ಭಾರತದಂಥ ರಾಷ್ಟ್ರವೊಂದರ ನವನಿರ್ಮಾಣಕಾರ್ಯದಲ್ಲಿ ಸಾಕಷ್ಟು ಧೀರ್ಘ ಕಾಲಾವಧಿಯೇ ಸಂದಿದೆ. ಭಾರತವೇನೂ ಹೊಸದಾಗಿ ಹುಟ್ಟಿದ ರಾಷ್ಟ್ರವಲ್ಲವಲ್ಲ. ಜಗತ್ತು ಕಣ್ ತೆರೆಯುವ ಮುನ್ನವೇ ಒಂದು ರಾಷ್ಟ್ರದ ಸಮುಚಿತ ಕಲ್ಪನೆಗಳು ಇಲ್ಲಿಯ ಬದುಕಿನಲ್ಲಿ ಸಾಕಾರಗೊಂಡು ಬಿಟ್ಟಿದ್ದವು . ‘ಸಾಗರ ಪರ್ಯಂತ ಏಕರಾಟ್’ಎಂಬಲ್ಲಿ ಏಕರಾಷ್ಟ್ರದ ಸೀಮೋಲ್ಲೇಖ ಮಾಡಿದ್ದೂ ಇದೆ. ‘ ರಾಷ್ಟ್ರೇ ಜಾಗೃಯಾಮ’ ಎಂಬಲ್ಲಿ ಕರ್ತವ್ಯದ ಸಂಕಲ್ಪಗೈದದ್ದೂ ಇದೆ. ‘ಪುತ್ರೋಹಂ ಪೃಥಿವ್ಯಾಃ’ ಎಂಬಲ್ಲಿ ರಾಷ್ಟ್ರದ ಒಂದು ವ್ಯಾಖ್ಯಾನವೂ ಒದಗುತ್ತದೆ. ಇವೆಲ್ಲವೂ ವೇದಗಳಷ್ಟೇ ಪ್ರಾಚೀನ. ರಾಷ್ಟ್ರವೊಂದರ ವಾರಸಿಕೆಯನ್ನು ನೆನಪಿಸಿ ಸ್ವಾಭಿಮಾನೀ ಪುತ್ರಸಂಕುಲಕ್ಕೆ ಮೈರೋಮಾಂಚನಗೊಳ್ಳುವಂತೆ ಮಾಡುತ್ತವೆ. ಸಹಸ್ರಸಹಸ್ರವರ್ಷಗಳ ರಾಷ್ಟ್ರದ ಅಂಗ ನಾನೆಂಬ ತನ್ಮಯತೆ, ಸಹಸ್ರಾರು ಸಾಧಕರ ಅಂಶ ತಾನೆಂಬ ಕುಲಾಭಿಮಾನ, ಇವೆಲ್ಲ ಈ ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರೇರಣೆಯ ಮೂಲಸ್ರೋತಗಳಾಗಿದ್ದವು- ಅಂತಲ್ಲೇ ಬ್ರಿಟಿಷರ ವಿರುದ್ಧ ನೂರು ವರ್ಷ ಸೆಣಸುವಾಗಲೂ ಅದೇ ರಾಷ್ಟ್ರೀಯತೆ ಮೆರೆಯಿತು, ಬಂಕಿಮರ ದುರ್ಗೆಯಾಗಿ, ರವೀಂದ್ರನಾಥರ ಭುವನಮನಮೋಹಿನಿದೇವಿಯಾಗಿ, ಅರವಿಂದರ ಭವತಾರಿಣಿಯಾಗಿ, ವಿವೇಕಾನಂದರ ಭರತಮಾತೆಯಾಗಿ ತೋರಿದವಳು ತಾಯಿ ಮಾತ್ರ. ಎಲ್ಲರೂ ಪುತ್ರರೂಪೀ ಸಮಾಜದ ಕರ್ತವ್ಯಗಳನ್ನೇ ನೆನೆದರು, ಕಾಲಕಾಲಕ್ಕೆ ಜನತೆಯಲ್ಲಿ ಇದೇ ಮಾತೃಶ್ರದ್ಧೆಯನ್ನು ಆವಾಹಿಸಿದರು. ಮಹಾತ್ಮಾ ಗಾಂಧೀಜಿಗೂ ಕೊನೆಗೆ ‘ಭಜನೆ’ ಯಂಥ ಅಪ್ಪಟ್ಟ ಹಿಂದು ಆಚರಣೆ ಹೋರಾಟದ ಸಾಧನವಾಯಿತು. ಪಿತೃಭಕ್ತಿಯನ್ನು ಮೆರೆದ ‘ರಘಪತಿ ರಾಘವ’ನನ್ನು ಭಜಿಸಿ ಓರ್ವ ರಾಷ್ಟ್ರೀಯ ಮಹಾಪುರುಷನ ಕುರಿತಾದ ಶ್ರದ್ಧೆಯ ಆಧಾರಸೂತ್ರಗಳನ್ನು ಅವಲಂಬಿಸಬೇಕಾಯಿತು.
ಇಷ್ಟೆಲ್ಲ ಆದರೂ ಈ ಮಣ್ಣಿನ ಜನ ಸ್ವಾತಂತ್ರ್ಯ ಪಡೆಯುವಾಗ ಇಲ್ಲಿ ‘ಇಂಡಿಯಾ’ದ ಪರಿಚಯಾತ್ಮಕ ಪದವಾಗಿ ‘ಭಾರತ’ ಮೈದೆಳೆಯಿತು. ಬ್ರಿಟಿಷರ ಬಳಿಕವೇ ನಾವು- ಭಾರತೀಯರು- ಹುಟ್ಟಿದೆವೇನೋ ಎನಿಸಲಾರಂಭಿಸಿತು. ಕೊನೆಗೂ ನಾವು ತೂಂಬಾ ಹೊಸದಾಗಿ ಹುಟ್ಟಿದ ರಾಷ್ಟ್ರವೆಂಬಂತೆ ವ್ಯವಹರಿಸಲಾರಂಭಿಸಿಬಿಟ್ಟೆವು.
ಅದಕ್ಕಾಗಿಯೇ ನಮ್ಮೀ ಹಲವು ವರ್ಷಗಳಲ್ಲಿ ಭಾರತೀಯ – ರಾಷ್ಟ್ರೀಯ ಸ್ವಾಭಿಮಾನಿಯಾದವನು ಅನೇಕ ಅಸಹನೀಯ ವೇದನೆಗಳನ್ನು ಕಂಡುಂಡು ಬದುಕಬೇಕಾಯಿತು. ಇಂಗ್ಲಿಷ್ ಅಟ್ಟಕ್ಕೇರಿತು, ದೇಶಿಯ ಭಾಷೆಗಳು ಚಟ್ಟಕ್ಕೇರುತ್ತಿವೆ. ಸ್ವದೇಶೀ ‘ಧರ್ಮಪತ್ನಿ’ಗೆ ವನವಾಸದ ಕಷ್ಟ, ವಿದೇಶೀ ‘ಬೆಡಗಿ’ಗಳಿಗೆ ಅಂತಃಪುರದ ಪಟ್ಟ.
ಸ್ವಾತಂತ್ರ್ಯಾನಂತರವೂ ನಾವು ಕಾಶ್ಮೀರದಲ್ಲಿ , ಟಿಬೇಟಿನ ಬಳಿ, ಲಡಾಕಿನಲ್ಲಿ, ತೀನ್ ಬಿಘಾದಲ್ಲಿ ಅಂಗುಲಂಗುಲವಾಗಿ ಭೂಮಿ ಕಳೆದುಕೊಂಡೆವು. ಕೆಲವೋಮ್ಮೆ ಶತ್ರುಗಳು ಆಕ್ರಮಿಸಿದರು. ಅಂತರಾಷ್ಟ್ರೀಯ ರಾಜನೀತಿಗೆ ಮಣಿದು ನಾವು ಸೋತೆವು. ಕೆಲವೊಮ್ಮೆ ವಂಚಿಸಿ ಹಿಮ್ಮೆಟ್ಟಿಸಿದವು. ನಾವು ‘ಭಾಯಿ ಭಾಯಿ’ ಶಾಂತಿಮಂತ್ರ ನುಡಿದು ನುಣ್ಣಗಾದೆವು. ಕೆಲವೊಮ್ಮೆ ಕೇಳಿ ಪಡಕೊಂಡರು. ನಾವು ಮೇಜಿನ ಮೇಲೂ ಸೋತೆವು.
ದಶಕಗಳುರುತ್ತಿದ್ದಂತೆ ನಾವು ಭ್ರಷ್ಟಾಚಾರಗಳನ್ನು ಕಂಡೆವು. ಹೆಚ್ಚು ದೊಡ್ಡವರು- ಹೆಚ್ಚು ತಿಂದವರು! ರಾಷ್ಟ್ರದ ಪ್ರಧಾನಿಯೆನಿಸಿದ್ದ ರಾಜೀವ ಗಾಂಧಿಯವರ ಬಳಿಕ ಈ ‘ಫಿನೋಮಿನಾ’ವನ್ನು ‘ಇಂಟರ್ನ್ಯಾಷನಲ್’ ಎಂದುಕೊಂಡು ತಿಪ್ಪೆ ಸಾರಿಸಲಾಯಿತು.ದಿಲ್ಲ್ಲಿಯ ಹಣ ಹಳ್ಳಿಗೆ ತಲುಪುವುದು 13 ಪ್ರತಿಶತಮಾತ್ರ ಎಂದು ಹೇಳಿಕೊಳ್ಳುವ ಮಾನಗೇಡಿಗಳು ಮತ್ತೂ ಮತ್ತೂ ಯಾವುದೇ ಅನೈತಿಕತೆಯ ಪ್ರಜ್ಞೆಯಿಲ್ಲದೆ ರಾಷ್ಟ್ರದ ಅಧಿಕಾರ ಸ್ಥಾನದಲ್ಲೇ ಮುಂದುವರಿದರು.
ಇವೆಲ್ಲ ಕೆಲವು ತತ್ಕ್ಷಣದ ಮೆಲುಕುಗಳಷ್ಟೇ. ಆದರೆ ಇನ್ನೊಂದು ವಿಶ್ವಾಸದ ವಿಷೇಷಮುಖವೂ ಇದೆ. ಇದು ಹಿಂದುರಾಷ್ಟ್ರ. ಹಿಂದು ರಾಷ್ಟ್ರೀಯತೆಯ ಅಂಶಗಳು ಪುನರುಜ್ಜೀವನಗೊಳ್ಳ ಬೇಕೆಂಬ ಹಂಬಲ ತಡವಾಗಿಯಾದರೂ ಜನರಲ್ಲಿ ಮೈಗೂಡಲಾರಂಭಿಸಿದೆ. ರಾಮಜನ್ಮಭೂಮಿ ಆಂದೋಲನ, ಸ್ವದೇಶೀ ಆಂದೋಲನಗಳಲ್ಲಿ ಪ್ರಾಂತ- ಜಾತಿ ಭೇದಗಳಿಲ್ಲದೆ ನಾಡಿಗೆ ನಾಡೇ ಏಕೋಭಾವದಿಂದ ಧುಮ್ಮಿಕ್ಕಿತು. ‘ತುರ್ತುಪರಿಸ್ಥಿತಿ’ಯಂಥ ಕಪಟಗಳನ್ನು ಅರ್ಥಮಾಡಿಕೊಂಡ ‘ಪ್ರಜ್ಞೆ’ ಪ್ರಜ್ಞಾಶಕ್ತಿಯನ್ನು ಮೆರೆದು ಪುನರಪಿ ಇಲ್ಲಿ ಪ್ರಜಾಸತ್ತೆಯೇ ನೆಲೆಸುನಂತೆ ಮಾಡಿದ.
ಹಿಂದುತ್ವ ಪ್ರತಿಪಾದಕ ರಾಜಕೀಯ ಶಕ್ತಿಗಳನ್ನು ಆತ ಬೆಂಬಲಿಸತೊಡಗಿದ. ಇದೀಗ ‘ಅಣುಸ್ಪೋಟ’ಗೊಂಡ ಹಿನ್ನಲೆಯಲ್ಲಿ ವಿದೇಶಿ ದಿಗ್ಭಂದನಗಳನ್ನು ಹೇರಿದಾಗಲೂ ‘ಬುದ್ಧಿಜೀವಿ’ಗಳು ಕುತರ್ಕ ಮೆರೆದಾಗಲೂ ನಾಡಿನ ಪ್ರಜೆ ವಿಚಲಿತನಾಗಲಿಲ್ಲ. ಇತಿಹಾಸದ ಅಪಚಾರಗಳನ್ನು ಒಪ್ಪದ ಧ್ವನಿಗಳು ಇಡಿಯಾಗಿ ಅಲ್ಲದಿದ್ದರೂ ಬಿಡಿಬಿಡಿಯಾಗಿ ಅನುರಣಿಸತೊಡಗಿವೆ. ರಾಷ್ಟ್ರೀಯತೆಯ ಮೇಲಿನ ಆಘಾತಗಳನ್ನು ಅರ್ಥಮಾಡಿಕೊಂಡು ತತ್ಕ್ಷಣ ಪ್ರತಿಕ್ರಿಯಿಸುವ ಭರವಸೆಯ ಬೆಳಕು ಮೂಡುತ್ತಿದೆ.
ಧಾರಿಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ|
ಮೇರುವನುಮೆರೆತಂದೆ ನಾರಕಕೆ ದಾರಿ||
ದೂರವಾದೊಡದೇನು? ಕಾಲು ಕುಂಟಿರಲೇನು?
ಊರ ನೆನಪೇ ಬಲವೋ-ಮಂಕುತತಿಮ್ಮ||
ಕೃಪೆ: ಅಕ್ಷಿಪಥ
ಲೇಖಕರು: ಡಾ|ಸೋಂದಾ ನಾರಾಯಣ ಭಟ್ಟ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.