ನಿನ್ನೆ ನನ್ನ ಹಳೆಯ ಸ್ನೇಹಿತನೊಬ್ಬನಿಗೆ ಸುಮ್ಮನೆ ಕರೆ ಮಾಡಿದ್ದೆ. ಹೆಚ್ಚಿನ ವಿಶೇಷವೇನೂ ಇರಲಿಲ್ಲ. ಎಲ್ಲವೂ ಸರಿಯಾಗಿ ನಡೆಯುತ್ತಿದೆಯೇ ? ಎಂದು ಕೇಳುವುದಷ್ಟೇ ಉದ್ದೇಶವಾಗಿತ್ತು. ಎರಡು ನಿಮಿಷ ಮೀರದ ಮಾತುಕತೆಯಲ್ಲಿ ಆತ ಐದು ಬಾರಿ ಇನ್ನೇನು ಸಮಾಚಾರ ಎಂದು ಕೇಳಿದ. ಏನಿಲ್ಲ ಸುಮ್ಮನೆ ನಿನ್ನ ವಿಚಾರಿಸಿಕೊಳ್ಳಲು ಫೋನ್ ಮಾಡಿದ್ದೆ ಎಂದರೆ ಆತನಿಗೆ ನಂಬಿಕೆ ಬಂದಂತೆ ಕಾಣಲಿಲ್ಲ. ಕೊನೆಗೂ ಎರಡು ನಿಮಿಷದೊಳಗೆ ಫೋನ್ ಕಟ್ ಮಾಡಿದಾಯ್ತು. ಇದನ್ನ ಇಲ್ಲಿ ಉಲ್ಲೇಖಿಸುವ ಉದ್ದೇಶವೇನು ? ಇಂದು ಮಹಾನಗರಗಳಲ್ಲಿ ಜನರಿಗೆ ಪುರುಸೊತ್ತು ಇಲ್ಲ. ಚೆನ್ನಾಗಿದ್ದೀಯಾ ಎಂದು ಕೇಳಲು ಕರೆ ಮಾಡಿದ್ದಾರೆ ಎಂದರೆ ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲ. ಎಲ್ಲರಿಗೂ ಏನಾದರೊಂದು ಕೆಲಸ ಆಗಬೇಕಿರುತ್ತದೆ. ಅವಾಗ ಮಾತ್ರ ಇತರರ ನೆನಪಾಗುತ್ತೆ ಮತ್ತು ಆಗ ಮಾತ್ರ ಫೋನ್ ಕಾಲ್ ಮಾಡುತ್ತಾರೆ. ಇದು ಯಾರನ್ನೂ ಹಂಗಿಸುವ ಉದ್ದೇಶದಿಂದ ಬರೆದದ್ದಲ್ಲ, ಬದಲಿಗೆ ಇಂದಿನ ಸಮಾಜ ಇರುವುದೇ ಹೀಗೆ ಎನ್ನುವುದನ್ನ ತಿಳಿಸುವುದಕ್ಕೆ. ಜನ ಸಾಮಾನ್ಯರ ಮಟ್ಟದಲ್ಲಿ, ಬದುಕಿನಲ್ಲಿ ಇಂತಹ ಬದಲಾವಣೆ ಆಗಿರುವಾಗ ಇನ್ನು ಜಗತ್ತಿನ ದೇಶಗಳ ಹಣಕಾಸು ಸ್ಥಿತಿ ಬದಲಾಗದೆ ಉಳಿದಿದೆಯೇ ? ಇಂದು ಒಂದು ದೇಶ ಇನ್ನೊಂದು ದೇಶದೊಂದಿಗೆ ಉತ್ತಮ ಬಾಂಧ್ಯವ್ಯ ಹೊಂದಿದೆ ಎಂದರೆ ಅದರ ಹಿಂದೆ ವಾಣಿಜ್ಯ ಉದ್ದೇಶ ಇದ್ದೆ ಇರುತ್ತದೆ. ಇದರಲ್ಲಿ ಯಾವ ಸಂಶಯ ಬೇಡ .
ಒಂದು ದೇಶ ಇನ್ನೊಂದು ದೇಶದೊಂದಿಗೆ ಮಾಡುವ ವ್ಯಾಪಾರ ವಹಿವಾಟಿಗೆ ಟ್ರೇಡ್ ಎನ್ನುತ್ತೇವೆ. ಹಾಗೆಯೇ ಭಾರತದಿಂದ ಬೇರೆ ದೇಶಕ್ಕೆ ಕಳಿಸಿದ ಉತ್ಪನ್ನಗಳನ್ನ ರಫ್ತು ಎನ್ನುತ್ತೇವೆ. ಬೇರೆ ದೇಶದಿಂದ ನಮಗೆ ಬೇಕಾದ ಉತ್ಪನ್ನಗಳನ್ನ ತರಿಸಿಕೊಂಡರೆ ಅದನ್ನ ಆಮದು ಎನ್ನುತ್ತೇವೆ. ಅಲ್ಲದೆ ನಮ್ಮ ಆಮದು ಮತ್ತು ರಫ್ತು ಸಮವಾಗಿದ್ದರೆ ಅದನ್ನ ಟ್ರೇಡ್ ಬ್ಯಾಲೆನ್ಸ್ ಎಂದು ಅಥವಾ ಟ್ರೇಡ್ ಈಕ್ವಲ್ ಎಂದು ಕರೆಯುತ್ತೇವ. ರಫ್ತು ಹೆಚ್ಚಾಗಿದ್ದು ಆಮದು ಕಡಿಮೆಯಿದ್ದರೆ ಅದನ್ನ ಟ್ರೇಡ್ ಸರ್ಪ್ಲಸ್ ಎನ್ನುತ್ತಾರೆ. ಆಮದು ಹೆಚ್ಚಾಗಿದ್ದು ರಫ್ತು ಕಡಿಮೆಯಿದ್ದರೆ ಅದನ್ನ ಟ್ರೇಡ್ ಡೆಫಿಸಿಟ್ ಎನ್ನುತ್ತಾರೆ. ಉದಾಹರಣೆಗೆ ಭಾರತದಿಂದ ಅಮೇರಿಕಾ ದೇಶಕ್ಕೆ ಕಳಿಸಿದ ವಸ್ತು 100 ಮತ್ತು ತರಿಸಿಕೊಂಡ ವಸ್ತು 100 ಎಂದು ಕೊಂಡರೆ ಅದನ್ನ ಟ್ರೇಡ್ ಬ್ಯಾಲೆನ್ಸ್ ಎನ್ನಬಹದು. ಅಮೆರಿಕಕ್ಕೆ ಕಳಿಸದ ವಸ್ತುವಿನ ಮೌಲ್ಯ 100 ಮತ್ತು ಅಲ್ಲಿಂದ ತರಿಸಿಕೊಂಡ ವಸ್ತುವಿನ ಮೌಲ್ಯ 80 ಇದ್ದರೆ ಉಳಿದ 20 ಟ್ರೇಡ್ ಸರ್ಪ್ಲಸ್ ಎನಿಸಿಕೊಳ್ಳುತ್ತದೆ. ಅದೇ ಆಮದು 100 ಇದ್ದು ರಫ್ತು 70 ಇದ್ದರೆ ಉಳಿದ 30 ಟ್ರೇಡ್ ಡೆಫಿಸಿಟ್ ಎನ್ನಿಸಿಕೊಳ್ಳುತ್ತದೆ. ಸರಳವಾಗಿ ಹೇಳಬೇಕೆಂದರೆ ಯಾವುದೇ ದೇಶ ತನ್ನ ಸರುಕನ್ನ ಹೆಚ್ಚು ಮಾರಲು ಬಯಸುತ್ತದೆ. ಏನಿಲ್ಲವೆಂದರೂ ಟ್ರೇಡ್ ಬ್ಯಾಲೆನ್ಸ್ ಮಾಡಲು ಅಂತೂ ಪ್ರಯತ್ನಿಸುತ್ತದೆ . ಟ್ರೇಡ್ ಡೆಫಿಸಿಟ್ ಯಾವ ದೇಶಕ್ಕೂ ಒಳ್ಳೆಯದಲ್ಲ .
ಗಮನಿಸಿ ನೋಡಿ ಭಾರತದ ಪ್ರಧಾನ ಮಂತ್ರಿಗಳು 2014 ರಲ್ಲಿ ಅಧಿಕಾರಕ್ಕೆ ಬಂದ ದಿನದಿಂದ 2018 ರ ಅಂತ್ಯದ ವರೆಗೆ ಅಂದರೆ ಜಪಾನ್ ಭೇಟಿಯವರೆಗೆ ನಲವತ್ತು ಬಾರಿ ವಿದೇಶ ಪ್ರಯಾಣ ಮಾಡಿದ್ದಾರೆ ಇಂತಹ ಪ್ರಯಾಣದಲ್ಲಿ 58 ದೇಶಗಳ ಭೇಟಿ ನೀಡಿದ್ದಾರೆ . 28/1/2018 ರ ಜಪಾನ್ ಭೇಟಿಯಂತೂ ಚೀನಾ ದೇಶವನ್ನ ಒಂದಷ್ಟು ಹಂತಕ್ಕೆ ತಹಬದಿಗೆ ತರಲು ಅತ್ಯಂತ ಅವಶ್ಯಕವಾಗಿತ್ತು . ಚೀನಾ ಜಗತ್ತಿನ ಸಣ್ಣ ಪುಟ್ಟ ದೇಶಗಳನ್ನ ತನ್ನ ಸಾಲದ ಖೆಡ್ಡಾದಲ್ಲಿ ಕೆಡವಿ ಅವುಗಳನ್ನ ತನ್ನ ಇಚ್ಚೆಯಂತೆ ಕುಣಿಸುತ್ತಿರುವ ಈ ಸಮಯದಲ್ಲಿ ಪ್ರಧಾನ ಮಂತ್ರಿಯವರ ಈ ರೀತಿಯ ರಾಜಕೀಯ ನಡೆ ಅತ್ಯಂತ ಶ್ಲಾಘನೀಯ. ಅದರಲ್ಲೂ ಜಪಾನ್ ನೊಂದಿಗೆ ಆಪ್ತ ಮಿತ್ರ ಎನ್ನುವ ಪಟ್ಟ ಪಡೆಯಲು ಪಟ್ಟ ಶ್ರಮ ಸಾರ್ಥಕ .
ಮೇಲಿನ ಎಲ್ಲಾ ಸಾಲುಗಳನ್ನ ಗಮನವಿಟ್ಟು ಓದಿದ ನಂತರ ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ. ಸೌದಿ ಅರೇಬಿಯಾ ಭಾರತಕ್ಕೆ ಸುಮ್ಮನೆ ಆಕ್ಸಿಜನ್ ಅಥವಾ ಮತ್ತ್ಯಾವುದೇ ಔಷಧವನ್ನ ಪುಕ್ಕಟೆಯಂತೂ ನೀಡುವುದಿಲ್ಲ. ಸೌದಿ ಒಂದೇ ಅಂತಲ್ಲ , ಜಗತ್ತಿನ ಎಲ್ಲಾ ದೇಶಗಳೂ ಇಂದು ಇನ್ನೊಂದು ದೇಶಕ್ಕೆ ಸಹಾಯ ಹಸ್ತ ಚಾಚಿವೆ ಎಂದರೆ ಅದರ ಹಿಂದೆ ವಾಣಿಜ್ಯ ಮತ್ತು ವಹಿವಾಟಿನ ದೂರಾಲೋಚನೆ ಇದ್ದೆ ಇರುತ್ತದೆ. ಜನ ಸಾಮಾನ್ಯ ಮಾತ್ರ ಇವುಗಳನ್ನ ಭಾವನತ್ಮಕವಾಗಿ ನೋಡಿ ಬಡಬಡಿಸುತ್ತಿರುತ್ತಾನೆ.
ಈ ನಿಟ್ಟಿನಲ್ಲಿ ಭಾರತದ ಪ್ರಧಾನಿಯವರು 2014 ರಿಂದಲೂ ಜಗತ್ತು ಅರ್ಥ ಮಾಡಿಕೊಳ್ಳುವ ಭಾಷೆಯನ್ನ ಬಹಳ ಬೇಗ ಅರ್ಥ ಮಾಡಿಕೊಂಡು ಅದೇ ಭಾಷೆಯಲ್ಲಿ ವ್ಯವಹರಿಸುತ್ತಾ ಬಂದಿದ್ದಾರೆ. ಅದರ ಫಲಿತಾಂಶವೇ ಇಂದು ಜಗತ್ತಿನ ಹತ್ತಾರು ದೇಶಗಳು ನಮ್ಮ ನೆರವಿಗೆ ಧಾವಿಸುತ್ತಿವೆ.
ಶುಭವಾಗಲಿ.
✍️ರಂಗಸ್ವಾಮಿ ಮೂಕನಹಳ್ಳಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.