ನಾಟಕದ ಬೆಂಗಳೂರು ಸ್ಟಾರ್ಟ್ ಅಪ್ಗಳ ಆಕರ್ಷಣೆಯ ತಾಣವಾಗಿ ಬೆಳೆಯುತ್ತಿದ್ದು ಭಾರತದ 100 ಯುನಿಕಾರ್ನ್ ಸ್ಟಾರ್ಟ್ ಅಪ್ಗಳಲ್ಲಿ 40 ಸ್ಟಾರ್ಟ್ ಅಪ್ಗಳ ಕೇಂದ್ರ ಕಚೇರಿಯು ಬೆಂಗಳೂರಿನಲ್ಲಿದೆ ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
✍️ ಗಣೇಶ್ ಭಟ್ ವಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.