ಬೆಳ್ತಂಗಡಿ : ನೆರಿಯ ಗ್ರಾಮದ ಕಾಟಾಜೆಯಲ್ಲಿ ಸುಂದರ ಮಲೆಕುಡಿಯ ಅವರ ಕೈ ಕತ್ತರಿಸಿದ ಭೂಮಾಲಕ ಗೋಪಾಲಗೌಡ ಹಾಗೂ ಇತರೇ ಆರೋಪಿಗಳನ್ನು ಬಂಧಿಸುವಲ್ಲಿ ಪೋಲೀಸ್ ಇಲಾಖೆ ವಿಫಲವಾಗಿದೆ. ಆರೋಪಿಗಳನ್ನು ಬಂಧಿಸದಿದ್ದಲ್ಲಿ ಆ.24 ರಿಂದ ಮಲೆಕುಡಿಯರ ಸೇವಾ ಟ್ರಸ್ಟ್ ಬೆಳ್ತಂಗಡಿ, ಹಾಗು ಮಲೆಕುಡಿಯರ ಸಂಘದ ನೆರಿಯ ಗ್ರಾಮಸಮಿತಿಯ ನೇತೃತ್ವದಲ್ಲಿ ಬೆಳ್ತಂಗಡಿ ಪೋಲೀಸ್ ಠಾಣೆಯ ಎದುರು ಅನಿರ್ಧಿಷ್ಟ ಅವಧಿಗೆ ಮುಷ್ಕರ ನಡೆಸುವುದಾಗಿ ಮಲೆಕುಡಿಯರ ಸೇವಾ ಟ್ರಸ್ಟ್ನ ಕಾರ್ಯದರ್ಶಿ ಸುಧಾಕರ ಮಲೆಕುಡಿಯ ತಿಳಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು. ಆದಿವಾಸಿ ಕೃಷಿಕನ ಕೈ ಕತ್ತರಿಸಿ ತಿಂಗಳಾಗುತ್ತಾ ಬಂದಿದ್ದರೂ ಇನ್ನೂ ಆರೋಪಿಗಳ ಬಂಧನವಾಗದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ರಾಜ್ಯದಾದ್ಯಂತ ಪ್ರತಿಭಟನೆ ನಡೆದು ಆರೋಪಿಗಳ ಬಂಧನಕ್ಕೆ ಒತ್ತಾಯ ಹೇರಿದ್ದರೂ ಅದು ಯಾವುದೇ ಪ್ರಯೋಜನ ನೀಡಿಲ್ಲ. ಪೊಲೀಸರು ಆರೋಪಿಯ ಬಗ್ಗೆ ಮಾಹಿತಿಯಿಲ್ಲ ಎನ್ನುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಇದು ಪೊಲೀಸ್ ಇಲಾಖೆಯ ವೈಫಲ್ಯವನ್ನು ಎತ್ತಿತೋರಿಸುತ್ತಿದೆ. ಇದೀಗ ಇಲಾಖೆಗೆ ಅಂತಿಮವಾಗಿ ಆ.23 ರ ವರೆಗೆ ಸಮಯಾವಕಾಶ ನೀಡುತ್ತಿದ್ದೇವೆ ಅದರೊಳಗೆ ಆರೋಪಿಗಳ ಬಂಧನವಾಗದಿದ್ದರೆ ಆ 24 ರಿಂದ ಪೋಲೀಸ್ ಠಾಣೆಯ ಎದುರು ಧರಣಿ ಆರಂಭಿಸಲಿದ್ದೇವೆ ಆತನ ಬಂಧನವಾಗುವ ವರೆಗೆ ಧರಣಿಯನ್ನು ಮುಂದುವರಿಸಲಿದ್ದೇವೆ ಎಂದು ಅವರು ತಿಳಿಸಿದರು.
ಮಲೆಕುಡಿಯರ ಸಂಘದ ಮಾಜಿ ಅಧ್ಯಕ್ಷ ಎಲ್ಯಣ್ಣ ಮಲೆಕುಡಿಯ ಅವರು ಮಾತನಾಡಿ ಒಟ್ಟು ವ್ಯವಸ್ತೆಯನ್ನು ಗಮನಿಸಿದರೆ ಆರೋಪಿಗಳಿಗೆ ರಾಜಕೀಯ ರಕ್ಷಣೆ ದೊರಕುತ್ತಿದೆಯೆ ಎಂಬ ಅನುಮಾನ ಮೂಡಿಸುವಂತಾಗಿದೆ. ರಾಜಕೀಯ ಮುಖಂಡರುಗಳು ಈ ಘಟನೆಯ ಬಗ್ಗೆ ಮಾತನಾಡುತ್ತಿಲ್ಲ, ಯಾವ ರಾಜಕೀಯ ಪಕ್ಷಗಳಿಗೆ ಈ ಬಗ್ಗೆ ಕಾಳಜಿಯಿಲ್ಲ ಶೋಷಿತ ಸಮುದಾಯಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಯಾರಿಂದಲೂ ನಡೆಯುತ್ತಿಲ್ಲ ನಮ್ಮ ಮತ ಯಾರಿಗೂ ಬೇಡವೇ ಎಂದು ಪ್ರಶ್ನಿಸಿದರು. ಏನೇ ಆದರೂ ಈ ವಿಚಾರದಲ್ಲಿ ಆರೋಪಿಯ ಬಂಧನವಾಗುವ ವರೆಗೆ ಹೋರಾಟ ನಿರಂತರವಾಗಿ ಮುಂದುವರಿಯಲಿದೆ.
ಆರೋಪಿಗಳು ಜಾಮೀನು ಪಡೆದು ಊರಿಗೆ ಹಿಂತಿರುಗಿ ಮತ್ತೆ ಪಾಳೆಗಾರಿಕೆ ಮುಂದುವರಿಸಲು ಅವಕಾಶ ನೀಡಿದರೆ ಆತನನ್ನು ಹೇಗೆ ಎದುರಿಸಬೇಕು ಎಂದು ನಮಗೆ ತಿಳಿದಿದೆ ಅದಕ್ಕೆ ಅವಕಾಶ ಒದಗಿಸಬೇಡಿ ಎಂದು ಎಚ್ಚರಿಸಿದರು. ಈ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದು ಬೆಂಬಲಿಸುವ ರಾಜಕೀಯ ಪಕ್ಷಗಳಿಗೂ ಸ್ವಾಗತವಿದೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಮಲೆಕುಡಿಯರ ಸಂಘದ ಮುಖಂಡರುಗಳಾದ ಜಯಾನಂದ, ಸುಂದರ ಆಲಂಗಾಯಿ, ಎಪಿಎಂಸಿ ಉಪಾಧ್ಯಕ್ಷ ಲಕ್ಷ್ಮಣ ಮಲೆಕುಡಿಯ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.