ಬೆಳ್ತಂಗಡಿ : ಮತೀಯ ಆಧಾರದಲ್ಲಿ ದೇಶ ವಿಭಜನೆಯನ್ನು ಸಹಿಸಲು ಸಾಧ್ಯವಿಲ್ಲ. ದೇಶದಲ್ಲಿರುವ ಜಾತ್ಯಾತೀತರೇ ನಮ್ಮ ಶತ್ರುಗಳು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಚೈತ್ರಾ ಕುಂದಾಪುರ ಎಚ್ಚರಿಸಿದರು.ಅವರು ಶುಕ್ರವಾರ ರಾತ್ರೆ ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ವಿ.ಹಿ.ಪಂ., ಬಜರಂಗದಳ ಬೆಳ್ತಂಗಡಿ ಪ್ರಖಂಡ, ಹಿಂದೂ ಜಾಗರಣ ವೇದಿಕೆ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಡೆದ ಅಖಂಡ ಭಾರತ ಸಂಕಲ್ಪ ದಿನದ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಕೇಸರಿ ಬಣ್ಣವನ್ನು ತ್ಯಾಗದ ಸಂಕೇತವೇ ಹೊರತು ಭಯೋತ್ಪಾದಕತೆಯನ್ನು ಬಿಂಬಿಸುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳದವರು ದೇಶವನ್ನು ರಕ್ಷಿಸಲು ಸಾಧ್ಯವಿಲ್ಲ. ಹಿಂದೂಗಳ ಒಳ್ಳೆಯತನದ ದುರುಪಯೋಗವಾಗುತ್ತಿದೆ. ದೇಶದಲ್ಲಿ ಭಯೋತ್ಪಾದನೆ ಹೆಮ್ಮರವಾಗಿ ಬೆಳೆದಾಗ ಅದರ ಪರಿಣಾಮ ಏನಾಗಬಲ್ಲುದು ಎಂಬುದನ್ನು ನಾವು ಕಾಣುತ್ತಿದ್ದೇವೆ. ನಮ್ಮ ಹಿಂದೂ ಸಮಾಜವನ್ನು ಅಖಂಡವಾಗಿಸಿದಾಗ ಭಾರತ ಅಖಂಡವಾಗಬಲ್ಲುದು ಎಂದರು.ಗೋ ಹತ್ಯೆ, ಲವ್ ಜೆಹಾದ್ದನ್ನು ನಮ್ಮೊಳಗಿನ ಜಾತ್ಯಾತೀತರು ಬೆಂಬಲಿಸುತ್ತಿರುವುದು ದುರಂತ. ನಮ್ಮ ಯುವಕ ಯುವತಿಯರಿಗೆ ತಾವು ಹೋಗುವ ದಾರಿ ಸರಿಯೋ ತಪ್ಪೋ ಎಂಬುದನ್ನು ಮನವರಿಕೆ ಮಾಡಿಕೊಡಬೇಕಾಗಿದೆ. ಹಿಂದೂಗಳಾದ ನಾವು ಸ್ವಾಭಿಮಾನದಿಂದ ದೇಶ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.
ಧರ್ಮ ಜಾಗರಣ ಪ್ರಾಂತ ನಿಧಿ ಪ್ರಮುಖ್ ಹರೀಶ್ ಪೂಂಜ ಅತಿಥಿ ಸ್ಥಾನದಿಂದ ಮಾತನಾಡುತ್ತಾ ಬುದ್ಧಿಜೀವಿಗಳು, ಕಮ್ಯೂನಿಸ್ಟ್ರು, ನಕ್ಸಲೀಯರು ಹಿಂದೂ ಸಮಾಜವನ್ನು ಒಡೆಯುವ ಷಡ್ಯಂತ್ರವನ್ನು ರೂಪಿಸುತ್ತಿದ್ದಾರೆ. ಮತಾಂತರ, ಭಯೋತ್ಪಾದಕ ಕೃತ್ಯಗಳ ಮುಖಾಂತರ ಆಕ್ರಮಣ ನಡೆಸುತ್ತಿದ್ದಾರೆ. ಅಲ್ಪಸಂಖ್ಯಾತರ ತುಷ್ಟೀಕರಣದಿಂದ ಬಹುಸಂಖ್ಯಾತ ಹಿಂದುಗಳಿಗೆ ಗೌರವವಿಲ್ಲವಾಗಿದೆ. ಅಲ್ಪ ಸಂಖ್ಯಾತರಿಗೆ ರಕ್ಷಣೆ ನೀಡುವ ರಾಜಕಾರಣಿಗಳು ನಮಗೆ ಉತ್ತರ ನೀಡಲು ಸಿದ್ದರಾಗಿದ್ದಾರೆಯೇ ? ದೇಶವನ್ನು ವಿಶ್ವಗುರುವಿನ ಸ್ಥಾನಕ್ಕೆ ಕೊಂಡೊಯ್ಯುವ ಪ್ರತಿಜ್ಞೆ ನಮ್ಮದಾಗಬೇಕು ಎಂದರು.
ಅಧ್ಯಕ್ಷತೆಯನ್ನು ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಪದ್ಮನಾಭ ಶೆಟ್ಟಿಗಾರ್ ವಹಿಸಿದ್ದರು. ನಿವೃತ್ತ ಸೈನಕ ಚಂದಯ್ಯ ಗೌಡ ಧ್ವಜಾರೋಹಣ ಮಾಡಿದರು. ವೇದಿಕೆಯಲ್ಲಿ ವಿಹಿಂಪ. ತಾಲೂಕಾಧ್ಯಕ್ಷ ತಾರಾನಾಥ ಗುರುವಾಯನಕರೆ, ದಿನೇಶ್ ಮುಗುಳಿ, ಶ್ರೀನಿವಾಸ ಕಕ್ಕಿಂಜೆ ಉಪಸ್ಥಿತರಿದ್ದರು. ಬಾಲಕೃಷ್ಣ ಮಿತ್ತಬಾಗಿಲು ಸ್ವಾಗತಿಸಿದರು. ಬಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕ ಭಾಸ್ಕರ ಧರ್ಮಸ್ಥಳ ಪ್ರಸ್ತಾವಿಸಿದರು. ರವಿ ಕಾರ್ಯಕ್ರಮ ನಿರ್ವಹಿಸಿದರು. ವಿ.ಹಿ.ಪಂ. ತಾಲೂಕು ಉಪಾಧ್ಯಕ್ಷ ತಿಮ್ಮಪ್ಪ ಗೌಡ ಬೆಳಾಲು ವಂದಿಸಿದರು.
ಪಂಜಿನ ಮೆರವಣಿಗೆ- ಶಾರದಾ ಮಂಟಪದಿಂದ ಹೊರಟ ಮೆರವಣಿಗೆ ಬೆಳಾಲು ತಿರುಗು ರಸ್ತೆ, ಬಳಿಕ ಪೆಟ್ರೋಲ್ ಪಂಪ್ ವರೆಗೆ ಸಾಗಿ ಉಜಿರೆ ಪೇಟೆಯ ಮುಖ್ಯ ವೃತ್ತಕ್ಕೆ ಬಂದು ಧ್ವಜಾರೋಹಣ ನೆರವೇರಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.