ಮಂಗಳೂರು : ಎತ್ತಿನಹೊಳೆ ಯೋಜನೆಯನ್ನು ಕೈಗೆತ್ತಿಕೊಳ್ಳದೆ ಕೋಲಾರ-ಚಿಕ್ಕಬಳ್ಳಾಪುರ ಭಾಗದ ಜನರ ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಹೊಸ ಚಿಂತನೆಯನ್ನು ನಡೆಸಬೆಕಾಗಿದೆ. ಸರಕಾರ ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗಲಿರುವ ಎತ್ತಿನಹೊಳೆ ಯೋಜನೆಯನ್ನು ಕೈ ಬಿಡಲು ಒತ್ತಾಯಿಸುತ್ತಿದ್ದೇನೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಾತನಾಡಿ ಕಾರ್ಣಿಕ್ ಅವರು ಎತ್ತಿನಹೊಳೆ ಯೋಜನೆ ಒಂದು ಅವೈಜ್ಞಾನಿಕ ಕಲ್ಪನೆ ಎಂದು ದಿವಂಗತ ಡಾ.ಪರಮಶಿವಯ್ಯ ಅವರು ತಮ್ಮ ಕೊನೆಯ ದಿನಗಳಲ್ಲಿ ಹೇಳಿದ್ದರೂ, ಅದಾವುದನ್ನೂ ಸರಕಾರ ಒಪ್ಪಲು ತಯಾರಿಲ್ಲ ಎಂದು ಆರೋಪಿಸಿದರು.ಲಿಂಗನಮಕ್ಕಿ ಜಲಾಶಯದಿಂದ ಜೋಗದಲ್ಲಿ ಸುಮಾರು 50 ಮೆಗಾವ್ಯಾಟ್ರಷ್ಟು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇದರಿಂದಾಗಿ ಮಳೆಗಾಲದ ಒಂದೆರಡು ತಿಂಗಳು ಬಿಟ್ಟರೆ ಜಗದ್ವಿಖ್ಯಾತ ಜೋಗ ಜಲಪಾತ ಪ್ರವಾಸಿಗರ ಆಕರ್ಷಣೆಯನ್ನು ಕಳೆದುಕೊಂಡಿದೆ.
ಈಗಾಗಲೇ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾಗಿರುವ ಪ್ರದೇಶದಲ್ಲಿ ಯಾವುದೇ ಹೊಸ ಭೂಸ್ವಾಧೀನದ ಅಗತ್ಯ ಇಲ್ಲ. ಭೂಮಿ ಮುಳುಗಡೆಯಾಗುವ ಸಾಧ್ಯತೆಯೂ ಇಲ್ಲ. ಲಿಂಗನಮಕ್ಕಿ ಜಲಾಶಯದಲ್ಲಿ ಸುಮಾರು 36 ಟಿ.ಎಂ.ಸಿ ಗಳಷ್ಟು ನೀರು ಲಭ್ಯವಿರುತ್ತದೆ.ಆದರೆ ಅಲ್ಲಿಯ ಜನರಿಗೆ ಬೇಕಾಗುವಂತದ್ದು 15-18 ಟಿ.ಎಂ.ಸಿ ನೀರು. ಅದೇ ರೀತಿ ಕೋಲಾರ-ಚಿಕ್ಕಬಳ್ಳಾಪುರ ಭಾಗದಲ್ಲಿ ವರ್ಷ ಪೂರ್ತಿ ಸಾಕಷ್ಟು ಬಿಸಿಲಿನ ಲಭ್ಯತೆ ಇರುವುದರಿಂದ ಸರಕಾರ ಜೋಗದಲ್ಲಿ ಉತ್ಪತ್ತಿಯಾಗುತ್ತಿರುವ ವಿದ್ಯುತ್ ಅನ್ನು ಸರಿದೂಗಿಸಲು ಸುಮಾರು 750-1000 ಮೆಗಾವ್ಯಾಟ್ ಉತ್ಪಾದನಾ ಸಾಮಾರ್ಥ್ಯದ ಸೋಲಾರ್ ಪಾರ್ಕನ್ನು ಕೋಲಾರ-ಚಿಕ್ಕಬಳ್ಳಾಪುರ ಭಾಗದಲ್ಲಿ ಸರಕಾರ ಸ್ಥಾಪಿಸಬೇಕು.
ಲಿಂಗನಮಕ್ಕಿ ಜಲಾಶಯದಲ್ಲಿ ಲಭ್ಯವಿರುವ ಸುಮಾರು 36 ಟಿ.ಎಂ.ಸಿ ಗಳಷ್ಟು ನೀರಿನಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಭಾಗದ ಜನರ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಲು ಅಗತ್ಯವಿರುವಷ್ಟು ನೀರನ್ನು ಪೈಪ್ಲೈನ್ನ ಮೂಲಕ ಆ ಭಾಗಕ್ಕೆ ಕಳುಹಿಸುವಂತೆ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ಲಿಂಗನಮಕ್ಕಿಯಲ್ಲಿ ಲಭ್ಯವಿರುವ ಹೆಚ್ಚಿನ ನೀರನ್ನು ಮತ್ತೆ ಜೋಗ ಜಲಪಾತದ ಮೈ ತುಂಬುವಂತೆ ಮಾಡಿ ಪ್ರವಾಸಿ ಕೇಂದ್ರವಾಗಿ ಬೆಳೆಸಬೇಕು. ಇದರಿಂದಾಗಿ ಉದ್ಯೋಗ ಸೃಷ್ಠಿ ಮತ್ತು ಆರ್ಥಿಕ ಚಟುವಟಿಕೆಗಳಿಗೂ ಅವಕಾಶ ಹಾಗೂ ಸರಕಾರಕ್ಕೆ ಆದಾಯ ಸೃಷ್ಟಿಸಲು ಕಾರಣವಾಗುತ್ತದೆ ಎಂದರು.
ಈ ಕುರಿತು ನಾವು ತಾಂತ್ರಿಕವಾಗಿ ಚರ್ಚೆ ನಡೆಸುತ್ತಿದ್ದು, ಈ ಭಾಗದ ಸಚಿವರುಗಳು ಬೆಂಬಲಕ್ಕಿದ್ದಾರೆ. ಮಂಗಳೂರಿಗೆ ನೀರಿನ ಅವಶ್ಯಕತೆಯಿದೆ. ಬೇಸಿಗೆಯಲ್ಲಿ ನೀರು ಪೂರೈಕೆಗೆ ಹೆಣಗಾಡುವ ಪರಿಸ್ಥಿತಿ. ಇಷ್ಟಿದ್ದರು ನಾವೇ ರಾಜಕೀಯಕ್ಕೆ ಬಲಿಯಾಗುವುದು. ಸರಕಾರಕ್ಕೆ ಹಲವು ಮನವಿ ಮಡಿಕೊಂಡರೂ ಅದು ಮಂಗಳೂರಿನ ಜಲಾನಯನ ಯೋಜನೆಗೆ ಹಣ ಬಿಡುಗಡೆ ಮಾಡಿಲ್ಲ.
ಸ್ಥಳೀಯ ಸಂಸ್ಥೆಗೆ ಸರಕಾರದ ನಿರ್ಧಾರವನ್ನು ವಿರೋಧಿಸಿ ನಿಲುವಳಿ ಸೂಚನೆ ಮಂಡಿಸಿ ವಿರೋಧ ಪ್ರಕಟ ಪಡಿಸುವ ಅಧಿಕಾರವಿದೆ. ಜನರ ಆಶಯಗಳಿಂದ ಚುನಾಯಿತವಾದ ಸಂಸ್ಥೆ ಅವರ ಆಶಯಗಳ ಪ್ರತಿ ನಡೆದುಕೊಳ್ಳವ ಹಕ್ಕು ಸ್ಥಳೀಯ ಸಂಸ್ಥೆಗೂ ಇದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.