ನವದೆಹಲಿ: ಪ್ರಧಾನಮಂತ್ರಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2020-21ನೇ ಹಣಕಾಸು ವರ್ಷದಲ್ಲಿ ಎಲ್ಲ ಅರ್ಹ ನಾನ್-ಗೆಜೆಟೆಡ್ ರೈಲ್ವೆ ನೌಕರರಿಗೆ (ಆರ್ಪಿಎಫ್/ಆರ್ಪಿಎಸ್ಎಫ್ ಸಿಬ್ಬಂದಿಯನ್ನು ಹೊರತುಪಡಿಸಿ) 78 ದಿನಗಳ ವೇತನಕ್ಕೆ ಸಮನಾದ ʻಉತ್ಪಾದಕತೆ ಆಧರಿತ ಬೋನಸ್ʼ(ಪಿಎಲ್ಬಿ) ನೀಡಲು ಅನುಮೋದನೆ ನೀಡಿದೆ.
ರೈಲ್ವೆ ನೌಕರರಿಗೆ 78 ದಿನಗಳ ʻಪಿಎಲ್ಬಿʼ ಪಾವತಿಯಿಂದ 1984.73 ಕೋಟಿ ರೂ.ಗಳ ಆರ್ಥಿಕ ಪರಿಣಾಮ ಉಂಟಾಗಬಹುದೆಂದು ಅಂದಾಜಿಸಲಾಗಿದೆ. ಅರ್ಹ ನಾನ್-ಗೆಜೆಟೆಡ್ ರೈಲ್ವೆ ನೌಕರರಿಗೆ ʻಪಿಎಲ್ಬಿʼ ಪಾವತಿಸಲು ಮಾಸಿಕ 7000 ರೂ. ಗಳ ವೇತನ ಮಿತಿಯನ್ನು ನಿಗದಿಪಡಿಸಲಾಗಿದೆ. ಅರ್ಹ ರೈಲ್ವೆ ಉದ್ಯೋಗಿಗೆ 78 ದಿನಗಳಿಗೆ ಪಾವತಿಸುವ ಗರಿಷ್ಠ ಮೊತ್ತ 17,951 ರೂ. ಗಳಾಗಿವೆ.
ಈ ನಿರ್ಧಾರದಿಂದ ಸುಮಾರು 11.56 ಲಕ್ಷ ಗೆಜೆಟೆಡೇತರ ರೈಲ್ವೆ ಉದ್ಯೋಗಿಗಳು ಪ್ರಯೋಜನ ಪಡೆಯುವ ಸಾಧ್ಯತೆಯಿದೆ. ಪ್ರತಿ ವರ್ಷ ದಸರಾ/ ಪೂಜಾ ರಜಾದಿನಗಳಿಗೆ ಮೊದಲು ಅರ್ಹ ರೈಲ್ವೆ ಉದ್ಯೋಗಿಗಳಿಗೆ ʻಪಿಎಲ್ಬಿʼ ಪಾವತಿ ಮಾಡಲಾಗುತ್ತದೆ. ಈ ವರ್ಷವೂ ರಜಾದಿನಗಳಿಗೆ ಮುನ್ನ ಸಂಪುಟದ ನಿರ್ಧಾರವನ್ನು ಜಾರಿಗೊಳಿಸಲಾಗುವುದು.
2010-11ರಿಂದ 2019-20ರ ವರೆಗಿನ ಆರ್ಥಿಕ ವರ್ಷಗಳಲ್ಲಿ 78 ದಿನಗಳ ವೇತನದ ʻಪಿಎಲ್ಬಿʼ ಮೊತ್ತವನ್ನು ಪಾವತಿಸಲಾಗಿದೆ. 2020-21ನೇ ವರ್ಷವೂ 78 ದಿನಗಳ ವೇತನಕ್ಕೆ ಸಮಾನವಾದ ʻಪಿಎಲ್ಬಿʼ ನೀಡಲಾಗುವುದು. ಈ ಕ್ರಮವು ರೈಲ್ವೆಯ ಕಾರ್ಯಕ್ಷಮತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಉದ್ಯೋಗಿಗಳನ್ನು ಉತ್ತೇಜಿಸಬಹುದೆಂಬ ನಿರೀಕ್ಷೆ ಹೊಂದಲಾಗಿದೆ.
ರೈಲ್ವೆಯ ʻಉತ್ಪಾದಕತೆ ಆಧರಿತ ಬೋನಸ್ʼ ದೇಶವ್ಯಾಪಿ ಎಲ್ಲಾ ನಾನ್-ಗೆಜೆಟೆಡ್ ರೈಲ್ವೆ ಉದ್ಯೋಗಿಗಳಿಗೆ (ಆರ್ಪಿಎಫ್/ಆರ್ಪಿಎಸ್ಎಫ್ ಸಿಬ್ಬಂದಿಯನ್ನು ಹೊರತುಪಡಿಸಿ) ಅನ್ವಯಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.