ದೇಶದಲ್ಲಿ ಹಾಕಿ ಕ್ರೀಡೆಗೆ ತನ್ನದೇ ಆದ ಹಿರಿಮೆಯಿದೆ, ಗರಿಮೆಯೂ ಇದೆ. ಈ ತನಕ ಒಲಿಂಪಿಕ್ಸ್ನಲ್ಲಿ ಅತಿ ಹೆಚ್ಚು ಪದಕಗಳನ್ನು ಮುಡಿಗೇರಿಸಿಕೊಂಡಿದ್ದು ಭಾರತೀಯ ಹಾಕಿ ತಂಡದ ಸಾಧನೆ. ಆದರೆ ಆ ವಿಶಿಷ್ಟ ಸಾಧನೆಯ ಹಾದಿಗೆ ನಾಲ್ಕು ದಶಕಗಳು ಸಂದಿವೆ. ಈ ಬಾರಿಯ ಒಲಿಂಪಿಕ್ಸ್ ಭಾರತೀಯ ಹಾಕಿಗೆ ಹೊಸ ಇತಿಹಾಸ ಸೃಷ್ಠಿಯ ಅವಕಾಶವನ್ನು ನೀಡಿದೆ. ಬರೋಬ್ಬರಿ 41 ವರ್ಷಗಳ ನಂತರ ಸೆಮಿಫೈನಲ್ ಹಂತಕ್ಕೆ ತಲುಪಿರುವ ಭಾರತೀಯ ಹಾಕಿ ತಂಡ ದೇಶದ ಕ್ರೀಡಾರಂಗದಲ್ಲಿ ಹೊಸ ಮನ್ವಂತರ ಸೃಷ್ಠಿಸಲಿದೆ ಎಂಬುದು ಖಚಿತ.
ಉತ್ತಮ ತರಬೇತಿ, ದಕ್ಷತೆ, ಪರಿಣಾಮಕಾರಿ ಪಾಸಿಂಗ್, ಕುಶಲತೆಯ ಡ್ರಾಗ್ಫ್ಲಿಕ್ ಒಳಗೊಂಡ ಭಾರತೀಯ ತಂಡದ ಆಕ್ರಮಣಕಾರಿ ಆಟ 70-80 ರ ದಶಕದ ಹಾಕಿ ತಂಡವನ್ನು ನೆನಪಿಸಿಕೊಳ್ಳುವಂತೆ ಮಾಡಿದೆ ಎಂಬುದು ನಿವೃತ್ತ ಹಿರಿಯ ಆಟಗಾರರ ಮಾತು. ಭಾರತೀಯ ಉಪಖಂಡದ ಹಾಕಿ ತಂಡಗಳು ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿ. ಭಾರತ ಸಹಿತ ಪಾಕಿಸ್ಥಾನದ ಹಾಕಿ ತಂಡಗಳು ವಿಶ್ವದ ಹಾಕಿಯನ್ನು ಆಳುತ್ತಿದ್ದ ಕಾಲವೊಂದಿತ್ತು. ಐರೋಪ್ಯ ಹಾಗೂ ಅಮೇರಿಕನ್, ಆಸ್ಟ್ರೇಲಿಯಾ ತಂಡಗಳು ಡಿಫೆನ್ಸ್ವಿವ್ ಆಟವಾಡಿದರೆ, ಭಾರತದ ತಂಡ ಹಿಂದಿನಿಂದಲೂ ದಾಳಿಗೆ ಹೆಸರುವಾಸಿ. 5;3;2 ಅನುಪಾತದಲ್ಲಿ ಎದುರಾಳಿ ಗೋಲ್ ಪೋಸ್ಟ್ನತ್ತ ಗೋಲಿನ ಸುರಿಮಳೆಗೈಯ್ಯುವ ತಂಡ ಎಂಬ ಹೆಗ್ಗಳಿಕೆಯು ಭಾರತದ್ದು. ವರ್ತಮಾನದಲ್ಲಿ ಭಾರತೀಯ ಹಾಕಿ ತಂಡ ಮನ್ವಂತರ ಕಾಲಘಟ್ಟದಲ್ಲಿದೆ. ದೇಶದಲ್ಲಿ ಹಾಕಿಯೊಂದಿಗೆ ಹೊಸ ಕ್ರೀಡಾಶಕೆ ಆರಂಭಗೊಂಡಿದೆ. ಹಾಕಿಯಲ್ಲಿ ಪದಕ ಗೆದ್ದರೆ ಸಹಜವಾಗಿ ಬಹಳಷ್ಟು ಯುವ ಕ್ರೀಡಾಸಕ್ತ ಮಂದಿ ಹಾಕಿಯತ್ತ ಚಿತ್ತ ಹರಿಸಿ, ಈ ಕ್ರೀಡೆಯಲ್ಲಿ ತೊಡಗಿ ಹೊಸ ಸಾಧನೆ ಪಥದತ್ತ ನಿಶ್ಚಿತವಾಗಿಯೂ ಮುನ್ನಡೆಯುತ್ತಾರೆ. ಹಾಕಿಯ ಒಂದು ಪದಕವು ದೇಶದ ಕ್ರೀಡಾರಂಗದ ಭವಿಷ್ಯವನ್ನೇ ಬದಲಾಯಿಸುವಷ್ಟು ಶಕ್ತಿ ಹೊಂದಿದೆ. ಯಾಕೆಂದರೆ ಹಾಕಿ ಇಂದಿಗೂ ದೇಶದ ರಾಷ್ಟ್ರೀಯ ಕ್ರೀಡೆ ಮಾತ್ರವಲ್ಲ ಭಾರತದಲ್ಲಿಇತರ ಕ್ರೀಡೆಗಳನ್ನು ಪ್ರಭಾವಿಸಬಲ್ಲ ಮಹಾಕ್ರೀಡೆ. ಎಲ್ಲಕ್ಕಿಂತ ಮಿಗಿಲಾಗಿ ಭಾರತೀಯ ಹಾಕಿಯ ಮಹಾಮಹಿಮ ಧ್ಯಾನಚಂದರಿಂದ ಹಿಡಿದು ಧನರಾಜ್ ಪಿಳ್ಳೈ ತನಕದ ಹಲವು ಕ್ರೀಡಾಳುಗಳ ನೆನಪು ಈ ಕ್ರೀಡೆಯ ಜೊತೆಗಿದೆ. ಭಾರತೀಯ ಹಾಕಿ ತಂಡದ ಟೊಕಿಯೊ ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶದ ಅಭೂತಪೂರ್ವ ಸಾಧನೆಯಿಂದ ಸಮಸ್ತ ಭಾರತೀಯ ಕ್ರೀಡಾಕ್ಷೇತ್ರ ಮೈಕೊಡವಿರುದಂತೂ ನಿಶ್ಚಿತ.
ದೇಶದ ಕ್ರೀಡಾಸಕ್ತರನ್ನು ಉತ್ಸುಕತೆಯಿಂದ ಹಿಡಿದಿಟ್ಟದ್ದು ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟ. ಯುವ ಸಮೂಹವೇ ಹೆಚ್ಚಿರುವ ಭಾರತ ಇನ್ನಷ್ಟೂ ಮತ್ತಷ್ಟೂ ಸಾಧನೆಗಳನ್ನು ಕ್ರೀಡೆಯಲ್ಲಿ ಮಾಡಬೇಕು ಎನ್ನುವುದು ಎಲ್ಲರ ಆಶಾವಾದವೂ ಹೌದು. ಈ ಬಾರಿಯ ಒಲಿಂಪಿಕ್ಸ್ ದೇಶದ ಕ್ರೀಡಾಕ್ಷೇತ್ರದಲ್ಲಿ ಹೊಸ ಭರವಸೆ, ಸ್ಪೂರ್ತಿ, ಆಶಾವಾದ ಸೃಷ್ಠಿಸುದರೊಂದಿಗೆ, ಸಾಧಿಸಬೇಕೆಂಬ ಛಲವನ್ನು ಬಡಿದೆಬ್ಬಿಸಿದೆ. ಇದಕ್ಕೆ ಉತ್ತಮ ಉದಾಹರಣೆ ಭಾರತೀಯ ಹಾಕಿ ತಂಡ. ಒಲಿಂಪಿಕ್ಸ್ ಹಾಕಿಯಲ್ಲಿ ಭಾರತ ಈ ತನಕ ಒಟ್ಟು 11 ಪದಕಗಳನ್ನು ತನ್ನದಾಗಿಸಿ ಚರಿತ್ರೆ ಸೃಷ್ಠಿಸಿದೆ. ಆ ಚರಿತ್ರೆಗೆ ಸ್ವಲ್ಪ ಹಳೆಯದ್ದು. 1980 ರಲ್ಲಿ ಭಾರತ ತನ್ನ ಕೊನೆಯ ಹಾಕಿ ಚಿನ್ನದ ಪದಕವನ್ನು ಮಾಸ್ಕೋ ಒಲಿಂಪಿಕ್ಸ್ನಲ್ಲಿ ಗೆದ್ದಿತ್ತು. 2020 ರ ಟೊಕಿಯೋ ಒಲಿಂಪಿಕ್ಸ್ ಹೊಸ ಅಧ್ಯಾಯವನ್ನು ರಚಿಸಲು ಹೊರಟಿದೆ. ಭಾರತೀಯ ಹಾಕಿ ಮೈಕೊಡವಿದ್ದು, ಚಿನ್ನದ ಪದಕದತ್ತ ತನ್ನ ದೃಷ್ಠಿಯನ್ನು ನೆಟ್ಟಿದೆ. ನಾಲ್ಕು ದಶಕಗಳ ನಂತರ ಐರೋಪ್ಯ ಮತ್ತು ಅಮೇರಿಕನ್ ರಾಷ್ಟ್ರಗಳ ಏಕಸ್ವಾಮ್ಯವನ್ನು ಇಲ್ಲವಾಗಿಸುವತ್ತ ಮುನ್ನಡೆದಿದೆ ಭಾರತೀಯ ಹಾಕಿ ತಂಡ. ಲೀಗ್ ಪಂದ್ಯಾಟಗಳಲ್ಲಿ ಭರ್ಜರಿ ಜಯ ಗಳಿಸಿ ಕ್ವಾರ್ಟರ್ ಹಂತಕ್ಕೆ ತಲುಪಿದ ಭಾರತ ಪ್ರಭಲ ಎದುರಾಳಿ ಬ್ರಿಟನ್ ಅನ್ನು 3-1 ಗೋಲುಗಳಿಂದ ಪರಾಭವಗೊಳಿಸಿ ಸೆಮಿಫೈನಲ್ ಹಂತಕ್ಕೆ ತಲುಪಿದ್ದು ಅಭುತಪೂರ್ವ ಸಾಧನೆಯೇ ಸರಿ. ಈ ಬಾರಿಯ ವಿಶೇಷ ಎಂದರೆ ಭಾರತೀಯ ಮಹಿಳಾ ಹಾಕಿ ತಂಡವೂ ಮೊತ್ತಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ತನ್ನ ಪ್ರಾಬಲ್ಯ ಮೆರೆದು ಸೆಮಿಫೈನಲ್ ಹಂತಕ್ಕೆ ಕಾಲಿರಿಸಿದೆ. ಪ್ರಬಲ ಆಸ್ಟ್ರೇಲಿಯಾ ತಂಡವನ್ನು 1-0 ಗೋಲುಗಳಿಂದ ಸೋಲಿಸಿ ಪದಕ ಗೆಲ್ಲುವತ್ತ ಹೆಜ್ಜೆಯಿರಿಸಿದೆ.
ಹಾಕಿ ರಾಷ್ಟ್ರದ ಜೀವಾಳ, ಈ ಕ್ರೀಡೆಯನ್ನು ಬಹಳ ಹಿಂದೆಯೇ ದೇಶದ ರಾಷ್ಟ್ರೀಯ ಕ್ರೀಡೆ ಎಂದು ಅಂಗೀಕರಿಸಲಾಗಿದೆ. ದೇಶದ ಹಾಕಿಯ ಮನ್ವಂತರ ಕಾಲ ಸಮೀಪಿಸಿದ್ದು, ಈ ಕ್ರೀಡೆಯ ಮೂಲಕ ಭಾರತವು ಮಗದೊಮ್ಮೆ ಪೂಜನೀಯ ಸ್ಥಾನಕ್ಕೇರುವುದರಲ್ಲಿ ಯಾವುದೇ ಸಂಶಯವಿಲ್ಲ. ಬದಲಾದ ಕಾಲಘಟ್ಟದಲ್ಲಿ ಹಾಕಿ ಕ್ರೀಡೆಯು ಬದಲಾಗಿದೆ. ಹಾಕಿ ನಿಯಮ ಬದಲಾವಣೆಗಳಿಂದ ಭಾರತದ ಅಟ್ಯಾಕಿಂಗ್ (ಮುನ್ನುಗ್ಗಿ ದಾಳಿ ಮಾಡುವ) ಶೈಲಿಗೆ ಧನಾತ್ಮಕವಾಗಿ ಪರಿಣಮಿಸಿದೆ. ಬಹಳ ಹಿಂದೆ ಎರಡು ಭಾಗಗಳಾಗಿ ಆಡಲ್ಪಡುತ್ತಿದ್ದ ಫೀಲ್ಡ್ ಹಾಕಿ ಈ ಬಾರಿಯ ಒಲಿಂಪಿಕ್ಸ್ನಲ್ಲಿ 20 ನಿಮಿಷಗಳ 4 ಹಂತಗಳಲ್ಲಿ ಆಡಲಾಗುತ್ತಿದೆ. ನೋಡುಗರಲ್ಲಿ ಉತ್ಸಾಹ ತುಂಬುವ ರೀತಿ, ಧನಾತ್ಮಕ ನೀತಿಗಳನ್ನು ಹಾಕಿಯಲ್ಲಿ ಅಳವಡಿಸಲಾಗಿದೆ. ಇಂಟರ್ನ್ಯಾಶನಲ್ ಹಾಕಿ ಫೆಡರೇಶನ್ ಮತ್ತು ಒಲಿಂಪಿಕ್ಸ್ ಅಸೋಸಿಯೇಶನ್ ಮೂಲಕ ಅಳವಡಿಸಲ್ಪಟ್ಟ ಹೊಸ ನಿಯಮಗಳು ಹಾಕಿ ಆಟಗಾರರಿಗೂ, ವೀಕ್ಷಕರಿಗೂ ಮಾತ್ರವಲ್ಲದೆ ಟಿ.ವಿ ವಾಹಿನಿಗಳಿಗೂ ಧನಾತ್ಮಕ ರೀತಿಯಲ್ಲಿದೆ. ಹೊಸ ನಿಮಯಗಳು ಆಟಗಾರರಿಗೆ ಸವಾಲು ಎಂದೆಣಿಸಿದರೂ, ಭಾರತೀಯ ಹಾಕಿ ಆಟಗಾರರಿಗೆ, ಭಾರತೀಯ ಹಾಕಿ ಕ್ರೀಡೆಯ ಆಟ್ಯಾಕಿಂಗ್ ಶೈಲಿಯ ಆಟಕ್ಕೆ ಇದು ವರದಾನವಾಗಿದೆ. ಸೆಮಿಫೈನಲ್ ಹಂತದಲ್ಲಿ ಪುರುಷರ ತಂಡ ಪ್ರಭಲ ಎದುರಾಳಿ ವಿಶ್ವ ನಂ. 2 ಬೆಲ್ಜಿಯಂ ಅನ್ನು ಎದುರಿಸಿದರೆ, ಮಹಿಳೆಯರ ತಂಡ ಬುಧವಾರದಂದು ತನ್ನ ಹೋರಾಟವನ್ನು ಮುಂದುವರಿಸಲಿದೆ.
ಭಾರತೀಯ ಹಾಕಿಯ ಗ್ರೇಟ್ ಕಮ್ಬ್ಯಾಕ್ ಹಲವು ಯುವ ಆಸಕ್ತರನ್ನು ಹಾಕಿ ಕ್ರೀಡೆ ಮಾತ್ರವಲ್ಲದೆ ಒಟ್ಟಾರೆ ಕ್ರೀಡಾಕ್ಷೇತ್ರದತ್ತ ಬರುವಂತೆ ಪ್ರೋತ್ಸಾಹಿಸಲಿದೆ ಎಂಬುದು ನಿಶ್ಚಿತ. ದೇಶದ ಯುವ ಸಮೂಹ ಮುಂಬರುವ ವರ್ಷಗಳಲ್ಲಿ ಅಭೂತಪೂರ್ವ ಸಾಧನೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ವಿಶೇಷ ಸಾದನೆಗೈದ ಪಿ.ವಿ ಸಿಂಧು, ಮೀರಾಬಾಯಿ ಚಾನು, ಕಮಲ್ಪ್ರೀತ್ ಕೌರ್, ಭವಾನಿ ದೇವಿ, ಅತನುದಾಸ್, ವಿನಿಶಾ ಪೋಗಟ್ ಅವರುಗಳೇ ಪ್ರೇರಣೆಯಾಗಲಿದ್ದಾರೆ. ಅಂಕಿಅಂಶಗಳ ಪ್ರಕಾರ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಭಾರತೀಯ ಕ್ರೀಡಾಳುಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಯುವ ಭಾರತ ತೋರಿದ್ದು, ಪ್ರತಿ ಪಂದ್ಯಾವಳಿಗಳನ್ನು ವೀಕ್ಷಿಸಿ ಸ್ಪೂರ್ತಿ ಪಡೆದವರೇ ಹೆಚ್ಚು ಎನ್ನಲಾಗುತ್ತಿದೆ. ಟೊಕಿಯೋ ಒಲಿಂಪಿಕ್ಸ್ ಧನಾತ್ಮಕ ಪ್ರಭಾವವನ್ನು ಬೀರಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಪದಕಗಳನ್ನು ಪಡೆಯುವ ಅಂತಶಕ್ತಿಯನ್ನು ದೇಶ ಕಾಣುತ್ತಿದೆ. ಒಲಿಂಪಿಕ್ಸ್ನಲ್ಲಿಎರಡನೇ ಪದಕವನ್ನು ತನ್ನದಾಗಿಸಿಕೊಂಡ ಭಾರತದ ಏಕೈಕ ಆಟಗಾರ್ತಿ ಎನ್ನುವ ವಿಶೇಷ ಸಾಧನೆ ಮಾಡಿದ ಪಿ.ವಿ ಸಿಂಧೂ, ಬಾಕ್ಸಿಂಗ್ನಲ್ಲಿ ಸ್ಪೂರ್ತಿಯಾದ ಲವ್ಲೀನಾ, ಕುಸ್ತಿ ಕಲಿ ಭಜರಂಗ್ ಪೂನಿಯಾ, ವಿನಿಶಾ ಪೋಗಟ್ ಅವರಂತ ಭಾರತದ ಪದಕ ಭರವಸೆ. ಪ್ರತಿಯೋರ್ವ ಭಾರತೀಯ ಒಲಿಂಪಿಕ್ ಸ್ಪರ್ಧಿಯೂ ಭಾರತದ ಕ್ರೀಡಾ ಭವಿಷ್ಯಕ್ಕೆ ಸ್ಪೂರ್ತಿ ಮಾತ್ರವಲ್ಲದೆ ಉತ್ತೇಜಕರಾಗಿದ್ದಾರೆ.
ದೇಶದ ರಾಷ್ಟ್ರೀಯ ಕ್ರೀಡೆಯ ಉತ್ತಮ ಪ್ರದರ್ಶನ ಮಾತ್ರವಲ್ಲ ಪ್ರತಿಷ್ಠಿತ ಪದಕದತ್ತ ಇರಿಸಿದ ಹೆಜ್ಜೆ ಭಾರತೀಯ ಕ್ರೀಡಾ ಮನ್ವಂತರವನ್ನು ದರ್ಶಿಸಿದೆ. ದೇಶದಲ್ಲಿ ಕ್ರೀಡೆಗೆ ಬೇಕಾದ ಉತ್ತೇಜನ, ಸಹಕಾರ, ಅಗತ್ಯ ತರಬೇತಿ ಮೊದಲಾದವನ್ನು ಪೂರೈಸಿ ದೇಶದ ಯುವ ಪೀಳಿಗೆ ಮತ್ತಷ್ಟೂ ಕ್ರೀಡಾ ಸಾಧನೆ ಮಾಡುವಂತೆ ಕ್ರೀಡಾ ಇಲಾಖೆಯು ಪ್ರೋತ್ಸಾಹಿಸುತ್ತಿದ್ದು ಪ್ರಶಂಸಾರ್ಹವಾಗಿದೆ. ಹರ್ಮನ್ಪ್ರೀತ್ ಸಿಂಗ್ ನಾಯಕತ್ವದ ಭಾರತೀಯ ಹಾಕಿ ತಂಡ ಇನ್ನಷ್ಟೂ ಶಕ್ತಿಶಾಲಿಯಾಗಿ, ಮನೋಬಲವನ್ನು ಹೆಚ್ಚಿಸಿಕೊಂಡು ಪ್ರತಿಷ್ಠಿತ ಪದಕಕ್ಕೆ ಮುತ್ತಿಡಲಿ ಎಂಬುದು ಕೋಟಿ ಭಾರತೀಯರ ಹಾರೈಕೆ. ರೂಪೇಂದರ್ ಪಾಲ್, ದಿಲ್ಪ್ರೀತ್, ಗುರ್ಜಂತ್ ಸಿಂಗರ ವಿಶಿಷ್ಟ ಡ್ರಾಗ್ಫ್ಲಿಕ್ಗ ಳು ಭಾರತವನ್ನು ಫೈನಲ್ಲಿಗೆ ಏರುವಂತೆ ಮಾಡಲಿ ಎಂಬುದೂ ಕ್ರೀಡಾಸಕ್ತರ ಬಯಕೆ.
ಮಹಿಳಾಮಣಿಗಳ ಸಾಧನೆ
ಭಾರತೀಯ ಮಹಿಳಾ ಹಾಕಿ ತಂಡವೂ ಪುರುಷರ ಹಾಕಿಯಿಂದ ಸತ್ಪ್ರೇರಣೆ ಪಡೆದಿದೆ. ಲೀಗ್ ಹಂತದಲ್ಲಿ ಎಡವಿದ್ದ ಭಾರತೀಯ ಮಹಿಳಾ ಹಾಕಿ ತಂಡ ನಂತರದಲ್ಲಿ ಚೇತರಿಸಿಕೊಂಡು, ಪ್ರಭಲ ಎದುರಾಳಿ ತಂಡವನ್ನು ಮಣಿಸಿದ್ದು ದೊಡ್ಡ ಸಾಧನೆ. ಸೆಮಿಫೈನಲ್ ಪ್ರವೇಶಿಸಿದ ಮಹಿಳಾ ಹಾಕಿ ತಂಡಕ್ಕೆ ಸಹಾಯಕ ಕೋಚ್ ಆಗಿ ಕರ್ನಾಟಕ ಮೂಲದ ಅಂಕಿತಾ ಸುರೇಶ್ ಇರುವುದು ವಿಶೇಷ. ಕ್ರೀಡಾಕ್ಷೇತ್ರದಲ್ಲಿ ವಿಶೇಷ ಸಾಧನೆಗೈದಿರುವ ಅಂಕಿತಾ ಭಾರತೀಯ ಹಾಕಿ ತಂಡವನ್ನು ಪ್ರತಿನಿಧಿಸಿದ್ದರು ಕೂಡಾ. ಹಾಕಿಯಲ್ಲಿ ಅಪಾರ ಅನುಭವ ಹೊಂದಿರುವ ಕೊಡಗು ಮೂಲದ ಇವರು ಪ್ರಧಾನ ತರಬೇತುದಾರ ಜೋರಡ್ ಮರಿಂಜೆ ಅವರಿಗೆ ಸಹಾಯಕರಾಗಿದ್ದಾರೆ. ಕೋಚ್ ನಿರ್ದಶನಗಳನ್ನು ಆಟಗಾರ್ತಿಯರಲ್ಲಿ ಮನದಟ್ಟು ಮಾಡಿಸುವಲ್ಲಿ ಅಂಕಿತಾ ಪ್ರಧಾನ ಭೂಮಿಕೆಯಿದೆ. ಭಾರತೀಯ ಪುರುಷರ ತಂಡ ಕೋಚ್ ಆಗಿರುವ ಗ್ರಾಹಂ ರೀಡ್ ಕೂಡಾ ಓರ್ವ ಅನುಭವಿ ಆಡಗಾರರಾಗಿದ್ದವರು, ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸುತ್ತಿದ್ದ ಇವರು ಒಲಿಂಪಿಯನ್ ಕೂಡಾ ಹೌದು, ವರ್ತಮಾನದಲ್ಲಿ ಭಾರತೀಯ ತಂಡಕ್ಕೆ ಅನುಭವಿ ತರಬೇತುದಾರರ ಮಾರ್ಗದರ್ಶನ ಧನಾತ್ಮಕವಾಗಿದೆ.
ಭಾರತೀಯ ಹಾಕಿ ತಂಡದ ಅಭೂತಪೂರ್ವ ಪ್ರದರ್ಶನ ಮುಂದುವರಿದು, ಬಂಗಾರದ ಪದಕವನ್ನು ಪಡೆಯುವಂತಾಗಲಿ. ಹೊಸ ಇತಿಹಾಸ ಸೃಷ್ಠಿಯಾಗಲಿ ಮಾತ್ರವಲ್ಲ ಹಾಕಿ ಕ್ರೀಡೆಯಿಂದ ಇತರ ಕ್ರೀಡೆ, ಆಟೋಟಗಳಲ್ಲೂ ಹೆಚ್ಚಿನ ಯುವ ಮಂದಿ ಇನ್ನಷ್ಟೂ ಪ್ರೇರಣೆ ಪಡೆದು ದೇಶದ ಕ್ರೀಡಾರಂಗದ ಭವಿಷ್ಯ ಉಜ್ವಲವಾಗಲಿ, ವಿಶಿಷ್ಟ ಸಾಧನೆಯತ್ತ ಮುನ್ನುಗ್ಗೋಣ, ಜೈ ಹೋ!
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.