ಬೆಳ್ತಂಗಡಿ : ಜಿಲ್ಲೆಯಲ್ಲಿ ಅಡಿಕೆದರ ಕುಸಿತ ಕಂಡಾಗ ರೈತರಿಗೆ ಆಶಾಕಿರಣವಾಗಿ ಕಂಡಿದ್ದು ರಬ್ಬರ್ ಬೆಳೆ. ಮಧ್ಯದಲ್ಲಿ ವೆನಿಲಾ ಸದ್ದು ಮಾಡಿತ್ತು. ಆದರೆ ಅದನ್ನು ನಂಬಿದರೈತರು ಮೋಸಹೋಗಿದ್ದೇ ಹೆಚ್ಚಾಗಿತ್ತು. ಬಳಿಕ ಅಡಕೆಗೆ ಪರ್ಯಾಯವಾಗಿ ರಬ್ಬರ್ಬೆಳೆ ರೈತನ ಕೈ ಹಿಡಿದಿತ್ತು. ಇದೀಗ ಈ ಕೃಷಿಯೂ ದರದ ಏರುಪೇರಿನಿಂದಾಗಿ ರೈತನ ಕೈ ಬಿಡತೊಡಗಿದೆ.
ಲಕ್ಷಾಂತರ ಮಂದಿ ಕೃಷಿಕರ ಬದುಕಿಗೆ ಆಧಾರವಾಗಿರುವ ರಬ್ಬರ್ ಬೆಲೆ ನಿರಂತರ ಕುಸಿತವನ್ನು ಕಾಣುತ್ತಿದೆ. ಹಿಂದೆ ಕೆಜಿಗೆ 250 ರೂ ವರೆಗೂ ಸಿಗುತ್ತಿದ್ದ ರಬ್ಬರಿಗೆ ಈಗ ಸಿಗುತ್ತಿರುವುದು ಕೇವಲ 100ರುಪಾಯಿ ಮಾತ್ರ. . ಕಳೆದ ಎರಡು ವರ್ಷಗಳಿಂದ ಇಳಿಯುತ್ತಲೇ ಬಂದ ರಬ್ಬರ್ ಬೆಲೆ ಇತ್ತೀಚೆಗಂತೂ ಪಾತಾಳಕ್ಕೆ ಇಳಿದಿದೆ. ಒಂದೆರಡು ದಿನಗಳಲ್ಲಿ ಅದು ಇನ್ನೂ ಕೆಳಗಿಳಿಯುವ ಸೂಚನೆಯನ್ನು ನೀಡುತ್ತಿದೆ. ಈಗ ಸಿಗುವ ದರ ಕೃಷಿಕರಿಗೆ ಯಾವುದಕ್ಕೂ ಸಾಲದಾಗಿದೆ. ಆದರೆ ರಬ್ಬರ್ ಕೃಷಿಯಿಂದ ಒಮ್ಮೆಲೆದೂರ ಸರಿಯಲು ಆಗದೆ ಅತ್ತ ಅದನ್ನು ಮುಂದುವರಿಸಲೂ ಆಗದೆ ಇಕ್ಕಟ್ಟಿಗೆ ಸಿಲುಕಿರುವ ಕೃಷಿಕರ ಪಾಡು ಅತ್ಯಂತ ಹೀನಾಯವಾಗಿದೆ.
ಕರ್ನಾಟಕದ ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಗು ಉತ್ತರಕನ್ನಡ ಜಿಲ್ಲೆಗಳಲ್ಲಿ ಸುಮಾರು ೫೫ ಸಾವಿರ ಹೆಕ್ಟೇರ್ನಲ್ಲಿ ರಬ್ಬರ್ ಬೆಳೆಯಲಾಗಿದೆ. ಇದರಲ್ಲಿ ಸುಮಾರು 25 ಸಾವಿರ ಎಕ್ರೆ ಈಗ ಟ್ಯಾಪಿಂಗ್ಆಗುತ್ತಿದೆ. ಉಳಿದ 35 ಸಾವಿರ ಎಕ್ರೆ ಒಂದೆರಡು ವರ್ಷಗಳಲ್ಲಿ ಫಲನೀಡುವ ಹಂತಕ್ಕೆ ಬರಲಿದೆ.
ರಾಜ್ಯದಲ್ಲಿ ಈಗ ವಾರ್ಷಿಕ 35 ಸಾವಿರಟನ್ ರಬ್ಬರ್ ಉತ್ಪದನೆಯಾಗುತ್ತಿದೆ. ರಬ್ಬರ್ ಕೃಷಿಯನ್ನೇ ಅವಲಂಭಿಸಿರುವ ಸುಮಾರು 5 ಲಕ್ಷದಷ್ಟು ಜನರಿದ್ದಾರೆ ಎಂಬುದು ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ ನೀಡುತ್ತಿರುವ ಮಾಹಿತಿ. ರಬ್ಬರ್ ಬೆಲೆ ಕುಸಿತದಿಂದಾಗಿ ಕೇವಲ ಬೆಳೆಗಾರರು ಮಾತ್ರವಲ್ಲ ಟ್ಯಾಪಿಂಗ್ ಕೆಲಸಗಾರರು ಹಾಗೂ ಸಂಭಂಧಿಸಿದ ಇತರೇ ಕಾರ್ಮಿಕರು ದಿನೇ ದಿನೇ ಉದ್ಯೋಗಾವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ. ಬಹುತೇಕ ರಬ್ಬರ್ ತೋಟಗಳಲ್ಲಿ ಈಗಾಗಲೆ ಉತ್ಪಾದನೆಯನ್ನು ನಿಲ್ಲಿಸಲಾಗಿದೆ. ಕೇವಲ ಅದನ್ನು ಮಾತ್ರ ನಂಬಿಕೊಂಡಿರುವ ಸಣ್ಣ ಕೃಷಿಕರು ಮಾತ್ರ ರಬ್ಬರ್ಉತ್ಪಾದನೆಯಲ್ಲಿ ತೊಡಗಿದ್ದಾರೆ ಆದರೆ ಅವರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಕಾರ್ಮಿಕರನ್ನಿಟ್ಟು ಕೆಲಸ ಮಾಡಿಸಿದಲ್ಲೆ ಅದರಲ್ಲಿ ದೊರಕುವ ಸಂಪಾದನೆ ಅವರಿಗೇ ನೀಡಲು ಸರಿಯಾಗುತ್ತದೆ.
ಅಂತರಾಷ್ಟೀಯ ಮಾರುಕಟ್ಟೆಯಲ್ಲಿ ರಬ್ಬರ್ದರ ಕುಸಿತವಾಗಿರುವುದು ಹಾಗೂ ಕಚ್ಚಾತೈಲದ ಬೆಲೆಯಲ್ಲ ಭಾರೀ ಕುಸಿತ ಕಂಡಿರುವುದು ರಬ್ಬರ್ ಬೆಲೆ ಕುಸಿತಕ್ಕೆ ಮೂಲಕಾರಣವಾಗಿದೆ. ಭಾರತದಲ್ಲಿ ಅಗತ್ಯವಿರುವ 10 ಲಕ್ಷ ಟನ್ ರಬ್ಬರ್ನಲ್ಲಿ 5.47 ಲಕ್ಷಟನ್ರಬ್ಬರ್ ಮಾತ್ರ 2014-15 ರಲ್ಲಿ ದೇಶದಲ್ಲಿ ಉತ್ಪಾದಿಸಲಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಉತ್ಪಾದನೆ ತೀವ್ರವಾಗಿ ಕುಸಿತ ಕಂಡಿದೆ. 2012-13 ರಲ್ಲಿ ನಮ್ಮ ದೇಶಕ್ಕೆ ಬೇಕಾದ ರಬ್ಬರನ್ನು ಇಲ್ಲಿಯೆ ಉತ್ಪಾದಿಸಲಾಗಿತ್ತು. ಈಗ ಅದು ಬೇಡಿಕೆಯ ಅರ್ಧಕ್ಕೆ ಇಳಿದಿದೆ.
ದೇಶದ ಪ್ರತಿಷ್ಠಿತ ಕಂಪೆನಿಗಳು ರಬ್ಬರ್ಅನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ರಬ್ಬರ್ ಉತ್ಪಾದನೆಯಲ್ಲಿ ತೀವ್ರ ಇಳಿತ ಕಂಡಿದೆ. ಆದರೆ ಬೇಡಿಕೆ ನಿರಂತರವಾಗಿ ಹೆಚ್ಚಾಗುತ್ತಿದೆ ಬೇಡಿಕೆ ಹೆಚ್ಚಾಗುತ್ತಿರುವಾಗಲು ಬೆಲೆ ಕುಸಿತವಾಗಲು ಆಮದಿನ ಮೇಲೆ ಯಾವುದೇ ನಿಯಂತ್ರಣ ವಿಲ್ಲದಿರುವುದೇ ಮುಖ್ಯಕಾರಣವಾಗಿದೆ. ಅಂತಾರಾಷ್ಟ್ರೀಯ ಒಪ್ಪಂದಗಳ ಪ್ರಕಾರ ರಬ್ಬರಿನ ಮೇಲೆ ಶೇ 25 ರಷ್ಟು ಆಮದು ಸುಂಕ ವಿಧಿಸಲು ಮಾತ್ರ ಅವಕಾಶವಿದೆ. ಈಗ ಜಾಗತಿಕ ಮಾರುಕಟ್ಟೆಯಲ್ಲಿ ರಬ್ಬರ್ನ ದರ ರೂ 80ರ ಆಸುಪಾಸಿನಲ್ಲಿದೆ.
ಆಮದು ಸುಂಕ ಕಟ್ಟಿದರೂ ಇಲ್ಲಿನ ದರಕ್ಕೆ ಸಮನಾಗಿ ಜಾಗತಿಕ ಮಾರುಕಟ್ಟೆಯಿಂದ ರಬ್ಬರ್ ಖರೀದಿಸಬಹುದಾಗಿದೆ. ಭಾರತ ಹೆಚ್ಚಿನ ಕಂಪೆನಿಗಳು ಇದನ್ನೇ ಅನುಸರಿಸುತ್ತಿದೆ. ಆದರೊಂದಿಗೆ ಕಚ್ಚಾ ತೈಲದ ಬೆಲೆಯಲ್ಲಿ ಆಗಿರುವ ಇಳಿಕೆಯಿಂದಾಗಿ ಕೃತಕ ರಬ್ಬರ್ನ ದರದಲ್ಲಿಯೂ ತೀವ್ರ ಕುಸಿತ ಕಂಡಿದೆ. ಇದರ ಉಪಯೋಗ ಇದೀಗ ಹೆಚ್ಚಾಗುತ್ತಿದ್ದು ರಬ್ಬರ್ ಬೆಳೆಗಾರರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.
ಮಳೆಗಾಲ ರಬ್ಬರ್ಉತ್ಪಾದನೆಯಲ್ಲಿ ಅತಿ ಕಡಿಮೆ ಉತ್ಪಾದನೆಯ ಅವಧಿಯಾಗಿದ್ದು ಈಗ ಸಾಮಾನ್ಯವಾಗಿದರ ಹೆಚ್ಚಾಗಿರುತ್ತದೆ ಆದರೆ ಈ ವರ್ಷ ದರದಲ್ಲಿ ಯಾವುದೇ ಏರಿಕೆಯಾಗಿಲ್ಲ ಅದರ ಬದಲು ಅದು ದಿನನಿತ್ಯ ಕುಸಿಯುತ್ತಿದೆ. ಇದೀಗ ಕೆಜಿಗೆ ನೂರರಂತಿರುವದರ ಮುಂದೆಹೆಚ್ಚು ರಬ್ಬರ್ಉತ್ಪಾದನೆಯಾಗುವ ನವೆಂಬರ್ ವೇಳೆಗೆ ಇನ್ನೆಷ್ಟು ಕುಸಿಯಲಿದೆ ಎಂಬ ಆತಂಕಕೃಷಿಕರದಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿರಬ್ಬರ್ದರ ಕೇವಲ 80 ರ ಮಟ್ಟದಲ್ಲಿದ್ದುಅದೂ ಕುಸಿತ ಕಾಣುತ್ತಿದೆ, ಬಾರತದಲ್ಲಿನರಬ್ಬರ್ದರದ ಮೇಲೆಯೂಇದು ಪ್ರಭಾವ ಬೀರಲಿದೆಎಂಬುದು ಮಾರುಕಟ್ಟೆತಜ್ಞರಅಭಿಪ್ರಾಯವಾಗಿದೆ.
ರಾಜ್ಯದರಬ್ಬರ್ ಬೆಳೆಗಾರರಲ್ಲಿ ಹೆಚ್ಚಿನವರು ಸಣ್ಣ ಮತ್ತುಅತಿ ಸಣ್ಣಕೃಷಿಕರೇಆಗಿದ್ದಾರೆ.ಅವರುತಮ್ಮಎಲ್ಲ ವ್ಯವಹಾರಗಳಿಗೂ ರಬ್ಬರ್ಅನ್ನೇ ಅವಲಂಬಿಸಿದ್ದಾರೆ.ರಬ್ಬರ್ ದಿರ್ಘಕಾಲದ ಬೆಳೆಯಾಗಿದ್ದು ಫಸಲು ಬರಲು ಕನಿಷ್ಟ ಏಳು ವರ್ಷಕಾಯಬೇಕಾಗಿದೆ. ಮುಂದೆ ಸುಮಾರು 25 ವರ್ಷಗಳವರೆಗೆ ಫಲ ನೀಡಲಿದೆ. ಕಷ್ಟಪಟ್ಟು ರಬ್ಬರ್ ಅನ್ನು ಬೆಳೆದು ಈಗ ಫಸಲು ಬರಲಾರಂಭಿಸುವ ವೇಳೆಗೆ ಬೆಲೆಯಿಲ್ಲವೆಂದಾದರೆ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ ಕೃಷಿಕರು. ಇದೀಗ ಒಮ್ಮೆಲೆ ರಬ್ಬರ್ ಬೆಳೆಯನ್ನು ಬಿಟ್ಟು ಬೇರೇನೂ ಮಾಡಲೂ ಅವಕಾಶವಿಲ್ಲವಾಗಿದೆ.
ಈ ಪ್ರದೇಶದ ಆರ್ಧಿಕ ಬೆಳವಣಿಗೆಯಲ್ಲಿ ರಬ್ಬರ್ನ ಪಾತ್ರ ತುಂಬಾ ಮಹತ್ವ ಪಡೆದಿತ್ತು. ದರ ಕುಸಿತ ಕೇವಲ ಕೃಷಿಕರ ಮೇಲೆ ಮಾತ್ರವಲ್ಲ ಒಟ್ಟು ಆರ್ಥಿಕ ವ್ಯವಹಾರಗಳ ಮೇಲೆಯೆ ಪ್ರಭಾವ ಬೀರಲಾರಂಭಿಸಿದೆ. ರಬ್ಬರ್ ಬೆಳೆಯನ್ನು ನಂಬಿ ಕೃಷಿಕರು ಹಲವಾರು ವ್ಯವಹಾರಗಳನ್ನು ಆರಂಭಿಸಿದ್ದು ಅವೆಲ್ಲವೂ ಬಿಕ್ಕಟ್ಟಿಗೆ ಸಿಲುಕಿದೆ. ಬ್ಯಾಂಕ್ ಗಳಲ್ಲಿ ಪಡೆದಿರುವ ಸಾಲಗಳನ್ನು ತೀರಿಸಲಾಗದೆ ಸಂಕಷ್ಟದಲ್ಲಿದ್ದಾರೆ. ಸಾಲಗಳ ಮರುಪಾವತಿಯ ಸಮಯ ಸಮೀಪಿಸುತ್ತಿರುವುದನ್ನು ಭಯದಿಂದಲೇ ನೋಡುತ್ತಿದ್ದಾರೆ ಕೃಷಿಕರು. ಈಗಿನ ದರದಲ್ಲಿ ರಬ್ಬರ್ ಕೃಷಿಕರು ಸಾಲ ಮರುಪಾವತಿಸುವುದಿರಲಿ ದೈನಂದಿನ ಬದುಕನ್ನು ನಡೆಸುವುದೇ ಕಷ್ಟದ ವಿಚಾರವಾಗಿದೆ. ಸಾಲಮರುಪಾವತಿಯ ಒತ್ತಡ ಬಂದರೆ ಕೃಷಿಕರು ಆತ್ಮಹತ್ಯೆಯ ದಾರಿ ಹಿಡಿದರೂ ಆಶ್ಚರ್ಯ ಪಡಬೇಕಾಗಿಲ್ಲ ಸರಕಾರ ಕೂಡಲೆ ಎಚ್ಚೆತ್ತುಕೊಂಡು ರಬ್ಬರ್ ಕೃಷಿಕರ ಸಮಸ್ಯೆಗೆ ಸ್ಪಂದಿಸುವ ಕಾರ್ಯವನ್ನು ಮಾಡಬೇಕಾಗಿದೆ. ಎಂಬುದುಕೃಷಿಕರಒತ್ತಾಯವಾಗಿದೆ.
ಸಂಕಷ್ಟದಲ್ಲಿ ಕಾರ್ಮಿಕರು: ಕೃಷಿಕರೊಂದಿಗೆ ರಬ್ಬರ್ ತೋಟಗಳಲ್ಲಿ ಟ್ಯಾಪಿಂಗ್ ಕೆಲಸ ಮಾಡುವ ಕಾರ್ಮಿಕರು ಅವರನ್ನು ಅವಲಂಬಿಸಿರುವ ಕುಟುಂಬಗಳು ಸಾವಿರಾರು ಸಂಖ್ಯೆಯಲ್ಲಿದ್ದು ಅವರ ಬದುಕೂ ಅತಂತ್ರ ಸ್ಥಿತಿಯಲ್ಲಿದೆ. ಮಕ್ಕಳ ಶಿಕ್ಷಣ,ದೈನಂದಿನ ಅಗತ್ಯಗಳಿಗೂ ಇವರು ಬೇರೆದಾರಿ ಹುಡಕಬೇಕಾಗಿ ಬರಲಿದೆ. ಇಷ್ಟೊಂದು ಜನರಿಗೆ ಪರ್ಯಾಯ ಉದ್ಯೋಗ ಒದಗಿಸುವುದು ಸುಲಭ ಸಾಧ್ಯವಾಗದು. ಈಗಾಗಲೇ ಹಲವಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ದರಕುಸಿತ ಇನ್ನೂ ಮುಂದುವರಿದರೆ ಕೃಷಿಕರು ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಾರೆ. ಆಗ ಬೀದಿಗೆ ಬೀಳುವ ಸರದಿ ಈ ಕಾರ್ಮಿಕರದಾಗಲಿದೆ. ಕೃಷಿಕರಷ್ಟೇ ಚಿಂತಾಜನಕ ಸ್ಥಿತಿ ಇವರದ್ದೂಆಗಿದೆ.
ಕೇರಳ ಮಾದರಿಯ ಬೆಂಬಲ ಬೆಲೆಗೆ ಒತ್ತಾಯ: ರಬ್ಬರ್ಗೆ ಕನಿಷ್ಟ 150 ರೂ ಬೆಲೆ ಸಿಗದಿದ್ದಲ್ಲಿ ಕೃಷಿಕರು ಬದುಕನ್ನು ನಡೆಸುವುದು ಅಸಾಧ್ಯ ಎಂಬುದು ಕೃಷಿಕರ ಅಭಿಪ್ರಾಯವಾಗಿದೆ. ಕೇರಳದಲ್ಲಿ ದರಕುಸಿತದಿಂದ ಕೃಷಿಕರನ್ನು ರಕ್ಷಿಸಲು ಸರಕಾರ150 ರಂತೆ ಬೆಂಬಲ ಬೆಲೆಯನ್ನು ಪ್ರಕಟಿಸಿದ್ದು ಸಣ್ಣಕೃಷಿಕರಿಗೆ ತಾವು ಮಾರಾಟ ಮಾಡುವ ರಬ್ಬರ್ಗೆ ಸಹಾಯಧನವನ್ನು ನೇರವಾಗಿ ಅವರ ಖಾತೆಗೆ ಸಂದಾಯ ಮಾಡುವ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದಾಗಿ ಪ್ರತಿಸಣ್ಣ ಕೃಷಿಕನಿಗೆ ಕೆಜಿ ರಬ್ಬರ್ ಗೆ ರೂ 150 ರಂತೆ ಸಿಗುತ್ತಿದೆ. ಇದೇ ಮಾದರಿಯನ್ನು ರಾಜ್ಯದಲ್ಲಿಯೂ ಅನುಷ್ಟಾನಕ್ಕೆ ತರಬೇಕು ಎಂಬುದು ರಾಜ್ಯ ರಬ್ಬರು ಬೆಳೆಗಾರರ ಹಿತರಕ್ಷಣಾ ವೇದಿಕೆ ಸರಕಾರವನ್ನು ಒತ್ತಾಯಿಸುತ್ತಿದೆ.
ರಬ್ಬರ್ ಬೆಲೆ ದಿನನಿತ್ಯ ಕುಸಿಯುತ್ತಾ ಬರುತ್ತಿದ್ದುರಾಜ್ಯದ ಕರಾವಳಿ ಹಾಗು ಮಲೆನಾಡಿನಲ್ಲಿರುವ ಲಕ್ಷಾಂತರ ಸಂಖ್ಯೆಯರಬ್ಬರ್ಕೃಷಿಕರ ಬದುಕುಅತಂತ್ರವಾಗಿದೆ. ಸಣ್ಣಕೃಷಿಕರಂತೂ ಸಾಲದ ಶೂಲಕ್ಕೆ ಸಿಲುಕಿದ್ದು ಆತ್ಮಹತ್ಯೆಯ ಹೊಸ್ತಿಲಲ್ಲಿದ್ದಾರೆ.ಸರಕಾರ ಮದ್ಯಪ್ರವೇಶಿಸದಿದ್ದರೆ ಕಬ್ಬುಬೆಳೆಗಾರರಿಗಿಂತ ಹೀನಾಯ ಸ್ಥಿತಿ ರಬ್ಬರ್ ಬೆಳೆಗಾರರದಾಗಲಿದೆ.
ಇತ್ತ ಪೆಟ್ರೋಲಿಯಂ ಬೆಲೆಯೂಕಡಿಮೆಯಾಗುತ್ತಿದ್ದುಅದುರಬ್ಬರ್ದರದ ಮೇಲೂ ಪರಿಣಾಮಉಂಟುಮಾಡುತ್ತದೆ.ಇನ್ನೂಐದಾರು ವರ್ಷ ಪರಿಸ್ಥಿತಿ ಇದೇರೀತಿ ಮುಂದುವರಿಯಲಿದೆಎಂದು ಭಾವಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.