ಬೆಂಗಳೂರು: ಸಾಂಕ್ರಾಮಿಕ ಕೊರೋನಾ ಸೋಂಕಿನ ಎರಡನೇ ಅಲೆ ಸಾರ್ವಜನಿಕ ವಲಯವನ್ನು ಬೆಚ್ಚಿ ಬೀಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ವೈದ್ಯರ ತಂಡವೊಂದು ಉಚಿತ ವೈದ್ಯಕೀಯ ಸೇವೆ ಆರಂಭಿಸಿದೆ.
ಬೆಂಗಳೂರು ವೈದ್ಯಕೀಯ ಕಾಲೇಜಿನ 1992 ರ ಬ್ಯಾಚ್ ನ ಪದವೀಧರರ ತಂಡ ‘ಬಿಎಂಸಿ-92’ ಎಂಬ ಹೆಸರಿನಲ್ಲಿ ಈ ಸೇವೆಯನ್ನು ಆರಂಭಿಸಿದೆ. ಈ ತಂಡ ಸೋಂಕಿತರಿಗೆ ಚಿಕಿತ್ಸೆ ನೀಡುವ ತಜ್ಞ ವೈದ್ಯರು, ಆಪ್ತ ಸಮಾಲೋಚನೆ, ಸಹಾಯವಾಣಿ, ಆಮ್ಲಜನಕ ಸಾಂಧ್ರಕಗಳು, ಪಲ್ಸ್ ಆಕ್ಸಿಮೀಟರ್ಗಳ ಮಾಹಿತಿ ಮೊದಲಾದ ಸೇವೆಗಳನ್ನು ಒದಗಿಸುತ್ತಿವೆ. ಆ ಮೂಲಕ ಕೊರೋನಾ ಸೋಂಕಿತರಿಗೆ ಆರಂಭಿಕ ಘಟ್ಟದಲ್ಲೇ ಪೂರಕ ಆರೋಗ್ಯ ಸುರಕ್ಷತಾ ವಿಧಾನಗಳ ಮಾಹಿತಿ ನೀಡುವ ಮೂಲಕ ಅವರು ಆಕ್ಸಿಜನ್ ಬೆಡ್ಗಳತ್ತ ಬರುವುದನ್ನು ಕಡಿಮೆ ಮಾಡುವತ್ತ ಗಮನ ಹರಿಸುತ್ತಿದ್ದಾರೆ. ಆ ಮೂಲಕ ಆಸ್ಪತ್ರೆಗಳ ಮೇಲಾಗುತ್ತಿರುವ ಒತ್ತಡ ನಿವಾರಣೆಗೆ ತಮ್ಮಿಂದಾದ ಕ್ರಮ ಕೈಗೊಳ್ಳುವ ಮೂಲಕ ಸೇವೆ ಮಾಡುತ್ತಿದ್ದಾರೆ.
ಕೊರೋನಾ ರೋಗಿಗಳಲ್ಲಿನ ಭಯ ಹೋಗಲಾಡಿಸಿ, ಅಂತಹ ಸೋಂಕಿತರಿಗೆ ದೃಢೀಕೃತ ಮಾಹಿತಿ ಒದಗಿಸುವ ಉದ್ದೇಶದಿಂದ ಈ ಸ್ವಯಂಸೇವಕರ ತಂಡ ಕಾರ್ಯ ನಿರ್ವಹಿಸುತ್ತಿದೆ. ಈ ಯೋಜನೆ ಸದ್ಯ ಆನ್ಲೈನ್ ಆಸ್ಪತ್ರೆಯಂತೆ ಕಾರ್ಯ ನಿರ್ವಹಿಸುತ್ತಿದೆ. ಸಹಾಯವಾಣಿ 08047166115 ಮೂಲಕ ಈ ಸ್ವಯಂಸೇವಕರು ಸಾರ್ವಜನಿಕರಿಗೆ ಅಗತ್ಯ ಮಾಹಿತಿ ಒದಗಿಸುತ್ತಿದ್ದಾರೆ. ಜೊತೆಗೆ ಅಗತ್ಯ ಇರುವವರಿಗೆ ದಾನಿಗಳ ನೆರವಿನಿಂದ ಔಷಧ ಕಿಟ್ಗಳನ್ನು ತಲುಪಿಸಲಾಗುತ್ತಿದೆ. ಜೊತೆಗೆ ರೋಗಿ ಈ ಕೇಂದ್ರದ ಸಂಪರ್ಕಕ್ಕೆ ಬಂದಲ್ಲಿಂದ ಆತ ಗುಣಮುಖನಾಗುವ ವರೆಗೆ ಆತನ ಜೊತೆ ನಿರಂತರ ಸಂಪರ್ಕ ಸಾಧಿಸಿ, ಆತನ ಆರೋಗ್ಯ ಕಾಳಜಿ ವಹಿಸುವ ಕೆಲಸವನ್ನು ಸಹ ಈ ತಂಡ ಮಾಡುವ ಮೂಲಕ ಮಾದರಿಯಾಗಿದೆ. ಜೊತೆಗೆ ಅಗತ್ಯವುಳ್ಳ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಕಲ್ಪಿಸುವ ಕೆಲಸವನ್ನು ಸಹ ಈ ತಂಡ ಮಾಡುತ್ತಿದ್ದು, ಆ ಮೂಲಕ ಸೋಂಕಿತರಿಗೆ ನೆರವು ನೀಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.