ಸಹೋದರತೆಯ ಭಾವವನ್ನು ಗಟ್ಟಿಗೊಳಿಸುವ ಪವಿತ್ರ ಹಬ್ಬ ರಕ್ಷಾಬಂಧನಕ್ಕೆ ನಮ್ಮ ದೇಶದಲ್ಲಿ ವಿಶೇಷ ಮಹತ್ವವಿದೆ. ಒಡಹುಟ್ಟಿದವರ ಹುಸಿ ಮುನಿಸನ್ನು ಕರಗಿಸಿ ಪ್ರೀತಿಯ ಸಿಂಚನವನ್ನು ನೀಡುವುದೇ ರಕ್ಷೆಗಿರುವ ವಿಶೇಷ ಗುಣ. ರಾಖಿ ಕಟ್ಟಿದವಳಿಗೆ ಸದಾ ರಕ್ಷಣೆ ನೀಡಬೇಕು ಎಂಬುದು ಸಹೋದರನ ಅಭಿಲಾಷೆಯಾದರೆ, ನಾ ರಾಖಿ ಕಟ್ಟಿದ ಸಹೋದರ ನೂರು ಕಾಲ ಸುಖವಾಗಿ ಇರುವಂತೆ ನೋಡಿಕೋ ದೇವರೆ ಎಂಬ ಪ್ರಾರ್ಥನೆ ಸಹೋದರಿಯದ್ದು.
ಶ್ರಾವಣದಲ್ಲಿ ಭೀಮನ ಅಮವಾಸ್ಯೆ ಮತ್ತು ವರಮಹಾಲಕ್ಷ್ಮೀ ಹಬ್ಬದ ಬಳಿಕ ಬರುವುದೇ ರಕ್ಷಾಬಂಧನ. ಸಹೊದರ-ಸಹೋದರಿಯ ಹಬ್ಬವಾಗಿರುವ ಇದು ಭಾತೃತ್ವದ ಮಹತ್ವವನ್ನು ಸಾರುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಸಹೋದರರಂತೆ ಬಾಳಬೇಕು ಎಂಬ ಸಂದೇಶ ನೀಡುತ್ತದೆ. ಸಹೋದರ-ಸಹೋದರಿಯರ ಪ್ರೀತಿ ಮತ್ತು ಕರ್ತವ್ಯವನ್ನು ಸಾರಿ ಹೇಳುತ್ತದೆ. ಯಾರಿಗೆ ಬೇಕಾದರೂ ರಕ್ಷೆಯನ್ನು ಕಟ್ಟಿ ಅವರನ್ನು ಸಹೋದರರನ್ನಾಗಿ ಮಾಡಬಹುದು. ಇಡೀ ದೇಶದಲ್ಲಿ ಸಹೋದರತೆಯ ಭಾವವನ್ನು ಮೂಡಿಸುವ ಶಕ್ತಿ ರಕ್ಷಾ ಬಂಧನಕ್ಕಿದೆ.
ಅಣ್ಣ ತಂಗಿ ಇರುವುದೇ ಕಿತ್ತಾಡಲು, ರೇಗಾಡಲು. ಅವರಿಬ್ಬರ ಮುನಿಸು ಒಂದು ಕ್ಷಣವಷ್ಟೇ. ಬಳಿಕ ಅವರಿಬ್ಬರೂ ಒಂದೇ. ಜೀವನದ ಪಯಣದಲ್ಲಿ ಒಬ್ಬರಿಗೊಬ್ಬರು ಹೆಗಲು ಕೊಟ್ಟು ನಡೆಯುವವರು, ತಂಗಿಯ ರಕ್ಷಣೆಗೆ ಅಣ್ಣ, ಅಣ್ಣನ ಬೆಂಬಲಕ್ಕೆ ತಂಗಿ ಸದಾ ಇದ್ದೇ ಇರುತ್ತಾರೆ. ಈ ಭ್ರಾತೃತ್ವದ ಪ್ರೀತಿ ತಾಯಿಯ ಒಡಲಿನಿಂದ ಬಂದ ಕ್ಷಣದಿಂದಲೇ ಗಟ್ಟಿಯಾಗಿರುತ್ತದೆ. ಆದರೆ ಆ ಪ್ರೀತಿಗೊಂದು ಹೊಸ ಮೆರುಗು ನೀಡುವುದು ರಕ್ಷಾ ಬಂಧನ.
ದೂರದಲ್ಲಿರುವ ಅಣ್ಣ ತನ್ನ ತಂಗಿಯ ರಾಖಿಗಾಗಿ ಕಾಯುತ್ತಾನೆ, ಆಕೆಗೆ ಈ ಬಾರಿ ಯಾವ ಉಡುಗೊರೆ ನೀಡಲಿ ಎಂದು ಯೋಚಿಸುತ್ತಾನೆ. ಅಣ್ಣನಿಗೆ ರಾಖಿ ಕಳುಹಿಸುವುದೆಂದರೆ ತಂಗಿಗೆ ಎಲ್ಲಿಲ್ಲದ ಉತ್ಸಾಹ, ಸಂಭ್ರಮ. ಅದಕ್ಕಾಗಿ ಎರಡು ಮೂರು ವಾರ ಮೊದಲೇ ರಾಖಿ ಖರೀದಿಸಿ ಆತನಿಗೆ ಕಳುಹಿಸುವ ಏರ್ಪಾಡು ಮಾಡುತ್ತಾಳೆ. ಇನ್ನು ಹತ್ತಿರವಿರುವ ತಂಗಿ ಅಣ್ಣನಿಗೆ ಆರತಿ ಎತ್ತಿ, ತಿಲಕವಿಟ್ಟು ಕೈಗೆ ರಾಖಿ ಕಟ್ಟಿ ಆತನ ಸುಖಕ್ಕಾಗಿ ಪ್ರಾರ್ಥಿಸುತ್ತಾಳೆ. ಅಣ್ಣನೂ ತಂಗಿಗೆ ರಕ್ಷಣೆಯ ವಾಗ್ದಾನ ನೀಡುತ್ತಾನೆ.
ಗಡಿಯಲ್ಲಿ ದೇಶದ ರಕ್ಷಣೆಯ ಮಾಡುವ ಯೋಧರ ಕೈಗೆಗೂ ರಕ್ಷಾಬಂಧನ ಕಟ್ಟಲಾಗುತ್ತದೆ. ಸಮಾಜ ಸುಧಾರಕರಿಗೆ, ಪ್ರಧಾನಿ, ಮುಖ್ಯಮಂತ್ರಿಗಳ ಕೈಗೂ ರಕ್ಷೆಯನ್ನು ಕಟ್ಟಿ ದೇಶದ ರಕ್ಷಣೆ ಮಾಡಿ ಎಂದು ಕೇಳಿಕೊಳ್ಳಲಾಗುತ್ತದೆ. ರಾಖಿ ಕಟ್ಟುವ ಸಹೋದರಿಯರಿಗೆ ಸುರಕ್ಷಾ ಯೋಜನೆಯ ಉಡುಗೊರೆ ನೀಡಿ ಅವರ ಜೀವನವನ್ನು ಭದ್ರಗೊಳಿಸಿ ಎಂದು ಸರ್ಕಾರ ಕರೆ ನೀಡಿದೆ. ಈ ಮೂಲಕ ತಂಗಿಗೆ ಈ ಬಾರಿ ಏನು ಗಿಫ್ಟ್ ಕೊಡಲಿ ಎಂದು ಯೋಚಿಸುತ್ತಿರುವ ಅಣ್ಣನಿಗೆ ಉತ್ತಮ ಐಡಿಯಾವನ್ನೇ ನೀಡಿದೆ.
ವಿಶೇಷ ಮಹತ್ವವಿರುವ ರಕ್ಷಾ ಬಂಧನ ಸಹೋದರ ಸಹೋದರಿಯರ ಪ್ರೀತಿ ಮಮತೆಯನ್ನು ಗಟ್ಟಿಗೊಳಿಸಲಿ. ನಮ್ಮ ಭ್ರಾತೃತ್ವದ ಭಾವವನ್ನು ಚಿರಂತನಗೊಳಿಸಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.