ಇಂದು ನಾವು ಧರಿಸುವ ಉಡುಪು, ಪಾದರಕ್ಷೆ, ಕಪಾಟಿನಲ್ಲಿರುವ ಆಭರಣಗಳು, ಉಪಯೋಗಿಸುವ ಶೋಕಿ ವಸ್ತುಗಳು, ಸಂಚರಿಸುವ ವಾಹನ, ಅಂಗೈಲಿರುವ ಮೊಬೈಲು, ನಮ್ಮ ಯೋಚನೆ, ಚಿಂತನೆಗಳೆಲ್ಲವೂ ಕೈಗಾರಿಕೀಕರಣ ಮತ್ತು ಅದರ ಜೊತೆಯಲ್ಲಿರುವ ಅರ್ಥವ್ಯವಸ್ಥೆಯ ಭಾಗವಾಗಿದೆ. ಇಂತಹ ಅರ್ಥವ್ಯವಸ್ಥೆಯಲ್ಲಿ ಎರಡು ಭಾಗಗಳಿವೆ, ಒಂದು ಪ್ರಕೃತಿ ಪೂರಕ ಮತ್ತು ಪ್ರಕೃತಿ ಮಾರಕವಾದದ್ದು. ನಾವಿಂದು ಬಳಸುವ, ಬಳಕೆಯಿಂದ ಜಗತ್ತಿನ ಆಗುಹೋಗುಗಳಿಗೆ ಸಾಕ್ಷಿಯಂತಿರುವ ಮೊಬೈಲಿನ ಉದಾಹರಣೆಯನ್ನೇ ತೆಗೆದುಕೊಂಡರೆ ಅದೂ ಕೂಡಾ ಪ್ರಕೃತಿಯ ಹನನದಿಂದ ಬಂದ ವಸ್ತುವೇ ಆಗಿದೆ. ಅದರ ಹೊರ ಮೇಲ್ಮೈ ಗಾಜು ಮರಳಿನಿಂದ ಉತ್ಪತ್ತಿ ಮಾಡಿದ್ದು ಎಂದು ತಿಳಿಯುದಾದರೆ, ಮೊಬೈಲ್ ಒಳಗಿನ ಹಲವು ಧಾತುಗಳು ಖನಿಜ, ಅದಿರುಗಳ ಗಣಿಗಾರಿಕೆಯಿಂದ ಪ್ರಾಪ್ತಿಯಾದ್ದಾಗಿದೆ.
ಒಂದು ನಿರ್ದಿಷ್ಟ ಖನಿಜ, ಅದಿರು, ಲೋಹ, ಪೆಟ್ರೋಲಿಯಂ ವಸ್ತುಗಳ ಬಳಕೆಯಿಂದಾದ ಮೊಬೈಲ್ ಎಂಬ ಉತ್ಪನ್ನದ ನಿರ್ಮಾಣದಲ್ಲಿ ಎಷ್ಟು ಪ್ರಮಾಣದ ಅಂಗಾರಾಮ್ಲವೆಂಬ ಮಾರಕ ವಸ್ತು ಪ್ರಕೃತಿಯನ್ನು ಸೇರಿರಲಿಕ್ಕಿಲ್ಲ! ಆದರೆ ಇದೇ ಮೊಬೈಲ್ ನಮ್ಮ ಬದುಕಿನ ಅವಿಭಾಜ್ಯ ಮತ್ತು ಅತಿ ಅವಶ್ಯ ಸಂಗಾತಿ ಎನ್ನುವಷ್ಟರ ಮಟ್ಟಿಗೆ ಬೆಳೆದಿದೆ. ಬಹಳ ಹಿಂದೆ ಮಾನವನ ಬದುಕಿಗೆ ಬೇಕಾಗಿದ್ದು ಇತರ ಪ್ರಾಣಿಗಳಂತೆ ಆಹಾರ, ನೀರು, ಶುದ್ಧವಾದ ಗಾಳಿ, ಬೆಳಕು ಮತ್ತು ಆಶ್ರಯ. ನಾಗರಿಕತೆಯ ಹೊಸ್ತಿಲಲ್ಲಿ ಸದೃಢ ಸಮಾಜಕ್ಕೆ ಮೂಲ ಬೇಡಿಕೆಗಳೊಂದಿಗೆ ಬೇಕುಗಳೆಂಬ ಪಟ್ಟಿಯೂ ಸ್ವಲ್ಪ ಸ್ವಲ್ಪನೇ ದೊಡ್ಡದಾಗುತ್ತಾ ಹೋಯಿತು. ಪಟ್ಟಿ ದೊಡ್ಡದಾದಂತೆ ಅದರ ಪೂರೈಕೆಯ ಶ್ರಮ, ಅದರೊಂದಿಗಿನ ಆರ್ಥಿಕತೆಯು ಬೆಳೆಯಿತು. ಇಂದಿಗೂ ಬೇಕುಗಳ ಪಟ್ಟಿಯೂ ಮತ್ತೂ ಕೂಡಾ ದೊಡ್ಡದಾಗುತ್ತಲೇ ಇದೆ. ಇದನ್ನು ಪೂರೈಸುವ ತಂತ್ರಜ್ಞಾನವೂ ಬೆಳೆಯುತ್ತಲೇ ಬಂದಿದೆ. ವಿಶ್ವದ ಪ್ರಮುಖ ನಾಗರಿಕತೆಗಳನ್ನು ಬೆಸೆದಿದ್ದ ಕೃಷಿ ಆಧಾರಿತ ಆರ್ಥಿಕತೆ ಇಂದು ಹಿನ್ನೆಲೆಗೆ ಸರಿಯುತ್ತ ಇತರೆ ಆರ್ಥಿಕತೆಗಳು ಆಕಾಶದೆತ್ತರಕ್ಕೆ ಬೆಳೆದಿವೆ. ಇದರ ಪರೋಕ್ಷ ಪರಿಣಾಮ ನಮ್ಮ ಗಾಳಿ, ನೀರು, ಮಣ್ಣು ಸಹಿತ ಒಟ್ಟಾರೆ ಪರಸರದ ಮೇಲಾಗುತ್ತಿದೆ. ಹಿಮಾಚ್ಛಾದಿತ ಪರ್ವತಗಳು ಕರಗುತ್ತಿವೆ, ಭೂಮಿ ಬರಡಾಗುತ್ತಿದೆ, ಸಮುದ್ರ ಮಟ್ಟ ಹೆಚ್ಚುತ್ತಿದೆ, ಉತ್ತರ ದಕ್ಷಿಣ ಧ್ರುವಗಳೂ ಪ್ರಾಕೃತಿಕ ಅಸಮತೋಲನಗಳಿಗೆ ಸಾಕ್ಷಿಯಾಗುತ್ತಿವೆ.
ಭಾರತದಲ್ಲೂ ಮಾನ್ಸೂನ್ ಮಳೆ ಆರಂಭ ನಿಧಾನವಾಗುತ್ತಿದೆ. ಗುಡ್ಡ ಜರಿತದಂತಹ ಸಂಭವಗಳು ಎಲ್ಲೆಡೆಯೆಂಬಂತೆ ನಡೆಯುತ್ತಿವೆ. ಮಳೆಯಿಂದಾಗುವ ಅಸಂಭವನೀಯ ವೈಪರೀತ್ಯಗಳು ನಿರಂತರವಾಗಿದೆ. ಇದಕ್ಕೆ ಪ್ರಮುಖ ಕಾರಣ ಮನುಷ್ಯನ ಅತಿಯಾದ ವ್ಯಾಮೋಹಗಳು ಸಹಿತ ಜರಿಯದ ಬೇಕುಗಳೆಂಬ ಗುಡ್ಡೆ!
ಜಗತ್ತಿನ ಎಲ್ಲೆಡೆ ಆಗಿಂದಾಗ್ಗೆ ಪ್ರತಿಕೂಲ ಹವಾಮಾನದಿಂದ ಜನಜೀವನ ತತ್ತರಿಸಲ್ಪಡುತ್ತಿದೆ. ಪ್ರಕೃತಿ ತನಿಗಾದ ಅನ್ಯಾಯಕ್ಕೆ ಉತ್ತರ ಎಂಬಂತೆ ಆಗಾಗ್ಗೆ ಮುನಿಸುತ್ತಿರುತ್ತಾಳೆ. ಚಳಿಗಾಲದಲ್ಲಿ ಮಳೆಗಾಲ, ಮಳೆಗಾಲದ ಸುಡು ಬಿಸಿಲು, ನಾಶವಾದ ಮಳೆಕಾಡುಗಳು, ಗುಡ್ಡ ಜರಿತ, ಕಡಲಬ್ಬರ, ಹಿಮಾಚ್ಛಾದಿತ ಬೆಟ್ಟಗಳ ಕರುಗುವಿಕೆ, ಕಾಳ್ಗಿಚ್ಚು, ಭೀಕರ ಎನ್ನುವ ಟಾರ್ನೆಡೊ ಬಿರುಗಾಳಿ.. ಹೀಗೆ ಜಗತ್ತು ಎದುರಿಸುತ್ತಿರುವ ಆಪತ್ತುಗಳ ಪಟ್ಟಿ ಹಲವು ಬಗೆಯದ್ದು. ವರ್ಷ ಕಳೆದಂತೆ ಹೆಚ್ಚುತ್ತಿರುವ ತಾಪಮಾನ, ತಾಪಮಾನಕ್ಕೆ ಕಾರಣವಾಗಿರುವ ಇಂಗಾಲದ ಹೊರಸೂಸುವಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆಯೆ ವಿನಾ ಕಡಿಮೆಯಾಗುತ್ತಿಲ್ಲ. ಮುಂದಿನ 80 ವರ್ಷಗಳಲ್ಲಿ ಜಾಗತಿಕ ತಾಪಮಾನ 3 ಡಿಗ್ರಿ ಸೆಲ್ಸಿಯಸ್ ನಷ್ಟು ಏರಿಕೆಯಾಗಲಿದ್ದು, ವಿಶ್ವದ ಹಲವು ಪ್ರಧಾನ ಬಂದರು ನಗರಿಗಳು ಮುಳುಗಲಿವೆ ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. ಹೆಚ್ಚಿನ ಪ್ರಾಕೃತಿಕ ವಿಕೋಪಗಳಿಗೆ, ಪ್ರಾಕೃತಿಕ ಅಸಮತೋಲನಕ್ಕೆ ಪ್ರಮುಖ ಕಾರಣ ಮನುಷ್ಯ ಮತ್ತು ಆತನ ಹೆಚ್ಚಿನ ಬೇಕುಗಳು ಎಂದರೆ ತಪ್ಪಲ್ಲ. 19 ನೇ ಶತಮಾನದಿಂದೀಚೆಗೆ ಆರಂಭಗೊಂಡ ಹೊಸ ಕೈಗಾರಿಕಾ ಆರ್ಥಿಕತೆಯ ಪರ್ವವೇ ಜಗತ್ತಿನ ನೀರು, ಗಾಳಿ, ಮಣ್ಣಿನ ಮಾಲಿನ್ಯಕ್ಕೆ ಪ್ರಮುಖ ಕಾರಣ. ಕಲ್ಲಿದ್ದಲು, ಪೆಟ್ರೋಲಿಯಂ ಇಂಧನ ಮೂಲಗಳ ಅತಿಯಾದ ಬಳಕೆಯಿಂದ ಭೂಮಿಯು ಬರಿದಾಗುತ್ತಿದೆ ಮಾತ್ರವಲ್ಲದೆ ಭೂಮಿಯ ಹೊರಮೇಲ್ಮೈಯಲ್ಲಿ ಅಂಗಾರಾಮ್ಲದ ಶೇಖರಣೆಯಿಂದ ಜಾಗತಿಕ ತಾಪಮಾನ ನಿರಂತರ ಏರಿಕೆಯಾಗುತ್ತಿದೆ.
ದೊಡ್ಡ ಕೈಗಾರಿಕೆಗಳಲ್ಲಿ ಬಳಸಲ್ಪಡುವ ನೀರು ಶುದ್ಧೀಕರಿಸದೆ ಪುನಃ ನದಿಮೂಲಗಳನ್ನೇ ಸೇರಿ, ನದಿಪಾತ್ರಗಳು ಕೂಡಾ ನಿರಂತರವಾಗಿ ಕಲುಷಿತಗೊಳ್ಳುತ್ತಿವೆ. ಜನಸಂಖ್ಯೆಯ ಹೆಚ್ಚಳ, ಅವಶ್ಯಕತೆಗಳನ್ನು ಪೂರೈಸಲು ಬೇಕಾಗುವ ಆಹಾರ, ಬಟ್ಟೆ, ಬರೆ, ವಸತಿ, ದೈನಂದಿನ ಬಳಕೆ ವಸ್ತು ಸಹಿತ ಇನ್ನಿತರ ಸಾಮಾಗ್ರಿಗಳ ತಯಾರಿಕೆ ಹೀಗೆ ತರಹೆವಾರಿ ವಸ್ತುಗಳ ಉತ್ಪಾದನೆ, ನಿರ್ಮಾಣ, ಪೂರೈಕೆಯ ನಂತರದ ಉಳಿಕೆಯೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಇತ್ತೀಚೆಗಷ್ಟೇ ಗ್ಲಾಸ್ಗೋದಲ್ಲಿ ಕಾಪ್- 26 ಶೃಂಗಸಭೆ ನಡೆದಿದೆ. ವಿಶ್ವದ ಹಲವು ಪ್ರಭಾವಿ ರಾಷ್ಟ್ರಗಳು ಎಮಿಶನ್ ಕಟ್ ಅಂದರೆ ಇಂಗಾಲದ ಹೊರಸೂಸುವಿಕೆಯನ್ನು ತಡೆಯುವ, ನಿಯಂತ್ರಿಸುವ ಶಪಥಗೈದಿವೆ. ಭಾರತವೂ ಈ ಶಪಥಗೈದ ಹಲವು ರಾಷ್ಟ್ರಗಳಲ್ಲೊಂದು, ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೂ ಹೌದು. ನಿಧಾನವಾಗಿ ಪೆಟ್ರೋಲಿಯಂ ಇಂಧನದ ಬಳಕೆ ಕಡಿಮೆ ಮಾಡಿ, ಮರುಬಳಕೆ ಇಂಧನ ಮೂಲಗಳತ್ತ ಮುಖ ಮಾಡುತ್ತಿರುವ ಭಾರತವು ಪ್ರಕೃತಿ ಪೂರಕ ಅಭಿವೃದ್ಧಿ ಲಕ್ಷ್ಯ ಮತ್ತು ಚಿತ್ತವನ್ನು ಹೊಂದಿದೆ.
ವಿಶ್ವದ ಹಲವು ರಾಷ್ಟ್ರಗಳ ಆರ್ಥಿಕತೆ, ಕೈಗಾರಿಕೆ, ಇಂಗಾಲದ ಹೊರಸೂಸುವಿಕೆ ಸಹಿತ ಅಲ್ಲಿನ ಭೌಗೋಳಿಕ ವಾತಾವರಣವನ್ನು ಗಮನಿಸಿದರೆ ಆಯಾ ದೇಶಗಳ ಪ್ರಗತಿಯು ಪ್ರಕೃತಿ ಪೂರಕವೇ ಅಲ್ಲವೇ ಎಂಬುದನ್ನು ಸುಲಭವಾಗಿ ನಿರ್ಧರಿಸಬಹುದು. ಭೂಮಿಯ ಪ್ರಾಕೃತಿಕ ಬದಲಾವಣೆಗಳು ಹೊಸತೇನಲ್ಲ, ಭೂಮಿಯು ಹಲವು ಪ್ರಾಕೃತಿಕ ಮನ್ವಂತರಗಳನ್ನು ಕಂಡಿದೆ. ಅದರಲ್ಲಿ ಹಿಮಯುಗವೂ ಒಂದು. ಹಲವು ಶತಮಾನಗಳವರೆಗಿದ್ದ ಹಿಮಯುಗದ ಕಾಲಘಟ್ಟವನ್ನು ಮನುಷ್ಯ ಅನುಭವಿಸಿದ್ದ, ಜೀವಿಸಿದ್ದ, ಜಯಿಸಿದ್ದ! ಆದರೆ ಆ ಹಿಮಯುಗ ಸಹಜವಾಗಿ ನಡೆದ ಪ್ರಕ್ರಿಯೆ ಆದರೆ ಆಧುನಿಕ ಕಾಲವೂ ಮನುಷ್ಯನ ಅತಿಯಾದ ಅರ್ಥಿಕ, ವ್ಯಾವಹಾರಿಕ ದೃಷ್ಠಿಯಿಂದ ಮುನ್ನಡೆದಿದ್ದು ಭೂಮಿಯ ತಾಪಮಾನ ನಿರಂತರ ಏರಿಕೆಯಾಗಿ ಶಾಖಯುಗದ ಮುನ್ಸೂಚಿಯಂತಿದೆ, ಮಾತ್ರವಲ್ಲ ಆಕಸ್ಮಾತ್ ಭೂಮಿಯ ತಾಪ ಹೆಚ್ಚಾದರೆ ಮನುಷ್ಯ ಏನು ಮಾಡಬಲ್ಲ ಎಂಬ ಪ್ರಶ್ನೆಯೂ ಸಹಜವಾದುದ್ದೆ.
ದಕ್ಷಿಣ ಅಮೇರಿಕೆಯ ಅಮೇಜಾನ್ ಕಾಡುಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ವಿಶ್ವದ ಶ್ವಾಸಕೋಶ ಎಂದು ಕರೆಯಲ್ಪಡುವ ಈ ಕಾಡುಗಳು ಕೃಷಿ ಭೂಮಿಯ ವಿಸ್ತರಣೆ, ಮನುಷ್ಯನ ವಸತಿ ಸೌಕರ್ಯಗಳಿಗಾಗಿ ಎಲ್ಲಕ್ಕಿಂತ ಮಿಗಿಲಾಗಿ ದೊಡ್ಡ ಕಂಪೆನಿಗಳ ಹಣದ ವ್ಯಾಮೋಹದ ಪರಿಣಾಮ ಬರಡಾಗುತ್ತಿವೆ. ಖನಿಜಗಳ ಖನಜ, ಅದಿರು ನಿಕ್ಷೇಪದ ಲಕ್ಷ್ಯ, ಹೊಸ ಆಹಾರ ಬೆಳೆಗಳ ಉತ್ಪಾದನೆ ಮತ್ತು ಪೂರೈಕೆ ಹೀಗೆ ಹಲವು ಕಾರಣಗಳು ಕಾಡು ನಾಶಕ್ಕೆ ದಾರಿಯಾಗುತ್ತಿವೆ. ಕಾಡಿನೊಂದಿಗೆ ಬದುಕ ಕಟ್ಟಿದ್ದ ಕಾಡುಜನಾಂಗಗಳು ಇಲ್ಲವಾಗಿ, ಕಾಡನ್ನು ಉಳಿಸಿ ಅದರೊಂದಿಗೆ ಬೆಸೆದಿದ್ದ ಸಂಸ್ಕೃತಿಯೂ ಇಲ್ಲವಾಗುತ್ತಿದೆ. ವರ್ತಮಾನದ ಪ್ರಾಕೃತಿಕ ಏರುಪೇರುಗಳಿಗೆ ಮೂಲ ಕಾರಣಗಳು ಹೀಗೆ ಹತ್ತು ಹಲವಿವೆ. ಮೊದಲನೇಯದು 18ನೇ ಶತಮಾನದಲ್ಲಿ ಬ್ರಿಟಿಷರು ಆರಂಭಿಸಿದ್ದ ಕೈಗಾರಿಕೀಕರಣ, ಈ ಕೈಗಾರಿಕೆಗಳಿಂದ ಹೊರಸೂಸಲ್ಪಟ್ಟ ಅಂಗಾರಾಮ್ಲವನ್ನು ಇನ್ನೂ ಈ ಭೂಮಿಗೆ ಅರಗಿಸಲಾಗಿಲ್ಲ, ಆದರೆ ಮತ್ತಷ್ಟೂ ಮಗದಷ್ಟೂ ಇಂಗಾಲವನ್ನು ಹೊರಸೂಸುತ್ತಿವೆ ವಿಶ್ವದ ಪ್ರಮುಖ ಅಭಿವೃದ್ಧಿ ರಾಷ್ಟ್ರಗಳು. ಕಾಪ್-26 ಶೃಂಗಸಭೆಯಲ್ಲಿ ಹಲವು ರಾಷ್ಟ್ರಗಳು ತಮ್ಮ ಅಭಿಪ್ರಾಯಗಳನ್ನು ಮುಂದಿಟ್ಟಿವೆ ಮಾತ್ರವಲ್ಲದೆ ‘ಎಮಿಶನ್ ಕಟ್’ ಎಂಬುದಕ್ಕೆ ಬದ್ಧತೆಯನ್ನು ಸೂಚಿಸಿವೆ. ಕಾಪ್ ಸಭೆಯ ಆರಂಭದಲ್ಲಿ ಅನುಪಸ್ಥಿತವಾಗಿದ್ದ ಚೀನಾ ಮತ್ತು ರಷ್ಯಾದ ನಡೆ ಏನು ಎಂಬುದು ಸೋಜಿಗವೇ. ರಷ್ಯಾವೂ ತನ್ನ ಉತ್ತರದಲ್ಲಿರುವ ಆರ್ಕಟಿಕ್ ಭಾಗದಲ್ಲಿ ಪೆಟ್ರೋಲಿಯಂ ಇಂಧನದ ಮೇಲೆ ಕಣ್ಣಿಟ್ಟಿದೆ ಮಾತ್ರವಲ್ಲ ಅತ್ಯಂತ ಸೂಕ್ಷ್ಮವಾಗಿರುವ ಉತ್ತರ ಧ್ರುವ ಸಮೀಪದಲ್ಲಿ ಗಣಿಗಾರಿಕೆಯ ಲಕ್ಷ್ಯವಿರಿಸಿದೆ. ಚೀನಾದ ಅಂತಾರಾಷ್ಟ್ರೀಯ ಮಾರುಕಟ್ಟೆಯ ಲಕ್ಷ್ಯ ಮಾತ್ರವಲ್ಲದೆ ಈಗಾಗಲೇ ನಿರ್ಮಿಸಲ್ಪಟ್ಟಿರುವ ಅಂತಾರಾಷ್ಟ್ರೀಯ ರೇಷ್ಮೆ ಹೆದ್ದಾರಿಯ ಸಂಚಾರ ಸುಗಮವಾಗಬೇಕಾದರೆ ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಿನ ಇನ್ನಷ್ಟೂ ಇಂಗಾಲವನ್ನು ಹೊರಸೂಸಬೇಕಿದೆ. ಕೈಗಾರಿಕಾ ಲಕ್ಷ್ಯದಿಂದ ಯುರೋಪಿನ ಮಾರುಕಟ್ಟೆಯನ್ನು ಕೈವಶಮಾಡಿಕೊಳ್ಳುವ ಮಹದುದ್ದೇಶವೂ ಚೀನಾಕ್ಕೆ ಇದೆ ಎನ್ನುವ ಅಂಶ ಖಾತರಿ. ಪ್ರಕೃತಿ ಸುಂದರ ತಾಣಗಳಾದ ಬಾಲಿ, ಸುಮಾತ್ರ, ಮಲೇಷಿಯಾಗಳಲ್ಲೂ ಹಲವು ರೀತಿಯ ಪ್ರಾಕೃತಿಕ ಸಮಸ್ಯೆಗಳು ಇಂದು ಎದುರಾಗುತ್ತಿವೆ. ಸಣ್ಣ ದ್ವೀಪಗಳನ್ನು ಸಮುದ್ರವೇ ನಿಧಾನವಾಗಿ ನುಂಗಲಾರಂಭಿಸಿವೆ. ಸಣ್ಣ ದ್ವೀಪಗಳ ಜನಮಂದಿ ದೊಡ್ಡ ಪಟ್ಟಣಗಳತ್ತ ದೌಡಾಯಿಸಲಾರಂಭಿಸಿದ್ದಾರೆ. ಮಲೇಷ್ಯಾ, ಇಂಡೋನೇಷ್ಯಾದ ಬೃಹತ್ ಅರಣ್ಯ ಪ್ರದೇಶ ಪಾಮ್ ಆಯಿಲ್ ಬೆಳೆಗಾರಿಕೆ ಎಂಬ ದಂಧೆಗೆ ಸಿಲುಕಿ ದೊಡ್ಡ ಕಂಪೆನಿಗಳ ಪಾಲಾಗುತ್ತಿವೆ. ಒಂದೆಡೆ ಕಾಡು ನಾಶ, ಮತ್ತೊಂದೆಡೆ ನಿರಂತರ ಸಾಗುತ್ತಿರುವ ಇಂಗಾಲದ ಹೊರಸೂಸುವಿಕೆಯಿಂದ ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶಗಳಲ್ಲೂ ಪ್ರಾಕೃತಿಕ ಬದಲಾವಣೆಗಳು ನಿಚ್ಚಳವಾಗಿ ಕಾಣುತ್ತಿವೆ. ಸುಮಾರು ಶತ ಶತಮಾನಗಳ ಹಿಂದೆ ಘನೀಕೃತಗೊಂಡಿದ್ದ ಹಿಮದ ರಾಶಿಯು ವರ್ತಮಾನದಲ್ಲಿ ಕರಗಲಾರಂಭಿಸಿದೆ. ಪಕ್ಷಿಗಳು, ಅಸಂಖ್ಯ ಕಾಡುಪ್ರಾಣಿಗಳ ಆಹಾರ ಕ್ರಮ, ವಲಸೆ, ಪ್ರಜನನ ಪ್ರಕ್ರಿಯೆಯ ಮೇಲೂ ಹವಾಮಾನ ವೈಪರೀತ್ಯ ಎಂಬುದು ದುಷ್ಪರಿಣಾಮವಾಗಿ ಕಾಡಿದೆ.
ಭಾರತ ಇಂದು ವಿಶ್ವದ ಹತ್ತು ಪ್ರಧಾನ ಹಸಿರು ಅನಿಲ ಹೊರಸೂಸುವ ದೇಶಗಳಲ್ಲಿ ಒಂದು. ಮೊದಲ ಸ್ಥಾನದಲ್ಲಿ ಚೀನಾವಿದ್ದರೆ, ಎರಡನೇ ಸ್ಥಾನದಲ್ಲಿ ಅಮೇರಿಕವಿದೆ, ಭಾರತ ಮೂರನೇ ಅತಿ ದೊಡ್ಡ ಹಸಿರು ಮನೆ ಅನಿಲ ಹೊರಸೂಸುವ ರಾಷ್ಟ್ರ. 2070 ರ ವೇಳೆಗೆ ಭಾರತ ಶೂನ್ಯ ಇಂಗಾಲ ಹೊರಸೂಸುವ ರಾಷ್ಟ್ರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಪ್- 26 ಶೃಂಗಸಭೆಯಲ್ಲಿ ಹೇಳಿದ್ದು ಎಲ್ಲರನ್ನು ಅಚ್ಚರಿಗೊಳಿಸಿದೆ. ಭಾರತ ಈಗಾಗಲೇ ತನ್ನ ಗುರಿಯತ್ತ ಚಿತ್ತ ಹರಿಸಿದೆ. ಅಟೊಮೊಬೈಲ್ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ವಾಹನಗಳತ್ತ ಜನರು ಮುಖ ಮಾಡುವಂತೆ ಮಾಡಿದೆ. ದೇಶದ ಅರಣ್ಯ ಪ್ರದೇಶವು ಸಂರಕ್ಷಿಸಲ್ಪಟ್ಟಿದೆ ಮಾತ್ರವಲ್ಲ ಹೆಚ್ಚಾಗುತ್ತಲಿದೆ. ಕಾಡು ಸಂರಕ್ಷಣೆಯೊಂದಿಗೆ, ಭೌಗೋಳಿಕ ಸ್ಥಿರತೆ ಮತ್ತು ಮಾಲಿನ್ಯ ಹತೋಟಿಗೆ ಕಾಡಿನ ಅವಶ್ಯಕತೆಯೂ ಪ್ರಮುಖವಾಗಿದೆ. ಸರಕಾರದ ಅಂಕಿ ಅಂಶದ ಪ್ರಕಾರ 2001-2019 ರ ಅವಧಿಯಲ್ಲಿ 5.2% ಕಾಡು ಪ್ರದೇಶ ದೇಶದಲ್ಲಿ ವೃದ್ಧಿಯಾಗಿದೆ. 140 ಕೋಟಿ ಜನಸಂಖ್ಯೆ ಇದ್ದೂ ಕಾಡು ರಕ್ಷಣೆಯ ಮಜಲು ಹೇಗೆ ಸಾಧ್ಯವಾಯಿತು ಎಂಬುದು ಆಶ್ಚರ್ಯಕರ ಸಂಗತಿಯೂ ಹೌದು. ಇಂದು ದೇಶದಲ್ಲಿ ಪ್ರಧಾನ ಉರುವಲಾಗಿ ಕಟ್ಟಿಗೆಯನ್ನು ಬಳಸುವುದು ಬಹಳಷ್ಟು ಕಡಿಮೆಯಾಗಿದೆ. ಉಜ್ವಲ ಯೋಜನೆಯ ಮೂಲಕ ಅಡುಗೆ ಅನಿಲದ ಬಳಕೆ ಹಳ್ಳಿ ಹಳ್ಳಿಗೂ ತಲುಪಿದೆ. ಇದರ ಹೊರತಾಗಿ ಭಾರತ ದೇಶವು ಮರುಬಳಕೆ ಇಂಧನ ಮೂಲದತ್ತ ಗಮನಹರಿಸಿದೆ, 500 ಗಿಗಾ ವ್ಯಾಟ್ ಸಾಮರ್ಥ್ಯದ ಮರುಬಳಕೆ ವಿದ್ಯುತ್ಛಕ್ತಿ ಇಂಧನ ಮೂಲಗಳತ್ತ ಸರಕಾರ ದೃಷ್ಠಿ ಹರಿಸಿದೆ. ಇದರ ಹೊರತಾಗಿ 2030 ರ ವೇಳೆಗೆ ನೂರು ಕೋಟಿ ಟನ್ ನಷ್ಟು ಅಂಗಾರಾಮ್ಲದ ಹೊರಸೂಸುವಿಕೆಯನ್ನು ತಡೆಯುವಲ್ಲಿ ಮಾರ್ಗಸೂಚಿ ಅನುಸರಿಸಲಿದೆ. ಈ ಹಿಂದಿನ ಗುರಿಗಿಂತ 33-35% ರಷ್ಟು ಹಸಿರು ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲಿದೆ. ಭಾರತದಲ್ಲಿ ಪ್ರಸ್ತುತ ಪ್ರಧಾನ ಇಂಧನ ಮೂಲವಾಗಿ ಕಲ್ಲಿದ್ದಲು ಯಥೇಚ್ಚವಾಗಿ ಬಳಕೆಯಲ್ಲಿದೆ. ಕಲ್ಲಿದ್ದಲ್ಲಿನ ಉಪಯೋಗದಿಂದ ವಾತಾವರಣಕ್ಕೆ ಅತಿ ಹೆಚ್ಚಿನ co2 ಹೊರಸೂಸಲ್ಪಡುತ್ತದೆ. ಇದರ ಹತೋಟಿಯ ಜೊತೆಯಲ್ಲಿ ಜಾಗತಿಕ ತಾಪಮಾನ ಏರಿಕೆಯಾಗದಂತೆ ತಡೆಯುವ ಕ್ರಮಗಳನ್ನು ಅನುಸರಿಸಲಾಗುತ್ತದೆ. ಫಾಸಿಲ್ ಇಂಧನಗಳ ಬಳಕೆಯನ್ನು ಸಂಪೂರ್ಣ ಇಲ್ಲವಾಗಿಸಲು ಮರುಬಳಕೆ ಇಂಧನ ಮೂಲಗಳಿಂದಲೇ 500 ಗಿ.ವ್ಯಾ ವಿದ್ಯುತ್ ಶಕ್ತಿ ಉತ್ಪಾದನೆ ಗುರಿಯನ್ನು ದೇಶ ಹೊಂದಿದೆ.
ಪ್ರಸ್ತುತ ದೇಶವು ಮರುಬಳಕೆ ಇಂಧನ ಮೂಲಗಳ ಸಹಾಯದಿಂದ 175 ಗಿ.ವ್ಯಾ ನಷ್ಟು ವಿದ್ಯುತ್ ಶಕ್ತಿ ಉತ್ಪಾದನೆಯ ಸನಿಹದಲ್ಲಿದೆ. 2030 ಹೊತ್ತಿಗೆ ದೇಶದ 50% ವಿದ್ಯುತ್ ಶಕ್ತಿಯು ಮರುಬಳಕೆ ಇಂಧನ ಮೂಲಗಳಿಂದಲೇ ಪ್ರಾಪ್ತಿಯಾಗಲಿದೆ.
ಹೀಗೆ ದೇಶವು 2030 ರ ವೇಳೆಗೆ ತನ್ನ ಪ್ರಥಮ ಗುರಿಯನ್ನು ತಲುಪಿದಲ್ಲಿ ವಿಶ್ವಕ್ಕೆ ಭಾರತವೂ ಮಾರ್ಗದರ್ಶಿಯೆನಿಸಲಿದೆ. ದೇಶದ ಆರ್ಥಿಕ ಅಭಿವೃದ್ಧಿ ಪಥದೊಂದಿಗೆ, ಪ್ರಕೃತಿಯ ಸಂರಕ್ಷಣೆ ಮತ್ತು ಜಾಗತಿಕ ತಾಪಮಾನ ನಿಯಂತ್ರಣದಲ್ಲಿ ಸರಕಾರದ ವಿನೂತನ ಪ್ರಯತ್ನ ಫಲ ನೀಡಲಿ. ಎಲ್ಲಕ್ಕಿಂತ ಮಿಗಿಲಾಗಿ ಹೆಚ್ಚಿನ ʼಬೇಕುʼಗಳೆಂಬ ವ್ಯಾಧಿಗೆ ತಕ್ಕಮಟ್ಟಿನ ಬ್ರೇಕ್ ಹಾಕೋಣ!
✍️ ವಿವೇಕಾದಿತ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.