ಬೆಳ್ತಂಗಡಿ: ಪತ್ರಿಕಾ ಮಾಧ್ಯಮದಲ್ಲಿ ವಿಶಿಷ್ಠ ಛಾಪನ್ನು ಮೂಡಿಸಿರುವ ದ.ಕ., ಉಡುಪಿ ಹಾಗೂ ಇನ್ನಿತರ ಕಡೆಗಳಲ್ಲಿ ಸಹಸ್ರಾರು ಶಿಷ್ಯವರ್ಗವನ್ನು ಹೊಂದಿರುವ ಅಧ್ಯಾಪಕ, ಬರಹಗಾರ ಡಾ. ನಿರಂಜನ ವಾನಳ್ಳಿಯವರಿಗೆ 50 ವರ್ಷ ತುಂಬಿದ ಹಿನ್ನಲೆಯಲ್ಲಿ ಉಜಿರೆ ಶ್ರೀ ಶಾರದಾ ಕಲ್ಯಾಣ ಮಂಟಪದಲ್ಲಿ ಆ.29 ರಂದು ಸಮಕಾಲೀನ ಕನ್ನಡ ಪತ್ರಿಕೋದ್ಯಮ ಎಂಬ ವಿಚಾರದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿನಂದನ ಸಮಿತಿ ಗೌರವಾಧ್ಯಕ್ಷ ಕೆ. ಪ್ರತಾಪಸಿಂಹ ನಾಯಕ್ ತಿಳಿಸಿದ್ದಾರೆ.
ಅವರು ಗುರುವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಕಾರ್ಯಕ್ರಮದ ವಿವರ ನೀಡಿದರು.
ಡಾ. ನಿರಂಜನ ವಾನಳ್ಳಿ ಅಭಿನಂದನ ಸಮಿತಿ ಉಜಿರೆ, ಮತ್ತು ದಶಮಾನೋತ್ಸವ ಸಂಭ್ರಮದಲ್ಲಿರುವ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಜಂಟಿ ಆಶ್ರಯದಲ್ಲಿ ನಡೆಯಲಿರುವ ಸಂಕಿರಣವನ್ನು ಬೆಳಿಗ್ಗೆ ೯-೩೦ಕ್ಕೆ ವಿಜಯವಾಣಿ ಸಂಪಾದಕ ಹರಿಪ್ರಕಾಶ್ ಕೋಣಿಮನೆ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ.ಧ.ಮಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್ ವಹಿಸಲಿದ್ದಾರೆ. ಚಲನಚಿತ್ರ ನಟ ಮಂಡ್ಯ ರಮೇಶ್, ಉದ್ಯಮಿ ಕೆ.ನರೇಂದ್ರ, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಮೊಕ್ತೇಸರ ಯು.ವಿಜಯರಾಘವ ಪಡ್ವೆಟ್ನಾಯ, ಮೈಂಡ್ ನಿರ್ದೇಶಕ ಎಮ್.ಕೆ.ಸುವೃತ್ ಕುಮಾರ್ ಅಭ್ಯಾಗರಾಗಿರುತ್ತಾರೆ ಎಂದರು.
ಬಳಿಕ 11 ಗಂಟೆಯಿಂದ ಮಂಗಳೂರು ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಅಧ್ಯಕ್ಷ ಪ್ರೊ.ಜಿ.ಪಿ.ಶಿವರಾಂ ಅವರ ಅಧ್ಯಕ್ಷತೆಯಲ್ಲಿ ಸಮಕಾಲೀನ ಕನ್ನಡ ಪತ್ರಿಕೋದ್ಯಮದ ಸವಾಲುಗಳು ಎಂಬ ಮೊದಲ ವಿಚಾರ ಗೋಷ್ಠಿ ನಡೆಯಲಿದ್ದು ಪತ್ರಕರ್ತ ರವೀಂದ್ರ ರೇಷ್ಮೆ, ಬೆಂಗಳೂರು ವಿವಿಯ ವಿದ್ಯುನ್ಮಾನ ವಿಭಾಗದ ಪ್ರೊಫೆಸರ್ ಎಮಿರಿಟಿಸ್ ಡಾ. ಎ.ಎಸ್.ಬಾಲಸುಬ್ರಹ್ಮಣ್ಯಂ ವಿಷಯ ಮಂಡಿಸಲಿದ್ದು ಮಂಗಳೂರು ವಿವಿಯ ವಿಶೇಷಾಧಿಕಾರಿ ಡಾ.ವಜಿದಾ ಬಾನು ಪ್ರತಿಕ್ರಿಯೆ ನೀಡಲಿದ್ದಾರೆ. ಬಳಿಕ ಮಂಗಳೂರು ವಿವಿಯ ಕನ್ನಡ ಪ್ರಾಧ್ಯಾಪಕ ಪ್ರೊ| ಸೊಮಪ್ಪ ಅಧ್ಯಕ್ಷತೆಯಲ್ಲಿ ಮುಕ್ತ ಸಂವಾದ(ಮಾಧ್ಯಮ ಸಂವಾದ) ನಡೆಯಲಿದೆ. ಉದಯವಾಣಿ ಸಂಪಾದಕ ಬಾಲಕೃಷ್ಣ ಹೊಳ್ಳ, ಕ.ರಾ.ಮು.ವಿ.ವಿ. ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ| ಶೈಲೇಶ್ರಾಜ್ ಅರಸ್, ಮೈಸೂರು ರಾ.ಸೇ.ಯೋ.ರಾಜ್ಯ ತರಬೇತಿ ಕೇಂದ್ರದ ಸಂಯೋಜಕ ಡಾ.ಎನ್. ಆರ್.ಚಂದ್ರೇಗೌಡ ಹಾಗೂ ಮಡಿಕೇರಿ ಎಫ್.ಎಂ.ಕೆ.ಎಂ.ಸಿ.ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ರೀನಾ ವಿಷಯ ಮಂಡನೆ ಮಾಡಲಿದ್ದಾರೆ.
ಮಧ್ಯಾಹ್ನ 2.15ಕ್ಕೆ ನಡೆಯುವ ಮೂರನೇ ಗೋಷ್ಠಿಯು ಡಾ.ವನಳ್ಳಿ ಅವರ ಬದುಕು ಬರಹದ ಕುರಿತು ನಡೆಯಲಿದೆ. ವಾನಳ್ಳಿಯವರ ಸಮಗ್ರ ಸಾಹಿತ್ಯದ ಬಗ್ಗೆ ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಸದಾನಂದ ಪೆರ್ಲ, ಗೆಳೆಯನಾಗಿ ವಾನಳ್ಳಿ ವಿಚಾರವಾಗಿ ಪತ್ರಕರ್ತ ಶಿವಾನಂದ ಕಳವೆ, ನುಡಿಚಿತ್ರಕಾರನಾಗಿ ವಾನಳ್ಳಿ ಬಗ್ಗೆ ಪತ್ರಕರ್ತ ರವೀಂದ್ರ ಭಟ್, ಅಧ್ಯಾಪಕರಾಗಿ ವಾನಳ್ಳಿಯ ಕುರಿತು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖಸ್ಥೆ ಮೌಲ್ಯಜೀವನ್ ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ಬೆಂಗಳೂರು ವಿವಿಯ ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಚ್.ಎಸ್.ಈಶ್ವರ್ ವಹಿಸಲಿದ್ದಾರೆ ಎಂದು ಪ್ರತಾಪ್ ವಿವರಿಸಿದರು.
ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಮತ್ತು ಅಭಿನಂದನಾ ಸಮಾರಂಭವು ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ನಿಕ್, ಅಂತಾರಾಷ್ಟ್ರೀಯ ವರ್ಣಚಿತ್ರಕಲಾವಿದ ವಿಲಾಸ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭ ನುಡಿರಂಜನ ಎಂಬ ಅಭಿನಂದನ ಗ್ರಂಥ ಹಾಗೂ ಸೊಗಸು ಕಾಣುವ ಮನಸು ಎಂಬ ಪುಸ್ತಕ ಬಿಡುಗಡೆಯಾಗಲಿದೆ ಎಂದ ಅವರು ಸಮಾರೋಪದ ಬಳಿಕ ಆರತಿ ಪಟ್ರಮೆ ಮತ್ತು ಬಳಗದವರಿಂದ ಗದಾಯುದ್ಧ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು.
ಕನ್ನಡ ಪತ್ರಿಕೆಗಳನ್ನು ಓದುವವರಿಗೆ ನಿರಂಜನ ವಾನಳ್ಳಿ ಅವರ ಹೆಸರು ಸುಪರಿಚಿತ. ಶಿರಸಿ ತಾಲೂಕು ರೈತ ವೈದ್ಯ ಕುಟುಂಬದಲ್ಲಿ 1965, ಆ. 25 ರಂದು ಜನಿಸಿದ ಇವರು ಮಾನಸಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಕಲಿತು, ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ಪಾಠ ಹೇಳಲು ತೊಡಗಿ ಅಧ್ಯಾಪಕರಾದವರು. ಬೋಧನೆ ಮಾಡುತ್ತ ಬರೆಯುವ ಹವ್ಯಾಸವನ್ನು ಜೀವಂತವಾಗಿಟ್ಟುಕೊಂಡವರು. ಎಳೆಯ ವಯಸ್ಸಿನಲ್ಲಿಯೇ ಕನ್ನಡ ಪತ್ರಿಕೋದ್ಯಮ ಕುರಿತು ಸುದ್ದಿಯಷ್ಟೇ ಅಲ್ಲ ಎಂಬ ಸಂಕಲನ ಪ್ರಕಟಿಸಿ ಆ ಮೊದಲ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದು ಸುದ್ದಿ ಮಾಡಿದ ವಾನಳ್ಳಿಯವರಿಗೆ ಉತ್ತರ ಕನ್ನಡದ ಹೊಳೆಗಳಂತೆ ಹರಿಯುವ ಜುಳುಜುಳು ತಿಳಿ ಬರಹದ ಶೈಲಿ ಕರಗತವಾಗಿದೆ. ನಿತ್ಯ ಜೀವನದ ತೀರ ಸಾಮಾನ್ಯ ವಿಷಯಗಳನ್ನೂ ಕುತೂಹಲದಿಂದ ಗ್ರಹಿಸುವ, ಅಷ್ಟೇ ಅಲ್ಲ ಲವಲವಿಕೆಯಿಂದ ಅವುಗಳನ್ನು ಅಕ್ಷರಗಳಲ್ಲಿ ಚಿತ್ರಿಸುವ ಅಪೂರ್ವ ಗುಣ ಇವರ ಲೇಖನಿಗಿದೆ. ಇವರು ಇದುವರೆಗೆ ಸುಮಾರು ೨೯ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ವಾನಳ್ಳಿಯವರು ಮೈಸೂರು ವಿವಿಯ ಪ್ರೊಫೆಶಿಯೆನ್ಸಿ ಡೆವೆಲಪ್ಮೆಂಟ್ ಎಂಡ್ ಪ್ಲೇಸ್ಮೆಂಟ್ ಸರ್ವೀಸ್ನ ನಿರ್ದೇಶಕರಾಗಿದ್ದಾರೆ ಎಂದರು.
ಗೋಷ್ಠಿಯಲ್ಲಿ ಅಭಿನಂದನ ಸಮಿತಿ ಅಧ್ಯಕ್ಷ ಪ್ರೊ.ಭಾಸ್ಕರ ಹೆಗಡೆ, ಉಪಾಧ್ಯಕ್ಷ ಬಿ.ಕೆ.ಧನಂಜಯರಾವ್, ಕಾರ್ಯಕಾರಿ ಸಮಿತಿ ಸದಸ್ಯ ಕೇಶವ ಭಟ್ ಅತ್ತಾಜೆ, ಪತ್ರಕರ್ತ ಸಂಘದಅಧ್ಯಕ್ಷ ಬಿ.ಎಸ್.ಕುಲಾಲ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.