ಇತ್ತೀಚೆಗೆ ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಹವಾಮಾನ ಬದಲಾವಣೆ ಸಮಿತಿಯು (ಐಪಿಸಿಸಿ) ತನ್ನ ಆರನೇ ವರದಿಯನ್ನು ನೀಡಿ ಭೂಮಿಯ ತಾಪಮಾನವಿಂದು ಕಳೆದ 1,25,000 ವರ್ಷಗಳಲ್ಲೇ ಅತೀ ಹೆಚ್ಚಿನ ಮಟ್ಟಕ್ಕೆ ಏರಿದೆ ಎಂದು ಹೇಳಿದೆ. ಇದಲ್ಲದೆ ಮುಂದಿನ 20 ವರ್ಷಗಳಲ್ಲಿ ಜಾಗತಿಕ ತಾಪಮಾನವು 1.5 ರಿಂದ 2 ಡಿಗ್ರೀ ಸೆಲ್ಸಿಯಸ್ ಗಳಷ್ಟು ಏರಲಿದೆ ಎನ್ನುವ ಮಾಹಿತಿಯನ್ನು ನೀಡಿದೆ. ವರದಿಯ ಪ್ರಕಾರ ಬಿಸಿ ಅಲೆಯ ಪ್ರಮಾಣ ತೀವ್ರವಾಗಲಿದ್ದು ಈ ಶತಮಾನದಲ್ಲಿ ದಕ್ಷಿಣ ಪೂರ್ವ ಏಶಿಯಾದ ದೇಶಗಳು ಬಹಳ ಸಮಸ್ಯೆಗಳನ್ನೆದುರಿಸಲಿವೆ. ಭಾರತವು ಕೂಡಾ ಜಾಗತಿಕ ತಾಪಮಾನ ಏರಿಕೆಯ ದುಷ್ಪರಿಣಾಮಗಳನ್ನು ಎದುರಿಸಲಿದೆ. ಹಿಮಾಲಯದ ನೀರ್ಗಲ್ಲುಗಳು ವೇಗವಾಗಿ ಕರಗಿ ಪ್ರವಾಹವನ್ನು ಉಂಟುಮಾಡಲಿವೆ. ಮಾನ್ಸೂನ್ ಮಾರುತಗಳು ತೀವ್ರವಾಗಿ ಅತಿವೃಷ್ಟಿಯಾಗಿ ಪ್ರವಾಹ ಉಂಟಾಗಲಿದೆ. ಈಗಾಗಲೇ ಏಶಿಯಾದ ಕರಾವಳಿಗಳಲ್ಲಿ ಜಾಗತಿಕ ಮಟ್ಟದ ಸರಾಸರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಮುದ್ರದ ನೀರಿನ ಮಟ್ಟ ಹೆಚ್ಚಿದೆ. 1800 ನೇ ಇಸವಿಯ ನಂತರ ಮಾನವರು ಕೈಗಾರಿಕೆಯಲ್ಲಿ ಕಲ್ಲಿದ್ದಲು, ಪೆಟ್ರೋಲ್, ಡಿಸೆಲ್ ಗಳಂತಹ ಪಳಯುಳಿಕೆ ಇಂಧನವನ್ನು ಅತಿಯಾಗಿ ಬಳಸಿದ ಕಾರಣ 2400 ಶತಕೋಟಿ ಟನ್ ಗಳಷ್ಟು ಇಂಗಾಲದ ಡೈ ಆಕ್ಸೈಡ್ ವಾತಾವರಣವನ್ನು ಸೇರಿದೆ. ಹಸಿರು ಮನೆ ಅನಿಲದ ಹೊರಸೂಸುವಿಕೆಯಿಂದಾಗಿ ಭೂಮಿಯ ಉಷ್ಣತೆ ಹೆಚ್ಚಾಗಿ ಧ್ರುವ ಪ್ರದೇಶದ ನೀರ್ಗಲ್ಲುಗಳು ಕರಗಿ ಸಮುದ್ರ ಮಟ್ಟವು ಏರುತ್ತಿದೆ. ಅಮೇರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ವರದಿಯು ಈ ಶತಮಾನದ ಅಂತ್ಯಕ್ಕಾಗುವಾಗ ಸಮುದ್ರ ಮಟ್ಟವು 1.5 ಮೀಟರ್ ಗಳಷ್ಟು ಮೇಲೇರಿ ಭಾರತ ದೇಶದ ಕರಾವಳಿ ಪ್ರದೇಶದಲ್ಲಿರುವ ಮುಂಬಯಿ, ಗೋವಾ, ಮಂಗಳೂರು, ಕೊಚ್ಚಿನ್, ಚೆನ್ನೈ, ವಿಶಾಖ ಪಟ್ಟಣಂ ಮೊದಲಾದ ಕನಿಷ್ಠ 12 ನಗರಗಳು 3 ಅಡಿ ನೀರಿನೊಳಗೆ ಮುಳುಗುವ ಸಾಧ್ಯತೆ ಇದೆ ಎಂದು ಹೇಳಿದೆ. ಜಾಗತಿಕ ತಾಪಮಾನ ಏರಿಕೆಯೂ ಭಯೋಯೋತ್ಪಾದನೆಯಷ್ಟೇ ಅಪಾಯಕಾರಿಯಾಗಿದೆ.
ಜಾಗತಿಕ ತಾಪಮಾನದ ಏರಿಕೆಗೆ ಅಮೇರಿಕಾ, ಯುರೋಪ್ ಹಾಗೂ ಇತ್ತೀಚೆಗೆ ಚೀನಾ ದೇಶಗಳಲ್ಲಿ ನಡೆದ ಕೈಗಾರಿಕಾ ಕ್ರಾಂತಿಯೇ ಬಹು ಮುಖ್ಯ ಕಾರಣವಾಗಿದೆ. ಜಾಗತಿಕ ತಾಪಮಾನದ ಏರಿಕೆಯನ್ನು ತಡೆಯಲು ವಿಶ್ವಸಂಸ್ಥೆಯ ವತಿಯಿಂದ ವಿವಿಧ ಪ್ರಯತ್ನಗಳು ನಡೆಯುತ್ತಿದೆ. 2015 ರಲ್ಲಿ ನಡೆದ ಹವಾಮಾನ ಬದಲಾವಣೆಯ ಕುರಿತು “ವಿಶ್ವಸಂಸ್ಥೆಯ ಚೌಕಟ್ಟು ನಿರೂಪಣಾ ಸಮಾವೇಶದ” (ಯು ಎನ್ ಎಫ್ ಸಿ ಸಿ ಸಿ) ಪ್ಯಾರಿಸ್ ಒಪ್ಪಂದದಕ್ಕೆ ಜಗತ್ತಿನ 196 ದೇಶಗಳು ಸಹಿಹಾಕಿದ್ದು ಕೈಗಾರಿಕಾ ಕ್ರಾಂತಿಯ ಪೂರ್ವದ ಜಾಗತಿಕ ತಾಪಮಾನವನ್ನು ಆಧಾರವಾಗಿಟ್ಟುಕೊಂಡು ತಾಪಮಾನದ ಏರಿಕೆಯನ್ನು 2 ಡಿಗ್ರೀ ಸೆಲ್ಸಿಯಸ್ (ಸಾಧ್ಯವಾದರೆ 1.5 ಡಿಗ್ರೀ ಸೆಲ್ಸಿಯಸ್) ಗೆ ನಿಯಂತ್ರಿಸಲು ಒಪ್ಪಂದವನ್ನು ಮಾಡಿಕೊಳ್ಳಲಾಯಿತು. 2020 ರ ಒಳಗೆ ಎಲ್ಲಾ ದೇಶಗಳು ಹಸಿರು ಅನಿಲದ ಹೊರಸೂಸುವಿಕೆಯನ್ನು ಕಡಿಮೆಗೊಳಿಸಲು ತಾವು ತೆಗೆದುಕೊಂಡ ನಿರ್ಣಯಗಳನ್ನು ತಿಳಿಸಬೇಕೆಂದು ಸೂಚಿಸಲಾಯಿತು. 2009 ನೇ ಇಸವಿಯಲ್ಲಿ ನಡೆದ ಒಪ್ಪಂದದಂತೆ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ನೆರವಾಗಲು ಕೈಗಾರಿಕೆಗಳಲ್ಲಿ ಮುಂದುವರಿದ ದೇಶಗಳು ಪ್ರಗತಿಶೀಲ ಹಾಗೂ ಬಡ ದೇಶಗಳಿಗೆ ಪುನರ್ನವೀಕರಿಸಬಹುದಾದ ಇಂಧನಗಳ ಬಳಕೆಗೆ ಪ್ರೋತ್ಸಾಹಕವಾಗಿ ವಾರ್ಷಿಕವಾಗಿ 100 ಶತಕೋಟಿ ಡಾಲರ್ ಗಳ ಆರ್ಥಿಕ ನೆರವನ್ನು ನೀಡುವುದೆಂದು ಮಾತುಕತೆ ಆಗಿತ್ತಾದರೂ ಅದು ಇನ್ನೂ ಸಮರ್ಪಕವಾಗಿ ಜಾರಿಗೊಂಡಿಲ್ಲ.
ಜಾಗತಿಕ ತಾಪಮಾನ ಏರಿಕೆಯಲ್ಲಿ ಭಾರತದ ಪಾಲು ಬಹಳ ಕಡಿಮೆ. ಭಾರತವು ಜಗತ್ತಿನ ಜನಸಂಖ್ಯೆಯ 17.7% ಪಾಲನ್ನು ಹೊಂದಿದ್ದರೂ ಕಳೆದ 200 ವರ್ಷಗಳಲ್ಲಿ ಜಾಗತಿಕ ತಾಪಮಾನ ಏರಿಕೆಯಲ್ಲಿ ಭಾರತದ ಪಾಲು 3% ಗಿಂತಲೂ ಕಡಿಮೆ. 2020 ರ ಆಗಸ್ಟ್ ತಿಂಗಳಲ್ಲಿ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟೋನಿಯೋ ಗ್ಯುಟೆರೆಸ್ “ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಭಾರತವು ಜಾಗತಿಕ ಸೂಪರ್ ಪವರ್” ಆಗಿದೆ ಎಂದು ಭಾರತವನ್ನು ಬಣ್ಣಿಸಿದ್ದರು. 2020 ರ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಕ್ಲೈಮೇಟ್ ಟ್ರಾನ್ಸ್ಫರೆನ್ಸಿ ವರದಿಯು ಜಿ 20 ರಾಷ್ಟ್ರಗಳಲ್ಲಿ ಹವಾಮಾನ ಬದಲಾವಣೆಯನ್ನು ಕಡಿಮೆಗೊಳಿಸುವ ಬದ್ಧತೆಗಳನ್ನು ಪೂರೈಸುತ್ತಿರುವ ಏಕೈಕ ರಾಷ್ಟ್ರ ಭಾರತ ಎಂದು ಹೇಳಿದೆ. ಇಂಟರ್ ನ್ಯಾಷನಲ್ ಸೋಲಾರ್ ಅಲಾಯನ್ಸ್ ನ ರೂಪೀಕರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಭಾರತಕ್ಕೆ 2018 ರಲ್ಲಿ ವಿಶ್ವ ಸಂಸ್ಥೆಯು “ಚ್ಯಾಂಪಿಯನ್ಸ್ ಆಫ್ ದ ಅರ್ತ್” ಪ್ರಶಸ್ತಿಯನ್ನು ಕೊಟ್ಟಿದೆ. ಭಾರತವು 2030 ನೇ ಇಸವಿಯ ಒಳಗಾಗಿ ಹಸಿರುಮನೆ ಅನಿಲದ ಬಿಡುಗಡೆಯ ಪ್ರಮಾಣವನ್ನು 33 ರಿಂದ 35% ದಷ್ಟು ಕಡಿಮೆ ಮಾಡಲಿದೆ ಎಂದು ವರದಿ ಹೇಳಿದೆ. ಈ ವರದಿಯು ಉಲ್ಲೇಖಿಸಿದಂತೆ ಭಾರತ ದೇಶವು ಜಾಗತಿಕ ತಾಪಮಾನವನ್ನು ನಿಯಂತ್ರಣದಲ್ಲಿಡುವ ಉದ್ದೇಶದಿಂದ ಬಹಳಷ್ಟು ಹೆಜ್ಜೆಗಳನ್ನು ತೆಗೆದುಕೊಂಡಿದೆ.
ಇಂಗಾಲ ರಹಿತವಾಗಿ ದೇಶದ ಉದ್ಯಮ ಹಾಗೂ ಆರ್ಥಿಕ ಬೆಳವಣಿಗೆಯೆಡೆಗೆ ಭಾರತವಿಂದು ಶ್ರಮಿಸುತ್ತಿದೆ. ದೇಶದ ವಿದ್ಯುತ್ ಉತ್ಪಾದನಾ ಕ್ಷೇತ್ರವು ಕಲ್ಲಿದ್ದಲು ಆಧಾರಿತವಾಗಿದೆ. ಭಾರತದಲ್ಲಿ 234 ಗಿಗಾ ವ್ಯಾಟ್ ನಷ್ಟು ವಿದ್ಯುತ್ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳ ಮೂಲಕ ಉತ್ಪತ್ತಿಯಾಗುತ್ತಿದೆ. ದೇಶದ ಬೇಡಿಕೆಯ 53% ವಿದ್ಯುತ್ ಅನ್ನು ಉಷ್ಣ ವಿದ್ಯುತ್ ಸ್ಥಾವರಗಳು ಪೂರೈಸುತ್ತಿವೆ. ಆದರೆ ಉಷ್ಣ ವಿದ್ಯುತ್ ಸ್ಥಾವರಗಳು ಪ್ರತಿ ದಿನ ಟನ್ ಗಟ್ಟಲೆ ಕಾರ್ಬನ್ ಡೈ ಆಕ್ಸೈಡ್ ಅನ್ನು ವಾತಾವರಣಕ್ಕೆ ಸೇರಿಸಿ ಪರಿಸರವನ್ನು ಕಲುಷಿತಗೊಳಿಸುತ್ತವೆ. ದೇಶದ ಬದಲಾದ ಇಂಧನ ಯೋಜನೆಯಡಿಯಲ್ಲಿ 2022 ರ ಒಳಗೆ ಕಲ್ಲಿದ್ದಲು ಆಧಾರಿತ ಉಷ್ಣವಿದ್ಯುತ್ ನ ಅವಲಂಬನೆಯನ್ನು 50% ಇಳಿಸುವ ಹಾಗೂ 2026-27 ರ ಮೊದಲು ಇದನ್ನು 43% ಗೆ ಮಿತಗೊಳಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಭಾರತದ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಶನ್ (ಎನ್ ಟಿ ಪಿ ಸಿ) ಕೂಡಾ ಕೆಲಸವನ್ನು ಆರಂಭಿಸಿದ್ದು 2032 ನೇ ಇಸವಿಯ ಒಳಗಾಗಿ ಸೋಲಾರ್ ಮತ್ತು ಇತರ ಮರು ನವೀಕರಿಸಬಹುದಾದ ಮೂಲಗಳಿಂದ 32 ಗಿಗಾವ್ಯಾಟ್ ಗಳಷ್ಟು ವಿದ್ಯುತ್ ಅನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಂಡಿದೆ. ಈಗಾಗಲೇ ಎನ್ ಟಿ ಪಿ ಸಿ ಯು 1.17 ಗಿಗಾವ್ಯಾಟ್ ಸೋಲಾರ್ ವಿದ್ಯುತ್ ಅನ್ನು ಉತ್ಪಾದಿಸತೊಡಗಿದ್ದು 2.19 ಗಿಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಉತ್ಪಾದನಾ ಘಟಕಗಳು ನಿರ್ಮಾಣದ ಹಂತದಲ್ಲಿವೆ.
ಭಾರತವಿಂದು ಮರು ನವೀಕರಿಸಬಹುದಾದ ಇಂಧನ ಮೂಲದೆಡೆಗೆ ದಾಪುಗಾಲಿಡುತ್ತಿದೆ. 2022 ನೇ ಇಸವಿಯ ಒಳಗಾಗಿ 175 ಗಿಗಾವ್ಯಾಟ್ ವಿದ್ಯುತ್ ಅನ್ನು ಸೋಲಾರ್, ಪವನಯಂತ್ರ ಹಾಗೂ ಇತರ ಮರು ನವೀಕರಿಸಬಹುದಾದ ಇಂಧನ ಮೂಲಗಳಿಂದ ಪಡೆಯುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಅದೇ ರೀತಿ 2030 ರ ಒಳಗೆ 400 ಗಿಗಾವ್ಯಾಟ್ ವಿದ್ಯುತ್ ಅನ್ನು ಅಸಂಪ್ರದಾಯಿಕ ಮೂಲಗಳಿಂದ ಉತ್ಪಾದಿಸುವ ಗುರಿಯನ್ನೂ ಹಾಕಿಕೊಳ್ಳಲಾಗಿದೆ. 2014 ನೇ ಇಸವಿಯವರೆಗೆ ದೇಶದಲ್ಲಿ 2.5 ಗಿಗಾವ್ಯಾಟ್ ಗಳಷ್ಟು ಸೋಲಾರ್ ವಿದ್ಯುತ್ ಉತ್ಪಾದಿಸಲ್ಪಡುತ್ತಿತ್ತು. ಹಿಂದಿನ ಡಾ ಮನಮೋಹನ್ ಸಿಂಗರ್ ಸರಕಾರವು 2022 ನೇ ಇಸವಿಯೊಳಗೆ ದೇಶವು 20 ಗಿಗಾವ್ಯಾಟ್ ಉತ್ಪಾದಿಸುವ ಗುರಿಯನ್ನು ನಿಗದಿ ಮಾಡಿತ್ತು. ಆದರೆ ನರೇಂದ್ರ ಮೋದಿ ಸರಕಾರವು ಸೋಲಾರ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ಮರು ನಿಗದಿಗೊಳಿಸಿ 2022 ರ ಒಳಗೆ 100 ಗಿಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಂಡಿತು ಹಾಗೂ ಮನಮೋಹನ್ ಸರಕಾರವು ನಿಗದಿ ಪಡಿಸಿದ್ದ 20 ಗಿಗಾವ್ಯಾಟ್ ಗುರಿಯನ್ನು 2018 ರಲ್ಲೇ ಸಾಧಿಸಿತು. ಪ್ರಸ್ತುತ ದೇಶದಲ್ಲಿ 42.8 ಗಿಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. 36 ಗಿಗಾವ್ಯಾಟ್ ಸಾಮರ್ಥ್ಯದ ಸೋಲಾರ್ ವಿದ್ಯುತ್ ಘಟಕಗಳ ಸ್ಥಾಪನೆಯ ಕೆಲಸ ಸಾಗುತ್ತಿದೆ ಹಾಗೂ 27.87 ಗಿಗಾವ್ಯಾಟ್ ಪ್ರಮಾಣದ ಸೋಲಾರ್ ವಿದ್ಯುತ್ ಘಟಕದ ಸ್ಥಾಪನೆಯ ಕೆಲಸವು ಟೆಂಡರ್ ಹಂತದಲ್ಲಿದೆ. ಉಷ್ಣವಿದ್ಯುತ್ ಸ್ಥಾವರದಲ್ಲಿ ಒಂದು ಗಿಗಾವ್ಯಾಟ್ ವಿದ್ಯುತ್ ತಯಾರಿಕೆ ಮಾಡುವಾಗ ವಾತಾವರಣಕ್ಕೆ 20 ಲಕ್ಷ ಟನ್ ಗಳಷ್ಟು ಹಾರುಬೂದಿ ಅಥವಾ ಇಂಗಾಲದ ಡೈ ಆಕ್ಸೈಡ್ ಸೇರಿಸಲ್ಪಡುತ್ತದೆ. ಆದರೆ ಸೋಲಾರ್ ಮೂಲಕ ವಿದ್ಯುತ್ ಉತ್ಪಾದನೆಯಲ್ಲಿ ಒಂದಿಷ್ಟೂ ಇಂಗಾಲವು ಹೊರಸೂಸಲ್ಪಡುವುದಿಲ್ಲ ಹಾಗೂ ವಾತಾವರಣಕ್ಕೆ ಹಾನಿಯಿಲ್ಲ. ಭಾರತವು 100 ಗಿಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ಸಾಧಿಸುವಾಗ ವಾತಾವರಣಕ್ಕೆ 20 ಕೋಟಿ ಟನ್ ಗಳಷ್ಟು ಕಾರ್ಬನ್ ವಾತಾವರಣಕ್ಕೆ ಸೇರುವುದನ್ನು ತಡೆಗಟ್ಟಿದಂತಾಗುತ್ತದೆ. ಗಾಳಿ ಯಂತ್ರಗಳಿಂದ(ವಿಂಡ್ ಮಿಲ್) ಪ್ರಸ್ತುತ 38.79 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು ನವೀನ ಹಾಗೂ ನವೀಕರಿಸಬಹುದಾದ ಇಂಧನ ಸಚಿವಾಲಯವು 2022 ರ ಒಳಗೆ ಪವನ ಶಕ್ತಿಯಿಂದ 60 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿಯನ್ನು ಹಾಕಿಕೊಂಡಿದೆ. ಈ ಯೋಜನೆಯಿಂದ 12 ಕೋಟಿ ಟನ್ ಕಾರ್ಬನ್ ಡೈ ಆಕ್ಸೈಡ್ ವಾತಾವರಣವನ್ನು ಸೇರುವುದನ್ನು ತಡೆದಂತಾಗುತ್ತದೆ. ಈಗಾಗಲೇ ಬೃಹತ್ ಜಲ ವಿದ್ಯುತ್ ಯೋಜನೆಗಳನ್ನು ಹೊರತು ಪಡಿಸಿ ಭಾರತವಿಂದು 100 ಗಿಗಾವ್ಯಾಟ್ ಗಳಷ್ಟು ವಿದ್ಯುತ್ ಅನ್ನು ಸೋಲಾರ್, ಪವನಯಂತ್ರ ಹಾಗೂ ಬಯೋ ಇಂಧನ ಮೂಲಗಳ ಮೂಲಕ ಉತ್ಪಾದಿಸುತ್ತಿದೆ.
ಭಾರತೀಯ ರೈಲ್ವೇಯೂ ಪರಿಸರಸ್ನೇಹಿಯಾಗುತ್ತಿದೆ. 2030 ರ ಒಳಗೆ ಭಾರತೀಯ ರೈಲ್ವೇಯು ಜಗತ್ತಿನ ಮೊದಲ ಹಸಿರು ರೈಲ್ವೇ ಆಗಲಿದೆ ಎಂದು ರೈಲ್ವೇ ಸಚಿವರಾದ ಪೀಯೂಷ್ ಗೋಯೆಲ್ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಭಾರತೀಯ ರೈಲ್ವೇಯ ವಿದ್ಯುದೀಕರಣ ಕೆಲಸವು ಭರದಿಂದ ಸಾಗುತ್ತಿದೆ. ಭಾರತದಲ್ಲಿ 62,891 ಕಿಲೋಮೀಟರ್ ಉದ್ದದಷ್ಟು ಬ್ರಾಡ್ ಗೇಜ್ ರೈಲು ಹಳಿಗಳಿವೆ. 2014 ನೇ ಇಸವಿಯ ವರೆಗೆ 24,080 ಕಿಲೋಮೀಟರ್ ಬ್ರಾಡ್ ಗೇಜ್ ರೈಲ್ವೇಯು ವಿದ್ಯುದೀಕರಣಗೊಂಡಿತ್ತು. 2014ರಿಂದ 2021 ರ ವರೆಗಿನ 7 ವರ್ಷಗಳ ಅವಧಿಯಲ್ಲಿ 21,800 ಕಿಲೋಮೀಟರ್ ಬ್ರಾಡ್ ಗೇಜ್ ಹಳಿಗಳು ಹೊಸದಾಗಿ ವಿದ್ಯುದೀಕರಣಗೊಂಡು ಒಟ್ಟು 45,880 ಕಿಲೋಮೀಟರ್ ಹಳಿಗಳು ವಿದ್ಯುದೀಕರಣಗೊಂಡಿವೆ. ಇದರಿಂದಾಗಿ ಒಟ್ಟು 72.95% ಹಳಿಗಳು ವಿದ್ಯುದೀಕರಣಗೊಂಡಂತಾಯಿತು. 2023 ರ ಒಳಗಾಗಿ ಭಾರತದ ಎಲ್ಲಾ ಬ್ರಾಡ್ ಗೇಜ್ ರೈಲ್ವೇಗಳನ್ನು ಸಂಪೂರ್ಣವಾಗಿ ವಿದ್ಯುದೀಕರಣಗೊಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಇದರಿಂದಾಗಿ ಭಾರತೀಯ ರೈಲುಗಳ ಡೀಸಿಲ್ ಮೇಲಿನ ಅವಲಂಬನೆ ನಿಂತು ಹೋಗಿ ರೈಲ್ವೇ ಎಂಜಿನ್ ಗಳ ಹೊಗೆಯಿಂದ ವಾತಾವರಣವು ಮಲಿನವಾಗುವುದು ತಪ್ಪುತ್ತದೆ, ಜೊತೆಗೆ ಡೀಸೆಲ್ ಖರೀದಿಗೆ ಬೇಕಾಗಿ ವಾರ್ಷಿಕವಾಗಿ ಮಾಡುವ ಸುಮಾರು 13,500 ಕೋಟಿ ರುಪಾಯಿಗಳ ಖರ್ಚು ಸರಕಾರಕ್ಕೆ ಉಳಿತಾಯವಾಗಲಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಭಾರತೀಯ ಬಡ ಮಹಿಳೆಯರಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಲಾಗುತ್ತಿದ್ದು, ಕಳೆದ 6 ವರ್ಷಗಳಲ್ಲಿ 8 ಕೋಟಿ ಮನೆಗಳಿಗೆ ಗ್ಯಾಸ್ ಸಂಪರ್ಕವನ್ನು ಕೊಡಲಾಗಿದೆ. 2016 ರ ವರೆಗೆ ದೇಶದಲ್ಲಿ 62% ಮನೆಗಳಿಗೆ ಮಾತ್ರ ಅಡುಗೆ ಅನಿಲ ಸಂಪರ್ಕವಿದ್ದಿದ್ದು ಉಜ್ವಲ ಯೋಜನೆಯ ಪರಿಣಾಮವಾಗಿ ಈಗ ಭಾರತದ 99.5% ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ಲಭಿಸಿದೆ. ಇದರ ಪರಿಣಾಮವಾಗಿ ಅಷ್ಟೇ ಪ್ರಮಾಣದಲ್ಲಿ ಉರುವಲಿಗಾಗಿ ಮರಗಳನ್ನು ಕಡಿಯುವುದು ಕಡಿಮೆಯಾಗಿದೆ. ಸೌದೆ ಬಳಸಿ ಒಲೆ ಉರಿಸುವುದು ಕಡಿಮೆಯಾಗಿ ವಾತಾವರಣವನ್ನು ಸೇರುವ ಹೊಗೆ ಯ ಪ್ರಮಾಣವೂ ಕಡಿಮೆಯಾಗಿದೆ ಹಾಗೂ ಪರಿಸರದಲ್ಲಿ ಹಸಿರಿನ ಪ್ರಮಾಣ ಹೆಚ್ಚಾಗಿದೆ. ಉಜಾಲಾ ಯೋಜನೆಯಡಿ ಅತೀ ಕಡಿಮೆ ವಿದ್ಯುತ್ ಬಳಸುವ 36.78 ಕೋಟಿ ಎಲ್ ಇ ಡಿ ಬಲ್ಬ್ ಗಳು ವಿತರಣೆ ನಡೆದಿದ್ದು ಇದರ ಪರಿಣಾಮವಾಗಿ ವಿದ್ಯುತ್ ಬಳಕೆಯ ಪ್ರಮಾಣ ಕಡಿಮೆಯಾಗಿದ್ದು ಈ ಮೂಲಕ ಸುಮಾರು 2.3 ಕೋಟಿ ಟನ್ ಗಳಷ್ಟು ಕಾರ್ಬನ್ ಡೈ ಆಕ್ಸೈಡ್ ವಾತಾವರಣವನ್ನು ಸೇರುವುದನ್ನು ತಡೆಗಟ್ಟಲಾಗಿದೆ. ಪೆಟ್ರೋಲ್ ಗೆ 10% ಎಥೆನಾಲ್ ಮಿಶ್ರಣ ಮಾಡಲಾಗುತ್ತಿದ್ದು ಮುಂದೆ ಈ ಪ್ರಮಾಣ 20% ಏರಲಿದೆ. ಹೈಡ್ರೋಜನ್ ಅನ್ನು ಇಂಧನವಾಗಿ ಬಳಸುವ ಯೋಜನೆಯೂ ಕಾರ್ಯಗತವಾಗುತ್ತಿದ್ದು ಸ್ವಾತಂತ್ರ್ಯೋತ್ಸವದ 75 ನೇ ವರ್ಷದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭಾರತವು 2047 ರಲ್ಲಿ, ತನ್ನ 100 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ಮೊದಲು ಇಂಧನದ ವಿಚಾರದಲ್ಲಿ ಇತರ ದೇಶಗಳ ಅವಲಂಬನೆಯಿಂದ ಹೊರಬಂದು ಸ್ವಾವಲಂಬಿಯಾಗಲಿದೆ ಎಂದು ಹೇಳಿದ್ದಾರೆ.
ಇದೀಗ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ಸಂದರ್ಭದಲ್ಲೂ ಪರಿಸರ ಸ್ನೇಹೀ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ರಸ್ತೆಗಳ ಇಕ್ಕೆಲಗಳಲ್ಲಿ ಗಿಡಮರಗಳನ್ನು ನೆಡಲಾಗುತ್ತಿದೆ. 2016, 2017 ಹಾಗೂ 2018 ರಲ್ಲಿ ಒಂದು ಕೋಟಿಗಳಿಗಿಂತಲೂ ಹೆಚ್ಚಿನ ಸಂಖ್ಯೆಯ ಸಸಿಗಳನ್ನು ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿ ನೆಟ್ಟು ಬೆಳೆಸಲಾಗಿದೆ. ನಿತಿನ್ ಗಡ್ಕರಿಯವರು 2022 ನೇ ಇಸವಿಯ ಒಳಗೆ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿ 125 ಕೋಟಿ ಮರಗಳನ್ನು ಬೆಳೆಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಗಿಡ ನೆಡುವ ಕೆಲಸಗಳು ಪ್ರಗತಿಯಲ್ಲಿದೆ. ಭಾರತವಿಂದು ಇಲೆಕ್ಟ್ರಿಕಲ್ ವಾಹನಗಳ ತಯಾರಿಕೆ ಹಾಗೂ ಖರೀದಿಗೆ ಭಾರೀ ಉತ್ತೇಜನವನ್ನು ನೀಡುತ್ತಿದೆ. ಭಾರತದ ಹೊಸ ಪೆಟ್ರೋಲ್ ಡೀಸೆಲ್ ವಾಹನಗಳ ತಯಾರಿಕೆಯಲ್ಲಿ ಕಡಿಮೆ ಹೊಗೆಯುಗುಳುವ ತಂತ್ರಜ್ಞಾನವಾದ ಭಾರತ್ ಸ್ಟಾಂಡರ್ಡ್ 6 ನ್ನು ಅಳವಡಿಸಿಕೊಳ್ಳಲಾಗಿದೆ. ಈಗಾಗಲೇ ದೇಶದ 13 ನಗರಗಳಲ್ಲಿ ಮೆಟ್ರೋ ರೈಲುಗಳು ಓಡುತ್ತಿದ್ದು, 9 ನಗರಗಳಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. 4 ನಗರಗಳಲ್ಲಿ ಮೆಟ್ರೋ ಕಾಮಗಾರಿಗೆ ಅನುಮತಿ ದೊರೆತಿದೆ ಹಾಗೂ ಇನ್ನೂ 14 ನಗರಗಳು ಮೆಟ್ರೋ ರೈಲಿಗೆ ಪ್ರಸ್ತಾವನೆ ಸಲ್ಲಿಸಿವೆ. ಹೀಗೆ ದೇಶದ ಒಟ್ಟು 42 ನಗರಗಳು ಇಂಗಾಲ ರಹಿತ ಸ್ವಚ್ಛ ಸಾರಿಗೆಯಾದ ಮೆಟ್ರೋ ರೈಲು ವ್ಯವಸ್ಥೆಯನ್ನು ಹೊಂದಲಿವೆ. ಕಳೆದೊಂದು ದಶಕದಲ್ಲಿ ದೇಶದ ಅರಣ್ಯದ ಪ್ರಮಾಣವು 3% ಹೆಚ್ಚಾಗಿದೆ. ಉತ್ತರಪ್ರದೇಶ ರಾಜ್ಯವೊಂದರಲ್ಲೇ 25 ಕೊಟಿ ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ಜಾಗತಿಕ ತಾಪಮಾನವನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತವಿಂದು ಸರಿಯಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಅಮೇರಿಕಾ, ಯುರೋಪ್ ಹಾಗೂ ಚೀನಾಗಳು ಈ ನಿಟ್ಟಿನಲ್ಲಿ ಇನ್ನೂ ಸರಿಯಾದ ರೀತಿಯಲ್ಲಿ ಸ್ಪಂದಿಸದೆ ಇರುವುದು ಖೇದಕರ ವಿಷಯವಾಗಿದೆ.
ಗಣೇಶ್ ಭಟ್ ವಾರಣಾಸಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.