ಪ್ರತಿದಿನದ ಗಣನೆ ಮಾಡ್ತಾ ಹೋದರೆ ಕೆಲವರು ಹುಟ್ಟಿದ ದಿನ, ಕೆಲವರು ತೀರಿದ ದಿನ, ಕೆಲವರ ಮನದಲ್ಲಿ ಸಂತೋಷ, ಕೆಲವರ ಮನದಲ್ಲಿ ಸಂತಾಪ, ಜಗತ್ತು ಸುಖದುಃಖಗಳ ಭಾವದ ಸಮತೆಯನ್ನ ಬೇರೆ ಬೇರೆಯವರ ಭಾವಗಳಜೊತೆಗೂ ಈ ಬಗೆಯಾಗಿ ಕಾಯ್ದುಕೊಳ್ಳುವ ಯೋಚನೆ ಇರಬಹುದೇನೋ ಎಂದು ಕೆಲವೊಮ್ಮ ಮನಸ್ಸಿನಲ್ಲಿ ಮೂಡಿ, ಮನದೊಳಗಿಹ ಭಾವ ತಂತಿಯನ್ನ ಮೀಟಿ ಮೀಟಿ ಪ್ರತಿಯೊಂದು ಕಾರ್ಯಕ್ಕೂ, ಕಾರಣಕ್ಕೂ ನಮ್ಮನ್ನ ಸಿದ್ಧಗೊಳಿಸ್ತಾ ಸಾಗ್ತದೆ. ಎಷ್ಟೇ ಸಿದ್ಧಗೊಳಿಸಿದರೂ, ಎಷ್ಟೇ ದೃಢಗೊಳಿಸಿದರೂ ಮನದ ಭಾವನೆ ಸಂತೋಷದಿಂದಲೋ ದುಃಖದಿಂದಲೋ ಒತ್ತಿ ಬರುತ್ತದೆ. ಸಂತೋಷ ಬಂದರೆ ಅದನ್ನು ಸುಧಾರಿಸಿಕೊಳ್ಳುವುದು ಕೆಲವೊಮ್ಮೆ ಕ್ಲಿಷ್ಟವಾದರೂ ಮತ್ತೆಲ್ಲಾ ಸಂದರ್ಭಗಳಲ್ಲಿ ಸುಲಭವೇ, ಆದರೆ ದುಃಖವನ್ನು ಸುಧಾರಿಸಿಕೊಳ್ಳುವುದ ಬಹಳ ಕಷ್ಟಸಾಧ್ಯ ಎಂದೇ ಹೇಳಬಹುದು. ಹೌದು ಇಂದು ಮಲೆನಾಡು, ಮೈಸೂರು, ಬೆಂಗಳೂರು ಮತ್ತು ಕರ್ನಾಟಕದ ಇನ್ನೂ ಅನೇಕ ಪ್ರದೇಶಗಳ ಸಾಸಿರಾರು ಸ್ವಯಂಸೇವಕರ ಮನಸ್ಸಿಗೆ ಬಹಳ ನೋವಾಗ್ತಾ ಉಂಟು, ಬಹಳ ಆತ್ಮೀಯರನ್ನು ಕಳಕೊಂಡ ಬೇಸರ ಭಾವ ಕಾಡಿ ಮನಸ್ಸನ್ನು ಬಹಳ ಭಾರವಾಗಿಸ್ತಾ ಉಂಟು. ಆ ಭಾರ ಇಳಿಸಿಕೊಳ್ಳುವ ಸಣ್ಣ ಪ್ರಯತ್ನವೇ ಯೋಗೀಚಂದ್ರ ಜಿ ಅವರೊಂದಿಗಿನ ನನ್ನ ಕೆಲವು ಸಣ್ಣ ಪುಟ್ಟ ಅನುಭವಗಳ ಹಾಗೂ ಕೆಲ ತಿಂಗಳುಗಳ ಹಿಂದೆಯಷ್ಟೇ ಅವರೊಂದಿಗೆ ಮಾತಾನಡಿದ ಕೆಲವು ಸಂದರ್ಭಗಳನ್ನು ನೆನೆಸಿ ನಿಮ್ಮೊಂದಿಗೆ ಹಂಚಿಕೊಳ್ಳುವ ಬರಹರೂಪದ ಪುಟ್ಟ ಪ್ರಯತ್ನ.
ನಾನು ನನ್ನ ಬಾಲ್ಯದಿಂದಲೂ ಅವರನ್ನು ನೋಡುತ್ತಾ ಬೆಳೆದವನು. ಆಗ ಅವರು ಚಿಕ್ಕಮಗಳೂರು ಜಿಲ್ಲಾ ಪ್ರಚಾರಕರು. ಅತ್ಯಂತ ಮುಗ್ಧ ಮನಸ್ಸಿನ ಸೃಜನಶೀಲ ವ್ಯಕ್ತಿ. ನಮಗೆಲ್ಲರಿಗೂ ಅಗ್ರಜ. ನಮ್ಮ ಮನೆಗೆ ಯಾವಾಗಲೂ ಬಂದು ಅಪ್ಪನ ಜೊತೆ ಕೆಲವು ವಿಷಯಗಳನ್ನು ಚರ್ಚಿಸುತ್ತಾ ಪಾನೀಯ ಕುಡಿದು ಏನಾದರೂ ತಿಂಡಿ ತಿಂದು ಹೋಗುತ್ತಿದ್ದರು.
ಲಾಕ್ಡೌನ್ ಅಲ್ಲಿ ನಮ್ಮ “ಆತ್ಮನಿರ್ಭರ ಭಾರತ” ಹಾಡು ಬಿಡುಗಡೆಯಾಗುವ ಸಂದರ್ಭದಲ್ಲಿ, ನ. ನಾಗರಾಜ ಜಿ ಅವರ ಬಳಿ ಮಾತಾಡ್ತಾ ಇರುವಾಗ, ಯೋಗೀಚಂದ್ರ ಜೀ ಕೂಡ ಪಕ್ಕದಲ್ಲೇ ಇದ್ದರಂತೆ. ಅವರಿಗೆ ಮೊಬೈಲ್ ಬಳಸಬಾರ್ದಂತ ಹೇಳಿದ್ರೂ ಕೂಡ ಮಾತಾಡ್ಲೇಬೇಕೆಂಬ ಹಠದಲ್ಲಿ ಪುನಃ ನಾಗರಾಜ ಜಿ ಅವರ ಬಳಿ ಕರೆ ಮಾಡಿಸಿ ಸುಮಾರು 10 ನಿಮಿಷ ಮಾತಾಡಿದ್ರು. ನಾನೂ ಬೆಂಗಳೂರಿಗೆ ಹೋದಾಗ ಅವರನ್ನು ಭೇಟಿಯಾಗ್ಲೇಬೇಕೆಂದು ಆಗಲೇ ನಿಶ್ಚಯಿಸಿದ್ದೆ.
ಕೆಲ ತಿಂಗಳ ಹಿಂದೆ ನಾನು ಅವರನ್ನು ಭೇಟಿಯಾಗಲು ಹೋದಾಗ “ಏನಪ್ಪ ಚಿನ್ನು ಹೇಗಿದ್ದೀಯಪ್ಪ? ಆರೋಗ್ಯ ಚೆನ್ನಾಗಿ ನೋಡ್ಕೊಳಪ್ಪ” ಅಂತ ಹೇಳಿ ನನ್ನ ಬಾಲ್ಯವನ್ನು ನನಗೇ ನೆನಪಿಸುವ ಪ್ರಯತ್ನಕ್ಕೆ ಜಾರಿದರು.
ಯಾವಾಗಲೂ ಅವರು ಮನೆಗೆ ಬಂದಾಗ ನಾನು ಒಂದುರೀತಿಯ ಅನುವಾದಕನಾಗಿಬಿಡ್ತಿದ್ದೆ, ನನ್ನ ಅನುವಾದ ಅವರಿಗೂ ಅನಿವಾರ್ಯ ಏಕೆಂದರೆ ಅವರು ಮಾತನಾಡುವಾಗ ಒಂದು ಷರತ್ತು, ಅಪ್ಪ ತುಳುವಿನಲ್ಲಿ ಮಾತನಾಡಬೇಕು ಇವರಿಗೆ ನಾನು ಅದನ್ನು ಕನ್ನಡದಲ್ಲಿ ತರ್ಜುಮೆ ಮಾಡಿ ಹೇಳಬೇಕು. ಇವರು ಕನ್ನಡದಲ್ಲಿ ಮಾತನಾಡುವುದು ಅಪ್ಪನಿಗೆ ಅರ್ಥವಾಗ್ತಾ ಇತ್ತಾದರೂ ನನ್ನ ಷರತ್ತಿನ ಪ್ರಕಾರ ನಾನೇ ಅದನ್ನು ತುಳುವಿನಲ್ಲಿ ಅನುವಾದಿಸಿ ಹೇಳ್ಬೇಕು” ಯಾವಾಗಲೂ ಹೀಗೆಯೇ ಅಂತೇನಿಲ್ಲ ಕೆಲವು ಸಲ ಹೀಗಾಗ್ತಾ ಇತ್ತು. ನನ್ನ ತುಂಟಾಟವನ್ನ ಸಹಿಸ್ತಾ ಕೆಲವು ಗಂಭೀರವಲ್ಲದ ವಿಷಯಗಳನ್ನು ನನ್ನಬಳಿ ಹೇಳ್ತಾ ಇದ್ದರು. ಇದು ನನಗೂ ನೆನಪಿರಲಿಲ್ಲ ಯೋಗೀಚಂದ್ರ ಜಿ ಅವರನ್ನು ಭೇಟಿಯಾಗಲು ಹೋದಾಗ ಅವರೇ ನೆನಪಿಸಿದ ಅಮೂಲ್ಯ ಬಾಲ್ಯದ ಘಟನೆಗಳಲ್ಲಿ ಇದೂ ಒಂದು.
ಯೋಗೀಚಂದ್ರ ಜಿ ಅವರ ದಂಡಯುದ್ಧ ಎಂದರೆ ಅವರೆದುರು ಯಾರೂ ನಿಲ್ಲಲು ಸಾಧ್ಯವಿಲ್ಲ. ಅಗ್ರಜನ ಕೈಯ್ಯ ದಂಡ ಅವರನ್ನು ವಾಮನನಿಂದ ತ್ರಿವಿಕ್ರಮನನ್ನಾಗಿಸುತ್ತಿತ್ತು. ಅಂತಹ ಅದ್ಭುತ ಚಾತುರ್ಯ. ಗುರುಕುಲಕ್ಕೆ ಅಷ್ಟಮಿಯ ಸಂದರ್ಭದಲ್ಲಿ ಬಂದರಂತೂ ಪ್ರಾತಃ ಶಾಖೆಯಲ್ಲಿ ಅವರಿಂದ ದಂಡಯುದ್ಧದ ಅಭ್ಯಾಸದ ಅವಧಿ ಶತಃಸಿದ್ಧ. ಹಾಗಾಗಿ ಗುರುಕುಲದ ವಿದ್ಯಾರ್ಥಿಗಳಿಗಂತೂ ಅಚ್ಚುಮೆಚ್ಚಿನ ಅಗ್ರಜ ಯೋಗೀಶ್ಚಂದ್ರ ಜಿ.
ದಂಡಯುದ್ಧದ ಒಂದು ಘಟನೆಯನ್ನು ಮೊನ್ನೆ ನನ್ನ ಬಳಿ ನೆನೆಸಿಕೊಳ್ತಾ ಮಾತಾಡಲು ಕಷ್ಟವಾದರೂ ಮೃದುವಾದ ಒಡೆದ ದನಿಯಲ್ಲಿ.. “ಚಿನ್ನು ಒಂದು ದಿನ ಗುರುಕುಲದಲ್ಲಿ ನಾನು ದಂಡಯುದ್ಧ ಮಾಡುವಾಗ ಒಬ್ಬರೊಂದಿಗೇ ದ್ವಂದ್ವ ಮಾಡ್ತಾ ಇದ್ದೆ. ಆಗ ಲಕ್ಷ್ಮೀಪ್ರಸಾದನಿಗೆ ಸ್ವಲ್ಲ ಜೋರಾಗೇ ಪೆಟ್ಟು ಬಿತ್ತು. ಆಗ ಅವ್ನು ಜೋರಾಗಿ ಬನ್ರೋ ಎಲ್ಲ ಒಟ್ಟಿಗೆ ಹೋಗೋಣ ಏನ್ ಮಾಡ್ತಾರೆ ನೋಡೋಣ ಅಂತ ನಾಲ್ಕಾರು ಜನ ಬಂದಿದ್ರು “ಏಕ್ ಸೆ ವಿರುದ್ಧ್ ಅನೇಕ್” ಅಂತಾರಲ್ಲ ಆತರ ಆಗಿತ್ತು.” ಅಂತ ಹೇಳ್ತಾ ನಿಧಾನ ಕಣ್ಣ ಹನಿಯನ್ನ ರೆಪ್ಪೆದಾಟುವ ಮೊದಲೇ ಒರೆಸಿಕೊಳ್ತಾ ” ಗುರುಕುಲ ಮತ್ತು ಗುರುಕುಲದ ವಿದ್ಯಾರ್ಥಿಗಳನ್ನ ಬಹಳ ಮಿಸ್ ಮಾಡ್ಕೊಳ್ತಾ ಇದ್ದೀನಪ್ಪ” ಅಂದ್ರು ನನ್ನ ಕಂಗಳಲ್ಲೂ ಅಶ್ರು ಶೇಖರವಾಗಿತ್ತು, ಇನ್ನೊಂದು ಮಾತು ಅವರು ಮಾತನಾಡಿದರೂ ಕಣ್ಣಾಲೆಗಳಮೇಲಿದ್ದ ಹನಿ ಜಾರಿಬಿಡುತ್ತಿತ್ತೇನೋ!!
ಆಗಲೇ ಸ್ವಲ್ಪ ಸುಧಾರಿಸಿಕೊಂಡು “ಆದ್ರೂ ತುಂಬಾಜನ ಹುಡುಗ್ರು ಬಂದು ಮಾತಾಡಿಸ್ಕೊಂಡು ಹೋದ್ರು ಕಣಪ್ಪ. ಅಭಿಜಿನ್, ಶ್ರೀಕಾಂತ ಹೀಗೆ ತುಂಬಾ ಜನ ಬಂದಿದ್ರಪ್ಪ. ಶ್ರೀಕಾಂತ ಆ ರೇಡಿಯೋ ಕೂಡ ಕೊಟ್ಟೋದ. ಆದ್ರೆ ಯಾಕೋ ಎರಡು ದಿನದಿಂದ ಕೆಟ್ಟೋಗಿದೆ. ಸರಿ ಮಾಡಿಸ್ಬೇಕು. ಅವ್ರೆಲ್ಲ ಬಂದಾಗ ಹೇಳ್ತಿದ್ರು ಜಿ ನೀವು ಹುಷಾರಾಗಿ ಮತ್ತೆ ನಮಿಗೆ ದಂಡಯುದ್ಧ ಹೇಳ್ಕೊಡ್ತೀರ ಬಿಡಿ ಜಿ ಅಂತ. ಆದ್ರೆ ನಂಗೀಗ ಸರಿಯಾಗಿ ಏಳಕ್ಕೂ ಆಗಲ್ಲ ನಡಿಯಕ್ಕೂ ಆಗಲ್ಲ. ತುಂಬಾ ಸುಸ್ತು. ಜೀವ ಹಿಂಡಿಬಿಡತ್ತೆ ಡಯಾಲಿಸಿಸ್. ಮೈ ತುರಿಕೆ ಆದಾಗ ಕೆರಿಲಿಕೂ ಕಷ್ಟ, ರಕ್ತ ಬಂದ್ಬಿಡತ್ತೆ. ಆ ಡಯಾಲಿಸಿಸ್ ಮಾಡುವಾಗಂತೂ ಕೆಲವರು ಸ್ಟೂಡೆಂಟ್ಸ್ ಅಂತ ಕಾಣತ್ತೆ ಸರಿಯಾಗಿ ಚುಚ್ಚದೂ ಇಲ್ಲ ನೋಡು ಅಲ್ಲಿ ಇಲ್ಲಿ ಎಲ್ಲಾಕಡೆನೂ ಚುಚ್ಚಿ ಹೇಗೆ ಮಾಡಿದ್ದಾರಂತ” ಅಂತ ಹೇಳಿ ಕೈ ತೋರಿಸಿದಾಗ ಆಗಷ್ಟೇ ಸುಧಾರಿಸಿಕೊಳ್ತಿದ್ದ ನನ್ನ ಮನಸ್ಸಿಗೆ ದುಃಖದ ಬಂಡೆಯೇ ಬಡಿದಂತಾಯ್ತು. ಆದರೂ ನಾನೇ ಅವರಮುಂದೆ ಅತ್ತರೆ ಮತ್ತೆ ಅವರ ದುಃಖ ಇನ್ನೂ ಹೆಚ್ಚಾಗದೇ ಇರದೇ ಅಂತ ಯೋಚಿಸುತ್ತಿರುವಾಗಲೇ ಅವರು….
“ಚಿನ್ನು ಮೊನ್ನೆ ಕೇಶವ ಕೃಪಾಗೆ ಶಾಸ್ತ್ರೀಜಿ ಬಂದಾಗ, ನನ್ನನ್ನ ಮಾತಾಡಿಸ್ಕೊಂಡು ಹೋದ್ರಪ್ಪ, ಹೇಳಿದ್ರು ಗುರುಕುಲದಲ್ಲಿ ಅರ್ಧಮಂಡಲೋತ್ಸವದ್ದು, ಅಲ್ಲಿಗೆ ಸರಸಂಘಚಾಲಕರು ಬಂದಿದ್ದು ಎಲ್ಲವನ್ನೂ ಹೇಳಿದ್ರು, ಆದ್ರೆ ಕೊನೆಗೆ ಮಾತ್ರ, ಗುರುಕುಲದ ಎಲ್ಲಾ ಕಾರ್ಯಕ್ರಮಗಳಿಗೂ ಬರ್ತಿದ್ರಿ ಆದರೆ ಸರಸಂಘಚಾಲಕರು ಬಂದ ಅರ್ಧಮಂಡಲೋತ್ಸವದ ಸಮಾರೋಪಕ್ಕೇ ನಿಮಿಗೆ ಬರ್ಲಿಕಾಗ್ಲಿಲ್ಲ ಅಂತ ಹೇಳಿ ಅತ್ಬಿಟ್ರಪ್ಪ. ನಾನ್ ಕೇಳ್ದೇ ಅಯ್ಯೋ ಶಾಸ್ತ್ರಿಗಳೇ ನೀವ್ಯಾಕೆ ಅಳ್ತಿದ್ದೀರ ಅಂತ, ಅದಿಕ್ಕೆ ನಿಮಿಗೆ ಗುರುಕುಲಕ್ಕೆ ಆ ಸಂದರ್ಭದಲ್ಲೂ ಬರ್ಲಿಕಾಗ್ಲಿಲ್ವಲ್ಲ ಅದಕ್ಕೇ ಅಂತ ಹೇಳಿ ಮತ್ತೆ ಅತ್ಬಿಟ್ರು. ಶಾಸ್ತ್ರಿಗಳ ಕಣ್ಣಲ್ಲಿ ನೀರು ನೋಡಿ ನಂಗೂ ತಡಿಲಿಕಾಗ್ಲಿಲ್ಲ ನಾನೂ ಅತ್ಬಿಟ್ಟೆ ಕಣಪ್ಪ”. ಅಂತ ಹೇಳ್ತಾ ಆ ದಿನ ಮತ್ತೆ ನನ್ನಮುಂದೆ ಅತ್ರು. ನಮ್ಮ ಕಣ್ಣೀರು ಒರೆಸುತ್ತಿದ್ದ ಕೈಗಳು ನಡುಗುತ್ತಾ ಕಣ್ಣಿನಬಳಿಬಂದು ಕಣ್ಣೀರನ್ನ ಒರೆಸಿಕೊಳ್ಳುದು ನೋಡುವಾಗ ಒಮ್ಮೆ ಹೃದಯ ಚುರುಗುಟ್ಟಿತು.
ಕೊನೆಯದಾಗಿ ಅವರಬಳಿಯಿಂದ ನಾನು ಕೇಳಿದ ಮಾತು. “ಚಿನ್ನು ನಂಗೆ ಇನ್ನೂ ಸ್ವಲ್ಪನಾದ್ರೂ ದೇಶಸೇವೆ ಮಾಡುವ ಅವಕಾಶಬೇಕಿತ್ತಪ್ಪ, ಮತ್ತೆ ಗುರುಕುಲದಲ್ಲಿ ಬಂದು ಮಕ್ಳಿಗೆ ದಂಡಯುದ್ಧ ಹೇಳಿಕೊಡ್ಬೇಕು. ಮತ್ತೆ ಶಾಖಾಪ್ರವಾಸ ಮಾಡ್ಬೇಕಿತ್ತಪ್ಪ. ಈಗ ನೋಡಿದ್ರೆ ಏನೂ ಸಾಧ್ಯ ಆಗಲ್ಲ” ಎಂದು. ನನಗೂ ಅವರ ಮಾತುಗಳನ್ನಕೇಳಿ ಇಂತಹಾ ಸಂದರ್ಭದಲ್ಲೂ ರಾಷ್ಟ್ರಸೇವೆಯದ್ದೇ ಯೋಚಿಸ್ತಾ ಇದ್ದಾರಲ್ವ!! ಅಂತ ಆಶ್ಚರ್ಯದ ಜೊತೆಗೆ ಇಂತಹಾ ಅದ್ಭುತ ಸ್ಫೂರ್ತಿದಾಯಕ ಶಕ್ತಿ ನನ್ನಂತಹ ಅನೇಕ ವಿದ್ಯಾರ್ಥಿಗಳ ಬದುಕಿನ ಆದರ್ಶವಾಗಿದ್ದಾರಲ್ಲ ಎಂಬ ಹೆಮ್ಮೆ ಕೂಡ ಆಯಿತು.
ಕೊನೆಗೆ ಅವ್ರಿಗೆ ಇನ್ನು ವಿಶ್ರಾಂತಿ ಕೊಡುದು ಒಳ್ಳೆದಂತ, ಜೀ ಬರ್ತೇನೆ ಅಂತ ಹೇಳಿ ನಮಸ್ಕರಿಸಿ ಹೊರಟೆ. ಆಗ ಸುಧೀರ್ ಜಿ ಊಟ ಮಾಡಿ ಹೋಗು ಅಂದ್ರು. ಸರಿ ಅಂತ ಅಲ್ಲಿ ಬಿಸಿಬೇಳೆಬಾತ್ ತಿನ್ತಾ ಇರುವಾಗ ರಾಜಮೋಹನ್ ಜಿ ಪರಿಚಯವಾಗಿ ಅವ್ರು ನನ್ನನ್ನ ಮತ್ತೊಬ್ಬ ಹಿರಿಯರ ಬಳಿ ಕರೆದುಕೊಂಡು ಹೋದರು. ಅವರೇ ಚಂದ್ರಶೇಖರ್ ಭಂಡಾರಿ ಜಿ.
ಹೋದ ತಕ್ಷಣ ಅವರಿಗೆ ನಮಸ್ಕರಿಸಿದೆ. ಹೀಗೇ ಮಾತಾಡ್ತಾ ಇರುವಾಗ ಅವ್ರು ಯಾರನ್ನ ಭೇಟಿ ಆಗ್ಲಿಕೆ ಬಂದಿದ್ಯಪ್ಪ? ಅಂತ ಕೇಳಿದ್ರು. ನಾನು ಯೋಗೀಚಂದ್ರ ಜಿ ಅವರನ್ನ ಮಾತಾಡಿಸ್ಕೊಂಡು ಹೋಗ್ಲಿಕೆ ಬಂದಿದ್ದೆ ಜಿ ಅಂದೆ. ಅವ್ರಿದ್ದವ್ರು “ಹೋ ಒಳ್ಳೆದಪ್ಪ ಅವ್ರನ್ನ ಮಾತಾಡಿಸ್ತಾ ಇರಿ ಪಾಪ ತುಂಬಾ ನೋವು ಅನುಭವಿಸ್ತಾ ಇದ್ದಾರೆ. ಏನ್ ಮಾಡೋದು ಹಂಚಿಕೊಳ್ಳಬಹುದಾದ ದುಃಖ ಹಂಚಿಕೊಳ್ಳಬಹುದು ಆದರೆ ದೇಹದ ನೋವು ಅಥವಾ ರೋಗವನ್ನ ಹಂಚಿಕೊಳ್ಳಿಕಾಗ್ತದ. ಅವರಬಳಿ ಮಾತಾಡಿ ಮನಸ್ಸನ್ನ ಹಗೂರಗೊಳಿಸುವ ಪ್ರಯತ್ನ ಮಾಡ್ಬಹುದಷ್ಟೇ” ಅಂದ್ರು. ನನಿಗೂ ಕೂಡ ಎಷ್ಟು ಸತ್ಯ ಅಲ ಅನಿಸ್ತು. ಅವರ ದೈಹಿಕ ನೋವನ್ನಂತೂ ಹಂಚಿಕೊಳ್ಳಲು ಸಾಧ್ಯವಿಲ್ಲ ಆದರೆ ಅವರ ಮನದ ಭಾವವನ್ನಾದ್ರೂ ಹಂಚಿಕೊಳ್ಳೋ ಪ್ರಯತ್ನ ಮಾಡಿದ್ನಲ್ವ ಅಂತ ನೊಂದ ಮನಸ್ಸಿಗೆ ಸ್ವಲ್ಪ ಸಮಾಧಾನ ಹೇಳಿ. ಚಂದ್ರಶೇಖರ್ ಜಿ ಅವರಿಗೆ ನಮಸ್ಕರಿಸಿ ನೆನಪುಗಳ, ಅನಭವಗಳ, ಹಾಗೂ ಅನುಭವಿ ಹಿರಿಯರ ಮಾತುಗಳನ್ನು ಮನದ ಬೊಗಸೆಯಲ್ಲಿ ಹಿಡಿದು ನಡೆದೆ.
ಇವತ್ತಿನ ಈ ದುಃಖದ ದಿನ, ಪ್ರತಿಯೊಂದನ್ನೂ ನಿಮ್ಮ ಮುಂದೆ ಮನಬಿಚ್ಚಿ ಹಂಚಿಕೊಳ್ಳುವಂತೆ ಮಾಡಿತು. ಮತ್ತೆ ಕಣ್ಣಹನಿಯನ್ನು ಕೆನ್ನೆಯೊಂದಿಗೆ ಜೋಡಿಸುವಕಾರ್ಯವೂ ಅರಿವಿಲ್ಲದಂತಾಯಿತು.
ಅಗ್ರಜ (ಯೋಗೀಚಂದ್ರ ಜೀ) ನೀವು ಕಲಿಸಿದ ದಂಡಯುದ್ಧ, ಆ ನಿಮ್ಮ ಮಾತು, ಆ ನಿಮ್ಮ ಮನದಿಂದ ಹೊರಚೆಲ್ಲುವ ಮುಗ್ಧ ನಗು, ನಿಮ್ಮ ಸಮರ್ಪಣಾಭಾವ, ನಿಸ್ವಾರ್ಥ ರಾಷ್ಟ್ರಚಿಂತನೆ, ಕೊನೆಯವರೆಗೂ ಇನ್ನಷ್ಟು ರಾಷ್ಟ್ರಕ್ಕಾಗಿ ದುಡಿಯಬೇಕೆಂದಿದ್ದ ನಿಮ್ಮ ತುಡಿತ ಎಲ್ಲವೂ ಸ್ಫೂರ್ತಿಯ ಚಿಲುಮೆಯಾಗಿ, ಸ್ಫಟಿಕದಷ್ಟೇ ಶುದ್ಧವಾಗಿ, ಸ್ಪಷ್ಟವಾಗಿ ಖಂಡಿತಾ ನಮ್ಮ ಜೀವನದಲ್ಲಿರ್ತದೆ. ನೀವಿಂದು ದೈಹಿಕವಾಗಿ ಅಗಲಿದರೂ ಮೇಲಿನ ಎಲ್ಲಾರೂಪದಲ್ಲೂ ನಮ್ಮೊಂದಿಗೆ ಶಾಶ್ವತವಾಗಿದ್ದೀರಿ, ಮುಂದೇಯೂ ಇರ್ತೀರಿ.
ಅಗ್ರಜ, ನಿಮ್ಮ ಆತ್ಮ ಪರಮಾತ್ಮನಲ್ಲಿ ಸೇರಿ ಸದ್ಗತಿಯನ್ನ ಪಡೆಯಲೆಂದು ಆ ಸರ್ವಶಕ್ತನಲ್ಲಿ ನಮ್ಮೆಲ್ಲರ ಪ್ರಾರ್ಥನೆ. ಓಂ ಶಾಂತಿಃ
✍ಉವಾಚಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.