ಬುದ್ಧ ಮೌಢ್ಯವನ್ನು ಯಾವತ್ತೂ ಒಪ್ಪಿದವನಲ್ಲ. ಆದರೆ ಉತ್ತರ ಪ್ರದೇಶದ ನೋಯ್ಡಾಗೆ ಯಾರೇ ಮುಖ್ಯಮಂತ್ರಿಗಳು ಭೇಟಿ ಕೊಟ್ಟರೂ, ಅವರು ತಮ್ಮ ಹುದ್ದೆ ಕಳೆದುಕೊಳ್ಳುತ್ತಾರೆ ಎನ್ನುವ ಮೌಢ್ಯವೊಂದು ಬೆಳೆದುಬಂದಿತ್ತು. ಸೆಕ್ಯುಲರ್ ಪಕ್ಷಗಳ ವೀರ್ ಬಹದ್ದೂರ್ ಸಿಂಗ್, ಎನ್.ಡಿ.ತಿವಾರಿ, ಮುಲಾಯಂ ಸಿಂಗ್ ಯಾದವ್, ರಾಮಪ್ರಕಾಶ್ ಗುಪ್ತಾ,ಅಖಿಲೇಶ್ ಯಾದವ್ ರಿಂದ ಹಿಡಿದು, ಕಲ್ಯಾಣ್ ಸಿಂಗ್, ರಾಜನಾಥ್ ಸಿಂಗ್ ಮುಂತಾದವರು ಮುಖ್ಯಮಂತ್ರಿಯಾದಾಗಲೂ ಅವರ್ಯಾರೂ ಕೂಡ ಸಿಎಂ ಪಟ್ಟ ಕಳೆದು ಹೋದೀತು ಎಂಬ ಭಯ, ಮೂಢನಂಬಿಕೆಯಿಂದ ನೋಯ್ಡಾಗೆ ಕಾಲಿಟ್ಟಿರಲಿಲ್ಲ.
ಹಾಗೆಯೇ ಆಗ್ರಾದ ಸರ್ಕ್ಯೂಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಿದರೂ ಕುರ್ಚಿ ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಮೌಢ್ಯವೊಂದು ಬೆಳೆದುಬಂದಿತ್ತು. ದಲಿತ ನಾಯಕಿ ಮಾಯಾವತಿ, ಸೆಕ್ಯುಲರ್ ಅಖಿಲೇಶ್ ಯಾದವ್ ಸೇರಿದಂತೆ ಯಾರೂ ಸಿಎಂ ಕುರ್ಚಿ ಹೋಗುವ ಭಯದಿಂದ ಸರ್ಕ್ಯೂಟ್ ಹೌಸ್ ನಲ್ಲಿ ವಾಸ್ತವ್ಯ ಮಾಡಿರಲಿಲ್ಲ.
ಯೋಗಿ ಆದಿತ್ಯನಾಥ್ ಅವರು ಮಾತ್ರ ಎಲ್ಲ ಮೌಢ್ಯಗಳನ್ನೂ ಬದಿಗೊತ್ತಿ ನೋಯ್ಡಾಗೆ ಭೇಟಿ ಕೊಟ್ಟರು. ಆಗ್ರಾದ ಸರ್ಕ್ಯೂಟ್ ಹೌಸ್ನಲ್ಲೇ ಉಳಿದುಕೊಂಡರು. ಎರಡನೇ ಬಾರಿಗೆ ಜಯಭೇರಿಯನ್ನೂ ಬಾರಿಸಿದರು. ಆ ಮೂಲಕ ದೊಡ್ಡ ಮೂಢ ನಂಬಿಕೆಯೊಂದನ್ನು ತೊಡೆದುಹಾಕಿದರು. ಆದ್ದರಿಂದ ಈ ಗೆಲುವು ಕೇವಲ ಯೋಗಿಯ ಗೆಲುವಲ್ಲ; ಬುದ್ಧನ ಆಶಯಗಳ ಗೆಲುವೂ ಹೌದು.
ಯೋಗಿ ಆದಿತ್ಯ ನಾಥ್ ಅವರು ತಾವು,ತಮ್ಮ ಕುಟುಂಬ, ಬಂಧು ಬಳಗದವರಿಗಾಗಿ ಕೆಲಸ ಮಾಡದೆ ಒಬ್ಬ ಯೋಗಿಯಾಗಿ ಸಂಪೂರ್ಣ ಐದು ವರ್ಷಗಳ ಕಾಲ ಹಗಲಿರುಳೂ ಕಾರ್ಯ ನಿರ್ವಹಿಸಿದರು. ಆ ಮೂಲಕ #ಕಾಯಕವೇ_ಕೈಲಾಸ ಎನ್ನುವುದನ್ನು ಪರೋಕ್ಷವಾಗಿ ದೇಶಕ್ಕೆ ಸಾರಿದರು. ಆ ದಣಿವರಿಯದ ಕಾಯಕದ ಮೂಲಕವೇ ಮತ್ತೊಮ್ಮೆ ಗೆಲುವನ್ನೂ ಸಾಧಿಸಿದರು. ಆದ್ದರಿಂದ ಈ ಗೆಲುವು ಕೇವಲ ಯೋಗಿಯ ಗೆಲುವು ಮಾತ್ರವಲ್ಲ; ಇದು ಅಣ್ಣ ಬಸವಣ್ಣನವರ ಆಶಯದ ಗೆಲುವೂ ಹೌದು.
ಯೋಗಿ ಆದಿತ್ಯನಾಥರು ಯಾವುದೇ ಮಾಫಿಯಾಗಳಿಗೂ ಬಗ್ಗದೆ,ಯಾವ ಒತ್ತಡಗಳಿಗೂ ಮಣಿಯದೆ ಡಾ. ಅಂಬೇಡ್ಕರರ ಸಂವಿಧಾನ ನೀಡಿದ ಅಧಿಕಾರವನ್ನು ಬಳಸಿಕೊಂಡು ಜನಸಾಮಾನ್ಯರಿಗೆ ನ್ಯಾಯ ಒದಗಿಸಿದರು.ಆ ಮೂಲಕ ಗೂಂಡಾ ರಾಜ್ ಎನ್ನುವ ಅಪಖ್ಯಾತಿಯನ್ನು ಅಳಿಸಿಹಾಕುವಲ್ಲಿ ಶ್ರಮಿಸಿದರು. ಹಾಗೆಯೇ ಯೋಗಿ ಆದಿತ್ಯನಾಥ್ ಅವರು #ದೇಶ_ಮೊದಲು ಎನ್ನುವ ಜಾಯಮಾನದವರು. ವ್ಯಕ್ತಿಗಳ, ಪಕ್ಷಗಳ ಗುರಿಗಳಿಗಿಂತಾ ದೇಶದ ಗುರಿಯೇ ಅತ್ಯುಚ್ಚವಾದದ್ದು ಎನ್ನುವುದನ್ನು ಸಾರಿದವರು. ಡಾ. ಬಿ.ಆರ್.ಅಂಬೇಡ್ಕರ್ ಅವರು ಕೂಡ ಅದೇ ಮಾತನ್ನು ಸಂವಿಧಾನ ರಚನಾ ಸಭೆಯಲ್ಲೇ ಸಾರಿದ್ದರು. ಸರ್ವ ಧರ್ಮಗಳನ್ನೂ ಸಮಾನವಾಗಿ ಕಾಣಬೇಕೆನ್ನುವ ಸಂವಿಧಾನದ ಆಶಯದಂತೆ ಯೋಗಿ ಆದಿತ್ಯನಾಥರು ಎಲ್ಲರನ್ನೂ ಒಂದಾಗಿ ಕಾಣುವ ಮೂಲಕ ಅಲ್ಪಸಂಖ್ಯಾತರೇ ಬಹುಸಂಖ್ಯಾತರಾಗಿರುವ ಪ್ರದೇಶಗಳಲ್ಲೂ ಅತ್ಯಧಿಕ ಮತಗಳನ್ನು ಪಡೆದರು.ಆದ್ದರಿಂದ ಈ ಗೆಲುವು ಕೇವಲ ಯೋಗಿಯ ಗೆಲುವು ಮಾತ್ರವಲ್ಲ; ಇದು ಡಾ. ಬಿ.ಆರ್.ಅಂಬೇಡ್ಕರ್ ಅವರ ಹಾಗೂ ಈ ದೇಶದ ಸಂವಿಧಾನದ ಗೆಲುವೂ ಹೌದು.
ಯೋಗಿಯವರ ಈ ಗೆಲುವು ಬುದ್ಧ,ಬಸವ,ಅಂಬೇಡ್ಕರರ ಎಲ್ಲ ನಿಜಾನುಯಾಯಿಗಳಿಗೂ ಅತ್ಯಂತ ಹರ್ಷ ತಂದಿದೆ.
✍️ ಪ್ರವೀಣ್ ಕುಮಾರ್ ಮಾವಿನಕಾಡು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.